Mysore MUDA Scam | ನ್ಯಾಯಾಂಗ ತನಿಖೆಗೆ ಆಗ್ರಹಿಸಿ ರಾಜ್ಯಪಾಲರಿಗೆ ರೈತ ಒಕ್ಕೂಟ ಪತ್ರ

Update: 2024-07-07 06:53 GMT

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣದ ಕುರಿತು ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಒಕ್ಕೂಟ ರಾಜ್ಯಪಾಲ ಥಾವರ್ ಚಂದ್ ಗೆಹ್ಲಟ್ ಅವರಿಗೆ ಪತ್ರ ಬರೆದಿದೆ.

ʻʻಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ಕೇಳಿಬಂದಿದ್ದು ಸಿಎಂ ಪತ್ನಿ ಹೆಸರಲ್ಲಿ ಅಕ್ರಮವಾಗಿ ನಿವೇಶನ ಪಡೆದಿದ್ದಾರೆ ಎಂಬ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳಬೇಕುʼʼ ಎಂದು ಕಬ್ಬು ಬೆಳೆಗಾರರ ಒಕ್ಕೂಟ ಒತ್ತಾಯಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿಜೆಪಿ ಪ್ರತಿಭಟನೆ ಆರಂಭಿಸಿದ್ದು, ಸಿಎಂ ರಾಜೀನಾಮೆಗೆ ಆಗ್ರಹಿಸಿದೆ. ಹಗರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಒತ್ತಾಯಿಸಿದೆ. ಇದರ ಬೆನ್ನಲ್ಲೇ ಕಬ್ಬು ಬೆಳೆಗಾರರ ಒಕ್ಕೂಟ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಕೊಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದೆ‌.

ರೈತ ಒಕ್ಕೂಟದ ಪತ್ರದ ಸಾರಂಶ

2015ರಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಕೋಟ್ಯಂತರ ರೂಪಾಯಿಗಳ ವ್ಯಾಪಕ ಭ್ರಷ್ಟಾಚಾರ ನಡೆದಿದೆ. 50:50 ಅನುಪಾತದ ಆಧಾರದ ಮೇಲೆ ಪ್ರೋತ್ಸಾಹಕ ಬದಲಿ ಸೈಟ್‌ಗಳ ಹಂಚಿಕೆಯಲ್ಲಿ ಭಾರಿ ವಂಚನೆ ನಡೆದಿದೆ. ಇಲ್ಲಿಯವರೆಗೆ ಸರಿ ಸುಮಾರು 6000 ಅಕ್ರಮ ನಿವೇಶನಗಳನ್ನು ಭೂಗಳ್ಳರಿಗೆ ಹಂಚಲಾಗಿದೆ ಮತ್ತು ಹಂಚಿಕೆಯಿಂದ ರಾಜ್ಯದ ಆಸ್ತಿ/ಖಜಾನೆಗೆ 4,000 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ ಎಂದು ಆರೋಪಿಸಿದ್ದು, ಈ ಮುಡಾ ಹಗರಣದ ಹಿಂದೆ ಪ್ರಬಲ ವ್ಯಕ್ತಿಗಳ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ.

ಮುಡಾ ಸಮಿತಿಯು ಭೂಗಳ್ಳರಿಗೆ ಅನುಕೂಲವಾಗುವ ರೀತಿಯಲ್ಲಿ ನಿಯಮಗಳು ಮತ್ತು ಉಪ-ಕಾನೂನನ್ನು ರೂಪಿಸಿದ್ದು, ದೀರ್ಘಾವಧಿಯಿಂದ ಕಾಯುತ್ತಿರುವ ಪ್ರಾಮಾಣಿಕ ಅರ್ಜಿದಾರರಿಗೆ ಅಥವಾ ಭೂಮಿ ಕಳೆದುಕೊಂಡಿರುವ ರೈತರಿಗೆ ಯಾವುದೇ ಅನುಕೂಲವಾಗಿಲ್ಲ. ಮುಡಾವು ಕಾನೂನು ಪ್ರಕಾರ ರೈತರು ಮತ್ತು ಇತರ ಭೂಮಾಲೀಕರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿತ್ತು. ಮತ್ತು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯಿದೆ ಮತ್ತು ನಿಯಮಗಳಲ್ಲಿ ನಿಗದಿಪಡಿಸಿದಂತೆ ಅವರಿಗೆ ಪರಿಹಾರವನ್ನು ನೀಡಬೇಕಾಗಿತ್ತು. ಆದರೆ ಇವರು ಹಾಗೇ ಮಾಡಿಲ್ಲ.

ಮೇಲ್ಕಂಡ ಆರೋಪಗಳ ಹೊರತಾಗಿ ಮುಡಾ ಕಚೇರಿಯಲ್ಲಿ ರೈತರ ಜಮೀನುಗಳಿಗೆ ಸಂಬಂಧಿಸಿದ ಹಲವಾರು ದಾಖಲೆಗಳು ನಾಪತ್ತೆಯಾಗಿವೆ ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ವಿಚಾರಣೆಗಾಗಿ ನಮ್ಮ ಕಬ್ಬು ಒಕ್ಕೂಟವು ಮುಡಾ ಕಚೇರಿಯ ಮುಂದೆ ಧರಣಿ ನಡೆಸಿತ್ತು ಮತ್ತು ನೊಂದವರ ಮೂಲಕ ಹಲವಾರು ಪೊಲೀಸ್ ದೂರುಗಳನ್ನು ದಾಖಲಿಸಿದೆ. ಆದರೂ ಇಲ್ಲಿಯವರೆಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಈ ಮುಡಾ ಹಗರಣವು ವ್ಯಾಪಕ ಮಾಧ್ಯಮಗಳ ಗಮನವನ್ನು ಸೆಳೆಯುತ್ತಿದ್ದಂತೆ, ನಮ್ಮ ಕರ್ನಾಟಕ ಸರ್ಕಾರವು ಮುಡಾದಿಂದ ನಿವೇಶನ ಹಂಚಿಕೆಯಲ್ಲಿನ ಅಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

ಅದು, ತನಿಖೆಯನ್ನು ಘೋಷಿಸುವಾಗ ಸರ್ಕಾರವು ಅಪ್ರಾಮಾಣಿಕ ಮುಡಾ ಆಯುಕ್ತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದೆ ಸರಳವಾಗಿ ವರ್ಗಾವಣೆ ಮಾಡಿದೆ. ಈ ಹಗರಣದಲ್ಲಿ ಕರ್ನಾಟಕ ಸರ್ಕಾರದ ಆಡಳಿತ ಪಕ್ಷದ ನಾಯಕರು ಮತ್ತು ವಿರೋಧ ಪಕ್ಷದ ನಾಯಕರ ಬಗ್ಗೆ ಅನುಮಾನಗಳಿವೆ ಮತ್ತು ಹಲವಾರು ರಾಜಕೀಯ ನಾಯಕರು ಮತ್ತು ಪ್ರಭಾವಿತ ಉದ್ಯಮಿ ಈ ಹಗರಣದ ಫಲಾನುಭವಿಯಾಗಿರುವ ಬಲವಾದ ಸೂಚನೆಗಳಿವೆ.

ಹಾಗಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ನಿವೇಶನ ಹಂಚಿಕೆಯಲ್ಲಿ ನಡೆದಿರುವ ಆರೋಪದ ಅಕ್ರಮಗಳ ಕುರಿತು ಹೈಕೋರ್ಟ್ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕಬ್ಬು ಬೆಳಗಾರರ ಸಂಘ ಮನವಿ ಮಾಡುತ್ತಿದೆ.

Tags:    

Similar News