Dasara 2025: ಅಂಬಾರಿ ಹೊರಲು ಅಭಿಮನ್ಯು ನೇತೃತ್ವದಲ್ಲಿ ಸಜ್ಜಾದ ಭೀಮ-ಧನಂಜಯರ ಗಜಪಡೆ!
ಐತಿಹಾಸಿಕ ದಸರಾ ಕಾರ್ಯಕ್ರಮಕ್ಕೆ 14 ಆನೆಗಳ ಪೈಕಿ 9 ಆನೆಗಳನ್ನು ಅಂತಿಮಗೊಳಿಸಲಾಗಿದೆ. ಇದರಲ್ಲಿ ಅಭಿಮನ್ಯು ಅಂಬಾರಿ ಹೊರುವುದು. 9 ಆನೆಗಳ ಗುಣ ಲಕ್ಷಣಗಳು ಹಾಗು ಇದರ ಸಂಪೂರ್ಣ ವಿವರ ಇಲ್ಲಿದೆ.;
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಮೆರುಗು ನೀಡಲು, ಅನುಭವಿ ಮತ್ತು ಯುವ ಆನೆಗಳನ್ನೊಳಗೊಂಡ ಬಲಿಷ್ಠ ಗಜಪಡೆಯನ್ನು ಅಂತಿಮಗೊಳಿಸಲಾಗಿದೆ. ಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ಚಿನ್ನದ ಅಂಬಾರಿಯನ್ನು ಹೊರುತ್ತಿರುವ 59 ವರ್ಷದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ, ಈ ಬಾರಿ ಒಂಬತ್ತು ಆನೆಗಳು ನಾಡಹಬ್ಬದಲ್ಲಿ ಪಾಲ್ಗೊಳ್ಳಲು ಸಜ್ಜಾಗಿವೆ.
ಮತ್ತಿಗೋಡು ಆನೆ ಶಿಬಿರದ 59 ವರ್ಷದ ಅಭಿಮನ್ಯು, ಈ ಗಜಪಡೆಯ ಸಾರಥಿಯಾಗಿದ್ದಾನೆ. ವಸಂತ ಮತ್ತು ರಾಜು ಅವರ ಉಸ್ತುವಾರಿಯಲ್ಲಿರುವ ಅಭಿಮನ್ಯು, ಕೇವಲ ಅಂಬಾರಿ ಹೊರುವುದರಲ್ಲಿ ಮಾತ್ರವಲ್ಲದೆ, 150ಕ್ಕೂ ಹೆಚ್ಚು ಕಾಡಾನೆಗಳು ಮತ್ತು 50ಕ್ಕೂ ಹೆಚ್ಚು ಹುಲಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅಪಾರ ಅನುಭವವನ್ನು ಹೊಂದಿದ್ದಾನೆ.
ಅಭಿಮನ್ಯುವಿಗೆ ಬಲವಾಗಿ, ದುಬಾರೆ ಶಿಬಿರದ 45 ವರ್ಷದ ಧನಂಜಯ ಮತ್ತು ಮತ್ತಿಗೋಡು ಶಿಬಿರದ ಬಲಿಷ್ಠ 25 ವರ್ಷದ ಭೀಮ ಸಾಥ್ ನೀಡಲಿದ್ದಾರೆ. ಧನಂಜಯ ಕಳೆದ ಏಳು ವರ್ಷಗಳಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಅನುಭವಿಯಾಗಿದ್ದರೆ, 5300 ಕೆ.ಜಿ ತೂಕದ ಭೀಮನು ವಾಹನ ಮತ್ತು ಪಟಾಕಿಗಳ ಶಬ್ದಕ್ಕೆ ಅಂಜದ ಧೈರ್ಯಶಾಲಿ. ದುಬಾರೆ ಶಿಬಿರದ ಮತ್ತೊಬ್ಬ ಆನೆ, 53 ವರ್ಷದ ಪ್ರಶಾಂತ, 15 ವರ್ಷಗಳ ದಸರಾ ಅನುಭವದೊಂದಿಗೆ ಗಜಪಡೆಯ ಹಿರಿಯ ಸದಸ್ಯನಾಗಿದ್ದಾನೆ.
ಗಜಪಡೆಯಲ್ಲಿ ಯುವ ಆನೆಗಳಿಗೂ ಸ್ಥಾನ ನೀಡಲಾಗಿದೆ. ದುಬಾರೆ ಶಿಬಿರದ 26 ವರ್ಷದ ಕಂಜನ್ ಮತ್ತು ಮತ್ತಿಗೋಡು ಶಿಬಿರದ 40 ವರ್ಷದ ಏಕಲವ್ಯ ತಮ್ಮ ಶಕ್ತಿ ಮತ್ತು ಸಾಮರ್ಥ್ಯದಿಂದ ಗಮನ ಸೆಳೆಯುತ್ತಿದ್ದಾರೆ. ಏಕಲವ್ಯ, 2022ರಲ್ಲಿ ಪಟ್ಟದಾನೆಯಾಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾನೆ.
