Mysore MUDA Scam | ಪ್ರತಿಪಕ್ಷಗಳಿಗೆ ದಾಖಲೆಸಹಿತ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ

ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಉದ್ದೇಶದಿಂದ ಪ್ರತಿಪಕ್ಷಗಳು ವಿಧಾನಮಂಡಲ ಅಧಿವೇಶನವನ್ನು ದುರುಪಯೋಗಪಡಿಸಿಕೊಂಡಿವೆ ವಿನಃ ರಾಜ್ಯದ ಸಮಸ್ಯೆಗಳ ಬಗ್ಗೆ ಚಕಾರವೆತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂಗಾರು ಅಧಿವೇಶನವನ್ನು ಕೇವಲ ಹಗರಣಗಳ ಚರ್ಚೆಗೇ ಸೀಮಿತಗೊಳಿಸಿದ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

Update: 2024-07-26 08:06 GMT

ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಉದ್ದೇಶದಿಂದ ಪ್ರತಿಪಕ್ಷಗಳು ವಿಧಾನಮಂಡಲ ಅಧಿವೇಶನವನ್ನು ದುರುಪಯೋಗಪಡಿಸಿಕೊಂಡಿವೆ ವಿನಃ ರಾಜ್ಯದ ಸಮಸ್ಯೆಗಳ ಬಗ್ಗೆ ಚಕಾರವೆತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂಗಾರು ಅಧಿವೇಶನವನ್ನು ಕೇವಲ ಹಗರಣಗಳ ಚರ್ಚೆಗೇ ಸೀಮಿತಗೊಳಿಸಿದ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಶುಕ್ರವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿರುವುದು ಮತ್ತು ಎರಡನೇ ಬಾರಿ ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವುದನ್ನು ಅವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿಯೇ ಮುಖ್ಯಮಂತ್ರಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಉದ್ದೇಶದಿಂದಲೇ ಈಗಾಗಲೇ ತನಿಖೆ ನಡೆಯುತ್ತಿರುವ ಪ್ರಕರಣಗಳನ್ನು ಎತ್ತಿಕೊಂಡು ಸದನದಲ್ಲಿ ಗದ್ದಲ ಮಾಡಿ ಸಮಯ ವ್ಯರ್ಥ ಮಾಡಿದರು ಎಂದು ಆರೋಪಿಸಿದರು.

ಬಿಜೆಪಿ, ಜೆಡಿಎಸ್ ಹತಾಶರಾಗಿದ್ದಾರೆ. ನಾವು 135 ಸ್ಥಾನ ಗೆದ್ದ ಬಳಿಕ ರಾಜಕೀಯ ಪ್ರೇರಿತವಾದ ಹೇಳಿಕೆಗಳನ್ನು ಕೊಡ್ತಾರೆ. ಎರಡು ವಾರ ನಾವು ಅಧಿವೇಶನ ನಡೆಸಿದೆವು. ರಾಜ್ಯದ ಪ್ರವಾಹ ಪರಿಸ್ಥಿತಿಯ ಬಗ್ಗೆಯಾಗಲೀ, ಇತರೆ ಜ್ವಲಂತ ಸಮಸ್ಯೆಗಳ ಬಗ್ಗೆಯಾಗಲೀ ಪ್ರತಿಪಕ್ಷಗಳ ಶಾಸಕರು ಚಕಾರವೆತ್ತಲಿಲ್ಲ. ರಾಜ್ಯದ ಪ್ರವಾಹ ಪರಿಸ್ಥಿತಿಯ ಕುರಿತು ಆಡಳಿತ ಪಕ್ಷದ ಸದಸ್ಯರೇ ಸದನದಲ್ಲಿ ದನಿ ಎತ್ತಿದರೇ ವಿನಃ ಪ್ರತಿಪಕ್ಷಗಳಲ್ಲ, ಅವರು ಎರಡು ವಾರವೂ ಕೇವಲ ವಾಲ್ಮೀಕಿ ನಿಗಮದ ವಿಚಾರವೊಂದನ್ನೇ ಪ್ರಸ್ತಾಪ ಮಾಡಿ ಸಮಯ ಪೋಲು ಮಾಡಿದರು ಎಂದರು.

ಇದನ್ನೆಲ್ಲಾ ನೋಡಿದಾಗ ಮುಖ್ಯಮಂತ್ರಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಅಧಿವೇಶನವನ್ನು ದುರುಪಯೋಗ ಪಡಿಸಿಕೊಳ್ಳುವುದು ಬಿಟ್ಟರೆ ಬೇರೆ ಜನಪರವಾದ ಉದ್ದೇಶ ವಿರೋಧ ಪಕ್ಷಗಳಿಗೆ ಇರಲಿಲ್ಲ ಎನ್ನುವುದು ಸ್ಪಷ್ಟವಾಗಿದೆ. ನಾನು ಮಂತ್ರಿಯಾಗಿ 40 ವರ್ಷ ಆಯ್ತು. ಇವತ್ತಿನವರೆಗೆ ನನ್ನ ಮೇಲೆ ಸಣ್ಣ ಕಪ್ಪುಚುಕ್ಕೆ ಇಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ ಎಂದು ಸಿಎಂ ಹೇಳಿದರು.

