ಮೈಸೂರು ಸಾಧನಾ ಸಮಾವೇಶ | ಸರ್ಕಾರ ದಿವಾಳಿ ಎಂಬ ಅಪಪ್ರಚಾರ; ಬಹಿರಂಗ ಚರ್ಚೆಗೆ ಬರುವಂತೆ ವಿಪಕ್ಷಗಳಿಗೆ ಸಿಎಂ ಆಹ್ವಾನ
ಬಿಜೆಪಿ-ಜೆಡಿಎಸ್ ಗೆ ಮತ್ಸರ ಇರಬೇಕು. ಆದರೆ, ಕೀಳು ಮಟ್ಟದ ಅಪಪ್ರಚಾರಕ್ಕೆ ಇಳಿಯಬಾರದು. ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವುದೇ ಅವರ ನಿತ್ಯ ಕಾಯಕವಾಗಿದೆ ಎಂದು ಸಿಎಂ ಆರೋಪಿಸಿದರು;
ಮೈಸೂರಿನಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶವು ಅಕ್ಷರಶಃ ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿತು. "ಐದು ವರ್ಷ ನಾನೇ ಸಿಎಂ" ಎಂದು ಸ್ವಯಂಘೋಷಿಸಿಕೊಂಡ ಬಳಿಕ ತವರು ಜಿಲ್ಲೆಯಲ್ಲಿ ನಡೆದ ಮೊದಲ ಬಹಿರಂಗ ಸಮಾವೇಶದಲ್ಲಿ ವಿರೋಧ ಪಕ್ಷಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಅಲ್ಲದೇ ಗ್ಯಾರಂಟಿ ಯೋಜನೆಗಳ ಶ್ಲಾಘನೆಗೆ ವೇದಿಕೆಯನ್ನು ಬಳಸಿಕೊಂಡರು.
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಶನಿವಾರ ಸರ್ಕಾರದ ಸಾಧನಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ದಿವಾಳಿಯಾಗಿದೆ, ಅಭಿವೃದ್ಧಿಗೆ ದುಡ್ಡಿಲ್ಲ, ಖಜಾನೆ ಖಾಲಿ ಆಗಿದೆ ಎಂದು ವಿರೋಧ ಪಕ್ಷಗಳು ವೃಥಾ ಆರೋಪ ಮಾಡುತ್ತಿವೆ. ಹಾಗಿದ್ದರೆ ಇಂದು 2578 ಕೋಟಿ ರೂ. ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಆಗುತ್ತಿತ್ತೇ ಎಂದು ಕಿಡಿಕಾರಿದರು.
ನಿಮಗೆ ಸತ್ಯ ಗೊತ್ತಾಗಬೇಕಾದರೆ ಜನರನ್ನು ತಪ್ಪುದಾರಿಗೆ ಎಳೆಯುವುದನ್ನು ಬಿಡಿ, ಅಭಿವೃದ್ಧಿ ಕುರಿತು ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ, ನೀವು ಏನು ಮಾಡಿದ್ದೀರಿ, ನಾವು ಏನು ಮಾಡಿದ್ದೇವೆ ಎನ್ನುವುದನ್ನು ಚರ್ಚೆ ಮಾಡಿಯೇ ಬಿಡೋಣ ಬನ್ನಿ ಎಂದು ಸಿಎಂ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಿಗೆ ಪಂಥಾಹ್ವಾನ ನೀಡಿದರು.
