Mysore MUDA Scam | ನಿವೇಶನ ಹಂಚಿಕೆ ಹಗರಣ: ಮುಖ್ಯಮಂತ್ರಿಗಳಿಗೆ ಐದು ಪ್ರಶ್ನೆ

ಹಗರಣದ ಕುರಿತು ಮೈಸೂರು ಡಿಸಿ, ಸರ್ಕಾರಕ್ಕೆ ಬರೆದಿದ್ದ ಪತ್ರದ ವಿವರ, ಆರ್‌ಟಿಐ ಮಾಹಿತಿಗಳು ಹಗರಣದ ಕುರಿತ ಆರೋಪಗಳಿಗೆ ಇನ್ನಷ್ಟು ಪುಷ್ಟಿ ನೀಡುತ್ತಿವೆ. ಜೊತೆಗೆ ಮುಖ್ಯಮಂತ್ರಿಗಳ ಹೇಳಿಕೆಗಳು ಮತ್ತು ಸಮರ್ಥನೆಗಳಿಗೂ, ಅಧಿಕೃತ ಆರ್‌ಟಿಐ ಮಾಹಿತಿಗೂ ಸಾಕಷ್ಟು ವ್ಯತ್ಯಾಸಗಳಿದ್ದು, ಹಲವು ಪ್ರಶ್ನೆಗಳು ಎದ್ದಿವೆ.;

Update: 2024-07-06 08:42 GMT

ಮೈಸೂರು ಮುಡಾ ನಿವೇಶನ ಹಂಚಿಕೆ ವಿವಾದ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಹಾಗೂ ಪುತ್ರನ ಹೆಸರು ಬಹುಕೋಟಿ ಹಗರಣದ ಕೇಂದ್ರಬಿಂದುವಾಗಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಸಿಎಂ ರಾಜೀನಾಮೆಗೆ ಪಟ್ಟು ಹಿಡಿದಿವೆ.

ತಮ್ಮ ವಿರುದ್ಧದ ಪ್ರತಿಪಕ್ಷಗಳ ದಾಳಿಯಿಂದ ವಿಚಲಿತರಾದಂತೆ ಕಂಡುಬಂದಿರುವ ಮುಖ್ಯಮಂತ್ರಿಗಳು ಸ್ವತಃ ಮಾಧ್ಯಮ ಹೇಳಿಕೆ, ಸಾಮಾಜಿಕ ಜಾಲತಾಣ ಪೋಸ್ಟ್ಗಳ ಮೂಲಕ ಸಮರ್ಥನೆ, ಸ್ಪಷ್ಟನೆಯ ನಿರಂತರ ಪ್ರಯತ್ನ ನಡೆಸಿದ್ದಾರೆ.

ಮತ್ತೊಂದು ಕಡೆ ಪ್ರಕರಣ ಬೆಳಕಿಗೆ ಬರಲು ಕಾರಣರಾದ ಮೈಸೂರು ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಅವರನ್ನು ಪ್ರಕರಣದ ತನಿಖೆ ಪ್ರಗತಿಯಲ್ಲಿರುವಾಗಲೇ ದಿಢೀರ್ ಎತ್ತಂಗಡಿ ಮಾಡುವ ಮೂಲಕ ಸರ್ಕಾರ ಏನನ್ನೋ ಮುಚ್ಚಿಡುತ್ತಿದೆ ಎಂಬ ಸಾರ್ವಜನಿಕ ಅನುಮಾನಗಳಿಗೆ ಪುಷ್ಟಿ ಸಿಕ್ಕಿದೆ. ಹಾಗೇ ಪ್ರತಿಪಕ್ಷಗಳ ಗಂಭೀರ ಆರೋಪಗಳಿಗೂ ಈ ವರ್ಗಾವಣೆ ಬಲತುಂಬಿದೆ.

