Mysore MUDA Case | ಸಿಎಂ ಪತ್ನಿಗೆ ರಿಲೀಫ್: ಇಡಿ ನೋಟಿಸ್‌ಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್‌

Update: 2025-01-27 13:40 GMT

ಮುಡಾ ನಿವೇಶನ ಹಂಚಿಕೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೀಡಿರುವ ನೋಟಿಸ್ಗೆ ಹೈಕೋರ್ಟ್ ತಡೆ ನೀಡಿದೆ.

ಸೋಮವಾರ ಬೆಳಿಗ್ಗೆ ಇಡಿ ಹೊರಡಿಸಿದ್ದ ನೋಟಿಸ್ಗೆ, ತಡೆಯಾಜ್ಞೆ ಕೋರಿ ಪಾರ್ವತಿ ಮತ್ತು ಭೈರತಿ ಸುರೇಶ್ ಅವರು ಹೈಕೋರ್ಟ್ನ ಧಾರವಾಡ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಸೋಮವಾರ ಸಂಜೆಯ ವೇಳೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಫೆಬ್ರವರಿ 10ರವರೆಗೆ ಈ ತಡೆಯಾಜ್ಞೆ ಜಾರಿಯಲ್ಲಿರಲಿದೆ.

ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಈ ತಡೆಯಾಜ್ಞೆ ನೀಡಿದ್ದು, ಇದರಿಂದಾಗಿ ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಅವರು ಸದ್ಯಕ್ಕೆ ಇಡಿ ವಿಚಾರಣೆಯಿಂದ ಪಾರಾಗಿದ್ದಾರೆ.

ಸಚಿವ ಭೈರತಿ ಸುರೇಶ್ ಪರವಾಗಿ ಹಿರಿಯ ವಕೀಲ ಸಿ ವಿ ನಾಗೇಶ್ ವಾದ ಮಂಡಿಸಿದರು. ಪಾರ್ವತಿ ಅವರ ಪರವಾಗಿ ಹಿರಿಯ ವಕೀಲ ಸಂದೇಶ ಚೌಟ ವಾದ ಮಂಡಿಸಿದರು.

ಪ್ರಕರಣದಲ್ಲಿ ಸಿಎಂ ಪತ್ನಿ ಪಾರ್ವತಿ ಅವರು ತಮ್ಮ ಜಮೀನನ್ನು ಮುಡಾ ವಶಪಡಿಸಿಕೊಂಡು ಲೇಔಟ್ ನಿರ್ಮಾಣ ಮಾಡಿದ್ದಕ್ಕೆ ಪ್ರತಿಯಾಗಿ ಬದಲಿ ನಿವೇಶನ ಪಡೆದಿದ್ದರು. ಪ್ರಕರಣದಲ್ಲಿ ಯಾವುದೇ ಹಣಕಾಸು ವಹಿವಾಟು ನಡೆದಿಲ್ಲ. ಆದರೂ ಜಾರಿ ನಿರ್ದೇಶನಾಲಯ(ಇಡಿ) ತನ್ನ ವ್ಯಾಪ್ತಿ ಮೀರಿ ತನಿಖೆ ನಡೆಸುತ್ತಿದೆ ಎಂದು ಅವರ ಪರ ವಕೀಲರು ವಾದಿಸಿದರು.

ಮತ್ತೊಂದು ಕಡೆ ಸಚಿವ ಭೈರತಿ ಅವರ ಪರ ವಕೀಲರು, ಪ್ರಕರಣದಲ್ಲಿ ಸಚಿವರು ಆರೋಪಿಯೇ ಅಲ್ಲ. ಹಾಗಿದ್ದರೂ ಇಡಿ ಅವರಿಗೆ ನೋಟಿಸ್ ನೀಡಿದೆ ಎಂದು ನ್ಯಾಯಾಲಯದ ಗಮನ ಸೆಳೆದರು.

ಇಬ್ಬರೂ ವಕೀಲರ ವಾದ ಆಲಿಸಿದ ನ್ಯಾಯಾಲಯ ಇಡಿ ನೋಟಿಸ್ಗೆ ಫೆ.10ರವರೆಗೆ ತಡೆ ನೀಡಿ ಆದೇಶಿಸಿದೆ.

Tags:    

Similar News