ಜನರ ವಿಶ್ವಾಸ ಕಳೆದುಕೊಂಡಿರುವ ಬಿಜೆಪಿ-ಜೆಡಿಎಸ್ ಲೋಕಸಭಾ ಚುನಾವಣೆಯಲ್ಲೂ ಹಿಂದಿನ ಬಾರಿಗಿಂತ ಹೆಚ್ಚು ಸೀಟು, ಮತ ಗಳಿಸಲು ಸಾದ್ಯವಾಗಲಿಲ್ಲ. ನಮಗೆ ಕಳೆದ ಲೋಕಸಭಾ ಚುನಾವಣೆಗಿಂತ ಶೇ.13 ರಷ್ಟು ಹೆಚ್ಚುವರಿ ಮತಗಳು ಈ ಚುನಾವಣೆಯಲ್ಲಿ ಬಂದಿವೆ. ಇದರಿಂದ ಹತಾಶರಾಗಿ ಮತ್ತೆ ಜನರ ವಿಶ್ವಾಸ ಗಳಿಸಲು ಅವರು ವಾಮ ಮಾರ್ಗ ಹಿಡಿದಿದ್ದಾರೆ ಎಂದ ಸಿದ್ದರಾಮಯ್ಯ, ಯಾವುದೇ ಅಧಿಕೃತ ದಾಖಲೆಗಳಿಲ್ಲದೆ-ಅರೆ ಬರೆ ಪತ್ರಗಳನ್ನು ತೋರಿಸಿ ರಾಜ್ಯದ ಜನರ ಮುಂದೆ ಬಿಜೆಪಿ-ಜೆಡಿಎಸ್ ನಡೆಸಿದ ಜಂಟಿ ಡ್ರಾಮಾಗಳಿಗೆ ಅಧಿಕೃತ ದಾಖಲೆಗಳನ್ನು ಮುಂದಿಟ್ಟು ತಿರುಗೇಟು ನೀಡಿದರು.

ಪ್ರತಿಪಕ್ಷಗಳು ಮೈಸೂರು ಮುಡಾ ಹಗರಣದ ವಿಷಯದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಮಾಡಿರುವ ಆರೋಪಗಳಿಗೆ ಸಿಎಂ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಒಂದೊಂದಾಗಿ ವಿವರ ನೀಡಿದರು. ಅವರು ನೀಡಿದ ವಿವರ ಮತ್ತು ಪ್ರತಿಪಕ್ಷಗಳ ಆರೋಪಗಳ ಮಾಹಿತಿ ಇಲ್ಲಿದೆ;

• ನಿಂಗ ಬಿನ್ ಜವರ ಇವರ ವಾರಸುದಾರ ಪುತ್ರರಲ್ಲೊಬ್ಬರಿಂದ ಬಿ.ಎಂ ಮಲ್ಲಿಕಾರ್ಜುನ್ ಭೂಮಿ ಖರೀದಿ ಮಾಡಿದ್ದು, ಈ ಕ್ರಯಕ್ಕೆ ಪಿ.ಟಿ.ಸಿ.ಎಲ್. ಕಾಯ್ದೆ ಅನ್ವಯಿಸುವುದಿಲ್ಲವೆ? ಎಂಬುದು ಪ್ರತಿಪಕ್ಷಗಳ ಪ್ರಶ್ನೆ.

ಸಿಎಂ ಪ್ರತಿಕ್ರಿಯೆ: 2-8-1935 ರಲ್ಲಿ ಜವರನ ಮಗ ನಿಂಗ ಎನ್ನುವವರು ಮೈಸೂರು ತಾಲ್ಲೂಕು ಕಚೇರಿಗೆ ಜಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಆಗಿನ ಕೆಳ ಹಂತದ ಅಧಿಕಾರಿಗಳು 15-8-1935 ರಂದು ನಿಂಗ ಅವರು ಕೇಳಿರುವ ಜಮೀನುಗಳನ್ನು ಹರಾಜಿನ ಮೂಲಕ ವಿಲೇಪಡಿಸಬೇಕೆಂದು ವರದಿ ಸಲ್ಲಿಸಿದ್ದಾರೆ. ಅದರ ಪ್ರಕಾರ ಹರಾಜು ನಡೆಸಲು ಕ್ರಮವಹಿಸಿದ್ದಾರೆ. 26-9-1935 ರಂದು ಹರಾಜು ನೋಟೀಸು ಹೊರಡಿಸಿದ್ದಾರೆ. 3-10-1935 ರಂದು ಹರಾಜು ನಡೆಸಲಾಗುವುದೆಂದು ನೋಟೀಸಿನಲ್ಲಿ ತಿಳಿಸಿದ್ದಾರೆ. ಅದರ ಪ್ರಕಾರ ಹರಾಜು ನಡೆಸಲಾಗಿದೆ. ಹರಾಜು ನಡೆಸಿದ ಮೇಲೆ ಈ ರೀತಿ ದಾಖಲು ಮಾಡಿದ್ದಾರೆ. “ಕೆಸರೆ ಗ್ರಾಮದ ಸ. ನಂ 464 ರ 3.16 [ಜಮೀನು] 3 ರೂಪಾಯಿ 8 ಆಣೆ ಉಳ್ಳ ಜಮೀನು ತಾಲ್ಕು ------ ರಿಂದ 27-9-35 ನೇ ----- ಎಡಿ 12 ನೇ ಮೈಸೂರು ಹುಕುಂ ಮೇರೆ ಬೀಳು ------ ಹರಾಜು ಮಾಡಿಸಲಾಯ್ತು. 3 ರೂಪಾಯಿ ಹರಾಜು. 1 ರೂಪಾಯಿ ನಿಂಗ ಬಿನ್ ಜವರ, ಇದರ ಮೇಲೆ ಯಾರೂ ಸವಾಲು ಮಾಡಲಿಲ್ಲವಾಗಿ ಹರಾಜು ಅಖೈರು ಮಾಡಲಾಯ್ತು”ಎಂದು ದಾಖಲಿಸಲಾಗಿದೆ. 13-10-1935 ರಂದು ‘Sale is confirmed” ಎಂದು ನಮೂದಿಸಿದ್ದಾರೆ.

