ಪತ್ನಿಯ ಕತ್ತು ಸೀಳಿ ಹತ್ಯೆಗೆ ಯತ್ನ: ಆರೋಪಿ ಬಂಧನ
ಪತ್ನಿಯ ಮೇಲೆ ಅನುಮಾನ ಹೊಂದಿದ್ದ. ಇದೇ ವಿಚಾರಕ್ಕೆ ಪತ್ನಿಯೊಂದಿಗೆ ಸದಾ ಜಗಳವಾಡುತ್ತಿದ್ದ ಎನ್ನಲಾಗಿದೆ.
ಪ್ರಸನ್ನ ಅಲಿಯಾಸ್ ಚಂದ್ರು
ಪತ್ನಿಯ ಕತ್ತು ಸೀಳಿ ಕೊಲೆ ಮಾಡಲು ಯತ್ನಿಸಿದ ಆರೋಪದ ಮೇರೆಗೆ 35 ವರ್ಷದ ವ್ಯಕ್ತಿಯೊಬ್ಬನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕಾಮಾಕ್ಷಿಪಾಳ್ಯ ನಿವಾಸಿ ಪ್ರಸನ್ನ ಅಲಿಯಾಸ್ ಚಂದ್ರು ಬಂಧಿತ ಆರೋಪಿಯಾಗಿದ್ದು, ಎರಡು ದಿನಗಳ ಹಿಂದೆ ತನ್ನ ಪತ್ನಿ ದೇವಿಕಾ ಮೇಲೆ ಹಲ್ಲೆ ನಡೆಸಿ, ಆಕೆಯನ್ನು ಕೊಲೆ ಮಾಡಲು ಚಂದ್ರು ಯತ್ನಿಸಿದ್ದ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆ ನೀಡಿದ ದೂರಿನ ಆಧಾರದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ಮೂಲದವನಾದ ಚಂದ್ರು 11 ವರ್ಷಗಳ ಹಿಂದೆ, ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ದೇವಿಕಾ ಎಂಬಾಕೆಯನ್ನು ವಿವಾಹವಾಗಿದ್ದರು. ವಿವಾಹಕ್ಕೆ ಸಾಕ್ಷಿ ಎಂಬಂತೆ ದಂಪತಿಗೆ ಇಬ್ಬರು ಮಕ್ಕಳೂ ಇದ್ದಾರೆ. ನಿತ್ಯ ನಡೆಯುತ್ತಿದ್ದ ಕೌಟುಂಬಿಕ ಕಲಹಗಳಿಂದ ಬೇಸತ್ತಿದ್ದ ಮಹಿಳೆ, ಇತ್ತೀಚೆಗೆ ಪತಿಯಿಂದ ಪ್ರತ್ಯೇಕವಾಗಿ ಲಿಂಗಧೀರನಹಳ್ಳಿಯ ಡಿಗ್ರೂಪ್ ಲೇಔಟ್ ನಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಮದ್ಯಕ್ಕೆ ದಾಸನಾಗಿದ್ದ ಆರೋಪಿ, ಪತ್ನಿಯ ಮೇಲೆ ಅನುಮಾನ ಹೊಂದಿದ್ದ. ಇದೇ ವಿಚಾರಕ್ಕೆ ಪತ್ನಿಯೊಂದಿಗೆ ಸದಾ ಜಗಳವಾಡುತ್ತಿದ್ದ ಎನ್ನಲಾಗಿದೆ. ಇದಲ್ಲದೆ ಪತ್ನಿಯ ಮಾರ್ಫ್ ಮಾಡಿದ ಫೋಟೋಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ. ಇಂತಹ ವಿಚಿತ್ರವಾದ ಚಿತ್ರಹಿಂಸೆಯನ್ನು ತಾಳಲಾರದೆ ದೇವಿಕಾ ತಮ್ಮ ಪತಿಯಿಂದ ದೂರಾಗಿ ಕಳೆದ ಎರಡು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಸಂತ್ರಸ್ತೆ ದೇವಿಕಾ ಖಾಸಗಿ ಆಸ್ಪತ್ರೆಯಲ್ಲಿ ಶುಶ್ರೂಷಕಿ ಆಗಿದ್ದು, ಪತಿ ಸಂಪ್ ಕ್ಲಿನರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈ ಘಟನೆಯು ಗುರುವಾರ ನಡೆದಿದ್ದು, ಮಹಿಳೆಯು ಕೆಲಸಕ್ಕೆ ಹೋಗುತ್ತಿದ್ದಾಗ ಮೆಟ್ಟಿಲುಗಳ ಕೆಳಗೆ ಅಡಗಿ ಕುಳಿತಿದ್ದ ಆರೋಪಿ, ಆಕೆಯ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ನೆಲ ಮಹಡಿಯಲ್ಲಿ ವಾಸಿಸುತ್ತಿದ್ದ ಮನೆ ಮಾಲೀಕರು ಆಕೆಯ ಕಿರುಚಾಟ ಕೇಳಿ, ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸಂತ್ರಸ್ತೆಯು ಇದೀಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲದೆ ಆಕೆ ನೀಡಿದ ದೂರಿನ ಮೇರೆಗೆ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.