ಹಾಸನಾಂಬೆ ದೇಗುಲ: ಈ ವರ್ಷದ ಆದಾಯ 25.59 ಕೋಟಿ ರೂ., ಸಾರ್ವಕಾಲಿಕ ದಾಖಲೆ
ಹುಂಡಿಯಲ್ಲಿ ನಿಷೇಧಿತ 5,00 ರೂ. ಹಾಗೂ 1,000 ರೂ. ನೋಟುಗಳು ಪತ್ತೆಯಾಗಿವೆ. ಒಟ್ಟಾರೆ ಕಳೆದ 13 ವರ್ಷಗಳ ಹಿಂದೆ ಹುಂಡಿ ಹಣ 1.21 ಕೋಟಿ ರೂ . ಸಂಗ್ರವಾಗಿತ್ತು. ಆದರೆ ಈ ಬಾರಿ 25 ಕೋಟಿ ರೂ. ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾಸನಾಂಬ ದೇವಾಲಯದ ಹುಂಡಿ ಎಣಿಕೆ ಕಾರ್ಯ ಮಾಡುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ
ಹಾಸನದ ಐತಿಹಾಸಿಕ ಹಾಸನಾಂಬೆ ದೇವಾಲಯದ ಬಾಗಿಲು ಈ ವರ್ಷದ ದರ್ಶನಕ್ಕೆ ಮುಕ್ತಾಯವಾಗಿದ್ದು, ದೇವಾಲಯವು ಆದಾಯ ಸಂಗ್ರಹಣೆಯಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಈ ಬಾರಿ ಹುಂಡಿ, ವಿಶೇಷ ದರ್ಶನ ಟಿಕೆಟ್ ಮತ್ತು ಲಾಡು ಪ್ರಸಾದ ಮಾರಾಟದಿಂದ ಒಟ್ಟು 25.59 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಇದು ದೇವಾಲಯದ ಇತಿಹಾಸದಲ್ಲಿಯೇ ಸಾರ್ವಕಾಲಿಕ ದಾಖಲೆಯಾಗಿದೆ.
ದಾಖಲೆ ಮಟ್ಟದ ಆದಾಯ ಸಂಗ್ರಹ
ದೇವಾಲಯದ ಗರ್ಭಗುಡಿಯ ಬಾಗಿಲನ್ನು ಶಾಸ್ತ್ರೋಕ್ತವಾಗಿ ಮುಚ್ಚಿದ ನಂತರ, ಜಿಲ್ಲಾಡಳಿತವು ಹುಂಡಿ ಎಣಿಕೆ ಕಾರ್ಯವನ್ನು ನಡೆಸಿತು. ಈ ಬಾರಿ ಹುಂಡಿಯಲ್ಲಿ 3.6 ಕೋಟಿ ರೂ. ನಗದು, 75 ಗ್ರಾಂ ಚಿನ್ನ ಹಾಗೂ 1.58 ಕೆ.ಜಿ. ಬೆಳ್ಳಿ ಸಂಗ್ರಹವಾಗಿದೆ. ಇದರ ಜೊತೆಗೆ, ಲಾಡು ಪ್ರಸಾದ ಹಾಗೂ ವಿಶೇಷ ದರ್ಶನ ಟಿಕೆಟ್‌ಗಳ ಮಾರಾಟದಿಂದಲೇ 21.82 ಕೋಟಿ ರೂ. ಆದಾಯ ಬಂದಿದೆ. ಈ ಎಲ್ಲವನ್ನೂ ಸೇರಿ ದೇವಾಲಯದ ಒಟ್ಟು ಆದಾಯ 25.59 ಕೋಟಿ ರೂ. ತಲುಪಿದೆ.
2024ರಲ್ಲಿ ದೇವಾಲಯದ ಒಟ್ಟು ಆದಾಯ 12.63 ಕೋಟಿ ರೂ. ಆಗಿತ್ತು. ಆ ವರ್ಷ ಹುಂಡಿಯಲ್ಲಿ 2.55 ಕೋಟಿ ರೂ. ನಗದು, 51 ಗ್ರಾಂ ಚಿನ್ನ ಹಾಗೂ 913 ಗ್ರಾಂ ಬೆಳ್ಳಿ ಸಂಗ್ರಹವಾಗಿತ್ತು. ಕಳೆದ ವರ್ಷದ ಆದಾಯವನ್ನು ಈ ಬಾರಿಯ ಸಂಗ್ರಹವು ಬಹುತೇಕ ದ್ವಿಗುಣಗೊಳಿಸಿ ಹೊಸ ದಾಖಲೆ ಬರೆದಿದೆ.
26 ಲಕ್ಷ ಭಕ್ತರಿಂದ ದೇವಿಯ ದರ್ಶನ
ಅಕ್ಟೋಬರ್ 9 ರಿಂದ 23ರವರೆಗೆ ನಡೆದ ಹಾಸನಾಂಬೆ ಮಹೋತ್ಸವದಲ್ಲಿ, ಮೊದಲ ಹಾಗೂ ಕೊನೆಯ ದಿನ ಹೊರತುಪಡಿಸಿ, ಸುಮಾರು 26 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಅಕ್ಟೋಬರ್ 17ರಂದು ಅತಿ ಹೆಚ್ಚು, ಅಂದರೆ 3.62 ಲಕ್ಷ ಜನರು ದೇವಿಯ ದರ್ಶನ ಪಡೆದಿರುವುದು ವಿಶೇಷ.
ಹುಂಡಿಯಲ್ಲಿ ವಿದೇಶಿ ಮತ್ತು ನಿಷೇಧಿತ ನೋಟುಗಳು
ಈ ಬಾರಿಯ ಹುಂಡಿಯಲ್ಲಿ ವಿದೇಶಿ ಕರೆನ್ಸಿಗಳು ಕೂಡ ಪತ್ತೆಯಾಗಿವೆ. ಇಂಡೊನೇಷ್ಯಾ, ನೇಪಾಳ, ಮಲೇಷ್ಯಾ, ಅಮೆರಿಕ, ಮಾಲ್ಡೀವ್ಸ್, ಕೆನಡಾ, ಕುವೈತ್ ಹಾಗೂ ಯುಎಇ ಸೇರಿದಂತೆ ವಿವಿಧ ದೇಶಗಳ ನೋಟುಗಳು ಹುಂಡಿಯಲ್ಲಿ ದೊರೆತಿದ್ದು, ಅವುಗಳ ಒಟ್ಟು ಮೌಲ್ಯ 7,553 ರೂ. ಆಗಿದೆ. ಇದರೊಂದಿಗೆ, ಸರ್ಕಾರದಿಂದ ನಿಷೇಧಿಸಲ್ಪಟ್ಟ ಹಳೆಯ 500 ರೂ. ಮತ್ತು 1,000 ರೂ. ಮುಖಬೆಲೆಯ ನೋಟುಗಳು ಸಹ ಹುಂಡಿಯಲ್ಲಿ ಕಂಡುಬಂದಿವೆ.
13 ವರ್ಷಗಳ ಹಿಂದೆ ದೇವಾಲಯದ ಹುಂಡಿ ಹಣ ಕೇವಲ 1.21 ಕೋಟಿ ರೂ. ಇತ್ತು. ಆದರೆ, ಈ ಬಾರಿ ಒಟ್ಟು ಆದಾಯ 25 ಕೋಟಿ ರೂ. ಗಡಿ ದಾಟಿರುವುದು ದೇವಾಲಯದ ಹೆಚ್ಚುತ್ತಿರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.