ಕೃಷ್ಣರಾಜದಲ್ಲಿ ಬಿಜೆಪಿ ಶಾಸಕರು, ಚಾಮುಂಡೇಶ್ವರಿ, ಹುಣಸೂರಿನಲ್ಲಿ ಜೆಡಿಎಸ್ ಶಾಸಕರು ಇದ್ದಾರೆ. ಇವರು ಬಂದು ನೋಡಲಿ.ಇದು ಸರ್ಕಾರಿ ಕಾರ್ಯಕ್ರಮ. ಸುಳ್ಳು ಹೇಳಲು ಸಾಧ್ಯವಿಲ್ಲ. ಜನರಿಗೆ ನಮ್ಮ ಕಾರ್ಯಕ್ರಮಗಳನ್ನು ತಿಳಿಸಲು ಸಾಧನಾ ಸಮಾವೇಶ ಮಾಡಿದ್ದೇವೆ. ಬಿಜೆಪಿ-ಜೆಡಿಎಸ್ ನವರು ಹೇಳುವ ಹಾಗೆ ಇದು ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ ಅಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿ-ಜೆಡಿಎಸ್ ಗೆ ಮತ್ಸರ ಇರಬೇಕು. ಆದರೆ, ಕೀಳು ಮಟ್ಟದ ಅಪಪ್ರಚಾರಕ್ಕೆ ಇಳಿಯಬಾರದು. ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವುದೇ ಅವರ ನಿತ್ಯ ಕಾಯಕವಾಗಿದೆ. ಬಿಜೆಪಿಯವರು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದದ್ದು ಎಲ್ಲರಿಗೂ ಗೊತ್ತಿದೆ. ನಾನು ಅಧ್ಯಕ್ಷನಾಗಿದ್ದಾಗ 59 ಸ್ಥಾನ ಗೆದ್ದಿತ್ತು ಜೆಡಿಎಸ್. ಈಗ ಗೆದ್ದಿರುವುದು ಎಷ್ಟಪ್ಪ ದೇವೇಗೌಡ , ಕುಮಾರಸ್ವಾಮಿ ಎಂದು ಗೇಲಿ ಮಾಡಿದ ಅವರು, ಜೆಡಿಎಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ ಎಂದು ಭವಿಷ್ಯ ನುಡಿದರು.
ಜನ ಜೆಡಿಎಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿ ಬಹುತೇಕ ಶಾಸಕರು ಬಿಜೆಪಿಗೆ ಹೋಗುತ್ತಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಎಂದಿಗೂ ಬಡವರ, ಅಲ್ಪಸಂಖ್ಯಾತರ, ಹಿಂದುಳಿದವರ ಪರ ಇಲ್ಲ. ಕರ್ನಾಟಕದಿಂದ ನಾಲ್ಕೂವರೆ ಲಕ್ಷ ಕೋಟಿಗೂ ಹೆಚ್ಚು ತೆರಿಗೆ ಹೋದರೂ ನಮಗೆ ಕೇಂದ್ರದಿಂದ ಅರವತ್ತೈದು ಸಾವಿರ ಕೋಟಿ ರೂ.ಮಾತ್ರ ವಾಪಸ್ ಬರುತ್ತಿದೆ. ಇದನ್ನು ಬಿಜೆಪಿ-ಜೆಡಿಎಸ್ ಸಂಸದರು ಕೇಳುತ್ತಿದ್ದಾರಾ. ಮೋದಿ ಮುಂದೆ ನಿಂತರೆ ಗಢಗಢ ಎಂದು ನಡುಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಗ್ಯಾರಂಟಿ ಯೋಜನೆಗಳ ನಕಲು ಎಂದ ಡಿಕೆಶಿ
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಬಿಹಾರ, ಮಧ್ಯಪ್ರದೇಶ, ಹರಿಯಾಣದಲ್ಲಿ ಬಿಜೆಪಿಯವರು ನಕಲು ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.