ಬಳ್ಳೆ ಆನೆ ಶಿಬಿರದ 42 ವರ್ಷದ ಮಹೇಂದ್ರ, ಶ್ರೀರಂಗಪಟ್ಟಣ ದಸರಾದಲ್ಲಿ ಮರದ ಅಂಬಾರಿ ಹೊತ್ತ ಅನುಭವದೊಂದಿಗೆ ಈ ಬಾರಿ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದಾನೆ.
ಈ ಗಜಪಡೆಯಲ್ಲಿ ಹೆಣ್ಣಾನೆಗಳ ಪಾತ್ರವೂ ಮಹತ್ವದ್ದಾಗಿದೆ. ದುಬಾರೆ ಶಿಬಿರದ 45 ವರ್ಷದ ಕಾವೇರಿ ಮತ್ತು ಬಳ್ಳೆ ಶಿಬಿರದ 54 ವರ್ಷದ ಬಳ್ಳೆ ಲಕ್ಷ್ಮೀ ಈ ಬಾರಿಯ ತಂಡದಲ್ಲಿದ್ದಾರೆ. ಕಾವೇರಿ ಈ ಹಿಂದೆ ಅನೇಕ ಬಾರಿ ದಸರಾದಲ್ಲಿ ಭಾಗವಹಿಸಿದ್ದರೆ, ಈ ಹಿಂದೆ ಸರ್ಕಸ್‌ನಲ್ಲಿದ್ದು 2015ರಲ್ಲಿ ಇಲಾಖೆಯ ವಶಕ್ಕೆ ಬಂದ ಲಕ್ಷ್ಮೀಯು ಎರಡನೇ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿದ್ದಾಳೆ.
ಅನುಭವಿ ಮಾವುತರು ಮತ್ತು ಕಾವಾಡಿಗಳ ಆರೈಕೆಯಲ್ಲಿರುವ ಈ ಗಜಪಡೆಯು, ನಾಡಹಬ್ಬದ ಜಂಬೂ ಸವಾರಿಯನ್ನು ಯಶಸ್ವಿಗೊಳಿಸಲು ಸಂಪೂರ್ಣವಾಗಿ ಸಿದ್ಧಗೊಂಡಿದ್ದು, ಸಾಂಸ್ಕೃತಿಕ ರಾಜಧಾನಿಯಲ್ಲಿ ದಸರಾ ಸಂಭ್ರಮಕ್ಕೆ ಕಳೆಕಟ್ಟಿದೆ.
ಆನೆಗಳ ವಿವರ ಇಲ್ಲಿದೆ
1. ಅಭಿಮನ್ಯು
* ಲಿಂಗ: ಗಂಡು
* ವಯಸ್ಸು: 59 ವರ್ಷ
* ಆನೆ ಶಿಬಿರ: ಮತ್ತಿಗೋಡು ಆನೆ ಶಿಬಿರ
* ಮಾವುತ: ವಸಂತ ಜೆ.ಎಸ್.
* ಕಾವಾಡಿ: ರಾಜು ಜೆ.ಕೆ.
* ಎತ್ತರ: 2.72 ಮೀಟರ್
* ಉದ್ದ: 3.51 ಮೀಟರ್
* ಅಂದಾಜು ತೂಕ: 4,920 ಕೆ.ಜಿ.
* ಗುಣಲಕ್ಷಣಗಳು: 1970ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಕಾಡಾನೆಗಳನ್ನು ಸೆರೆಹಿಡಿಯುವ, ಪಳಗಿಸುವ ಮತ್ತು ಚಿಕಿತ್ಸೆ ನೀಡುವ ಕೆಲಸದಲ್ಲಿ ಅಪಾರ ಸಾಮರ್ಥ್ಯ ಹೊಂದಿದೆ. ಈ ಹಿಂದೆ 140-150 ಕಾಡಾನೆಗಳನ್ನು ಮತ್ತು 40-50 ಹುಲಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಕಳೆದ 5 ವರ್ಷಗಳಿಂದ ವಿಶ್ವವಿಖ್ಯಾತ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ.
2. ಧನಂಜಯ
* ಲಿಂಗ: ಗಂಡು
* ವಯಸ್ಸು: 45 ವರ್ಷ
* ಆನೆ ಶಿಬಿರ: ದುಬಾರೆ ಆನೆ ಶಿಬಿರ
* ಮಾವುತ: ಭಾಸ್ಕರ್ ಜೆ.ಸಿ.
