ವಿಶ್ವವಿಖ್ಯಾತ ಮೈಸೂರು ದಸರಾ 2025: ಸಂಪೂರ್ಣ ವೇಳಾಪಟ್ಟಿ, ಕಾರ್ಯಕ್ರಮಗಳ ವಿವರ ಇಲ್ಲಿದೆ
ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಸೆಪ್ಟೆಂಬರ್ 22ರಂದು ಬೆಳಿಗ್ಗೆ 10.10 ರಿಂದ 10.40ರ ನಡುವೆ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ನೆರವೇರಿಸಲಿದ್ದಾರೆ.;
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ, ಮೈಸೂರು ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ್ ರೆಡ್ಡಿ ಅವರು ಗುರುವಾರ ಬೆಂಗಳೂರಿನಲ್ಲಿ ದಸರಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದರು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ಬಾರಿ 11 ದಿನಗಳ ಕಾಲ ನಡೆಯಲಿರುವ ನಾಡಹಬ್ಬ ದಸರಾ ಮಹೋತ್ಸವವು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ವೈವಿಧ್ಯಮಯ ಮತ್ತು ಆಕರ್ಷಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ. ಜುಲೈ 5 ರಿಂದಲೇ ಸಿದ್ಧತೆಗಳು ಆರಂಭವಾಗಿದ್ದು, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ್ ರೆಡ್ಡಿ ಅವರ ನೇತೃತ್ವದಲ್ಲಿ 19 ಉಪಸಮಿತಿಗಳು ಕಾರ್ಯನಿರ್ವಹಿಸುತ್ತಿವೆ.
ಉದ್ಘಾಟನೆ ಮತ್ತು ಜಂಬೂ ಸವಾರಿ
ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ವಿಜೇತೆ, ಖ್ಯಾತ ಲೇಖಕಿ ಬಾನು ಮುಷ್ತಾಕ್ ಅವರು ಸೆಪ್ಟೆಂಬರ್ 22 ರಂದು ಚಾಮುಂಡಿ ಬೆಟ್ಟದಲ್ಲಿ ಬೆಳಿಗ್ಗೆ 10.10 ರಿಂದ 10.40 ರ ನಡುವೆ ಶುಭ ವೃಶ್ಚಿಕ ಲಗ್ನದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಅದೇ ದಿನ ಸಂಜೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೀಪಾಲಂಕಾರವನ್ನು ಉದ್ಘಾಟಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಮತ್ತು "ಆಸ್ಥಾನ ವಿದ್ವಾನ್" ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಅಕ್ಟೋಬರ್ 2, ವಿಜಯದಶಮಿಯಂದು ನಡೆಯುವ ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆಗೆ ಮಧ್ಯಾಹ್ನ 1 ರಿಂದ 1.18 ರ ನಡುವೆ ಶುಭ ಧನುರ್ ಲಗ್ನದಲ್ಲಿ ಮುಖ್ಯಮಂತ್ರಿಗಳು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡುವರು. ಸಂಜೆ 4.42 ರಿಂದ 5.06 ರ ಶುಭ ಕುಂಭ ಲಗ್ನದಲ್ಲಿ, ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿರುವ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ನೆರವೇರಿಸುವರು. ಸಂಜೆ 7 ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪಂಜಿನ ಕವಾಯತಿನಲ್ಲಿ ಭಾಗವಹಿಸಲಿದ್ದಾರೆ.
ಪ್ರಮುಖ ಕಾರ್ಯಕ್ರಮಗಳು ಮತ್ತು ವೇದಿಕೆಗಳು
ದಸರಾ ಹಬ್ಬದ ಅಂಗವಾಗಿ ನಗರದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೆಪ್ಟೆಂಬರ್ 10 ರಿಂದ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ 'ಯುವ ಸಂಭ್ರಮ' ಆರಂಭವಾಗಲಿದ್ದು, ಸೆಪ್ಟೆಂಬರ್ 13 ರಂದು 'ಮಾಲ್ ಆಫ್ ಮೈಸೂರು' ನಲ್ಲಿ ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ ಸಿಗಲಿದೆ.
ಸೆಪ್ಟೆಂಬರ್ 22 ರಿಂದ ದಸರಾ ಪ್ರದರ್ಶನ, ಕುಪ್ಪಣ್ಣ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ, ಮತ್ತು ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳಗಳು ಆರಂಭಗೊಳ್ಳಲಿವೆ. ಅದೇ ದಿನ, ಯೋಗ ದಸರಾ ಮತ್ತು ಲಲಿತಾ ಕಲೆ ಮತ್ತು ಕರಕುಶಲ ದಸರಾ ಕಲಾ ಕಾರ್ಯಾಗಾರಗಳು ಉದ್ಘಾಟನೆಗೊಳ್ಳಲಿವೆ.
ದಸರಾ ಕವಿಗೋಷ್ಠಿ
ಸೆಪ್ಟೆಂಬರ್ 23 ರಿಂದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ 'ದಸರಾ ಕವಿಗೋಷ್ಠಿ'ಯು 'ಪಂಚ ಕಾವ್ಯದೌತನ' ದೊಂದಿಗೆ ಪ್ರಾರಂಭವಾಗಲಿದೆ. ಸೆಪ್ಟೆಂಬರ್ 25 ರಂದು 'ಹೆರಿಟೇಜ್ ಸೈಕಲ್ ರೈಡ್', ಸೆಪ್ಟೆಂಬರ್ 26 ರಂದು 'ಹೆರಿಟೇಜ್ ವಾಕ್' ಮತ್ತು ಸೆಪ್ಟೆಂಬರ್ 27 ರಂದು ದಂಪತಿಗಳಿಗಾಗಿ 'ಹೆರಿಟೇಜ್ ಟಾಂಗಾ ರೈಡ್' ನಡೆಯಲಿದೆ.
ರೈತರ ದಸರಾ
ರೈತ ದಸರಾ ಮೆರವಣಿಗೆ, ಪ್ರದರ್ಶನ ಮತ್ತು ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಗಳು ಸೆಪ್ಟೆಂಬರ್ 26 ಮತ್ತು 27 ರಂದು ನಡೆಯಲಿವೆ. ಸೆಪ್ಟೆಂಬರ್ 27 ರಂದು ಬನ್ನಿಮಂಟಪ ಮೈದಾನದಲ್ಲಿ 'ಸಾರಂಗ್ ಏರ್ ಶೋ' ಹಾಗೂ ಸೆಪ್ಟೆಂಬರ್ 28 ಮತ್ತು 29 ರಂದು 'ಡ್ರೋನ್ ಪ್ರದರ್ಶನ' ಪ್ರಮುಖ ಆಕರ್ಷಣೆಯಾಗಿರಲಿದೆ. ಜೆ.ಕೆ. ಮೈದಾನದಲ್ಲಿ ಸೆಪ್ಟೆಂಬರ್ 28 ರಂದು ಸಾಕುಪ್ರಾಣಿ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಇದಲ್ಲದೆ, ಪುಸ್ತಕ ಮೇಳ, ಕುಸ್ತಿ ಪಂದ್ಯಾವಳಿ, ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟ ಮತ್ತು ಮಹಿಳಾ ದಸರಾ ಅಂಗವಾಗಿ ರಂಗೋಲಿ ಸ್ಪರ್ಧೆಗಳಂತಹ ಹಲವಾರು ಕಾರ್ಯಕ್ರಮಗಳು ನಾಡಹಬ್ಬದ ಮೆರುಗನ್ನು ಹೆಚ್ಚಿಸಲಿವೆ.