Namma Metro 5G | ನಮ್ಮ ಮೆಟ್ರೋ ಪ್ರಯಾಣಿಕರಿಗೆ ಇನ್ನು ಸಿಗಲಿದೆ 5ಜಿ ನೆಟ್ವರ್ಕ್
ಬೆಂಗಳೂರಿನ ಸಂಚಾರ ವ್ಯವಸ್ಥೆಯ ಜೀವನಾಡಿಯಾಗಿರುವ ನಮ್ಮ ಮೆಟ್ರೋ, ಪ್ರಯಾಣಿಕರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ 5ಜಿ ಮೊಬೈಲ್ ನೆಟ್ವರ್ಕ್ ವೇಗ ಲಭ್ಯವಾಗುವಂತೆ ಮಾಡಲು ಕ್ರಮ ವಹಿಸಿದೆ.;
ಬೆಂಗಳೂರಿನ ಸಂಚಾರ ವ್ಯವಸ್ಥೆಯ ಜೀವನಾಡಿಯಾಗಿರುವ ನಮ್ಮ ಮೆಟ್ರೋ, ಪ್ರಯಾಣಿಕರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ 5ಜಿ ಮೊಬೈಲ್ ನೆಟ್ವರ್ಕ್ ವೇಗ ಲಭ್ಯವಾಗುವಂತೆ ಮಾಡಲು ಕ್ರಮ ವಹಿಸಿದೆ.
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ಹಂತ-1 ಪೂರ್ವ- ಪಶ್ಚಿಮ, ಉತ್ತರ-ದಕ್ಷಿಣ ಮಾರ್ಗದಲ್ಲಿ, ರೀಚ್-5, ರೀಚ್-6 ಮಾರ್ಗದ ಉದ್ದಕ್ಕೂ ಮೊಬೈಲ್ ನೆಟ್‌ವರ್ಕ್ ವ್ಯಾಪ್ತಿಯನ್ನು ಹೆಚ್ಚಿಸಲು ಎಲಿವೇಟೆಡ್ ಸೆಕ್ಷನ್‌ನಲ್ಲಿ 5ಜಿ ಚಿಕ್ಕ ಸೆಲ್ಗಳನ್ನು ಅಳವಡಿಕೆ ಮಾಡಲು ಟೆಂಡರ್ ಕರೆದಿದೆ.
ಬಿಎಂಆರ್‌ಸಿಎಲ್ ವ್ಯಾಪ್ತಿಯಲ್ಲಿ 5ಜಿ ಮೊಬೈಲ್ ಕವರೇಜ್ ಒದಗಿಸಲು ಟೆಲಿಕಾಂ ಕಂಪನಿಗಳು ಉಪಕರಣ ಅಳವಡಿಸಲು, ಕಾರ್ಯಾಚರಣೆ ನಡೆಸಲು ಮೆಟ್ರೋ ಪಿಲ್ಲರ್‌ಗಳ ನಡುವಿನ ಸ್ಥಳವನ್ನು ನೀಡಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಟೆಂಡರ್ ಪ್ರಕಟಣೆ ಹೇಳಿದೆ.
ಪ್ರತಿದಿನ ನಮ್ಮ ಮೆಟ್ರೋದಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಆದರೆ ರೈಲಿನಲ್ಲಿ ಸಂಚಾರ ಮಾಡುವಾಗ ಮೊಬೈಲ್ ನೆಟ್ವರ್ಕ್ ಸರಿಯಾಗಿ ಸಿಗುವುದಿಲ್ಲ ಎಂಬ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಮೆಟ್ರೋ ರೈಲಿನಲ್ಲಿ ಪೂರ್ಣವಾಗಿ 5ಜಿ ನೆಟ್‌ವರ್ಕ್ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್ ಈ ಯೋಜನೆಗೆ ಮುಂದಾಗಿದೆ. ಇದರಿಂದ ಮೆಟ್ರೋ ಪ್ರಯಾಣಿಕರಿಗೆ ತುಂಬಾ ಸಹಾಯ ಆಗಲಿದೆ. ಅಕ್ಕಪಕ್ಕದಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೂ 5G ನೆಟ್ವರ್ಕ್ ದೊರೆಯಲಿದೆ ಎಂದು ಬಿಎಂಆರ್‌ಸಿಎಲ್ ಚೀಫ್ ಪಿಆಆರ್ಒ ಯಶ್ವಂತ್ ಚೌವ್ಹಾಣ್ ಮಾಹಿತಿ ನೀಡಿದ್ದಾರೆ.
ಮೆಟ್ರೋ ಪಿಲ್ಲರ್‌ಗಳಲ್ಲಿ 5G ಶೆಲ್ಗಳನ್ನು ಅಳವಡಿಸುವುದರಿಂದ, 65 ಎಂಬಿಪಿಎಸ್ ಅಪ್‌ಲೋಡ್ ವೇಗದಲ್ಲಿ ಸೇವೆ 200 ಮೀಟರ್ ವ್ಯಾಪ್ತಿಯಲ್ಲಿ ದೊರೆಯಲಿದೆ. 1.45 ಜಿಬಿಪಿಎಸ್ ಡೌನ್‌ಲೋಡ್, 65 ಎಂಬಿಪಿಎಸ್ ಅಪ್ ಲೋಡ್ ವೇಗದಲ್ಲಿ ನೆಟ್ವರ್ಕ್ ದೊರೆಯಲಿದೆ. ಇದು 4G ಗಿಂತಲೂ ಶೇ 50 ರಷ್ಟು ಅಭಿವೃದ್ಧಿ ಹೊಂದಿದ ನೆಟ್‌ವರ್ಕ್ ಆಗಿದೆ. ಮೆಟ್ರೋ ಪಿಲ್ಲರ್‌ಗಳಲ್ಲಿ 5G ಶೆಲ್ ಅಳವಡಿಸುವುದರಿಂದ ನಮ್ಮ ಮೆಟ್ರೋ ರೈಲಿನಲ್ಲಿ ಪೂರ್ಣವಾಗಿ 5ಜಿ ನೆಟ್‌ವರ್ಕ್ ಸೌಲಭ್ಯ ಸಿಗಲಿದೆ.
2022 ರಲ್ಲಿ ಬಿಎಂಆರ್‌ಸಿಎಲ್ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ದ ಪ್ರಾಯೋಗಿಕ ಯೋಜನೆಯಡಿಯಲ್ಲಿ 5G ನೆಟ್‌ವರ್ಕ್ ಅನ್ನು ಪರೀಕ್ಷಿಸಿದ ಭಾರತದ ಮೊದಲ ಮೆಟ್ರೋ ಆಪರೇಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಬೆಂಗಳೂರಿನ ಎಂಜಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ರಿಲಾಯನ್ಸ್ ಜಿಯೋ ನೆಟ್‌ವರ್ಕ್ ಒದಗಿಸಲು ಪ್ರಾಯೋಗಿಕವಾಗಿ ಉಪಕರಣ ಹಾಕಲಾಗಿತ್ತು.
ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಇಡೀ ಮೆಟ್ರೋ ಮಾರ್ಗದುದ್ದಕ್ಕೂ ಪ್ರಯಾಣಿಕರಿಗೆ 5ಜಿ ವೇಗದ ನೆಟ್ವರ್ಕ್ ಸೇವೆ ಖಾತರಿಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.