ಅದೇ ಹೊತ್ತಿಗೆ, ಹಗರಣದ ಕುರಿತು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಬರೆದಿದ್ದ ಪತ್ರದ ವಿವರಗಳು, ಆರ್‌ಟಿಐ ಕಾಯ್ದೆಯಡಿ ದೂರುದಾರರು ಪಡೆದುಕೊಂಡಿದ್ದ ಮಾಹಿತಿಗಳು ಮಾಧ್ಯಮಗಳ ಮೂಲಕ ಬಹಿರಂಗಗೊಂಡಿದ್ದು, ಹಗರಣದ ಕುರಿತ ಅನುಮಾನ ಮತ್ತು ಆರೋಪಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿವೆ. ಜೊತೆಗೆ ಮುಖ್ಯಮಂತ್ರಿಗಳು ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಪ್ರಕರಣದ ಕುರಿತು ನೀಡುತ್ತಿರುವ ಹೇಳಿಕೆಗಳು ಮತ್ತು ಸಮರ್ಥನೆಗಳಿಗೂ, ಅಧಿಕೃತ ಆರ್‌ಟಿಐ ಮಾಹಿತಿಗಳಿಗೂ ಸಾಕಷ್ಟು ವ್ಯತ್ಯಾಸಗಳಿದ್ದು, ಹಲವು ಪ್ರಶ್ನೆಗಳು ಎದ್ದಿವೆ.

ಅಂತಹ ಪ್ರಶ್ನೆಗಳನ್ನು ಒಂದೊಂದಾಗಿ ನೋಡುವುದಾದರೆ;

ಮೊದಲನೆಯದಾಗಿ; ಮುಖ್ಯಮಂತ್ರಿಗಳು ತಮ್ಮ ಪತ್ನಿಯ ಹೆಸರಿನಲ್ಲಿದ್ದ ಜಮೀನನ್ನು ಮುಡಾ ತಮಗೆ ಗೊತ್ತಿಲ್ಲದಂತೆ ಸ್ವಾಧೀನ ಪಡಿಸಿಕೊಂಡಿತ್ತು ಎಂದು ಮತ್ತೆ ಮತ್ತೆ ಹೇಳುತ್ತಿದ್ದಾರೆ. ಆದರೆ, ದೂರುದಾರರಲ್ಲಿ ಒಬ್ಬರಾದ ಸಾಮಾಜಿಕ ಕಾರ್ಯಕರ್ತ ಎನ್. ಗಂಗರಾಜು ಅವರು ಆರ್‌ಟಿಐನಲ್ಲಿ ಪಡೆದ ಮಾಹಿತಿಯ ಪ್ರಕಾರ, ಆ ಜಮೀನು 2015ರಲ್ಲಿ ಮುಡಾ ಸ್ವಾಧೀನಕ್ಕೆ ಬಂದಿದೆ. ಅಂದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ, ಅವರ ಪತ್ನಿಯ ಹೆಸರಿನಲ್ಲಿದ್ದ ಜಮೀನನ್ನು ಮುಡಾ ಸ್ವಾಧೀನ ಪಡಿಸಿಕೊಂಡಿದೆ. ಮುಖ್ಯಮಂತ್ರಿಗಳ ಹೇಳಿಕೆಯ ಪ್ರಕಾರ, ಜಮೀನಿನ ಮಾಲೀಕರಿಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಸ್ವಾಧೀನಪಡಿಸಿಕೊಳ್ಳಲಾಗಿದೆ!

ಪ್ರಶ್ನೆ ಇರುವುದು; ರಾಜ್ಯದ ಮುಖ್ಯಮಂತ್ರಿಗಳಿಗೆ ಸೇರಿದ ಜಮೀನನ್ನು ಯಾವುದೇ ನೋಟಿಸ್ ನೀಡದೆ, ಭೂ ಮಾಲೀಕರೊಂದಿಗೆ ನಿಯಮ ಪ್ರಕಾರ ಸಂಧಾನ ಸಭೆ ನಡೆಸದೆ, ಅವರದೇ ತವರು ಜಿಲ್ಲೆಯ ಪ್ರಾಧಿಕಾರವೊಂದು ಜಮೀನು ಸ್ವಾಧೀನ ಮಾಡಿಕೊಂಡಿದೆ ಎಂದರೆ; ಇದನ್ನು ಸಾರ್ವಜನಿಕರು ನಂಬಬಹುದೆ? ಭೂ ಸ್ವಾಧೀನ ಪ್ರಕ್ರಿಯೆಯ ನಿಯಮ ಮತ್ತು ಕಾನೂನು ಮೀರಿ ಹೀಗೆ ಭೂಮಿಯನ್ನು ಕಬ್ಜಾಕ್ಕೆ ಪಡೆದುಕೊಳ್ಳುವ ಎದೆಗಾರಿಕೆ ತೋರಿದ ಅಧಿಕಾರಿಗಳು ಯಾರು? ಅವರ ವಿರುದ್ಧ ಯಾಕೆ ಆಗಲೇ ಮುಖ್ಯಮಂತ್ರಿಗಳು ಕ್ರಮ ವಹಿಸಲಿಲ್ಲ? ಎಂಬ ಪ್ರಶ್ನೆಗಳು ಏಳುವುದು ಸಹಜ.

