ಖರ್ಗೆ ಕುಟುಂಬದ ಪಾತ್ರ ಮರೆಯಬೇಡಿ: ಛಲವಾದಿಗೆ ಸಚಿವ ಎನ್ ಎಸ್ ಭೋಸರಾಜು ತಿರುಗೇಟು
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಆರ್‌ಎಸ್‌ಎಸ್ ಮುಂದಿಟ್ಟುಕೊಂಡು ತಮ್ಮ ಅಸ್ತಿತ್ವಕ್ಕಾಗಿ, ಬೇಳೆ ಬೇಯಿಸಿಕೊಳ್ಳುತ್ತಿರುವುದು ನೀವು. ಖರ್ಗೆ ಅವರ ವಿರುದ್ಧ ತಾವು ಆಡಿರುವ ಮಾತುಗಳು ನಿಮಗೆ ಶೋಭೆ ತರುವುದಿಲ್ಲ ಎಂದು ಅವರು ಟೀಕಿಸಿದ್ದಾರೆ.
ಎನ್ ಎಸ್ ಭೋಸರಾಜು
ನಿಮ್ಮನ್ನೂ ಒಳಗೊಂಡಂತೆ ಈ ನಾಡಿನ ಎಲ್ಲಾ ಸಮುದಾಯದ ಮುಖಂಡರನ್ನು ಬೆಳೆಸುವಲ್ಲಿ ಹಾಗೂ ಅವರಿಗೆ ಉತ್ತಮ ಸ್ಥಾನಮಾನ ದೊರಕಿಸಿಕೊಡುವಲ್ಲಿ ನಮ್ಮ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬದ ಪಾತ್ರ ಹಿರಿದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಅವರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಆರ್‌ಎಸ್‌ಎಸ್ ಮುಂದಿಟ್ಟುಕೊಂಡು ತಮ್ಮ ಅಸ್ತಿತ್ವಕ್ಕಾಗಿ, ಬೇಳೆ ಬೇಯಿಸಿಕೊಳ್ಳುತ್ತಿರುವುದು ನೀವು. ಖರ್ಗೆ ಅವರ ವಿರುದ್ಧ ತಾವು ಆಡಿರುವ ಮಾತುಗಳು ನಿಮಗೆ ಶೋಭೆ ತರುವುದಿಲ್ಲ ಎಂದು ಅವರು ಟೀಕಿಸಿದ್ದಾರೆ.
ಖರ್ಗೆ ಕುಟುಂಬದ ಪಾತ್ರ ಮರೆಯಬೇಡಿ
ಪ್ರಿಯಾಂಕ ಖರ್ಗೆ ಅವರು ಎಷ್ಟು ಜನ ದಲಿತರನ್ನು ಗುತ್ತಿಗೆದಾರರನ್ನಾಗಿ ಮಾಡಿದ್ದಾರೆ, ಎಷ್ಟು ದಲಿತ ಅಭ್ಯರ್ಥಿಗಳಿಗೆ ನೌಕರಿ ಕೊಡಿಸಿದ್ದಾರೆ ಎಂದು ಪ್ರಶ್ನಿಸಿದ ನಾರಾಯಣಸ್ವಾಮಿಯವರಿಗೆ ಸಚಿವ ಭೋಸರಾಜು ತಿರುಗೇಟು ನೀಡಿದ್ದಾರೆ. ಪಕ್ಷ ಬದಲಾಯಿಸಿ ವೈಯುಕ್ತಿಕ ಲಾಭಕ್ಕಾಗಿ ಈ ರೀತಿ ಮನಬಂದಂತೆ ದೂಷಿಸುವುದು ಸರಿಯಲ್ಲ. ಛಲವಾದಿ ನಾರಾಯಣಸ್ವಾಮಿ ಅವರು ರಾಜಕೀಯದಲ್ಲಿ ಈ ಮಟ್ಟಕ್ಕೆ ಬೆಳೆಯಲು ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಸ್ಥಾನಮಾನ ಗಳಿಸಿದ್ದಕ್ಕೆ ಖರ್ಗೆ ಅವರ ಕುಟುಂಬದ ಪಾತ್ರ ಬಹಳ ಹಿರಿದು ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸತ್ಯವನ್ನು ಮರೆಮಾಚಿ, ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈ ರೀತಿ ಹೇಳಿಕೆ ನೀಡುತ್ತಿರುವುದು ನಾರಾಯಣಸ್ವಾಮಿ ಅವರಿಗೆ ಶೋಭೆ ತರುವಂತಹದ್ದಲ್ಲ. ಸಾವಿರಾರು ಸಂಖ್ಯೆಯಲ್ಲಿ ಇವತ್ತು ದಲಿತರು ಸೇರಿದಂತೆ ರಾಜ್ಯದ ಎಲ್ಲ ಸಮುದಾಯಗಳ ಮುಖಂಡರನ್ನು, ನಾಯಕರನ್ನು ಪೋಷಿಸಿ, ಬೆಳೆಸಿದವರು ಖರ್ಗೆ. ಕಳೆದ 50 ವರ್ಷಗಳ ಸುದೀರ್ಘ ತಮ್ಮ ರಾಜಕೀಯ ಬದುಕಲ್ಲಿ ಅಭಿವೃದ್ದಿ ಪರ ರಾಜಕಾರಣ ಮಾಡುತ್ತಾ ನಾಡಿನ ಒಳಿತಿಗಾಗಿ ಬದುಕನ್ನು ಮುಡುಪಿಟ್ಟ ಖರ್ಗೆ ಅವರ ಕುಟುಂಬವನ್ನು, ತಮ್ಮ ಸ್ವಾರ್ಥ ರಾಜಕೀಯಕ್ಕೋಸ್ಕರ, ಅಧಿಕಾರ ಲಾಲಸೆಗಾಗಿ ಈ ರೀತಿಯ ದೋಷಾರೋಪ ಹೇಳಿಕೆಗಳನ್ನು ನೀಡುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆತ್ತಲಾಗುವ ಕಾಲ ದೂರವಿಲ್ಲ
ಖರ್ಗೆ ಅವರಿಂದ ಉಪಕಾರ ಪಡೆದ ಅನೇಕರು ರಾಜಕೀಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಉತ್ತಮ ಸ್ಥಾನಮಾನಗಳನ್ನು ಪಡೆದುಕೊಂಡಿದ್ದಾರೆ. ಅದು ಛಲವಾದಿ ನಾರಾಯಣಸ್ವಾಮಿ ಅವರಿಗೂ ಗೊತ್ತಿರುವಂತಹ ಸಂಗತಿ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ತಮ್ಮ ಶಾಲಿನ ಬಣ್ಣ ಬದಲಾಯಿಸಿಕೊಂಡು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ನಾರಾಯಣ ಸ್ವಾಮಿಗಳು ರಾಜಕೀಯವಾಗಿ ಈಗ ಸ್ಥಾನಮಾನ ಗಳಿಸಿಕೊಳ್ಳಲು ಖರ್ಗೆ ಅವರ ಆಶೀರ್ವಾದವೇ ಮುಖ್ಯ ಕಾರಣ ಎನ್ನುವುದನ್ನು ಮರೆಯಬಾರದು" ಎಂದು ಎಚ್ಚರಿಸಿದರು.
"ಹತ್ತಿದ ಏಣಿಯನ್ನು ಒದೆಯುವ ಮನೋಧರ್ಮದ ಛಲವಾದಿ ನಾರಾಯಣಸ್ವಾಮಿ ಅವರು ಇಂತಹ ಹೇಳಿಕೆಗಳನ್ನು ನೀಡುವುದು ಮೊದಲು ನಿಲ್ಲಿಸಬೇಕು. ಇಲ್ಲವಾದರೆ ಜನರ ಮುಂದೆ ತಾವೇ ಬೆತ್ತಲಾಗುವ ಕಾಲ ದೂರವಿಲ್ಲ" ಎಂದು ಸಚಿವ ಎನ್ ಎಸ್ ಭೋಸರಾಜು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಿಯಾಂಕ್ ಅವರ ಬುಡಕ್ಕೆ ಬೆಂಕಿ ಬಿದ್ದಾಗ ಮಾತ್ರ ದಲಿತರು ನೆನಪಾಗುತ್ತಾರೆ. ಅವರು ಎತ್ತಿರುವ ವಿಚಾರಕ್ಕೆ ಮಾತ್ರ ಇಂದು ದಲಿತ ಸಂಘಟನೆಗಳು ಬೆಂಬಲ ನೀಡಿರುವುದು ಬಾಬಾಸಾಹೇಬ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಮಾಡಿರುವ ಅಪಮಾನ ಎಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಅವರು ಹೇಳಿಕೆ ನೀಡಿದ್ದರು.