ಜಮೀನುಗಳನ್ನು ಹರಾಜಿನ ಮೂಲಕ ಪಡೆದಿರುವುದರಿಂದ ಸ್ವಯಾರ್ಜಿತ ಜಮೀನಾಗುತ್ತದೆಯೆ ಹೊರತು; ಈ ಜಮೀನುಗಳ ಮೇಲೆ ಸರ್ಕಾರದ ಯಾವುದೇ ಹಿತಾಸಕ್ತಿ ಇರುವುದಿಲ್ಲ. ಹಾಗಾಗಿ ಈ ಜಮೀನು ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ. ಈ ಕುರಿತು ಕಾಯ್ದೆಯು ಸ್ಪಷ್ಟವಾಗಿ ಹೇಳುತ್ತದೆ. ಅಸಂಖ್ಯಾತ ತೀರ್ಪುಗಳೂ ಇವೆ.

• ಖರೀದಿ ಮಾಡಲು ಅವರು ಸರ್ಕಾರದಿಂದ ಅನುಮತಿ ಪಡೆದಿದ್ದರೆ? ಎಂದು ಪ್ರತಿಪಕ್ಷಗಳು ಕೇಳಿವೆ

ಸಿಎಂ ಪ್ರತಿಕ್ರಿಯೆ: ಪಿಟಿಸಿಎಲ್ ಜಮೀನುಗಳು ಅಲ್ಲದ ಕಾರಣ ಸರ್ಕಾರದ ಅನುಮತಿ ಅಗತ್ಯವೂ ಇಲ್ಲ ಎಂಬುದು ಕಾನೂನಿನ ಜ್ಞಾನವಿರುವ ಪ್ರತಿಯೊಬ್ಬರಿಗೂ ತಿಳಿದಿರುತ್ತದೆ. ಆದರೆ ಬಿಜೆಪಿ, ಜೆಡಿಎಸ್ ನವರು ಮಾತ್ರ ಇದನ್ನು ರಾಜಕಾರಣಕ್ಕೆ ಬಳಸುತ್ತಿದ್ದಾರೆ.

• ಈ ಜಮೀನು ಖರೀದಿ ಮಾಡುವಾಗ ವಾರಸುದಾರರನ್ನು ಈ ಭೂ ಕ್ರಯದಿಂದ ಏಕೆ ಹೊರಗಿಡಲಾಗಿತ್ತು? ಈ ಕ್ರಯವನ್ನು ಕಾನೂನಿನ ಪ್ರಕಾರ ಮಾಡಲಾಗಿದೆಯೇ? ಎಂಬ ಪ್ರಶ್ನೆಯನ್ನು ಬಿಜೆಪಿ ಎತ್ತಿದೆ.

ಸಿಎಂ ಪ್ರತಿಕ್ರಿಯೆ: 10-4-1993 ರಲ್ಲಿ ಒಂದು ವಂಶವೃಕ್ಷ ಮಾಡಿಸಿದ್ದಾರೆ. ಅದರ ಪ್ರಕಾರ ನಿಂಗ ಬಿನ್ ಜವರ ಅವರಿಗೆ ಮೂರು ಜನ ಮಕ್ಕಳು. ಮೊದಲನೆಯ ಮಲ್ಲಯ್ಯ, ಎರಡನೆಯ ಮೈಲಾರಯ್ಯ ಮತ್ತು ಮೂರನೆಯ ಜೆ. ದೇವರಾಜು. ವಂಶವೃಕ್ಷದ ಪ್ರಕಾರ ಮಲ್ಲಯ್ಯ ಎನ್ನುವವರಿಗೆ ವಾರಸುದಾರರನ್ನು ತೋರಿಸಿಲ್ಲ. ಎರಡನೆಯ ಮೈಲಾರಯ್ಯ ಅವರಿಗೆ ಮಂಜುನಾಥ ಸ್ವಾಮಿ ಎಂ ಎನ್ನುವವರಿದ್ದಾರೆ. ಆಗ ಅವರಿಗೆ 29 ವರ್ಷ ಎಂದು ನಮೂದಿಸಲಾಗಿದೆ. ಮೂರನೆಯವರು ದೇವರಾಜು ಎನ್ನುವವರು. [ಈ ದೇವರಾಜು ಎನ್ನುವವರೆ ಮಲ್ಲಿಕಾರ್ಜುನಸ್ವಾಮಿಯವರಿಗೆ ಜಮೀನು ಮಾರಾಟ ಮಾಡಿರುವುದು]. ಈ ವಂಶವೃಕ್ಷದಲ್ಲಿ ಮಲ್ಲಯ್ಯ, ದೇವರಾಜು, ಮೈಲಾರಯ್ಯನವರ ಪತ್ನಿ ಪುಟ್ಟಗೌರಮ್ಮ, ಎಂ ಮಂಜುನಾಥಸ್ವಾಮಿ ಇವರುಗಳು ಸಹಿ ಮಾಡಿದ್ದಾರೆ.

ಜೆ ದೇವರಾಜು ಎನ್ನುವವರ ಹೆಸರಿಗೆ ಖಾತೆ ಮಾಡಿಕೊಡಲು ಈ ಮೇಲಿನ ಎಲ್ಲರೂ ಸಹಿ ಮಾಡಿ ಹೇಳಿಕೆ ಕೊಟ್ಟಿದ್ದಾರೆ. ಹೇಳಿಕೆಯಲ್ಲಿ ಹೀಗೆ ಬರೆಯಲಾಗಿದೆ; “ಮೈಸೂರು ತಾಲ್ಲೂಕು ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರ ರೂಬು ರೂಬು. ಡಿಟೊ ಮೈಸೂರು ಸಿಟಿ ಗಾಂಧಿನಗರ 8 ನೇ ಕ್ರಾಸ್, ಮನೆ ನಂ 4038 ರ ನಿವಾಸಿಗಳಾದ ಲೇಟ್ ನಿಂಗಯ್ಯ ಬಿನ್ ಜವರ ರವರ ಮೊದಲನೆ ಮಗ ಮಲ್ಲಯ್ಯ ಮತ್ತು ಲೇಟ್ ಮೈಲಾರಯ್ಯನವರ ಹೆಂಡತಿ ಪುಟ್ಟಗೌರಮ್ಮ ಹಾಗೂ ಮಗ ಎಂ. ಮಂಜುನಾಥ ಸ್ವಾಮಿ ಆದ ನಾವುಗಳು ಹೇಳಿ ಬರೆಸಿದ ಹೇಳಿಕೆ.

ಅದಾಗಿ ಮೈಸೂರು ತಾಲ್ಲೂಕು ಕಸಬಾ ಹೋಬಳಿ ಕೆಸರೆ ಗ್ರಾಮದ ಸರ್ವೆ ನಂ. 464ರ 3-16 ಜಮೀನುಗಳಿಗೆ ಖಾತೆ ಮಾಡಿಕೊಡಲು ಲೇಟ್ ನಿಂಗ ಬಿನ್ ಜವರ ಅವರ ಮೂರನೆ ಮಗ ಜೆ.ದೇವರಾಜು ನಮೂನೆ 19 ರ ಮೂಲಕ ಅರ್ಜಿ ಸಲ್ಲಿಸಿರುವುದು ಸರಿಯಷ್ಟೆ. ಸದರಿ ಜಮೀನು ನಿಂಗ ಬಿನ್ ಜವರರವರಿಗೆ ಸೇರಿದ್ದು ಅವರು ಪೌತಿಯಾಗಿ ನಮ್ಮಗಳಿಗೆ ಸದರಿ ಜಮೀನಿನಲ್ಲಿ ಭಾಗ ಬರಬೇಕಾಗಿರುವುದಿಲ್ಲ. ಈಗಾಗಲೇ ನಾವು 462 ರಲ್ಲಿ 4 ಎಕರೆ ಜಮೀನನ್ನು ಪುಟ್ಟಮ್ಮ ಎನ್ನುವವರಿಗೆ ಮಾರಿರುತ್ತೇವೆ. ಆದ್ದರಿಂದ ಅರ್ಜಿದಾರರಾದ ಜೆ. ದೇವರಾಜುರವರಿಗೆ ಸದರಿ ಜಮೀನುಗಳನ್ನು ಖಾತೆ ಮಾಡುವುದರಲ್ಲಿ ನಮ್ಮಗಳ ತಕರಾರು ಏನೂ ಇರುವುದಿಲ್ಲವೆಂದು ಹೇಳಿ ಬರೆಯಿಸಿದ ಹೇಳಿಕೆ. ಓದಿಸಿ ಕೇಳಿ ಸರಿ ಎಂದು ಒಪ್ಪಿ ರುಜು ಮಾಡಿರುತ್ತೇವೆ. ಮಲ್ಲಯ್ಯ, ಪುಟ್ಟಗೌರಮ್ಮ ಇಬ್ಬರೂ ಕನ್ನಡದಲ್ಲಿ ಸಹಿ ಮಾಡಿರುತ್ತಾರೆ. ಎಂ.ಮಂಜುನಾಥಸ್ವಾಮಿ ಇಂಗ್ಲಿಷಿನಲ್ಲಿ ಸಹಿ ಮಾಡಿರುತ್ತಾರೆ. ಇದರ ಆಧಾರದ ಮೇಲೆ ಜೆ.ದೇವರಾಜು ಅವರ ಹೆಸರಿಗೆ ಈ ಜಮೀನು ವರ್ಗಾವಣೆಯಾಗಿದೆ.

ಹಾಗಾಗಿ ಕ್ರಯದಾರರ ವಾಸರಸುದಾರರ ಒಪ್ಪಿಗೆ ಇಲ್ಲದೆ ಖರೀದಿ ನಡೆದಿದೆ ಎಂಬ ಬಿ.ಜೆ.ಪಿ. ಯವರ ಆರೋಪ ಸುಳ್ಳು. ಈ ಎಲ್ಲ ವ್ಯವಹಾರಗಳು 2010 ಕ್ಕಿಂತ ಮುಂಚೆ ನಡೆದಿವೆ. ಇವು ನನಗೆ ಸಂಬಂಧಪಟ್ಟಿದ್ದಲ್ಲ. ಆದರೂ ಸಹ ಬಿಜೆಪಿಯವರು ಈ ಸಣ್ಣ ವಿಚಾರವನ್ನು ರಾಜಕಾರಣಕ್ಕೆ ಬಳಸುತ್ತಿರುವ ಕಾರಣ ಈ ವಿಚಾರಗಳನ್ನು ಪ್ರಸ್ತಾಪಿಸಬೇಕಾಗಿದೆ.

• ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಮುಡಾದಿಂದ ಅಭಿವೃದ್ಧಿ ಹೊಂದಿದ ಜಾಗಗಳು ಎಷ್ಟು ಇವೆ? ಅಂತಹ ಡಿ-ನೋಟಿಫಿಕೇಶನ್ ಪ್ರಸ್ತಾವನೆಗಳಿಗೆ ಸರ್ಕಾರದ ಅನುಮತಿ ಪಡೆಯಲಾಗಿತ್ತೆ?

ಸಿಎಂ ಪ್ರತಿಕ್ರಿಯೆ: ಅದಕ್ಕೂ ಮೊದಲು ಪ್ಯಾರಾ ನಂ.6 ರಲ್ಲಿ ಬಿ.ಜೆಪಿ ಯವರು ಗೌರವಾನ್ವಿತ ರಾಜ್ಯಪಾಲರಿಗೆ ನೀಡಿರುವ ಮನವಿ/ ದೂರಿನಲ್ಲಿ ಸದರಿ ಜಮೀನುಗಳನ್ನು ಡಿ-ನೋಟಿಫಿಕೇಶನ್ ಮಾಡಲು ಮುಡಾದಿಂದ ಪ್ರಸ್ತಾವನೆ ಬಂದಿರಲಿಲ್ಲ, ಅರ್ಜಿದಾರರು ಅರ್ಜಿಯೂ ಕೊಟ್ಟಿರಲಿಲ್ಲ, ಆದರೂ ಡಿ.ನೋಟಿಫಿಕೇಶನ್ ನಡೆದಿದೆ ಎಂದು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ.

