ಟೋಲ್ ರಸ್ತೆ ತಪ್ಪಿಸಿದ್ದಕ್ಕೆ ಜಗಳ: ಬೆಂಗಳೂರಿನಲ್ಲಿ ಯುವತಿ ಮೇಲೆ ಹಲ್ಲೆ, ಕ್ಯಾಬ್ ಚಾಲಕನ ಬಂಧನ
ಕೇರಳದ ತ್ರಿಶೂರ್ ಮೂಲದವನಾದ ಆರೋಪಿ, 31 ವರ್ಷದ ಅಜಸ್ ಪಿ.ಎಸ್ ಬಂಧನಕ್ಕೆ ಒಳಗಾಗಿದ್ದಾನೆ. ಅಕ್ಟೋಬರ್ 20 ರಂದು ಈ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ, ಶುಲ್ಕ ಪಾವತಿಸಬೇಕಾದ ಟೋಲ್ ರಸ್ತೆಯನ್ನು ತಪ್ಪಿಸಿ ಬೇರೆ ಮಾರ್ಗದಲ್ಲಿ ಸಾಗಿದ್ದನ್ನು ಪ್ರಶ್ನಿಸಿದ್ದಕ್ಕಾಗಿ 19 ವರ್ಷದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕ್ಯಾಬ್ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಕೇರಳದ ತ್ರಿಶೂರ್ ಮೂಲದವನಾದ ಆರೋಪಿ, 31 ವರ್ಷದ ಅಜಸ್ ಪಿ.ಎಸ್ ಬಂಧನಕ್ಕೆ ಒಳಗಾಗಿದ್ದಾನೆ. ಅಕ್ಟೋಬರ್ 20 ರಂದು ಈ ಘಟನೆ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ವಿದ್ಯಾರ್ಥಿನಿ ಬೆಂಗಳೂರಿನ ಖಾಸಗಿ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ವಿಮಾನ ನಿಲ್ದಾಣಕ್ಕೆ ತೆರಳಲು ಆನ್‌ಲೈನ್ ಆಪ್ ಮೂಲಕ ಕ್ಯಾಬ್ ಬುಕ್ ಮಾಡಿದ್ದರು. ಸಂತ್ರಸ್ತೆಯ ಚಿಕ್ಕಪ್ಪ ನೀಡಿದ ದೂರಿನ ಪ್ರಕಾರ, ಪ್ರಯಾಣದ ಸಮಯದಲ್ಲಿ ವಿದ್ಯಾರ್ಥಿನಿ ಈಗಾಗಲೇ ಟೋಲ್ ಶುಲ್ಕವನ್ನು ಪಾವತಿಸಿದ್ದರೂ, ಚಾಲಕ ಟೋಲ್ ರಸ್ತೆಯನ್ನು ತಪ್ಪಿಸಿ ಬೇರೆ ದಾರಿಯಲ್ಲಿ ವಾಹನ ಚಲಾಯಿಸಿದ್ದಾನೆ.
ಇದನ್ನು ಗಮನಿಸಿದ ವಿದ್ಯಾರ್ಥಿನಿ, ಚಾಲಕನನ್ನು ಪ್ರಶ್ನಿಸಿದಾಗ ಆತ ಸರಿಯಾದ ಉತ್ತರ ನೀಡಲಿಲ್ಲ. ಇದರಿಂದಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಬಳಿಕ, ವಿದ್ಯಾರ್ಥಿನಿ ಕ್ಯಾಬ್‌ನಿಂದ ಇಳಿದು ಬೇರೊಂದು ಕ್ಯಾಬ್ ಬುಕ್ ಮಾಡಿದ್ದಾಳೆ. ಆಕೆ ಹೊಸ ಕ್ಯಾಬ್ ಹತ್ತಲು ಮುಂದಾದಾಗ, ಆರೋಪಿ ಚಾಲಕ ಅಜಸ್ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವೇಳೆ, ಗಾಬರಿಗೊಂಡ ವಿದ್ಯಾರ್ಥಿನಿ ತನ್ನ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಸ್ಥಳದಿಂದ ತೆರಳಿದ್ದು, ಚಾಲಕ ಪರಾರಿಯಾಗಿದ್ದಾನೆ.
ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತೆಯಡಿ (Bharatiya Nyaya Sanhita) ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು, ಕ್ರಿಮಿನಲ್ ಬೆದರಿಕೆ, ಮತ್ತು ಅಕ್ರಮ ಬಂಧನದಂತಹ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಆರೋಪಿ ಚಾಲಕನನ್ನು ಬಂಧಿಸಲಾಗಿದೆ.
ಪ್ರಾಥಮಿಕ ತನಿಖೆಯಿಂದ, ಆರೋಪಿ ಘಟನೆ ನಡೆಯುವ ಎರಡು ದಿನಗಳ ಹಿಂದಷ್ಟೇ ಕೇರಳದಿಂದ ಬೆಂಗಳೂರಿಗೆ ಬಂದಿದ್ದನು ಮತ್ತು ಬುಕ್ಕಿಂಗ್ ಸ್ವೀಕರಿಸುವ ವೇಳೆ ಆತ ಮದ್ಯದ ಅಮಲಿನಲ್ಲಿದ್ದ ಎಂಬುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.