* ಕಾವಾಡಿ: ರಾಜಣ್ಣ ಜೆ.ಎಸ್.
* ಎತ್ತರ: 2.80 ಮೀಟರ್
* ಉದ್ದ: 3.84 ಮೀಟರ್
* ಅಂದಾಜು ತೂಕ: 4,050 ಕೆ.ಜಿ.
* ಗುಣಲಕ್ಷಣಗಳು: 2013ರಲ್ಲಿ ಹಾಸನ ಜಿಲ್ಲೆಯ ಯಸಳೂರು ವಲಯದಲ್ಲಿ ಸೆರೆಹಿಡಿಯಲಾಯಿತು. ಕಾಡಾನೆ ಮತ್ತು ಹುಲಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಗಳಲ್ಲಿ ಭಾಗವಹಿಸುತ್ತದೆ. ಕಳೆದ 7 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ.V
3. ಭೀಮ
* ಲಿಂಗ: ಗಂಡು
* ವಯಸ್ಸು: 25 ವರ್ಷ
* ಆನೆ ಶಿಬಿರ: ಮತ್ತಿಗೋಡು ಆನೆ ಶಿಬಿರ
* ಮಾವುತ: ಗುಂಡು
* ಕಾವಾಡಿ: ನಂಜುಂಡಸ್ವಾಮಿ
* ಎತ್ತರ: 2.85 ಮೀಟರ್
* ಉದ್ದ: 3.05 ಮೀಟರ್
* ಅಂದಾಜು ತೂಕ: 5,300 ಕೆ.ಜಿ.
* ಗುಣಲಕ್ಷಣಗಳು: ಈ ಆನೆಯು ಆರೋಗ್ಯವಾಗಿದ್ದು, ವಾಹನ ಹಾಗೂ ಪಟಾಕಿಗಳ ಶಬ್ದಕ್ಕೆ ಅಂಜುವುದಿಲ್ಲ. ಇದು ಎರಡನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.
4. ಕಂಜನ್
* ಲಿಂಗ: ಗಂಡು
* ವಯಸ್ಸು: 26 ವರ್ಷ
* ಆನೆ ಶಿಬಿರ: ದುಬಾರೆ ಆನೆ ಶಿಬಿರ
* ಮಾವುತ: ಜೆ.ಡಿ. ವಿಜಯ
* ಕಾವಾಡಿ: ಕಿರಣ
* ಎತ್ತರ: 2.89 ಮೀಟರ್
* ಅಂದಾಜು ತೂಕ: 3,900 ಕೆ.ಜಿ.
* ಗುಣಲಕ್ಷಣಗಳು: 2014ರಲ್ಲಿ ಹಾಸನ ಜಿಲ್ಲೆಯ ಯಲಸೂರು ಬಳಿ ಸೆರೆಹಿಡಿಯಲಾಯಿತು. ಆರೋಗ್ಯವಾಗಿದ್ದು, ಕಳೆದ 2 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದು, ಈ ಬಾರಿಯೂ ಭಾಗವಹಿಸುತ್ತಿದೆ.
5. ಏಕಲವ್ಯ
* ಲಿಂಗ: ಗಂಡು
* ವಯಸ್ಸು: 40 ವರ್ಷ
* ಆನೆ ಶಿಬಿರ: ಮತ್ತಿಗೋಡು ಆನೆ ಶಿಬಿರ
* ಮಾವುತ: ಇದಾಯತ್ ಎಸ್.
* ಕಾವಾಡಿ: ಸೃಜನ್
* ಎತ್ತರ: 2.88 ಮೀಟರ್
* ಅಂದಾಜು ತೂಕ: 5,150 ಕೆ.ಜಿ.
* ಗುಣಲಕ್ಷಣಗಳು: ಕಾಡಾನೆ ಮತ್ತು ಹುಲಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತದೆ. 2017ರಲ್ಲಿ ಸಾಲಾನೆಯಾಗಿ ಹಾಗೂ 2022ರಲ್ಲಿ ಪಟ್ಟದಾನೆ ಮತ್ತು ಸಾಲಾನೆಯಾಗಿ ಭಾಗವಹಿಸಿದ್ದು, ಈ ಬಾರಿಯೂ ದಸರಾದಲ್ಲಿ ಪಾಲ್ಗೊಳ್ಳುತ್ತಿದೆ.
