Mysore MUDA Scam | ಮುಡಾದಿಂದ ದಾಖಲೆ ಕೋರಿದ ಇಡಿ
ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಿ ಎಂ ಮಲ್ಲಿಕಾರ್ಜುನಸ್ವಾಮಿ ಮತ್ತು ಜಮೀನು ಮಾಲೀಕ ಜೆ ದೇವರಾಜು ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಆಧಾರದ ಮೇಲೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ಜಾರಿ ನಿರ್ದೇಶನಾಲಯ (ಇಡಿ) ಮುಡಾಕ್ಕೆ ಸೂಚಿಸಿದೆ.
ಮೈಸೂರಿನ ಲೋಕಾಯುಕ್ತ ಪೊಲೀಸರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣದ ತನಿಖೆ ನಡೆಸುತ್ತಿರುವಾಗಲೇ ಜಾರಿ ನಿರ್ದೇಶನಾಲಯ (ಇಡಿ) ಮುಡಾ ಅಧಿಕಾರಿಗಳಿಂದ ದಾಖಲೆಗಳನ್ನು ಕೇಳಿದೆ.
ಇಡಿ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿಎಂ ಪಾರ್ವತಿ ಅವರಿಗೆ ಮುಡಾದಿಂದ 14 ನಿವೇಶನಗಳನ್ನು ಹಂಚಿಕೆ ಮಾಡಿರುವ ಬಗ್ಗೆ ದಾಖಲೆಗಳನ್ನು ಕೇಳಿದ್ದಾರೆ. ಆದರೆ, ನಿವೇಶನಗಳನ್ನು ಮುಡಾಕ್ಕೆ ಹಿಂತಿರುಗಿಸಲಾಗಿದ್ದು, ಅಕ್ಟೋಬರ್ 3 ರಂದು ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಹಾಗೂ ಪಾರ್ವತಿ ಅವರ ಸಹೋದರ ಬಿ ಎಂ ಮಲ್ಲಿಕಾರ್ಜುನಸ್ವಾಮಿ ಮತ್ತು ಜಮೀನು ಮಾಲೀಕ ಜೆ ದೇವರಾಜು ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಆಧಾರದ ಮೇಲೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ಇಡಿ ಮುಡಾಕ್ಕೆ ಸೂಚಿಸಿದೆ.
ಮೈಸೂರು ತಾಲೂಕಿನ ಕೆಸರೆಯಲ್ಲಿ (ಸರ್ವೆ ಸಂಖ್ಯೆ 464) 3.16 ಎಕರೆ ಜಮೀನನ್ನು ಮಲ್ಲಿಕಾರ್ಜುನಸ್ವಾಮಿ ಅವರು ಪಾರ್ವತಿಗೆ ಉಡುಗೊರೆಯಾಗಿ ನೀಡಿದ್ದರು. ಮುಡಾ ಕಾನೂನು ಪ್ರಕಾರ ಸ್ವಾಧೀನ ಪ್ರಕ್ರಿಯೆ ನಡೆಸದೇ ನೇರವಾಗಿ ಭೂಮಿ ಅಭಿವೃದ್ಧಿ ಪಡಿಸಿದ ಕೆಸರೆ ಜಮೀನಿಗೆ ಪಾರ್ವತಿ ಅವರು ಪರ್ಯಾಯ ಜಮೀನು ನೀಡುವಂತೆ ಕೋರಿದ್ದರು. ಹೀಗಾಗಿ ವಿಜಯನಗರದ ಮೂರು ಮತ್ತು ನಾಲ್ಕನೇ ಹಂತದಲ್ಲಿ ಅವರಿಗೆ 14 ನಿವೇಶನ ಹಂಚಿಕೆ ಮಾಡಲಾಗಿತ್ತು.
ಈ ಬಗ್ಗೆ ಚುನಾಯಿತ ಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯ ಬೆಂಗಳೂರಿನ ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 25 ರಂದು ನೀಡಿದ ಆದೇಶದ ಆಧಾರದ ಮೇಲೆ, ಮೈಸೂರು ಮೂಲದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ ಅರ್ಜಿಯ ಆಧರಿಸಿ ಸೆಪ್ಟೆಂಬರ್ 27 ರಂದು ದಾಖಲಾಗಿರುವ ಎಫ್‌ಐಆರ್ ಕುರಿತು ಲೋಕಾಯುಕ್ತ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇಡಿ, ಎನ್‌ಫೋರ್ಸ್‌ಮೆಂಟ್ ಕೇಸ್ ಮಾಹಿತಿ ವರದಿ (ಇಸಿಐಆರ್) ದಾಖಲಿಸಿದೆ.
ಲೋಕಾಯುಕ್ತ ಪೊಲೀಸರು ತನಿಖೆಗಾಗಿ ಸೆಪ್ಟೆಂಬರ್ 28 ರಂದು ನಾಲ್ಕು ವಿಶೇಷ ತಂಡ ರಚಿಸಿದ್ದಾರೆ. ಅರ್ಜಿದಾರರ ಸಮ್ಮುಖದಲ್ಲಿ ಕೆಸರೆಯಲ್ಲಿ ಪಾರ್ವತಿ ಮೂಲ ಭೂಮಿ ಮತ್ತು ವಿಜಯನಗರದ 14 ಪರ್ಯಾಯ ನಿವೇಶನಗಳ ಪರಿಶೀಲನೆ ನಡೆಸಿದ್ದಾರೆ. ಪಾರ್ವತಿ ಅವರು 14 ನಿವೇಶನಗಳನ್ನು ಹಿಂಪಡೆಯುವಂತೆ ಮುಡಾ ಆಯುಕ್ತರಿಗೆ ಮನವಿ ಮಾಡಿದ್ದರು. ಮುಡಾ ಆಯುಕ್ತರು, ಸಿದ್ದರಾಮಯ್ಯ ಪುತ್ರ, ಎಂಎಲ್‌ಸಿ ಡಾ.ಯತೀಂದ್ರ ಅವರ ಮೂಲಕ ಪತ್ರ ಸ್ವೀಕರಿಸಿ, ನಿವೇಶನಗಳನ್ನು ವಾಪಸ್ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದಾರೆ.