ವೈದ್ಯೆ ಆತ್ಮಹತ್ಯೆ ಪ್ರಕರಣಕ್ಕೆ ತಿರುವು: ಅತ್ಯಾಚಾರದ ಜೊತೆ ಸುಳ್ಳು ವರದಿ ನೀಡಲೂ ಇತ್ತು ಒತ್ತಡ
ಗುರುವಾರ ರಾತ್ರಿ ಫಲ್ಟಾನ್‌ನ ಹೋಟೆಲ್ ಕೋಣೆಯಲ್ಲಿ 28 ವರ್ಷದ ವೈದ್ಯೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಮ್ಮ ಅಂಗೈ ಮೇಲೆ ಬರೆದಿದ್ದ ಡೆತ್‌ನೋಟ್‌ನಲ್ಲಿ, ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಗೋಪಾಲ್ ಬಡಾನೆ ತನ್ನ ಮೇಲೆ ನಾಲ್ಕು ಬಾರಿ ಅತ್ಯಾಚಾರ ಎಸಗಿದ್ದಾನೆ ಹಾಗೂ ಟೆಕ್ಕಿ ಪ್ರಶಾಂತ್ ಬಂಕರ್ ಮಾನಸಿಕ ಹಿಂಸೆ ನೀಡಿದ್ದಾನೆ ಎಂದು ಆರೋಪಿಸಿದ್ದರು.
ವೈದ್ಯೆ ಆತ್ಮಹತ್ಯೆ
ಪೊಲೀಸ್ ಅಧಿಕಾರಿಯಿಂದ ಅತ್ಯಾಚಾರಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಸರ್ಕಾರಿ ವೈದ್ಯೆಯ ಪ್ರಕರಣವು ಮಹಾರಾಷ್ಟ್ರವನ್ನು ಬೆಚ್ಚಿಬೀಳಿಸಿದೆ. ಪ್ರಕರಣಕ್ಕೆ ಇದೀಗ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದ್ದು, ಅತ್ಯಾಚಾರ ಮತ್ತು ಕಿರುಕುಳದ ಜೊತೆಗೆ, ವೈದ್ಯಕೀಯ ವರದಿಗಳನ್ನು ತಿರುಚುವಂತೆ ವೈದ್ಯೆಯ ಮೇಲೆ ಓರ್ವ ಸಂಸದರಿಂದಲೂ ತೀವ್ರ ಒತ್ತಡವಿತ್ತು ಎಂಬ ಆಘಾತಕಾರಿ ಮಾಹಿತಿ ಅವರ ಡೆತ್‌ನೋಟ್‌ನಿಂದ ಬಹಿರಂಗವಾಗಿದೆ.
ಗುರುವಾರ ರಾತ್ರಿ ಫಲ್ಟಾನ್‌ನ ಹೋಟೆಲ್ ಕೋಣೆಯಲ್ಲಿ 28 ವರ್ಷದ ವೈದ್ಯೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಮ್ಮ ಅಂಗೈ ಮೇಲೆ ಬರೆದಿದ್ದ ಡೆತ್‌ನೋಟ್‌ನಲ್ಲಿ, ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಗೋಪಾಲ್ ಬಡಾನೆ ತನ್ನ ಮೇಲೆ ನಾಲ್ಕು ಬಾರಿ ಅತ್ಯಾಚಾರ ಎಸಗಿದ್ದಾನೆ ಹಾಗೂ ಟೆಕ್ಕಿ ಪ್ರಶಾಂತ್ ಬಂಕರ್ ಮಾನಸಿಕ ಹಿಂಸೆ ನೀಡಿದ್ದಾನೆ ಎಂದು ಆರೋಪಿಸಿದ್ದರು. ಇದರ ಜೊತೆಗೆ, ಪೊಲೀಸರಿಗೆ ಸಿಕ್ಕಿರುವ ನಾಲ್ಕು ಪುಟಗಳ ಮತ್ತೊಂದು ಪತ್ರದಲ್ಲಿ, ಅವರು ಎದುರಿಸುತ್ತಿದ್ದ ವ್ಯವಸ್ಥಿತ ಕಿರುಕುಳದ ವಿವರಗಳನ್ನು ಬಿಚ್ಚಿಟ್ಟಿದ್ದಾರೆ.
ಪತ್ರದ ಪ್ರಕಾರ, ಬಂಧಿತ ಆರೋಪಿಗಳ ವೈದ್ಯಕೀಯ ವರದಿ ಮತ್ತು ಮರಣೋತ್ತರ ಪರೀಕ್ಷಾ ವರದಿಗಳನ್ನು ತಮಗೆ ಬೇಕಾದಂತೆ ಬದಲಾಯಿಸಲು ಪೊಲೀಸರು ನಿರಂತರವಾಗಿ ಒತ್ತಡ ಹೇರುತ್ತಿದ್ದರು. ಇದಕ್ಕೆ ಒಪ್ಪದಿದ್ದಾಗ, ಪಿಎಸ್‌ಐ ಬಡಾನೆ ಮತ್ತು ಇತರರು ಕಿರುಕುಳ ನೀಡುತ್ತಿದ್ದರು. ಒಂದು ಘಟನೆಯಲ್ಲಿ, ಆರೋಪಿಯೊಬ್ಬನಿಗೆ ಸುಳ್ಳು ಫಿಟ್‌ನೆಸ್ ಪ್ರಮಾಣಪತ್ರ ನೀಡಲು ನಿರಾಕರಿಸಿದಾಗ, ಓರ್ವ ಸಂಸದರ ಆಪ್ತ ಸಹಾಯಕರು ಆಸ್ಪತ್ರೆಗೆ ಬಂದು ಬೆದರಿಕೆ ಹಾಕಿದ್ದರು. ಸ್ವತಃ ಸಂಸದರೇ ಫೋನ್ ಮೂಲಕ ಮಾತನಾಡಿ, ವರದಿ ಬದಲಾಯಿಸುವಂತೆ ಪರೋಕ್ಷವಾಗಿ ಬೆದರಿಸಿದ್ದರು ಎಂದು ವೈದ್ಯೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಜಿಲ್ಲಾ ವೈದ್ಯಕೀಯ ಮಂಡಳಿಗೆ ಲಿಖಿತ ಉತ್ತರ ನೀಡಿದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ.
ಪ್ರಕರಣವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೇ ಮಧ್ಯಪ್ರವೇಶಿಸಿ ತನಿಖೆಗೆ ಆದೇಶಿಸಿದ್ದಾರೆ. ಆರೋಪಿ ಪಿಎಸ್‌ಐ ಗೋಪಾಲ್ ಬಡಾನೆಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ. ಮತ್ತೋರ್ವ ಆರೋಪಿ, ಪುಣೆ ಮೂಲದ ಟೆಕ್ಕಿ ಪ್ರಶಾಂತ್ ಬಂಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡ (SIT) ರಚಿಸಿ, ತ್ವರಿತಗತಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕೆಂದು ವಿಪಕ್ಷಗಳು ಆಗ್ರಹಿಸಿವೆ.