6. ಪ್ರಶಾಂತ
* ಲಿಂಗ: ಗಂಡು
* ವಯಸ್ಸು: 53 ವರ್ಷ
* ಆನೆ ಶಿಬಿರ: ದುಬಾರೆ ಆನೆ ಶಿಬಿರ
* ಮಾವುತ: ಜೆ.ಎ. ಚಿನ್ನಪ್ಪ
* ಕಾವಾಡಿ: ಚಂದ್ರ
* ಎತ್ತರ: 2.61 ಮೀಟರ್
* ಉದ್ದ: 3.46 ಮೀಟರ್
* ಅಂದಾಜು ತೂಕ: 4,850 ಕೆ.ಜಿ.
* ಗುಣಲಕ್ಷಣಗಳು: 1993ರಲ್ಲಿ ಕಾರೆಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಬಲಿಷ್ಠ ಆನೆಯಾಗಿದ್ದು, 15 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.
7. ಮಹೇಂದ್ರ
* ಲಿಂಗ: ಗಂಡು
* ವಯಸ್ಸು: 42 ವರ್ಷ
* ಆನೆ ಶಿಬಿರ: ಬಳ್ಳೆ ಆನೆ ಶಿಬಿರ
* ಮಾವುತ: ರಾಜಣ್ಣ
* ಕಾವಾಡಿ: ಮಲ್ಲಿಕಾರ್ಜುನ
* ಎತ್ತರ: 2.75 ಮೀಟರ್
* ಉದ್ದ: 3.25 ಮೀಟರ್
* ಅಂದಾಜು ತೂಕ: 4,850 ಕೆ.ಜಿ.
* ಗುಣಲಕ್ಷಣಗಳು: 2022-23ನೇ ಸಾಲಿನಲ್ಲಿ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸಿತ್ತು. ಶ್ರೀರಂಗಪಟ್ಟಣದ ಗ್ರಾಮೀಣ ದಸರಾದಲ್ಲಿ ಮರದ ಅಂಬಾರಿಯನ್ನು ಹೊತ್ತಿದೆ. ಕಾಡಾನೆ ಮತ್ತು ಹುಲಿ ಸೆರೆ ಕಾರ್ಯಾಚರಣೆಗಳಲ್ಲಿ ಅನುಭವವಿದ್ದು, ಈ ಬಾರಿಯೂ ದಸರಾದಲ್ಲಿ ಭಾಗವಹಿಸುತ್ತಿದೆ.
8. ಕಾವೇರಿ
* ಲಿಂಗ: ಹೆಣ್ಣು
* ವಯಸ್ಸು: 45 ವರ್ಷ
* ಆನೆ ಶಿಬಿರ: ದುಬಾರೆ ಆನೆ ಶಿಬಿರ
* ಮಾವುತ: ಜೆ.ಡಿ. ದೋಭಿ
* ಕಾವಾಡಿ: ಸಂಜನ್ ಜೆ.ಎ.
* ಎತ್ತರ: 2.50 ಮೀಟರ್
* ಉದ್ದ: 3.32 ಮೀಟರ್
* ಅಂದಾಜು ತೂಕ: 3,500 ಕೆ.ಜಿ.
* ಗುಣಲಕ್ಷಣಗಳು: ಫೆಬ್ರವರಿ 2009ರಲ್ಲಿ ಸೋಮವಾರಪೇಟೆಯ ಆಡಿನಾಡೂರು ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಈ ಹಿಂದೆ ಅನೇಕ ಬಾರಿ ದಸರಾದಲ್ಲಿ ಭಾಗವಹಿಸಿದ್ದು, ಈ ಬಾರಿಯೂ ಪಾಲ್ಗೊಳ್ಳಲು ಆಯ್ಕೆಯಾಗಿದೆ.
9. ಬಳ್ಳೆ ಲಕ್ಷ್ಮೀ
* ಲಿಂಗ: ಹೆಣ್ಣು
* ವಯಸ್ಸು: 54 ವರ್ಷ
* ಆನೆ ಶಿಬಿರ: ಬಳ್ಳೆ ಆನೆ ಶಿಬಿರ
* ಮಾವುತ: ಸಣ್ಣಪ್ಪ
* ಕಾವಾಡಿ: ಮಂಜು
* ಎತ್ತರ: 2.52 ಮೀಟರ್
* ಗುಣಲಕ್ಷಣಗಳು: ಈ ಹಿಂದೆ ಸರ್ಕಸ್ ಆನೆಯಾಗಿದ್ದು, 2015ರಲ್ಲಿ ಅರಣ್ಯ ಇಲಾಖೆಯ ವಶಕ್ಕೆ ತೆಗೆದುಕೊಳ್ಳಲಾಯಿತು. ಆರೋಗ್ಯವಾಗಿದ್ದು, ವಾಹನ ಹಾಗೂ ಪಟಾಕಿಗಳ ಶಬ್ದಕ್ಕೆ ಅಂಜುವುದಿಲ್ಲ. ಇದು ಎರಡನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.