ದಾಖಲೆಗಳನ್ನು ಪರಿಶೀಲಿಸಿದಾಗ ಕಂಡು ಬಂದ ಸತ್ಯಾಂಶಗಳು:

ಬಿಜೆಪಿ ಯವರು ಸಂಪೂರ್ಣವಾಗಿ ತಪ್ಪು ಮಾಹಿತಿಯನ್ನು ಗೌರವಾನ್ವಿತ ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸದರಿ ಜಮೀನುಗಳನ್ನು ಭೂಸ್ವಾಧೀನ ಮಾಡಲು 18-09-1992ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದಾರೆ. ಆದರೆ, ಅದು ಬಹಳ ವರ್ಷಗಳಾದರೂ ಇತ್ಯರ್ಥವಾಗಿರುವುದು ಕಂಡುಬರುವುದಿಲ್ಲ. ಆಗ, ಜಿ.ದೇವರಾಜು, ನಂ.3406, 4ನೇ ಮುಖ್ಯ ರಸ್ತೆ, ಲಷ್ಕರ್ ಮೊಹಲ್ಲಾ ಉರ್ದು ನಗರ, ಮೈಸೂರು ರಸ್ತೆ ಇವರು 13-08-1996 ರಂದು ತಮ್ಮ ಜಮೀನುಗಳನ್ನು ಭೂಸ್ವಾಧೀನದಿಂದ ಕೈಬಿಡುವಂತೆ ಅರ್ಜಿ ಬರೆದಿದ್ದಾರೆ.

ಈ ಜಮೀನುಗಳ ಅಂತಿಮ ಅಧಿಸೂಚನೆಯಾಗಿದ್ದು 20-08-1997 ರಂದು. ಅದಕ್ಕೂ ಮೊದಲೇ ಈ ಅರ್ಜಿ ಬರೆದಿದ್ದಾರೆ. ಅರ್ಜಿಯ ಮೇಲೆ ಅಂದಿನ ನಗರಾಭಿವೃದ್ಧಿ ಸಚಿವರಾಗಿದ್ದ ಬಿ.ಎನ್. ಬಚ್ಚೇಗೌಡ ಇವರು ಮನವಿ ಪರಿಶೀಲಿಸಿ ಸ್ಥಳೀಯ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಅಭಿಪ್ರಾಯದೊಂದಿಗೆ ಮಂಡಿಸಿ ಎಂದು ಕಾರ್ಯದರ್ಶಿಯವರಿಗೆ ಟಿಪ್ಪಣಿ ಬರೆದಿದ್ದಾರೆ. ಅದನ್ನು ಆಧರಿಸಿ, ಒಂದು ತಿಂಗಳಾದ ಮೇಲೆ ಪತ್ರ ಮುಡಾ ಆಯುಕ್ತರಿಗೆ ಹೋಗಿದೆ.

ಮುಡಾದಲ್ಲಿ 24-07-1997 ರಂದು ಈ ಜಾಗ ಭೂಸ್ವಾಧೀನದಿಂದ ಕೈಬಿಡಲು ನಿರ್ಣಯ ಪಾಸ್ ಮಾಡಿದ್ದಾರೆ. 30-08-1997ರಂದು ಸದರಿ ಜಾಗಗಳನ್ನು ಭೂಸ್ವಾಧೀನದಿಂದ ಕೈಬಿಡಲು ಮುಡಾ ಆಯುಕ್ತರು ಸರ್ಕಾರದ ಕಾರ್ಯದರ್ಶಿಗಳಿಗೆ ಶಿಫಾರಸು ಮಾಡಿದ್ದಾರೆ.

ಸದರಿ ಶಿಫಾರಸನ್ನು ಆಧರಿಸಿ, ಭೂ ಸ್ವಾಧೀನ ಮಾಡಿದ ಜಮೀನುಗಳನ್ನು ಡಿ-ನೋಟಿಫೈ ಮಾಡಲು ಆಗಿನ ರೆವಿನ್ಯೂ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ ಬಾಲಸುಬ್ರಮಣ್ಯನ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಇರುವುದು ದಾಖಲೆಗಳಿಂದ ತಿಳಿದು ಬರುತ್ತದೆ. ವಿ.ಗೋವಿಂದರಾಜು ಸೆಕ್ರೆಟರಿ-2, ನಗರಾಭಿವೃದ್ಧಿ ಇಲಾಖೆ ಮತ್ತು ಕೆ.ಎಂ. ತಿಮ್ಮಯ್ಯ, ಕಾನೂನು ಇಲಾಖೆಯ ಅಡಿಶನಲ್ ಸೆಕ್ರೆಟರಿ ಒಳಗೊಂಡ ತ್ರಿಸದಸ್ಯ ಸಮಿತಿಯು ಪರಿಶೀಲಿಸಿ ಡಿ ನೋಟಿಫೈ ಮಾಡಿದೆ.

ಈ 3 ಜನರ ಸಮಿತಿಯು ಬೆಂಗಳೂರಿನಲ್ಲಿ ಬಿಡಿಎಯ ಯಡಿಯೂರು- ನಾಗಸಂದ್ರ, ಮೈಸೂರಿನ ಮುಡಾದ ಕೆಸರೆ ಸೇರಿದಂತೆ ಸುಮಾರು 19 ಕಡೆ ಡಿನೋಟಿಫೈ ಮಾಡಲು ಅನುಮೋದನೆ ಮಾಡಿರುವಂತೆ ಕಾಣುತ್ತಿದೆ. ಈ ಸಮಿತಿಯು ಈ ಭೂಮಿ ಬಡಾವಣೆಯ ಕೊನೆಯಲ್ಲಿದೆ. ̤ಅಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲ. ನಗರ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿಯವರು ಈ ಜಮೀನನಲ್ಲಿ ಯಾವುದೇ ಪ್ಲಾನ್ ಸಿದ್ಧಪಡಿಸಿಲ್ಲ. ಈ ಜಮೀನುಗಳನ್ನು ಡಿ ನೋಟಿಫೈ ಮಾಡುವುದರಿಂದ ಯಾವುದೇ ಸಮಸ್ಯೆಗಳಾಗುವುದಿಲ್ಲ. ಈ ಕುರಿತು ಮುಡಾದಲ್ಲೂ ನಿರ್ಣಯವಾಗಿದೆ ಎಂದು ಹೇಳಿ ಡಿನೋಟಿಫೈ ಮಾಡಲು ತೀರ್ಮಾನಿಸಿದೆ. ಇದರ ಅಧಾರದ ಮೇಲೆ ಈ ಭೂಮಿಯನ್ನು ಡಿನೋಟಿಫೈ ಮಾಡಿರುವುದು ಕಂಡುಬರುತ್ತದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 1984 ರಿಂದ ಒಟ್ಟು 13 ಬಡಾವಣೆಗಳಲ್ಲಿ 235- 30 ಎಕರೆ ಭೂಮಿಯನ್ನು ಭೂ ಸ್ವಾಧೀನದಿಂದ ಕೈ ಬಿಡಲಾಗಿದೆ.

ಇಲ್ಲಿ ಕಾಮನ್ ಸೆನ್ಸ್ ಪ್ರಶ್ನೆಯೊಂದಿದೆ. ದೇವರಾಜು ಎನ್ನುವವರು 13-8-1996 ರಲ್ಲಿ ಅರ್ಜಿ ಕೊಡುತ್ತಾರೆ. ನಗರಾಭಿವೃದ್ಧಿ ಇಲಾಖೆಯವರು 3-9-1996 ರಂದು ಮೂಡಾ ಆಯುಕ್ತರಿಗೆ ಪತ್ರ ಬರೆದು ವರದಿ ಕೇಳುತ್ತಾರೆ. ಅದಾಗಿ 30-8-1997ಕ್ಕೆ ಮೂಡಾದವರು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಕೇವಲ ವರದಿ ನೀಡುವುದಕ್ಕೆ ಒಂದು ವರ್ಷ ತೆಗೆದುಕೊಂಡಿದ್ದಾರೆ. ಅದಾದ ಮೇಲೆ ವಿ.ಬಾಲಸುಬ್ರಮಣ್ಯನ್ ಎಂಬ ನಿಷ್ಠಾವಂತ ಅಧಿಕಾರಿಯ ಅಧ್ಯಕ್ಷತೆಯಲ್ಲಿ ಈ ಜಮೀನುಗಳೂ ಸೇರಿದಂತೆ ರಾಜ್ಯದ ಸುಮಾರು 19 ಕಡೆ ಭೂ ಸ್ವಾಧೀನದಿಂದ ಕೈ ಬಿಡಲು ತೀರ್ಮಾನಿಸಿದ್ದಾರೆ. ಅಂತಿಮವಾಗಿ 18-5-1998 ರಂದು ಭೂ ಸ್ವಾಧೀನದಿಂದ ಕೈ ಬಿಟ್ಟಿದ್ದಾರೆ. ಈಗ ನಿಮ್ಮನ್ನು ಕೇಳಬಯಸುತ್ತೇನೆ; ಮುಖ್ಯಮಂತ್ರಿಯೊ, ಉಪಮುಖ್ಯಮಂತ್ರಿಯೊ ಅಥವಾ ಮಂತ್ರಿಯೊ, ಎಮ್.ಎಲ್.ಎ ಯೊ ಇದ್ದರೆ ಈ ಪ್ರಕ್ರಿಯೆ ಮುಗಿಸಲು ಎರಡು ವರ್ಷ ತೆಗೆದುಕೊಳ್ಳುತ್ತಿದ್ದರೆ?

• ಭೂಮಿಯನ್ನು ಸಂಪೂರ್ಣವಾಗಿ ಸರ್ಕಾರ ಸ್ವಾಧೀನಪಡಿಸಿಕೊಂಡಾಗ ಡಿ-ನೋಟಿಫಿಕೇಶನ್ ಮಾಡಬಹುದೇ? ಅಂತಹ ಅಭಿವೃದ್ಧಿ ಹೊಂದಿದ ಅಥವಾ ಭಾಗಶಃ ಅಭಿವೃದ್ಧಿಪಡಿಸಿದ ಭೂಮಿಯನ್ನು ಮಾರಾಟ ಮಾಡಬಹುದೇ? ಅದನ್ನು ಡಿ-ನೋಟಿಫೈ ಮಾಡಿದಾಗ ಭೂಮಿಯನ್ನು ಯಾರು ಹೊಂದಿದ್ದರು? ಎಂದು ಪ್ರತಿಪಕ್ಷ ಪ್ರಶ್ನಿಸಿವೆ?

