ಮಧುವಣಗಿತ್ತಿಯಂತಾದ ಸಾಂಸ್ಕೃತಿಕ ನಗರಿ; ನಾಳೆ ಮೈಸೂರು ದಸರಾಗೆ ಚಾಲನೆ

ಅರಮನೆ ಆವರಣದಲ್ಲಿ ಸೋಮವಾರ ರಾಜಮನೆತನದ ಖಾಸಗಿ ದರ್ಬಾರ್ ನಡೆಯಲಿದೆ. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅಂಬಾ ವಿಲಾಸ ಅರಮನೆಯಲ್ಲಿ ರತ್ನಖಚಿತ ಚಿನ್ನದ ಸಿಂಹಾಸನದಲ್ಲಿ ಕುಳಿತು ದರ್ಬಾರ್‌ ನಡೆಸಲಿದ್ದಾರೆ.

Update: 2025-09-21 14:51 GMT

ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವ ಸೋಮವಾರ (ಸೆ.22) ವಿದ್ಯುಕ್ತವಾಗಿ ಆರಂಭವಾಗಲಿದೆ. ಈ ವರ್ಷದ 10  ದಿನಗಳ ನವರಾತ್ರಿ ಉತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಅರಮನೆ ಸೇರಿ ಪ್ರಮುಖ ರಸ್ತೆಗಳು, ವೃತ್ತಗಳು ವಿದ್ಯುತ್‌ ದೀಪಗಳಿಂದ ಜಗಮಗಿಸುತ್ತಿವೆ.

ಬಾನು ಮುಷ್ತಾಕ್‌ ಅವರಿಂದ ದಸರಾ ಉದ್ಘಾಟನೆ

ಸೋಮವಾರ ಬೆಳಿಗ್ಗೆ 10.10 ರಿಂದ 10.40 ರೊಳಗೆ ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ದಸರಾ ಉದ್ಘಾಟನೆ ನೆರವೇರಿಸಲಾಗುವುದು. ಬೂಕರ್‌ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್‌ ಅವರು ದಸರಾ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಸಚಿವರು ಭಾಗಿಯಾಗಲಿದ್ದಾರೆ.

ಅರಮನೆ ಆವರಣದಲ್ಲಿ ಸೋಮವಾರ ರಾಜಮನೆತನದ ಖಾಸಗಿ ದರ್ಬಾರ್ ನಡೆಯಲಿದೆ. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅಂಬಾ ವಿಲಾಸ ಅರಮನೆಯಲ್ಲಿ ರತ್ನಖಚಿತ ಚಿನ್ನದ ಸಿಂಹಾಸನದಲ್ಲಿ ಕುಳಿತು ದರ್ಬಾರ್‌ ನಡೆಸಲಿದ್ದಾರೆ.

ಸೋಮವಾರ 9.55ರಿಂದ 10.15ರೊಳಗೆ ಯದುವೀರ್ ಹಾಗೂ ತ್ರಿಷಿಕಾ ಕುಮಾರಿ ಅವರಿಗೆ ವಾಣಿವಿಲಾಸ ಅರಮನೆ ಆವರಣದಲ್ಲಿ ಕಂಕಣಧಾರಣೆ ನಡೆಯಲಿದೆ. 11.35ಕ್ಕೆ ಪಟ್ಟದ ಆನೆ, ಕುದುರೆ ಮತ್ತು ಹಸುಗಳನ್ನು ಮೆರವಣಿಗೆಯೊಂದಿಗೆ ಕರೆತಂದು ಪೂಜೆ ಸಲ್ಲಿಸಲಾಗುವುದು. ಮಧ್ಯಾಹ್ನ 12.42ರಿಂದ 12.58ರೊಳಗೆ ಒಡೆಯರ್ ಅವರು ಸಿಂಹಾಸನವೇರಿ, ಖಾಸಗಿ ದರ್ಬಾರ್‌ ನಡೆಸಲಿದ್ದಾರೆ.

ವೈಮಾನಿಕ ಪ್ರದರ್ಶನ ವಿಶೇಷ

ಸೆ.23ರಿಂದ 29ರವರೆಗೆ ಪ್ರತಿದಿನ ಸಂಜೆ ಖಾಸಗಿ ದರ್ಬಾರ್ ನಡೆಯಲಿದೆ. ಸೆ.27ರಂದು ಸಂಜೆ 4 ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ಆಕರ್ಷಕ ವೈಮಾನಿಕ ಪ್ರದರ್ಶನ ಇರಲಿದೆ. ಸೆ.28 ಹಾಗೂ 29ರಂದು ಸಂಜೆ 6 ಗಂಟೆಗೆ ಇದೇ ಮೈದಾನದಲ್ಲಿ ಡ್ರೋನ್ ಶೋ ನಡೆಯಲಿದೆ.

ಅರಮನೆ ಹಾಗೂ ಬನ್ನಿಮಂಟಪ ಮೈದಾನದಲ್ಲಿ ವೀಕ್ಷಕರಿಗೆ ಟಿಕೆಟ್‌ ಹಾಗೂ ಪಾಸ್‌ ವ್ಯವಸ್ಥೆ ಮಾಡಲಾಗಿದೆ. ಅಧಿಕೃತ ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗುವುದು. ಟಿಕೆಟ್‌ ಪಡೆಯಲು ಇಚ್ಚಿಸುವವರು www.mysoredasara.gov.in ವೆಬ್ಸೈಟ್ ಮೂಲಕ ಬುಕ್ಕಿಂಗ್ ಮಾಡಬಹುದು.

2,300 ಬಸ್‌ಗಳ ಕಾರ್ಯಾಚರಣೆ

ಮೈಸೂರು ದಸರಾ ಅಂಗವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರ ಅನುಕೂಲಕ್ಕಾಗಿ 2,300ಕ್ಕೂ ಹೆಚ್ಚು ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ಸೆ.26, 27 ಹಾಗೂ 30ರಂದು ಬೆಂಗಳೂರಿನ ಕೆಂಪೇಗೌಡ, ಮೈಸೂರು ರಸ್ತೆ ಹಾಗೂ ಶಾಂತಿನಗರ ನಿಲ್ದಾಣಗಳಿಂದ ರಾಜ್ಯದ ವಿವಿಧ ಭಾಗಗಳಿಗೆ ಬಸ್‌ಗಳು ಸಂಚರಿಸಲಿವೆ. ಬೆಂಗಳೂರಿನಿಂದ ಮೈಸೂರಿಗೆ ಸೀಮಿತವಾಗಿ 260 ಬಸ್‌ಗಳು ಸಂಚರಿಸಲಿವೆ. 350 ಬಸ್‌ಗಳು ಮೈಸೂರು ಸುತ್ತಮುತ್ತ ಸಂಚರಿಸಲಿವೆ.

ಇದಲ್ಲದೇ ದಸರಾ ಪ್ರಯುಕ್ತ ಪ್ರವಾಸ ಕೈಗೊಂಡಿರುವವರಿಗೆ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಡಿಕೇರಿ, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ರಾಯಚೂರು ಸೇರಿದಂತೆ ಪ್ರಮುಖ ನಗರಗಳಿಗೂ ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಶಿರಡಿ, ಪುಣೆ, ಎರ್ನಾಕುಲಂ ಮೊದಲಾದ ಅಂತರರಾಜ್ಯ ತಾಣಗಳಿಗೆ ವಿಶೇಷ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ.

Tags:    

Similar News