Mysore MUDA Scam | ಸಿಎಂ ಬೆನ್ನಿಗೆ ನಿಂತ ಅಹಿಂದ: ಆ.27ರಂದು ರಾಜಭವನ ಚಲೋ

Update: 2024-08-24 07:46 GMT

ಮುಡಾ ಅಕ್ರಮಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ಅನುಮತಿ ನೀಡಿರುವುದರಿಂದ ಅಹಿಂದ ವರ್ಗದ ನಾಯಕರು ಒಟ್ಟಾಗಿ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದು, ಬೃಹತ್ ಹೋರಾಟ ನಡೆಸಲು ಮುಂದಾಗಿದ್ದಾರೆ.

ಶುಕ್ರವಾರ(ಆ.23) ಬೆಂಗಳೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಅವರ ನಿವಾಸದಲ್ಲಿ ಅಹಿಂದ ನಾಯಕರ ಸಭೆ ನಡೆದಿದ್ದು, ಆ.27ರಂದು ʻರಾಜಭವನ ಚಲೋʼಗೆ ಸಭೆ ಕರೆ ನೀಡಿದೆ. ಸಿಎಂ ಪರ ಶೋಷಿತ ಸಮುದಾಯಗಳ ಒಕ್ಕೂಟ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಈ ಬೃಹತ್ ಹೋರಾಟಕ್ಕೆ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ರೂಪುರೇಷೆ ಸಿದ್ಧಪಡಿಸುತ್ತಿದ್ದು, ಆ.27ರಂದು ರಾಜಭವನ ಚಲೋಗೆ ಒಂದು ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ರಾಜಭವನದವರೆಗೆ ಬೃಹತ್ ರ್ಯಾಲಿ ನಡೆಸಲು ಯೋಜಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಜಾರಕಿಹೊಳಿ, ʻʻಸಿದ್ದರಾಮಯ್ಯ ಅವರ ಮೇಲೆ ಆರೋಪ ಬಂದಿರುವುದರಿಂದ ಹೈಕಮಾಂಡ್‌ಗೆ ಮಾಹಿತಿ ನೀಡಲು ದೆಹಲಿ ಹೋಗಿದ್ದಾರೆ. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ, ಸ್ಪಷ್ಟನೆ ಸಿಕ್ಕಿಲ್ಲ. ಸಿಎಂ ಪರ ಇಂಡಿಯಾ ಒಕ್ಕೂಟ, ಹೈಕಮಾಂಡ್ ಇದೆ. ನಮ್ಮ ಜೊತೆ ಇಂಡಿಯಾ ಮೈತ್ರಿ ಇದೆ, ಅವರ ಮೇಲೂ ಈ ರೀತಿ ಆಗಬಹುದು. ರಾಷ್ಟ್ರಪತಿಗಳ ಭೇಟಿ ಬಗ್ಗೆ ಚರ್ಚೆ ಆಗಿದೆ, ತೆಲಂಗಾಣ ರಾಜ್ಯದವರು ಎಚ್ಚೆತ್ತುಕೊಳ್ಳಬೇಕು, ಅವರ ಮೇಲೂ ಆಗಬಹುದು. ಈಗಾಗಲೇ ಕೇರಳ, ಪಶ್ಚಿಮ ಬಂಗಾಳದ ಮೇಲೆ ಆಗಿದೆ. ನಮ್ಮ ಮೇಲೆ ಇದೀಗ ರಾಜ್ಯಪಾಲರು ಮಾಡಿದ್ದಾರೆʼʼ ಎಂದು ಆರೋಪಿಸಿದ್ದಾರೆ.

ʻʻಸಿದ್ದರಾಮಯ್ಯ ಅವರ ನಾಯಕತ್ವ ಕುಗ್ಗಿಸುವ ಪ್ರಯತ್ನ ಆಗುತ್ತಿದೆ. ತನಿಖೆ ನಡೆಸಬೇಕಾ? ಬೇಡವಾ? ಎನ್ನುವ ಕುರಿತು ನ್ಯಾಯಾಲಯದಲ್ಲಿ ಚರ್ಚೆಯಾಗುತ್ತಿದೆ. ಸುಮಾರು ಜನರ ಮೇಲೆ ತನಿಖೆಗಳು ಇದ್ದಾವೆ. ಕೇಂದ್ರ ಮಂತ್ರಿಗಳ ಮೇಲೆ ತನಿಖೆ ಆಗುತ್ತಿದೆ, ಹಿಂದೆಯೂ ಮುಖ್ಯಮಂತ್ರಿಗಳ ಮೇಲೆ ತನಿಖೆಯೂ ಆಗಿದೆ. ಅವೆಲ್ಲ ನಮ್ಮ ಕಣ್ಮುಂದೆ ಇದ್ದಾವೆ. ಆದರೆ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಯೇ ಆಗದೇ ಖಾಸಗಿ ದೂರಿನ ಮೇಲೆ ತನಿಖೆಗೆ ಅನುಮತಿ ನೀಡಿರುವುದು ಸರಿಯಲ್ಲ. ಸಿಎಂ ಪರ ನಾವಿದ್ದೇವೆ. ಮುಡಾ ಪ್ರಕರಣವನ್ನು ಇನ್ನೊಂದಿಷ್ಟು ದಿನ ಎಳೆದಾಡುತ್ತಾರೆ, ಸಿಎಂ ಕುರ್ಚಿ ಅಲ್ಲಾಡಲ್ಲ. ಬಿಜೆಪಿಯಿಂದ ಆಪರೇಷನ್ ಕಮಲ ಸಾಧ್ಯವಿಲ್ಲ, ಸಿದ್ದರಾಮಯ್ಯ ಬದಲಾವಣೆ ಸಾಧ್ಯವೇ ಇಲ್ಲʼʼ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

Tags:    

Similar News