ವಿರೋಧಿಗಳ ಟೀಕೆಗೆ ಈ ಹಸ್ತ ಎಂದಿಗೂ ಮಣಿಯುವುದಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಐದು ಸಾವಿರ ಕೋಟಿ ರೂಪಾಯಿ ಕೊಟ್ಟಿದ್ದೇವೆ. ಮಹದೇಶ್ವರ ಬೆಟ್ಟದಲ್ಲಿ ಮೂರು ಸಾವಿರ ಕೋಟಿ ರೂ.ವೆಚ್ಚದ ಕಾಮಗಾರಿ ಉದ್ಘಾಟನೆ ಮಾಡಿದ್ದೇವೆ. ಅಭಿವೃದ್ಧಿ ಕಾರ್ಯಗಳಿಂದ ʼಈ ಹಸ್ತʼ ವಿರೋಧಿಗಳಿಗೆ ಬಾಯಿ ಮುಚ್ಚಿಸಿದೆ. ಈ ಹಸ್ತ ರೈತರು, ಮಹಿಳೆಯರ ಪರವಾಗಿದೆ. ನಾವು ಭಾವನೆಗಳ ಮೇಲಲ್ಲ, ಬದುಕಿನ ಮೇಲೆ ಅಧಿಕಾರ ಮಾಡುತ್ತಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಬರಗಾಲ, ಹಣ ಇಲ್ಲ ಎನ್ನುತ್ತಿದ್ದವರು ಈಗ ಮಾತನಾಡಲಿ, ಈ ನಾಡು ಎಷ್ಟು ಸಮೃದ್ಧಿಯಾಗಿದೆ ಎಂಬುದನ್ನು ನೋಡಲಿ. ಶಿಕ್ಷಣ, ಆರೋಗ್ಯ, ಉದ್ಯೋಗ, ಆಹಾರ ಭದ್ರತಾ ಕಾಯ್ದೆ ನಾವು ಮಾಡಿದ್ದೇವೆ. ವೋಟಿಗಾಗಿ ಈ ಸಮಾವೇಶ ಮಾಡುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ನಾಯಕತ್ವ ಸಿದ್ದರಾಮಯ್ಯ ಮುಖಂಡತ್ವದಲ್ಲಿ ನಾನೂ ಬದ್ಧನಾಗಿ ಕೆಲಸ ಮಾಡುತ್ತೇನೆ. 2028ಕ್ಕೆ ಮತ್ತೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಸಿದ್ದರಾಮಯ್ಯರಿಂದಲೇ ಮೈಸೂರು ಅಭಿವೃದ್ಧಿ
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ನಂತರ ಮೈಸೂರಿನ ಅಭಿವೃದ್ಧಿ ಮಾಡಿದ್ದೇ ಸಿದ್ದರಾಮಯ್ಯ ಸರ್ಕಾರ ಎಂದು ಪ್ರತಿಪಾದಿಸಿದರು.
ಇದು ಯಾರದೋ ಅಸ್ತಿತ್ವ, ಸವಾಲಿಗೆ ಮಾಡುತ್ತಿರುವ ಕಾರ್ಯಕ್ರಮವಲ್ಲ, ಅಭಿವೃದ್ಧಿಯ ಸಭೆ. ಅಧಿಕಾರದಲ್ಲಿ ಇದ್ದಾಗ ನುಡಿದಂತೆ ಕೆಲಸ ಮಾಡದವರು ಈ ಕಾರ್ಯಕ್ರಮದ ಬಗ್ಗೆ ಟೀಕೆ ಮಾಡಿದ್ದಾರೆ. ಆದರೆ ಮೈಸೂರಿನ ಅಭಿವೃದ್ಧಿ ಮಾಡಿದ್ದೇ ಕಾಂಗ್ರೆಸ್ ಸರ್ಕಾರ ಎಂದರು.
ಜಿಲ್ಲಾ ಆಸ್ಪತ್ರೆ, ಜಯದೇವ ಮೊದಲಾದ ಆಸ್ಪತ್ರೆಗಳನ್ನು ಸ್ಥಾಪಿಸಿದ್ದು, ಈಗ ನಿಮಾನ್ಸ್ ಘಟಕ, ಯುರಾಲಜಿ ಆಸ್ಪತ್ರೆ ಸಹಿತ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಾಗುತ್ತಿದೆ. ಹೊಸ ಬಸ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಸಿದ್ದರಾಮಯ್ಯ ಹೋರಾಟದ ರಾಜಕೀಯದ ಮೂಲಕ ಸಮ ಸಮಾಜ ನಿರ್ಮಾಣ ಮಾಡುತ್ತಿದ್ದು, ಅದಕ್ಕೆ ಪ್ರೇರಣೆಯಾಗಿ ಕಾಂಗ್ರೆಸ್ ಸರ್ಕಾರ ನಿಂತಿದೆ ಎಂದು ಹೇಳಿದರು.