ಮೈಸೂರು ಸಾಧನಾ ಸಮಾವೇಶ | ಸಿಎಂಗೆ ʼಶಕ್ತಿ ಪ್ರದರ್ಶನʼದ ಬದಲು ಮುಜುಗರ ತಂದ ಸನ್ನಿವೇಶ

ಸಾಧನಾ ಸಮಾವೇಶವು ಸಿದ್ದರಾಮೋತ್ಸವದಂತೆ ವಿಜೃಂಬಿಸದೇ ಖಾಲಿ ಕುರ್ಚಿಗಳ ದರ್ಶನ ಹಾಗೂ ನಿರೀಕ್ಷಿತ ಪ್ರಮಾಣದಲ್ಲಿ ಜನರು ಸೇರದೇ ಕಳೆಗುಂದಿದ್ದು ಸಿದ್ದರಾಮಯ್ಯ ಅವರಿಗಾದ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.;

Update: 2025-07-19 13:45 GMT

ಮೈಸೂರಿನಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಲ ಪ್ರದರ್ಶನಕ್ಕೆ ವೇದಿಕೆಯಾಗುವ ಬದಲು ಮುಜುಗರ ಸೃಷ್ಟಿಸಿದ ಸಮಾವೇಶವಾಗಿ ಬದಲಾಯಿತೆಂಬ ಚರ್ಚೆಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.

"ನಾನೇ ಪೂರ್ಣಾವಧಿ ಸಿಎಂ" ಎಂದು ಘೋಷಿಸಿಕೊಂಡಿದ್ದ ಸಿದ್ದರಾಮಯ್ಯ ಅವರು ಮೈಸೂರು ಸಾಧನಾ ಸಮಾವೇಶವನ್ನು ವೈಯಕ್ತಿಕವಾಗಿ ತೆಗೆದುಕೊಂಡು ಶಕ್ತಿ ಪ್ರದರ್ಶಿಸುವ ಇರಾದೆ ಹೊಂದಿದ್ದರು. ಆದರೆ, ಈ ಕಾರ್ಯಕ್ರಮವು ಸಿದ್ದರಾಮೋತ್ಸವದಂತೆ ವಿಜೃಂಬಿಸದೇ ಖಾಲಿ ಕುರ್ಚಿಗಳ ದರ್ಶನ ಹಾಗೂ ನಿರೀಕ್ಷಿತ ಪ್ರಮಾಣದಲ್ಲಿ ಜನರು ಸೇರದಿರುವುದು ಸಿದ್ದರಾಮಯ್ಯ ಅವರಿಗಾದ ಹಿನ್ನಡೆ ಎಂದು ಹೇಳಲಾಗುತ್ತಿದೆ.  ಸಿದ್ದರಾಮಯ್ಯ ಅವರ ಅತಿಯಾದ ವಿಶ್ವಾಸವೇ ಅವರಿಗೆ ಮುಳುವಾಯಿತು ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ. 

ಖಾಲಿ ಕುರ್ಚಿ ನೋಡಿ ಮಾತು ನಿಲ್ಲಿಸಿದ ಸಿಎಂ

ಸಾಧನಾ ಸಮಾವೇಶಕ್ಕೆ ಅಂದಾಜು ಒಂದು ಲಕ್ಷ ಜನ ಸೇರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಇದಕ್ಕಾಗಿ ಜಿಲ್ಲೆಯಾದ್ಯಂತ ಕ್ಷೇತ್ರವಾರು ಇಂತಿಷ್ಟು ಜನರನ್ನು ಕರೆಬೇಕೆಂದು ಶಾಸಕರು, ಮುಖಂಡರಿಗೆ ಫಾರ್ಮಾನು ಹೊರಡಿಸಲಾಗಿತ್ತು. ಅದರಂತೆ ನಂಜನಗೂಡು, ಕೆ.ಆರ್.ನಗರ, ವರುಣಾ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರು. ಆದರೆ, ಮೈಸೂರು ನಗರ ವ್ಯಾಪ್ತಿ, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಹುಣಸೂರು, ಟಿ.ನರಸೀಪುರ ಭಾಗದಿಂದ ನಿರೀಕ್ಷಿತ ಪ್ರಮಾಣದಲ್ಲಿ ಜನ ಸೇರದಿರುವುದು ಕುತೂಹಲ ಮೂಡಿಸಿದೆ. 

ಪ್ರತಿ ಸಮಾವೇಶಗಳಲ್ಲಿ ಸಿಎಂ ಖಡಕ್‌ ಮಾತು, ಅವರ ಹಾವಭಾವ ವೀಕ್ಷಿಸಲೆಂದೇ ಜನ ಸೇರುತ್ತಿದ್ದರು. ಪಕ್ಷದ ನಾಯಕರು ಕೂಡ ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆ ಜನರನ್ನು ಸಾಗರೋಪಾದಿಯಲ್ಲಿ ಕರೆತರುತ್ತಿದ್ದರು. ಆದರೆ, ಮೈಸೂರು ಸಾಧನಾ ಸಮಾವೇಶಕ್ಕೆ ಕಡಿಮೆ ಸಂಖ್ಯೆಯಲ್ಲಿ ಜನ ಸೇರಿದ್ದಲ್ಲದೇ ಖಾಲಿ ಕುರ್ಚಿಗಳೇ ಎದ್ದುಕಾಣುತ್ತಿದ್ದ ಸಂಗತಿ ಸ್ವತಃ ಸಿಎಂ ಸಿದ್ದರಾಮಯ್ಯ ಅವರನ್ನೇ ಹತಾಶೆಗೆ ದೂಡಿತ್ತು. 

ಬೆಳಿಗ್ಗೆ 11ಗಂಟೆಗೆ ಆರಂಭವಾಗಿದ್ದ ಕಾರ್ಯಕ್ರಮ ಮಧ್ಯಾಹ್ನ 1 ಗಂಟೆಗೆ ಶುರುವಾಯಿತು. ಸಿದ್ದರಾಮಯ್ಯ ಮಾತಿಗೆ ನಿಂತಾಗ ಮಧ್ಯಾಹ್ನ 3 ಗಂಟೆಯಾಗಿತ್ತು. ಅದಾಗಲೇ ಜನರಲ್ಲೂ ಉತ್ಸಾಹ ಕಡಿಮೆಯಾಗಿತ್ತು. ಭಾಷಣ ಮಾಡುವಾಗ ವೇದಿಕೆ ಮುಂಭಾಗ ಖಾಲಿ ಖುರ್ಚಿಗಳನ್ನು ನೋಡಿ ಕಸಿವಿಸಿಗೊಂಡ ಸಿದ್ದರಾಮಯ್ಯ ಅವರು, ನೇರವಾಗಿಯೇ ʼನಿಮಗೆ ಮಾತು ಕೇಳುವ ಆಸಕ್ತಿ ಇಲ್ಲ, ಎಲ್ಲರೂ ಎದ್ದು ಹೋಗುತ್ತಿದ್ದೀರಿʼ ಎಂದು ಮಾತು ನಿಲ್ಲಿಸಿದರು.

ಗ್ಯಾರಂಟಿ ಬಣ್ಣನೆ, ವಿರೋಧಿಗಳ ಟೀಕೆಗಷ್ಟೇ ಮಾತು ಸೀಮಿತ 

ಸಿಎಂ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳಿಂದ ಆಗಿರುವ, ಆಗುತ್ತಿರುವ ಅನುಕೂಲಗಳು, ಬಿಜೆಪಿ- ಜೆಡಿಎಸ್ ಪಕ್ಷಗಳ ಟೀಕೆಗಳಿಗೆ ತಿರುಗೇಟು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿಗಷ್ಟೇ ಮಾತು ಸೀಮಿತವಾಯಿತು. ಮಾತಿನ ಮಧ್ಯೆ ಕಾರ್ಯಕ್ರಮದ ಉದ್ದೇಶವನ್ನೂ ಸ್ಪಷ್ಟಪಡಿಸಿದ ಅವರು, ಈ ಸಮಾವೇಶ ಸರ್ಕಾರದ ಜನಪರ ನಿಲುವು ಹೇಳುವುದಕ್ಕಾಗಿಯೇ ಹೊರತು, ಯಾರ ಶಕ್ತಿ ಪ್ರದರ್ಶನವೂ ಅಲ್ಲ ಎಂದು ಹೇಳಿದರು.

ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸರ್ಕಾರದ ಸಾಧನೆಗಳನ್ನು ಹೊರತುಪಡಿಸಿ ಕಾಂಗ್ರೆಸ್ ಪಕ್ಷದ ಸಾಧನೆ, ಜನಪರ ನಿಲುವು, ಭಾರತ್ ಜೋಡೋ ಯಾತ್ರೆ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ನಾಯಕತ್ವದ ವಿಷಯವನ್ನು ಮುನ್ನೆಲೆಗೆ ತಂದು ಮಾತನಾಡಿದರು. ಜೊತೆಗೆ ಸಿದ್ದರಾಮಯ್ಯ ಅವರ ಹೆಸರು, ನಾಯಕತ್ವವನ್ನು ಅಳೆದು ತೂಗಿ ಪ್ರಸ್ತಾಪಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರ ಹೆಸರನ್ನೂ ಪ್ರಸ್ತಾಪ ಮಾಡುತ್ತಲೇ ತಮ್ಮ ಮಾತಿನುದ್ದಕ್ಕೂ ರಾಜ್ಯ ಸರ್ಕಾರದ ಸಾಧನೆ, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವೈಫಲ್ಯಗಳನ್ನು ಬಿಚ್ಚಿಟ್ಟರು.

ಡಿಕೆಶಿ ಹೆಸರು ಪ್ರಸ್ತಾಪಿಸದ ಸಿಎಂ, ಉಸ್ತುವಾರಿ ಸಚಿವರು

ಸಮಾವೇಶದಲ್ಲಿ ಮಾತಿಗೆ ನಿಂತ ಸಿಎಂ ಸಿದ್ದರಾಮಯ್ಯ ಅವರು ವೇದಿಕೆ ಮೇಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿ ಎಲ್ಲರ ಹೆಸರನ್ನೂ ಹೇಳಿ ಮುಗಿಸಿ ಮಾತು ಆರಂಭಿಸುವ ಹೊತ್ತಿಗೆ ವೇದಿಕೆ ಮೇಲಿದ್ದ ಗಣ್ಯರು ಡಿಸಿಎಂ ಡಿ.ಕೆ.ಶಿವಕುಮಾರ್ ಹೆಸರು ಹೇಳಿಲ್ಲ ಎಂದು ಗಮನಕ್ಕೆ ತಂದರು. ಈ ವೇಳೆ ತುಸು ಅಸಮಾಧಾನಗೊಂಡ ಸಿಎಂ ಸಿದ್ದರಾಮಯ್ಯ ಅವರು, "ನೋಡ್ರಿ ವೇದಿಕೆ ಮೇಲೆ ಯಾರು ಇರುತ್ತಾರೋ ಅವರ ಹೆಸರನ್ನು ಮಾತ್ರ ಹೇಳುವುದು, ಇಲ್ಲಿಂದ ಮನೆಗೆ ಹೋದವರ ಹೆಸರು ಹೇಳುವುದಕ್ಕೆ ಆಗುತ್ತದೆಯೇ, ಡಿ.ಕೆ. ಶಿವಕುಮಾರ್‌ ಏನೋ ಕೆಲಸ ಇದೆ ಎಂದು ಬೆಂಗಳೂರಿಗೆ ಹೋದರು. ಅವರು ಇಲ್ಲ ಎನ್ನುವ ಕಾರಣಕ್ಕೆ ಅವರ ಹೆಸರು ಹೇಳಲಿಲ್ಲ" ಎಂದು ತಿಳಿಸಿ ಮಾತು ಮುಂದುವರಿಸಿದರು.

ಸಾಧನಾ ಸಮಾವೇಶದ ನೇತೃತ್ವ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಸಿ.ಮಹದೇವಪ್ಪ ಕೂಡ ಮಾತನಾಡಲು ಆರಂಭಿಸಿದಾಗ ಡಿ.ಕೆ. ಶಿವಕುಮಾರ್‌ ಹೆಸರು ಬಿಟ್ಟು ಎಲ್ಲರ ಹೆಸರನ್ನು ಹೇಳಿ ಗುಣಗಾನ ಮಾಡಿದರು. ಡಿಸಿಎಂ ಡಿಕೆಶಿ ಹೆಸರು ತಪ್ಪಿರುವುದನ್ನು ಕಡೆಯಲ್ಲಿ ಮಹದೇವಪ್ಪ ಪಿಎ ನೆನಪಿಸಿದಾಗ ಅವರ ಹೆಸರನ್ನು ಹೇಳಿ ಮುಂದೆ ಮಾತು ಆರಂಭಿಸಿದರು.

