ಅನ್ನದಾನೇಶ್ವರ ಮಠದ ಶಿವಾನಂದ ಸ್ವಾಮೀಜಿ ಬರ್ಬರ ಹತ್ಯೆ
ಆಪ್ತ ಸಹಾಯಕನಿಂದಲೇ ಸ್ವಾಮೀಜಿಯೊಬ್ಬರು ಬರ್ಬರ ಹತ್ಯೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.;
ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಅನ್ನದಾನೇಶ್ವರ ಮಠದ 90 ವರ್ಷದ ಶಿವಾನಂದ ಸ್ವಾಮೀಜಿ ಅವರನ್ನು ಆಪ್ತ ಸಹಾಯಕನೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ಸೋಮವಾರ ನಡೆದಿದೆ.
ಸ್ವಾಮೀಜಿ ಆಪ್ತ ಸಹಾಯಕ ರವಿ(60) ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾನೆ. ಘಟನಾ ಸ್ಥಳಕ್ಕೆ ನಜರ್‌ಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಬಂಧಿಸಿದ್ದಾರೆ.
ಶಿವಾನಂದ ಸ್ವಾಮೀಜಿಗಳ ಆಪ್ತ ಸಹಾಯಕನಾಗಿದ್ದ ರವಿ ಕುಡಿದ ಮತ್ತಿನಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹುಲ್ಲು ಕತ್ತರಿಸುವ ಆಯುಧದಲ್ಲಿ ಸ್ವಾಮೀಜಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಡಿಸಿಪಿ ಮುತ್ತುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅನ್ನದಾನೇಶ್ವರ ಮಠವು ಸುಮಾರು 9 ಎಕರೆ ವಿಸ್ತೀರ್ಣದಲ್ಲಿದೆ. ಮೈಸೂರು ರಾಜರು ದಾನವಾಗಿ ನೀಡಿದ್ದ ಈ ಮಠದ ಜಾಗದ ವಿಚಾರವಾಗಿ ಹಲವು ವಿವಾದಗಳಾಗಿದ್ದವು.
ಸ್ವಾಮೀಜಿ ಮೃತದೇಹದ ಪಕ್ಕದಲ್ಲೇ ವಿಷಸೇವಿಸಿ ಕುಳಿತಿದ್ದ ಆರೋಪಿ
ಆರೋಪಿ ರವಿಯನ್ನು ಎರಡೂವರೆ ವರ್ಷದಿಂದ ಸ್ವಾಮೀಜಿ ಅವರ ನೋಡಿಕೊಳ್ಳಲು ನೇಮಕ ಮಾಡಲಾಗಿತ್ತು. ಟಿ ನರಸೀಪುರ ತಾಲೂಕಿನ ಹುಕ್ಕಲ್ಗೇರಿ ಗ್ರಾಮದ ರವಿ ನಂಬಿಕಸ್ಥನಾಗಿದ್ದ. ನಿನ್ನೆ ದುಡ್ಡು ಕೇಳಲು ಬಂದ ತನ್ನ ಹೆಂಡತಿಯನ್ನು ರವಿ ಹೊಡೆದಿದ್ದ. ಈ ಬಗ್ಗೆ ಸ್ವಾಮೀಜಿ ಬೈದು, ಬುದ್ಧಿವಾದ ಹೇಳಿದ್ದರು. ಇಂದು ಬೆಳಗ್ಗೆ 9.30 ಗಂಟೆಯಾದರೂ ಸಹಾಯಕ ತಿಂಡಿ ತೆಗೆದುಕೊಂಡು ಹೋಗಲು ಬಂದಿರಲಿಲ್ಲ. ಆಗ ಅಕ್ಕ ಮತ್ತು ಮಗ ಸ್ವಾಮೀಜಿಗೆ ತಿಂಡಿ ತಂದಾಗ ಬರ್ಬರವಾಗಿ ಹತ್ಯೆ ಮಾಡಿರುವುದು ಗೊತ್ತಾಗಿದೆ. ಸ್ವಾಮೀಜಿ ಮೃತದೇಹದ ಪಕ್ಕದಲ್ಲೇ ವಿಷಸೇವಿಸಿ ರವಿ ಕುಳಿತಿದ್ದ. ಕೊಠಡಿ ರಕ್ತವಾಗಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದೆವು. ತಕ್ಷಣ ಪೊಲೀಸರು ಬಂದು ಅಸ್ವಸ್ಥನಾಗಿದ್ದ ರವಿಯನ್ನು ಆಸ್ಪತ್ರೆಗೆ ಸೇರಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಸ್ವಾಮೀಜಿ ಅವರ ಅಣ್ಣನ ಮಗ ಲೋಕೇಶ್ ಮಾಹಿತಿ ನೀಡಿದ್ದಾರೆ.
ಬದುಕಿದ್ದಾಗಲೇ ತಮ್ಮ ಗುರುಗಳ ಗದ್ದುಗೆ ಪಕ್ಕದಲ್ಲೇ ಮಠದ ಒಳಭಾಗದಲ್ಲೇ ಶಿವಾನಂದ ಸ್ವಾಮೀಜಿ ಸಮಾಧಿ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಜೀವಂತವಾಗಿದ್ದಾಗಲೇ ಸ್ವಾಮೀಜಿ ಸಿದ್ಧ ಮಾಡಿಟ್ಟುಕೊಂಡಿದ್ದ ಗದ್ದುಗೆಯಲ್ಲೇ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಲೋಕೇಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.