ಎರಡನೆಯದಾಗಿ; ಭೂಸ್ವಾಧೀನ ಪ್ರಕ್ರಿಯೆ ನಡೆದು ದಶಕವಾದರೂ ಯಾಕೆ ಆ ಬಗ್ಗೆ ಅಕ್ರಮ ಭೂ ಸ್ವಾಧೀನ ಪ್ರಕರಣ ದಾಖಲಿಸಿ, ತನಿಖೆ ನಡೆಸಲಿಲ್ಲ ಮತ್ತು ಆಗಲೇ ಪ್ರಕರಣ ಇತ್ಯರ್ಥಕ್ಕೆ ಇದ್ದ ಅಡ್ಡಿಗಳೇನು? ಎಂಬ ಪ್ರಶ್ನೆ ಕೂಡ ಇದೆ.

ಏಕೆಂದರೆ; ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರ ಹೇಳಿಕೆಯ ಪ್ರಕಾರವೇ “ಈ ಜಮೀನನ್ನು 2010 ರಲ್ಲಿಯೇ ಮುಡಾದವರು ನಿವೇಶನಕ್ಕಾಗಿ ಬಳಸಿಕೊಂಡಿರುತ್ತಾರೆ. ಅದಾಗಿ ನಾಲ್ಕು ವರ್ಷದ ಬಳಿಕ 2014ರಲ್ಲಿಈ ಬಗ್ಗೆ ಮುಡಾ ದವರಿಗೆ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಪತ್ರ ಬರೆದಿದ್ದಾರೆ. ಮುಡಾ ಬಳಿಸಿಕೊಂಡಿರುವ ಜಮೀನಿಗೆ ಪರಿಹಾರ ಕೋರಿ ಅವರು ಪತ್ರ ಬರೆದಿದ್ದರು. ಅಂದರೆ, ಜಮೀನು ಸ್ವಾಧೀನ ಮಾಡಿಕೊಂಡ ಮುಡಾ ಆಗಲೀ, ಜಮೀನಿನ ಮಾಲೀಕರಾಗಲೀ ಸ್ವಾಧೀನಕ್ಕೆ ಮುನ್ನ ಯಾವುದೇ ಮಾತುಕತೆ, ಚರ್ಚೆ, ಕಾನೂನು ಪ್ರಕ್ರಿಯೆ ಮಾಡಿಲ್ಲ. ಜೊತೆಗೆ ಸ್ವಾಧೀನವಾದ ನಾಲ್ಕು ವರ್ಷಗಳವರೆಗೆ ಮಾಲೀಕರು ಕೂಡ ಆ ಬಗ್ಗೆ ಅಧಿಕೃತವಾಗಿ ಮುಡಾವನ್ನು ಪ್ರಶ್ನಿಸಿಲ್ಲ.

ಜೊತೆಗೆ, ಸ್ವಾಧೀನವಾದ ಬಳಿಕ ಸುಮಾರು ಏಳು ವರ್ಷಗಳ ಬಳಿಕ, 2017ರಲ್ಲಿ ಮುಡಾ ಪರಿಹಾರ ನೀಡಲು ಸಮ್ಮಿತಿಸಿದೆ ಮತ್ತು ಅದಾದ ನಾಲ್ಕು ವರ್ಷಗಳ 2021ರಲ್ಲಿ ಪರಿಹಾರ ರೂಪದಲ್ಲಿ 14 ನಿವೇಶನ ನೀಡಿದೆ.