ಸಿಎಂ ಪ್ರತಿಕ್ರಿಯೆ: ಯಾವುದೇ ಜಾಗವನ್ನು ಭೂಸ್ವಾಧೀನ ಮಾಡಿ ಭೂಮಿಯ ಪರಿಹಾರ ಪಾವತಿಸಿ ಆ ಭೂಮಿಯ ಸಂಪೂರ್ಣ ಸ್ವಾಧೀನವನ್ನು ತೆಗೆದುಕೊಳ್ಳದ ಹೊರತು ಭೂಸ್ವಾಧೀನ ಪ್ರಕ್ರಿಯೆಯು ಪೂರ್ಣವಾಗುವುದಿಲ್ಲ ಎಂಬ ಕುರಿತು ಅನೇಕ ತೀರ್ಪುಗಳು ಇವೆ ಮತ್ತು ಸರ್ಕಾರದ ಕ್ರಮವೂ ಆಗಿದೆ. ಇಷ್ಟಕ್ಕೂ ಈ ಜಮೀನುಗಳನ್ನು 18-05-1998 ರಲ್ಲಿ ಕೈಬಿಡಲಾಗಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ1984 ರಿಂದ ಒಟ್ಟು 13 ಬಡಾವಣೆಗಳಲ್ಲಿ 235-30 ಎಕರೆ ಭೂಮಿಯನ್ನು ಭೂ ಸ್ವಾಧೀನದಿಂದ ಕೈ ಬಿಡಲಾಗಿದೆ. ಹಾಗಾಗಿ ಭೂ ಸ್ವಾಧೀನದಿಂದ ಭೂಮಿಗಳನ್ನು ಕೈಬಿಟ್ಟಾಗ ಈ ಜಮೀನುಗಳನ್ನು ಮುಡಾ ಪೊಸೆಷನ್ ತೆಗೆದುಕೊಳ್ಳದಿರುವುದು ಕಂಡುಬರುತ್ತದೆ. ಹಾಗಾಗಿ ಬಿಜೆಪಿಯವರು ಎತ್ತಿರುವ ಈ ಪ್ರಶ್ನೆ ಕೂಡ ಅಸಂಗತ ಪ್ರಶ್ನೆಯಾಗಿದೆ.

• ಸರ್ಕಾರದ ಅನುಮತಿಯಿಲ್ಲದೆ 50:50 ಯೋಜನೆ ಹೇಗೆ ಜಾರಿಗೆ ಬಂತು?

ಸಿಎಂ ಪ್ರತಿಕ್ರಿಯೆ: ನಮ್ಮ ಕುಟುಂಬಕ್ಕೆ ಈ ಜಮೀನುಗಳು ಬರುವ ವೇಳೆಗಾಗಲೆ ದಿನಾಂಕ: 15-7-2005 ರಲ್ಲಿ ಭೂ ಪರಿವರ್ತನೆಯಾಗಿವೆ. ಕೃಷಿ ಉದ್ದೇಶದಿಂದ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆಯಾಗಿವೆ.

ಇದಾದ ಮೇಲೆ ದಿನಾಂಕ: 23-6-2014 ರಲ್ಲಿ ಮತ್ತು 25-10-2021ರಲ್ಲಿ ಭೂ ಪರಿಹಾರಕ್ಕೆ ಬದಲಾಗಿ ಪರ್ಯಾಯ ಜಾಗವನ್ನು ಕೊಡಬೇಕೆಂದು ಅರ್ಜಿ ಹಾಕಲಾಗಿದೆ.

ನನ್ನ ಪತ್ನಿ ತನ್ನ ನಿವೇಶನ/ ಜಾಗ ಕೊಡಿ ಎಂದು ಕೇಳಿದ್ದಾರೆ. ನನ್ನ ಜಾಗವನ್ನು ಮುಡಾ ಬಳಸಿಕೊಂಡಿದೆ; ಅದಕ್ಕೆ ಪರ್ಯಾಯ ಜಾಗ ಕೊಡಿ ಎಂದು ಕೇಳಿದ್ದಾರೆ. ಮುಡಾದವರು ಕೊಟ್ಟಿದ್ದಾರೆ.

ಭೂ ಸ್ವಾಧೀನ ಪಡಿಸದೆ ಭೂಮಿಯನ್ನು ಉಪಯೋಗಿಸಿಕೊಂಡ ಪ್ರಕರಣಗಳಲ್ಲಿ ಹಾಗೆ ಉಪಯೋಗಿಸಲಾದ ಭೂಮಿಗೆ ಪರ್ಯಾಯವಾಗಿ ಶೇ. 50:50 ರ ಅನುಪಾತದಲ್ಲಿ ಜಾಗವನ್ನು ಕೊಡಬೇಕೆಂದು ಮುಡಾದವರು 14-9-2020 ರಲ್ಲಿ ನಿರ್ಣಯ ಮಾಡಿದ್ದಾರೆ. ಈ ನಿರ್ಣಯವನ್ನು ಸರ್ಕಾರ ರದ್ದು ಮಾಡಿದೆ.

ಅಷ್ಟಕ್ಕೆ ಸುಮ್ಮನಿರದೆ 7-12-2020 ರಂದು ಮತ್ತೆ ಚರ್ಚೆ ಮಾಡಿ ಇನ್ನೊಂದು ನಿರ್ಣಯ ಮಾಡಿದ್ದಾರೆ. ಆ ಸಭೆಯಲ್ಲಿ ಜಿ. ಟಿ. ದೇವೇಗೌಡ ಅವರು “ಶೇ. 50:50ರ ಅನುಪಾತದಲ್ಲಿ ಒಪ್ಪಿಕೊಳ್ಳುವ ರೈತರಿಗೆ ಅದೇ ರೀತಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲು ಮತ್ತು ಶೇ.50;50 ರ ಅನುಪಾತಕ್ಕೆ ಒಪ್ಪಿಕೊಳ್ಳದ ಹಾಗೂ ಸಹಮತಿ ಸೂಚಿಸದ ಪ್ರಕರಣಗಳಲ್ಲಿ ಪ್ರತ್ಯೇಕ ಸಭೆ ಕರೆಯಲು ಸೂಚಿಸಿದರು” ಎಂದು ದಾಖಲಾಗಿದೆ.

