ಬೇಲೂರಿನಲ್ಲಿ ಗಣೇಶನ ವಿಗ್ರಹಕ್ಕೆ ಚಪ್ಪಲಿ ಹಾರ, ಸ್ಥಳದಲ್ಲಿ ಉದ್ವಿಗ್ನ
ಬೇಲೂರು ಪಟ್ಟಣದ ಹೃದಯಭಾಗದಲ್ಲಿರುವ ಪುರಸಭೆ ಆವರಣದಲ್ಲಿ ಸ್ಥಾಪಿತವಾಗಿರುವ ಪ್ರಸಿದ್ಧ ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಈ ನೀಚ ಕೃತ್ಯ ನಡೆದಿದೆ.
ಹಾಸನ ಜಿಲ್ಲೆಯ ಬೇಲೂರಿನಲ್ಲಿ ಗಣೇಶನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿ ದುಷ್ಕರ್ಮಿಗಳು ವಿಕೃತಿ ಮೆರೆದ ಘಟನೆ ಭಾನುವಾರ ಬೆಳಕಿಗೆ ಬಂದಿದ್ದು, ಇದು ಭಕ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಂಡ್ಯದಲ್ಲಿ ಇತ್ತೀಚೆಗೆ ನಡೆದ ಗಣೇಶ ಮೆರವಣಿಗೆ ಮೇಲಿನ ಕಲ್ಲು ತೂರಾಟದ ಘಟನೆ ಮಾಸುವ ಮುನ್ನವೇ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮತ್ತೊಂದು ಕೃತ್ಯ ವರದಿಯಾಗಿದೆ.
ಬೇಲೂರು ಪಟ್ಟಣದ ಹೃದಯಭಾಗದಲ್ಲಿರುವ ಪುರಸಭೆ ಆವರಣದಲ್ಲಿ ಸ್ಥಾಪಿತವಾಗಿರುವ ಪ್ರಸಿದ್ಧ ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಈ ನೀಚ ಕೃತ್ಯ ನಡೆದಿದೆ. ಭಾನುವಾರ ಬೆಳಗ್ಗೆ ಸುಮಾರು 7 ಗಂಟೆಗೆ ದೇವಸ್ಥಾನಕ್ಕೆ ಬಂದ ಭಕ್ತರು, ಗಣೇಶನ ವಿಗ್ರಹಕ್ಕೆ ದಾರದಿಂದ ಎರಡು ಚಪ್ಪಲಿಗಳನ್ನು ಕಟ್ಟಿ ಹಾರದಂತೆ ಹಾಕಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ರಾತ್ರಿಯ ವೇಳೆ ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ.
ಈ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಭಕ್ತರು ಮತ್ತು ಸ್ಥಳೀಯರು ದೇವಸ್ಥಾನದ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು. "ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕು" ಎಂದು ಘೋಷಣೆಗಳನ್ನು ಕೂಗಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದು ವಿಘ್ನ ನಿವಾರಕನಿಗೆ ಮಾಡಿದ ಘೋರ ಅಪಮಾನವಾಗಿದ್ದು, ಇಂತಹ ಕೃತ್ಯಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಘಟನೆಯಿಂದಾಗಿ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಆರೋಪಿಗಳನ್ನು ಶೀಘ್ರವೇ ಪತ್ತೆಹಚ್ಚಿ ಬಂಧಿಸುವಂತೆ ಸಾರ್ವಜನಿಕರು ಪೊಲೀಸರನ್ನು ಒತ್ತಾಯಿಸಿದ್ದಾರೆ.