ಮೂರನೆಯದಾಗಿ; ಜಮೀನಿನ ಮೂಲ ಸ್ವಾಧೀನವಾದದ್ದು ಯಾವಾಗ? ಮತ್ತು ಒಮ್ಮೆ ಸ್ವಾಧೀನವಾದ ಬಳಿಕ ಅದು ಡಿನೋಟಿಫೈ ಆಗಿ, ಕ್ರಯಪತ್ರವಾಗಿ ಬಳಿಕ ದಾನಪತ್ರವಾಗಿ ಮತ್ತೆ ಭೂಸ್ವಾಧೀನವಾಗಿದೆ. ಈ ಆಚೀಚೆ ವ್ಯವಹಾರದ ಹಿಂದಿನ ಉದ್ದೇಶವೇನು? ಎಂಬ ಪ್ರಶ್ನೆಯೂ ಇದೆ.

ಆರ್‌ಟಿಐ ಮಾಹಿತಿ ಪ್ರಕಾರ, ಮೈಸೂರಿನ ಕೆಸರೆಯ ಈ 3 ಎಕರೆ 16 ಗುಂಟೆ ಜಮೀನನ್ನು ಬಡಾವಣೆ ಅಭಿವೃದ್ಧಿ ಉದ್ದೇಶಕ್ಕಾಗಿ ಸ್ವಾಧೀನ ಪಡಿಸಿಕೊಳ್ಳುವುದಾಗಿ ಮುಡಾ 1992ರಲ್ಲೇ ಪ್ರಕಟಣೆ ಹೊರಡಿಸಿ ಜಮೀನಿನ ಅಂದಿನ ಮಾಲೀಕ ಲಿಂಗ ಅಲಿಯಾಸ್ ಜವರ ಎಂಬುವವರಿಗೆ ನೋಟಿಸ್ ನೀಡಿತ್ತು. ಬಳಿಕ 1997ರಲ್ಲಿ ಅವಾರ್ಡ್ ನೋಟಿಸ್ ಜಾರಿ ಮಾಡಿ, ಜಮೀನಿಗೆ ಪರಿಹಾರವಾಗಿ 3.24 ಲಕ್ಷ ರೂ. ನಿಗದಿ ಮಾಡಿತ್ತು.

ಆದರೆ, 1998ರಲ್ಲಿ ಆ ಜಮೀನನ್ನು ಏಕಾಏಕಿ ಡಿನೋಟಿಫೈ ಮಾಡಲಾಯಿತು. ಬಳಿಕ ಅದೇ ಜಾಗವನ್ನು ಸಿದ್ದರಾಮಯ್ಯ ಅವರ ಬಾವಮೈದ ಬಿ.ಎಂ. ಮಲ್ಲಿಕಾರ್ಜುನ ಸ್ವಾಮಿ ಖರೀದಿಸಿದ್ದರು! ನಂತರ, 2004ರಲ್ಲಿ ಮಲ್ಲಿಕಾರ್ಜುನಸ್ವಾಮಿ ಆ ಜಮೀನನ್ನು ತಮ್ಮ ಸೋದರಿಯಾದ, ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ದಾನಪತ್ರ ಮಾಡಿಕೊಟ್ಟಿದ್ದರು. ನಂತರ 2015ರಲ್ಲಿ ಮುಡಾ ಮತ್ತೆ ಅದೇ ಜಮೀನನ್ನು ಸ್ವಾಧೀನಪಡಿಸಿಕೊಂಡು ದೇವನೂರು 3ನೇ ಹಂತದ ಬಡಾವಣೆ ನಿರ್ಮಾಣ ಪ್ರಕ್ರಿಯೆ ಆರಂಭಿಸಿತು.

ಈ ನಿರ್ದಿಷ್ಟ ಭೂಮಿಯ ನೋಟಿಫೈ, ಡಿ ನೋಟಿಫೈನ ಆಚೀಚೆ ವ್ಯವಹಾರ, ಡಿ ನೋಟಿಫೈ ಬಳಿಕ ಭೂಮಿ ಖರೀದಿಸಿದವರು ಅದನ್ನು ದಾನಪತ್ರ ಮಾಡಿ ಕೊಟ್ಟಿರುವುದು ಎಲ್ಲವೂ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದ್ದು, ಈ ಇಡೀ ಪ್ರಕ್ರಿಯೆಯೇ ಕಾನೂನು ಮತ್ತು ನೈತಿಕ ಪ್ರಶ್ನೆಗಳಿಗೆ ಇಂಬು ನೀಡಿದೆ.

ನಾಲ್ಕನೆಯದಾಗಿ; ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಮುಡಾ, ಪರಿಹಾರವಾಗಿ 14 ನಿವೇಶನ ನೀಡಿದೆ. ಆದರೆ, ನಮ್ಮ 3.16 ಎಕರೆ ಭೂಮಿಗೆ ಹೋಲಿಸಿದರೆ ಈ ನಿವೇಶನಗಳ ವಿಸ್ತೀರ್ಣ ಮತ್ತು ಮೌಲ್ಯ ತೀರಾ ಕಡಿಮೆ. ವಾಸ್ತವವಾಗಿ ನಮಗೆ 62 ಕೋಟಿ ರೂ. ಪರಿಹಾರ ಕೊಡಬೇಕಿತ್ತು ಎಂದಿದ್ದಾರೆ.

ಆದರೆ, 1998ರಲ್ಲಿ ಡಿನೋಟಿಫೈ ಮಾಡುವ ಮುನ್ನ ಸ್ವಾಧೀನ ಪಡಿಸಿಕೊಂಡಾಗ, ಆ ಜಮೀನಿಗೆ ನಿಗದಿಯಾದ ಪರಿಹಾರ ಮೊತ್ತ 3.24 ಲಕ್ಷ ರೂ.ಮಾತ್ರ. ಆದರೆ, ಈಗ 35 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ 14 ನಿವೇಶನಗಳನ್ನು ನೀಡಲಾಗಿದೆ. ಅಲ್ಲದೆ, ಜಮೀನು ವಶಪಡಿಸಿಕೊಂಡ ದೇವನೂರು -3ಮೇ ಹಂತದ ಬಡಾವಣೆಗೆ ಬದಲಾಗಿ ಮೈಸೂರಿನ ಪ್ರತಿಷ್ಠಿತ ವಿಜಯನಗರ ಬಡಾವಣೆಯ 3ನೇ ಹಾಗೂ 4ನೇ ಹಂತದಲ್ಲೇ ಈ ನಿವೇಶನಗಳನ್ನು ನೀಡಲಾಗಿದೆ. ಭೂ ಸ್ವಾಧೀನ ಅವಧಿಯ ಭೂಮಿಯ ಮೌಲ್ಯ ಮತ್ತು ಭೂಸ್ವಾಧೀನ ಜಮೀನಿನ ಬಡಾವಣೆಯ ಬದಲಾಗಿ ಪ್ರತಿಷ್ಠಿತ ಬಡಾವಣೆ ಮತ್ತು ಚಾಲ್ತಿ ದರಗಳ ಲೆಕ್ಕದಲ್ಲಿ ಬದಲಿ ನಿವೇಶನ ನೀಡಲಾಗಿದೆ. ಹೀಗೆ ನೀಡುವುದು ಭೂಸ್ವಾಧೀನ ನಿಯಮಗಳ ಪ್ರಕಾರ ಒಪ್ಪಿತವೇ? ಎಂಬ ಪ್ರಶ್ನೆಯೂ ಎದ್ದಿದೆ.

ಐದನೆಯದಾಗಿ; ಭೂಸ್ವಾಧೀನಪಡಿಸಿಕೊಂಡ ಭೂಮಿಗೆ ಬದಲಾಗಿ ಬದಲಿ ನಿವೇಶನ ಅಥವಾ ತುಂಡು ಭೂಮಿ ನೀಡುವ ಮುಡಾದ ನಿರ್ಧಾರ ಕೂಡ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಜಿಲ್ಲಾಧಿಕಾರಿ ರಾಜೇಂದ್ರ ಅವರು ರಾಜ್ಯ ಸರ್ಕಾರಕ್ಕೆ ಬರೆದಿದ್ದ ಪತ್ರದಲ್ಲಿ ಉಲ್ಲೇಖಿಸಿರುವಂತೆ ʼಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳು(ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರದ ಬದಲಾಗಿ ನಿವೇಶನಗಳ ಹಂಚಿಕೆ-2009) ನಿಯಮಗಳು 2015ರ ಫೆಬ್ರವರಿ 11ರಿಂದ ಜಾರಿಗೆ ಬಂದಿವೆ. ಆದರೆ, ಆ ನಿಯಮಗಳು ಜಾರಿಗೆ ಮುನ್ನ ನಡೆದ ಭೂ ಸ್ವಾಧೀನ ಪ್ರಕರಣಗಳಲ್ಲಿ ಈ ನಿಯಮಗಳನ್ನು ಪೂರ್ವಾನ್ವಯ ಮಾಡಲು ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆʼ. ಇದೇ ಅಂಶವನ್ನು ಉಲ್ಲೇಖಿಸಿ ತಮಗೆ ಹಲವು ದೂರುಗಳೂ ಬಂದಿವೆ ಎಂದೂ ಜಿಲ್ಲಾಧಿಕಾರಿ ಪತ್ರದಲ್ಲಿ ಹೇಳಿದ್ದರು.

ಆದರೆ, ಸರ್ಕಾರ ಅಥವಾ ಪ್ರಾಧಿಕಾರದ ಅನುಮೋದನೆ ಪಡೆಯದೇ ಮುಡಾ ಆಯುಕ್ತರು ಏಕಪಕ್ಷೀಯವಾಗಿ ಆ ನಿಯಮವನ್ನು ಅನ್ವಯಿಸಿ ಬದಲಿ ನಿವೇಶನ, ತುಂಡು ಭೂಮಿ ಹಂಚಿಕೆ ಮಾಡಲು ನಿರ್ಧರಿಸಿದ್ದರು. ಮತ್ತು ಭೂಸ್ವಾಧೀನ ಮಾಡಿಕೊಂಡ ಭೂಮಿಯಲ್ಲದೆ ಇತರೆ ಪ್ರತಿಷ್ಠಿತ ಬಡಾವಣೆಗಳಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಿದ್ದರು. ಇಷ್ಟೆಲ್ಲಾ ಅಕ್ರಮಗಳ ಬಗ್ಗೆ ಸ್ವತಃ ತಮ್ಮದೇ ಸರ್ಕಾರಕ್ಕೆ ಮೈಸೂರು ಜಿಲ್ಲಾಧಿಕಾರಿ ಮಾಹಿತಿ ನೀಡಿ ಕ್ರಮಕ್ಕೆ ಒತ್ತಾಯಿಸಿದ್ದರೂ ಮುಖ್ಯಮಂತ್ರಿಗಳು ಯಾಕೆ ಪ್ರಕರಣ ಬೆಳಕಿಗೆ ಬರುವವರೆಗೆ ಮೌನ ವಹಿಸಿದ್ದರು?

ಇದರೊಂದಿಗೆ ಪ್ರಕರಣದ ಕುರಿತು ಮುಡಾ ಆಯುಕ್ತರಿಗೆ ಪತ್ರ ಬರೆದು, ನೋಟಿಸ್ ನೀಡಿ, ಸರ್ಕಾರಕ್ಕೆ ಪತ್ರ ಬರೆದು ತನಿಖೆಗೆ ಆಗ್ರಹಿಸಿ ಸರ್ಕಾರಕ್ಕೆ ಆಗಿರುವ ನಷ್ಟ ತಡೆಗೆ ಪ್ರಯತ್ನ ನಡೆಸಿದ ಜಿಲ್ಲಾಧಿಕಾರಿಯನ್ನು ಅವಧಿಗೆ ಮುನ್ನವೇ ಎತ್ತಂಗಡಿ ಮಾಡಿರುವುದು ಯಾವ ಉದ್ದೇಶದಿಂದ? ಎಂಬ ಪ್ರಶ್ನೆ ಕೂಡ ಮುಖ್ಯಮಂತ್ರಿಗಳ ಮೇಲಿನ ಅನುಮಾನ, ಆರೋಪಗಳಿಗೆ ಪ್ರಬಲ ಪುಷ್ಟಿ ನೀಡುತ್ತಿದೆ.

ಒಟ್ಟಾರೆ ಇಡೀ ಪ್ರಕರಣದ ಪ್ರತಿ ಹಂತದಲ್ಲೂ ಮುಖ್ಯಮಂತ್ರಿಗಳು ಮತ್ತು ಅವರ ಸರ್ಕಾರ ಪಾರದರ್ಶಕವಾಗಿ ನಡೆದುಕೊಂಡಿಲ್ಲ ಮತ್ತು ಏನನ್ನೋ ಮುಚ್ಚಿಡಲು, ಯಾರನ್ನೂ ಬಚಾವು ಮಾಡಲು ಯತ್ನಿಸುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಗಳಲ್ಲಿ ಹುರುಳಿಲ್ಲದೇ ಇಲ್ಲ ಎನಿಸುತ್ತಿದೆ.

Tags:    

Similar News