ಸಿಎಂ, ಡಿಸಿಎಂ ಎಚ್ಚರಿಕೆಯ ಮಾತುಗಳು

ಮೈಸೂರಿನಲ್ಲಿ ನಡೆದ ಸಾಧನಾ ಸಮಾವೇಶ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ, ತಮ್ಮ ಸ್ಥಾನ ಭದ್ರ ಮಾಡಿಕೊಳ್ಳಲು ಸಮಾವೇಶದ ಅಸ್ತ್ರ ಪ್ರಯೋಗಿಸುತ್ತಿದ್ದಾರೆ ಎನ್ನುವ ಆರೋಪ ಬಿಜೆಪಿ ಮತ್ತು ಜೆಡಿಎಸ್ ಕಡೆಯಿಂದ ಬಂದಿತ್ತು. ಅದೇ ರೀತಿಯಾಗಿ ಇಡೀ ಸಮಾವೇಶ ಸಿದ್ದರಾಮಯ್ಯಮಯವಾಗಿದ್ದೂ ಹೌದು. ಎಐಸಿಸಿ ಅಧ್ಯಕ್ಷರೇ ಖುದ್ದು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ತಾವು ಆಡುವ ಮಾತು, ನೀಡುವ ಸಂದೇಶ ಹೇಗೆ ಇರಬೇಕು ಎನ್ನುವ ಬಗ್ಗೆ ಸಿಎಂ ಮತ್ತು ಡಿಸಿಎಂ ಎಚ್ಚರಿಕೆ ವಹಿಸಿದ್ದರು. ಸಿಎಂ ಸಿದ್ದರಾಮಯ್ಯ ಎಲ್ಲಿಯೂ ಸಮಾವೇಶ ತಮ್ಮ ಶಕ್ತಿ ಪ್ರದರ್ಶನ ಎಂದು ಬಿಂಬಿಸಿಕೊಳ್ಳಲು ಹೋಗಲಿಲ್ಲ. ಆದರೆ, ತೆರೆಯ ಹಿಂದೆ ಇದು ಯಾವ ರೀತಿ ಪರಿಣಾಮ ಉಂಟು ಮಾಡಬೇಕು ಎನ್ನುವ ಉದ್ದೇಶ ಇಟ್ಟುಕೊಂಡಿದ್ದರೋ ಅದು ಆಗುವಂತೆ ನೋಡಿಕೊಳ್ಳುವಲ್ಲಿ ತುಸು ಯಶಸ್ವಿಯಾದರು ಎಂದೇ ಹೇಳಬಹುದು.

ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ಮಾತಿನುದ್ದಕ್ಕೂ ಕಾಂಗ್ರೆಸ್ ಪಕ್ಷವನ್ನೇ ಗರ್ಭಗುಡಿಯಲ್ಲಿ ಕೂರಿಸಿ ಅದರ ಆರಾಧನೆ ಮಾಡಿದರು. ಸರ್ಕಾರದ ಮುಖ್ಯಸ್ಥರಾದ ಸಿದ್ದರಾಮಯ್ಯ, ಅವರ ನಾಯಕತ್ವದ ಬಗ್ಗೆ ಮಾತನಾಡುವಾಗ ಪದಗಳನ್ನು ಲೆಕ್ಕವಿಟ್ಟೇ ಮಾತನಾಡಿದರು. ಇನ್ನು ಕಾಂಗ್ರೆಸ್ ಹೈಕಮಾಂಡ್, ರಾಹುಲ್ ಗಾಂಧಿ, ಭಾರತ್ ಜೋಡೋ ಯಾತ್ರೆ, ಉಪ ಚುನಾವಣೆಗಳಲ್ಲಿ ಗಳಿಸಿದ ಗೆಲುವುಗಳ ಬಗ್ಗೆಯೇ ಹೆಚ್ಚು ಮಾತನಾಡಿ, ಹೈಕಮಾಂಡ್ ವಿಶ್ವಾಸ ಗಳಿಸುವತ್ತ ಚಿತ್ತ ಹರಿಸಿದ್ದರು.

Tags:    

Similar News