ಜಾತಿಗಣತಿ | ಮತಾಂತರ ಕ್ರೈಸ್ತ ಜಾತಿಗಳ ಕೈ ಬಿಡದಿದ್ದರೆ ಸಮೀಕ್ಷೆ ಹಿಂಪಡೆಯಿರಿ- ಬಿಜೆಪಿ ನಾಯಕರ ಆಗ್ರಹ
“ಕಾಂಗ್ರೆಸ್ ಸರ್ಕಾರ ಜಾತಿ ಸಮೀಕ್ಷೆಯ ಹೆಸರಿನಲ್ಲಿ ಹಿಂದೂ ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿದೆ. ದಲಿತ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್ ಸೇರಿ 48 ಹೊಸ ಜಾತಿಗಳನ್ನು ಜಾತಿಗಣತಿಗೆ ಸೇರಿಸಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ರಾಜ್ಯದಲ್ಲಿ ನಾಳೆಯಿಂದ(ಸೆ.೨೨) ಆರಂಭವಾಗಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ವಿರೋಧಿಸಿ ಈಗ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಮಾಜಿ ಡಿಸಿಎಂ ಅಶ್ವಥನಾರಾಯಣ ಅವರು, “ಕಾಂಗ್ರೆಸ್ ಸರ್ಕಾರ ಜಾತಿ ಸಮೀಕ್ಷೆಯ ಹೆಸರಿನಲ್ಲಿ ಹಿಂದೂ ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿದೆ. ದಲಿತ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್ ಸೇರಿ 48 ಹೊಸ ಜಾತಿಗಳನ್ನು ಜಾತಿಗಣತಿಗೆ ಸೇರಿಸಿದೆ. ಹೊಸ ಜಾತಿಗಳನ್ನು ಕೈ ಬಿಡುವಂತೆ ಒತ್ತಾಯಿಸಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಹೊಸ ಜಾತಿಗಳನ್ನು ಈವರೆಗೂ ಅಧಿಕೃತವಾಗಿ ಹಿಂಪಡೆದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
“ಮತಾಂತರವಾದವರಿಗೆ ಮೀಸಲಾತಿ ನೀಡಬಾರದು. ಆದರೆ, ಸರ್ಕಾರವು ಕ್ರಿಶ್ಚಿಯನ್ ಧರ್ಮ ಹಾಗೂ ಮತಾಂತರಕ್ಕೆ ಪ್ರೋತ್ಸಾಹ ನೀಡುತ್ತಿದೆ. ತಕ್ಷಣವೇ 48 ಅನಧಿಕೃತ ಹೊಸ ಜಾತಿಗಳನ್ನು ಕೈಬಿಡಬೇಕು. ಮತಾಂತರವಾದವರು ಮತ್ತೆ ಮೂಲ ಜಾತಿಯ ಹೆಸರು ಬರೆಸಬಹುದು ಎಂಬ ನಿಯಮ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಮಾತನಾಡಿ, “ಹೊಸ ಜಾತಿಗಳನ್ನು ಸೃಷ್ಟಿ ಮಾಡುವ ಅಧಿಕಾರ ಹಿಂದುಳಿದ ಆಯೋಗ ಅಥವಾ ಸರ್ಕಾರಕ್ಕೆ ಇಲ್ಲ. ಆದರೆ, ಇಲ್ಲಿ ರಾಜ್ಯ ಸರ್ಕಾರವೇ ಒಕ್ಕಲಿಗ, ಕುರುಬ ಸೇರಿ ಹಲವು ಜಾತಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿಸಬಹುದು ಎಂಬ ಯೋಜನೆ ಮಾಡಿದಂತಿದೆ. ಧಾರ್ಮಿಕ ಮತಾಂತರಕ್ಕೆ ಸರ್ಕಾರವೇ ಬಲಿಯಾಗಬಹುದು ಎಂದು ಹೇಳಿದ್ದಾರೆ.
“ಮೊದಲು ಹಿಂದೂ-ಕ್ರಿಶ್ಚಿಯನ್ ಹೆಸರುಗಳ ಜಾಹೀರಾತು ನೀಡಿದ್ದರು. ಈಗ ಮರು ಜಾಹೀರಾತು ನೀಡಬೇಕು. ಪ್ರಸ್ತುತ 13 ಹಿಂದೂ ಕ್ರಿಶ್ಚಿಯನ್ ಹೆಸರುಗಳನ್ನು ಉಳಿಸಿಕೊಂಡಿದ್ದಾರೆ ಎಂಬ ಮಾಹಿತಿ ಬಂದಿದೆ. ನಾಗಮೋಹನ್ ದಾಸ್ ವರದಿ ಕೊಟ್ಟು ಮೂರು ತಿಂಗಳು ಆಗಿಲ್ಲ. ಇಷ್ಟು ಬೇಗ ಮತ್ತೊಂದು ಸಮೀಕ್ಷೆ ಮಾಡಿದರೆ ಪರಿಶಿಷ್ಟ ಸಮುದಾಯ ಏನು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸಮೀಕ್ಷೆಗೆ ಪೂರ್ವ ತಯಾರಿ ಇಲ್ಲದೇ ಮನಬಂದಂತೆ ಮಾಡಲಾಗುತ್ತಿದೆ. ಸಮೀಕ್ಷೆ ನಡೆಸುವವರಿಗೆ ತರಬೇತಿ ಕೊಡಲಿಲ್ಲ. ಕೈಪಿಡಿಯಲ್ಲಿ ಸಾಕಷ್ಟು ಲೋಪಗಳಿವೆ. ಹೀಗಿರುವಾಗ ಏಕೆ ಆತುರ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಬಿಜೆಪಿ ನಾಯಕರು, ತುರ್ತಾಗಿ ಗುಂಡಿ ಮುಚ್ಚುವ ಕೆಲಸ ಮಾಡಬೇಕು. ಅದನ್ನ ಬಿಟ್ಟು ಜಾತಿಗಣತಿ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಸಮೀಕ್ಷೆಯನ್ನು ತಕ್ಷಣವೇ ವಾಪಸ್ ಪಡೆಯಬೇಕು. ಯೋಜನೆಬದ್ಧವಾಗಿ ಸಿದ್ಧತೆ ಕೈಗೊಂಡು ಮಾಡಿದರೆ ನಮ್ಮ ವಿರೋಧವಿಲ್ಲ. ಆದರೆ, ಸರ್ಕಾರ ಕೈಗೊಂಡಿರುವ ಪ್ರಕ್ರಿಯೆ ಸಂಪೂರ್ಣ ತಪ್ಪಾಗಿದೆ ಎಂದು ದೂರಿದ್ದಾರೆ.