ಮರಿತಿಬ್ಬೇಗೌಡ ಅವರು, “ಶೇ.50:50 ಅನುಪಾತದಲ್ಲಿ ರೈತರನ್ನು ಬಲವಂತಪಡಿಸಲು ಬರುವುದಿಲ್ಲವೆಂದು ಈ ಕಾರಣ ರೈತರ ಕೋರಿಕೆಯನ್ನು ಪರಿಗಣಿಸಬೇಕು, ಭೂ ಸ್ವಾಧೀನಪಡಿಸದೇ ಉಪಯೋಗಿಸಿಕೊಂಡಿರುವ ಸ್ವತ್ತುಗಳಿಗೆ ಅಷ್ಟೇ ವಿಸ್ತೀರ್ಣದ ಸ್ವತ್ತುಗಳನ್ನು ನೀಡುವುದು ಸೂಕ್ತವೆಂದು” ಹೇಳಿದ್ದಾರೆ. ಸಭೆಯಲ್ಲಿ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಂದೇಶ್ ನಾಗರಾಜ್ ಮುಂತಾದವರು ಮಾತನಾಡಿದ್ದಾರೆ.

ಅಂತಿಮವಾಗಿ ಈ ರೀತಿ ನಿರ್ಣಯಿಸಿದ್ದಾರೆ, “ಅಂತಿಮ ಚರ್ಚೆ ನಡೆದು, ಇನ್ನು ಮುಂದೆ ಪ್ರಾಧಿಕಾರ ಭೂ ಸ್ವಧೀನಪಡಿಸದೇ ಉಪಯೋಗಿಸಿಕೊಂಡಿರುವಂತಹ ಪ್ರಕರಣಗಳಲ್ಲಿ ಭೂ ಪರಿಹಾರ ರೂಪದಲ್ಲಿ ಪರಿಹಾರವಾಗಿ ಅಭಿವೃದ್ಧಿ ಪಡಿಸಿದ ಒಟ್ಟು ವಿಸ್ತೀರ್ಣದ ಪೈಕಿ ಶೇ.50 ವಿಸ್ತೀರ್ಣದ ಅಭಿವೃದ್ಧಿ ಪಡಿಸಿದ ಜಾಗವನ್ನು ಒಪ್ಪುವ ಪ್ರಕರಣಗಳಲ್ಲಿ ನೀಡಬಹುದೆಂದು” ನಿರ್ಣಯಿಸಲಾಗಿದೆ.

ಇದೆಲ್ಲ ಆದ ಮೇಲೆ ನನ್ನ ಪತ್ನಿ ದಿನಾಂಕ; 23-10-2021 ರಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ, “ನನ್ನ ಜಮೀನನ್ನು ಪ್ರಾಧಿಕಾರವು ಉಪಯೋಗಿಸಿಕೊಂಡಿರುವ ಬಾಬ್ತು ಇದುವರೆವಿಗೂ ಯಾವುದೇ ಪರಿಹಾರವನ್ನು ನೀಡಿರುವುದಿಲ್ಲ. ಆದ್ದರಿಂದ ನನಗೆ ಮೇಲಿನ ಜಮೀನಿಗೆ ಪರಿಹಾರವಾಗಿ ಪ್ರಸ್ತುತ ಶೇ. 50:50ರ ಅನುಪಾತದಲ್ಲಿ ಕೊಡಿ ಎಂದು ಕೇಳಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು ಇದನ್ನೆಲ್ಲ ಪರಿಶೀಲಿಸಿ ನನ್ನ ಪತ್ನಿಯಿಂದ ಪರಿತ್ಯಾಜನ ಪತ್ರ ಬರೆಸಿಕೊಂಡು 3-16 ಗುಂಟೆ ಜಮೀನುಗಳ ಹಕ್ಕುಗಳನ್ನು ಪ್ರಾಧಿಕಾರದ ಹೆಸರಿಗೆ ವರ್ಗಾಯಿಸಿಕೊಂಡು ದಿನಾಂಕ 30-12-2021 ರಂದು ಕೆಸರೆ ಗ್ರಾಮದ ಸ.ನಂ. 464 ರ 3-16 ಎಕರೆ ಜಮೀನಿಗೆ ಬದಲಿ ಜಾಗ ನೀಡುವ ಬಗ್ಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಆಯುಕ್ತರು ಅಧಿಕೃತ ಜ್ಞಾಪನ ಆದೇಶ ಹೊರಡಿಸಿ 38,284 ಚದರ ಅಡಿ ಅಳತೆಗೆ ನಿವೇಶನಗಳನ್ನು ಪರಿಹಾರ ರೂಪದಲ್ಲಿ ಮಂಜೂರು ಮಾಡಿರುತ್ತಾರೆ.

ಇದರಲ್ಲಿ ಕಾನೂನು ವಿದ್ಯಾರ್ಥಿಯಾದ ನನಗೆ ಹಾಗೂ 40 ವರ್ಷಗಳಿಂದ ಸುಧೀರ್ಘ ರಾಜಕಾರಣದಲ್ಲಿ ಇರುವ ನನಗೆ ಒಂದು ನಯಾಪೈಸೆಯಷ್ಟೂ ತಪ್ಪುಗಳೂ ಕಂಡುಬರುತ್ತಿಲ್ಲ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಕೂಡ ಮಾಧ್ಯಮದ ಮೂಲಕ ಈ ನಾಡಿನ ಜನರ ಮುಂದೆ ಇಡುತ್ತಿದ್ದೇನೆ.

ಈ ವಿಚಾರಗಳನ್ನೆಲ್ಲಾ ಪರಿಶೀಲಿಸಲು ಜಸ್ಟೀಸ್ ಪಿ.ಎನ್. ದೇಸಾಯಿ ಯವರ ಅಧ್ಯಕ್ಷತೆಯಲ್ಲಿ ವಿಚಾರಣಾ ಆಯೋಗವನ್ನು ರಚಿಸಲಾಗಿದೆ. ವಿಚಾರಣಾ ಆಯೋಗವು ಈ ಕುರಿತು ತನಿಖೆ ಪ್ರಾರಂಭಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹಾಗೂ ಸಚಿವ ಬೋಸರಾಜು ಇದ್ದರು.

Tags:    

Similar News