Mysore MUDA Case | ಬೆಂಗಳೂರು, ಮೈಸೂರು, ಮಂಡ್ಯದಲ್ಲಿ ಮತ್ತೆ ಇಡಿ ದಾಳಿ
ಮುಡಾ ಹಗರಣ ಸಂಬಂಧ ಸೋಮವಾರ ಜಾರಿ ನಿರ್ದೇಶನಾಲಯ ಮತ್ತೆ ದಾಳಿ ನಡೆಸಿದೆ. ಬೆಂಗಳೂರು, ಮೈಸೂರು, ಮಂಡ್ಯದ ಒಟ್ಟು 8 ಕಡೆಗಳಲ್ಲಿ ಶೋಧ ನಡೆಸುತ್ತಿದೆ.
ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣ ಸಂಬಂಧ ಸೋಮವಾರ ಜಾರಿ ನಿರ್ದೇಶನಾಲಯ ಮತ್ತೆ ದಾಳಿ ನಡೆಸಿದೆ. ಬೆಂಗಳೂರು, ಮೈಸೂರು, ಮಂಡ್ಯದ ಒಟ್ಟು 8 ಕಡೆಗಳಲ್ಲಿ ಶೋಧ ನಡೆಸುತ್ತಿದೆ.
ಮುಡಾ ಮತ್ತು ಬೆಂಗಳೂರಿನ ಬಿಲ್ಡರ್ ಎನ್.ಮಂಜುನಾಥ್ಗೂ ಏನು ಸಂಬಂಧ ಅಂತ ತನಿಖೆಗೆ ಇಳಿದ ಇಡಿ ಅಧಿಕಾರಿಗಳಿಗೆ ಹಲವು ವಿಚಾರಗಳು ತಿಳಿದುಬಂದಿವೆ. ಎನ್.ಕಾರ್ತಿಕ್ ಡೆವಲಪರ್ ಮಾಲೀಕನಾಗಿರುವ ಎನ್.ಮಂಜುನಾಥ್ ಮೈಸೂರಿನಲ್ಲಿ ಲೇಔಟ್ ನಿರ್ಮಾಣ ಮಾಡಿದ್ದರು. ಮೈಸೂರಿನಲ್ಲಿ ಕಾರ್ತಿಕ್ ಬಡಾವಣೆ ಹೆಸರಿನಲ್ಲಿ ಲೇಔಟ್ಗಳನ್ನು ನಿರ್ಮಾಣ ಮಾಡಿದ್ದರು. ಮುಡಾ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡುತ್ತಿದ್ದ ವೇಳೆ, ಅಲ್ಲಿನ ಅಧಿಕಾರಿಗಳಿಗೆ ಲಂಚ ನೀಡಿರುವ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಸೋಮವಾರ (ಅ.28) ಬೆಳ್ಳಂ ಬೆಳಗ್ಗೆ ಬಿಲ್ಡರ್ ಎನ್. ಮಂಜುನಾಥ್ ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಮನೆಯಲ್ಲಿನ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇಡಿ ಅಧಿಕಾರಿಗಳು ಕೆಲ ಅಗತ್ಯ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಇಡಿ ಅಧಿಕಾರಿಗಳು ಎನ್. ಮಂಜುನಾಥ್ ಅವರ ಕಚೇರಿ, ಬ್ಯಾಂಕ್ ಖಾತೆ ಪರಿಶೀಲನೆ ಕೂಡ ನಡೆಸಿದ್ದಾರೆ.
ಇಡಿ ಅಧಿಕಾರಿಗಳು ಅಕ್ಟೋಬರ್ 18 ಮುಡಾ ಕಚೇರಿ ಸೇರಿದಂತೆ ಮೈಸೂರಿನ ಇತರ ಕೆಲವು ಸ್ಥಳಗಳ ಮೇಲೆ ದಾಳಿ ಮಾಡಿದ್ದರು. ದಾಳಿ ಬಳಿಕ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಡಾದ ಆರು ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಸಂಗ್ರಹಿಸಿದ್ದರು. ಅಧಿಕಾರಿಗಳು ಕಳೆದ ವಾರ ಬೆಂಗಳೂರಿನ ಇಡಿ ಕಚೇರಿಯಲ್ಲಿ ಮುಡಾದ ಕೆಲವು ಕೆಳಹಂತದ ಅಧಿಕಾರಿಗಳನ್ನು ವಿಚಾರಣೆ ನಡೆಸಿದ್ದರು.