Mysore MUDA Case | ನ್ಯಾಯಾಂಗ ನಿಂದನೆ ಹೇಳಿಕೆ: ಸಚಿವ ಜಮೀರ್ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯಪಾಲರ ಪತ್ರ
ಮುಡಾ ಪ್ರಕರಣದ ದೂರುದಾರರಲ್ಲಿ ಒಬ್ಬರಾದ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಾಹಂ ಅವರು ನೀಡಿದ ದೂರಿನ ಮೇರೆಗೆ ರಾಜ್ಯಪಾಲರು, ಅಡ್ವೋಕೇಟ್ ಜನರಲ್ ಗೆ ಪತ್ರ ಬರೆದಿದ್ದು, ಸಚಿವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆದೇಶಿಸಿದ್ದಾರೆ.
ಮುಡಾ ಪ್ರಕರಣ ಸಿಎಂ ಸಿದ್ದರಾಮಯ್ಯ ಬಳಿಕ ಇದೀಗ ಅವರ ಸಂಪುಟದ ಸಚಿವ ಸಹೋದ್ಯೋಗಿ ಜಮೀರ್ ಅಹಮದ್ ಖಾನ್ ಅವರಿಗೆ ಸಂಕಷ್ಟ ತಂದಿದೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಚಾರಣೆ ನಡೆಸುವಂತೆ ಹೈಕೋರ್ಟ್ ನೀಡಿದ್ದ ತೀರ್ಪಿನ ಕುರಿತು ನ್ಯಾಯಾಂಗ ನಿಂದನೆ ಹೇಳಿಕೆ ನೀಡಿದ್ದ ಜಮೀರ್ ಅಹಮದ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ಗೆ ಸೂಚಿಸಿದ್ದಾರೆ.
ಮುಡಾ ಪ್ರಕರಣದ ದೂರುದಾರರಲ್ಲಿ ಒಬ್ಬರಾದ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಾಹಂ ಅವರು ನೀಡಿದ ದೂರಿನ ಮೇರೆಗೆ ರಾಜ್ಯಪಾಲರು, ಅಡ್ವೋಕೇಟ್ ಜನರಲ್ ಗೆ ಪತ್ರ ಬರೆದಿದ್ದು, ಸಚಿವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆದೇಶಿಸಿದ್ದಾರೆ.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ಮೂವರು ದೂರುದಾರರು ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು. ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದ್ದರು. ಅದರಂತೆ ದೂರುದಾರರು ಅಧೀನ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ, ಸಿಎಂ ಸಿದ್ದರಾಮಯ್ಯ ಅವರು ಆ ವಿಚಾರಣೆಗೆ ತಡೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.
ಸಿಎಂ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣದಲ್ಲಿ ಅರ್ಜಿದಾರರ ಪರ ವಕೀಲರ ವಾದ ಪುರಸ್ಕರಿಸಿ, ಲೋಕಾಯುಕ್ತ ವಿಚಾರಣೆಗೆ ಆದೇಶ ನೀಡಿತ್ತು. ಆದರೆ, ಹೈಕೋರ್ಟಿನ ಈ ಆದೇಶದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಸಚಿವ ಜಮೀರ್ ಅಹಮದ್, ಇದೊಂದು ರಾಜಕೀಯ ಪೇರಿತ ತೀರ್ಪು ಎಂಬರ್ಥದ ಹೇಳಿಕೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ದೂರುದಾರರಲ್ಲಿ ಒಬ್ಬರಾದ ಅಬ್ರಾಹಂ ಅವರು ಸಚಿವ ಜಮೀರ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ, ರಾಜ್ಯಪಾಲರಿಗೂ ದೂರು ಸಲ್ಲಿಸಿದ್ದರು.
ಇದೀಗ ನ್ಯಾಯಾಂಗ ನಿಂದನೆಯ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಜಮೀರ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿ ರಾಜ್ಯಪಾಲರು ಅಡ್ವೋಕೇಟ್ ಜನರಲ್ ಅವರಿಗೆ ಪತ್ರ ಬರೆದಿದ್ದಾರೆ.
ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಸಿದ್ದರಾಮಯ್ಯ ಸಂಪುಟದ ಸಹೋದ್ಯೋಗಿ ಜಮೀರ್ ಅಹಮದ್ ಅವರಿಗೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ. ಈಗಾಗಲೇ ವಕ್ಫ್ ಆಸ್ತಿ ಇಂಡೀಕರಣದ ವಿಷಯದಲ್ಲಿ ರಾಜ್ಯಾದ್ಯಂತ ಆಕ್ರೋಶಕ್ಕೆ ಗುರಿಯಾಗಿರುವ ಸಚಿವ ಜಮೀರ್ ಅವರಿಗೆ ಇನ್ನಷ್ಟು ಸಂಕಷ್ಟಗಳು ಎದುರಾಗುವ ಸೂಚನೆಗಳಿವೆ.