Mysore MUDA Case | ಈಗ ಜಿ.ಟಿ.ದೇವೇಗೌಡರಿಗೆ ಮುಡಾ ಸಂಕಷ್ಟ; ಇಡಿ ತನಿಖೆಗೆ ಸ್ನೇಹಮಯಿ ಕೃಷ್ಣ ಒತ್ತಾಯ

ದೇವನೂರು ಗ್ರಾಮದ ಸರ್ವೇ ನಂ. 81/2 ರಲ್ಲಿ ಜಿ.ಟಿ. ದೇವೇಗೌಡ ಅವರು ತಮ್ಮ ಸಹೋದರಿಯ ಪುತ್ರ ಮಹೇಂದ್ರ ಹೆಸರಿನಲ್ಲಿ 50:50 ಅನುಪಾತದಲ್ಲಿ ಮುಡಾದಿಂದ 19 ನಿವೇಶನ ಪಡೆದಿದ್ದಾರೆ ಎಂದು ದೂರಿದ್ದಾರೆ;

Update: 2025-01-28 14:42 GMT
ಇಡಿಗೆ ಪತ್ರ ಬರೆದ ಸ್ನೇಹಮಯಿ ಕೃಷ್ಣ

ಮೈಸೂರಿನ ದೇವನೂರು ಗ್ರಾಮದಲ್ಲಿ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರು ಬೇನಾಮಿ ಹೆಸರಿನಲ್ಲಿ ಜಮೀನು ಖರೀದಿಸಿ, ಆ ಜಮೀನಿಗೆ ಮುಡಾದಿಂದ ಪರಿಹಾರ ರೂಪವಾಗಿ 19 ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ಆ ಬಗ್ಗೆ ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯ ಹಾಗೂ ಲೋಕಾಯುಕ್ತರಿಗೆ ಪತ್ರ ಬರೆದಿದ್ದಾರೆ.

ದೇವನೂರು ಗ್ರಾಮದ ಸರ್ವೇ ನಂ. 81/2 ರಲ್ಲಿ ಜಿ.ಟಿ. ದೇವೇಗೌಡ ಅವರು ತಮ್ಮ ಸಹೋದರಿಯ ಪುತ್ರ ಮಹೇಂದ್ರ ಹೆಸರಿನಲ್ಲಿ ಮುಡಾದಿಂದ 19 ನಿವೇಶನಗಳನ್ನು 50:50 ಅನುಪಾತದಲ್ಲಿ ಪಡೆದಿದ್ದಾರೆ. ಆದರೆ, ಜಮೀನಿನ ಮೂಲ ಮಾಲೀಕರೆಂದು ಹೇಳುತ್ತಿರುವವರ ಮನೆಗೆ ಜಿ.ಟಿ. ದೇವೇಗೌಡ ಹಾಗೂ ಅವರ ಪುತ್ರ ಜಿ.ಡಿ. ಹರೀಶ್ ಗೌಡ ಹೋಗಿ ಮಾತುಕತೆ ನಡೆಸಿ, ಚೆಕ್‌ಗಳನ್ನು ನೀಡಿರುವ ಪೋಟೊಗಳು ಲಭ್ಯವಾಗಿವೆ. ಈ ಇಬ್ಬರು ಯಾವ ಕಾರಣಕ್ಕಾಗಿ ಚೆಕ್ ನೀಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಪೋಟೊದಲ್ಲಿರುವವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಕೋರಿದ್ದಾರೆ.

ದೇವನೂರಿನ ಸರ್ವೇ ನಂ.81/2 ರಲ್ಲಿ 2.22 ಎಕರೆ ಜಮೀನನ್ನು ಜಿ.ಟಿ.ದೇವೇಗೌಡ ಅವರೇ ತಮ್ಮ ಸಹೋದರಿಯ ಪುತ್ರನ ಹೆಸರಿನಲ್ಲಿ ಖರೀದಿಸಿ, ಮೂಲ ಮಾಲೀಕರಿಗೆ ಚೆಕ್ ನೀಡಿದ್ದಾರೆಂಬ ಮಾಹಿತಿ ಇದೆ. ಹಾಗಾಗಿ ಜಮೀನು ಕ್ರಯ ಪತ್ರದಲ್ಲಿ ಉಲ್ಲೇಖವಾಗಿರುವ ಚೆಕ್‌ಗಳು ಯಾರಿಗೆ ಸೇರಿವೆ. ಯಾರ ಖಾತೆಯಿಂದ ಹಣ ಜಮೆ ಆಗಿದೆ ಎಂಬುದನ್ನು ಪತ್ತೆ ಮಾಡಬೇಕು ಎಂದು ಸ್ನೇಹಮಯಿ ಕೃಷ್ಣ ಒತ್ತಾಯಿಸಿದ್ದಾರೆ.

2020 ಸೆ.23 ರಂದು ಅಂದಿನ ಮೈಸೂರು ತಹಶೀಲ್ದಾರ್ ಅವರು ಹೊರಡಿಸಿರುವ ಆದೇಶದ ಪ್ರತಿಯಲ್ಲಿ ಸರ್ವೆ ನಂ.81/2 ರಲ್ಲಿನ 2.22 ಎಕರೆ ಜಮೀನನ್ನು ಜಿ.ಟಿ.ದೇವೇಗೌಡ ಅವರ ಸಹೋದರಿಯ ಮಗ ಮಹೇಂದ್ರ ಹೆಸರಿಗೆ ಕ್ರಯವಾಗಿದೆ. ಅದಾಗಲೇ ಜಮೀನಿನಲ್ಲಿ ಮನೆಗಳಿದ್ದರೂ ತಹಶೀಲ್ದಾರ್‌ ಅವರು ಕೃಷಿ ಭೂಮಿ ಎಂದು ಉಲ್ಲೇಖಿಸಿ ಖಾತೆ ಮಾಡಲು ಆದೇಶಿಸಿದ್ದಾರೆ. ಪ್ರಾಧಿಕಾರದಿಂದ ಬಡಾವಣೆ ನಿರ್ಮಾಣವಾಗಿರುವ ವಿಷಯ ತಿಳಿದಿದ್ದರೂ, ಜೊತೆಗೆ ತಮ್ಮ ವ್ಯಾಪ್ತಿಗೆ ಬರದಿದ್ದರೂ ಅಂದಿನ ತಹಶೀಲ್ದಾರ್ ರಕ್ಷಿತ್ ಎಂಬುವರು ಕೃಷಿ ಭೂಮಿ ಎಂದು ಖಾತೆ ಮಾಡಲು ಆದೇಶಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ. ಈ ಎಲ್ಲದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಪತ್ರದಲ್ಲಿ ಕೃಷ್ಣ ಒತ್ತಾಯಿಸಿದ್ದಾರೆ.

Tags:    

Similar News