ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜೆ.ಪಿ. ನಗರದ ಬಿಲ್ಡರ್ ಎನ್. ಮಂಜುನಾಥ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಇಡಿ ಅಧಿಕಾರಿಗಳು ಬಿಲ್ಡರ್ ನಿವಾಸದಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಹಗರಣ ಸಂಬಂಧ ಇಡಿ ಅಧಿಕಾರಿಗಳು ಬೆಂಗಳೂರು ಮತ್ತು ಮೈಸೂರಿನ 7-8 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಇಡಿ ಅಧಿಕಾರಿಗಳು ಅ.18 ಮುಡಾ ಕಚೇರಿ ಸೇರಿದಂತೆ ಮೈಸೂರಿನ ಇತರ ಕೆಲವು ಸ್ಥಳಗಳ ಮೇಲೆ ದಾಳಿ ಮಾಡಿದ್ದರು. ದಾಳಿ ಬಳಿಕ, ಇಡಿ ಅಧಿಕಾರಿಗಳು ಮುಡಾದ ಆರು ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಸಂಗ್ರಹಿಸಿದ್ದರು. ಅಧಿಕಾರಿಗಳು ಕಳೆದ ವಾರ ಬೆಂಗಳೂರಿನ ಇಡಿ ಕಚೇರಿಯಲ್ಲಿ ಮುಡಾದ ಕೆಲವು ಕೆಳಹಂತದ ಅಧಿಕಾರಿಗಳನ್ನು ವಿಚಾರಣೆ ನಡೆಸಿದ್ದರು.
ಗಂಗರಾಜುಗೆ ನೋಟಿಸ್
ಇಡಿ ಅಧಿಕಾರಿಗಳು ಆರ್ಟಿಐ ಕಾರ್ಯಕರ್ತ ಗಂಗರಾಜು ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. ಅದರಂತೆ ಆರ್ಟಿಐ ಕಾರ್ಯಕರ್ತ ಗಂಗರಾಜು ಇಂದು (ಅ.28) ಬೆಂಗಳೂರು ಇಡಿ ಕಚೇರಿಗೆ ತೆರಳಿದ್ದು, ವಿಚಾರಣೆಗೆ ಹಾಜರಾಗಿದ್ದಾರೆ.
ಇಡಿ ಕೇಳುವ ಎಲ್ಲ ದಾಖಲೆ ಕೊಡುವೆ
ಇಡಿ ಅಧಿಕಾರಿಗಳಿಂದ ನೋಟಿಸ್ ಜಾರಿ ವಿಚಾರವಾಗಿ ನಗರದಲ್ಲಿ ಟಿವಿ9 ಜೊತೆಗೆ ಗಂಗರಾಜು ಮಾತನಾಡಿದ್ದು, ಇಡಿ ನನಗೆ ಸಮನ್ಸ್ ನೀಡಿದ್ದಾರೆ. ಆದರೆ ಯಾವ ಪ್ರಕರಣ ಗೊತ್ತಿಲ್ಲ. ನಾನು ಸಾಕಷ್ಟು ವಿಚಾರವಾಗಿ ಹೋರಾಟ ಮಾಡಿದ್ದೇನೆ. ಮುಡಾದಲ್ಲಿ ಹಲವಾರು ದಾಖಲೆ ನಾಪತ್ತೆಯಾಗಿವೆ. ಇಡಿ ಕೇಳುವ ಎಲ್ಲಾ ದಾಖಲೆ ಕೊಡಲು ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದರು.