Mysore MUDA Case | ಸಿಬಿಐ ತನಿಖೆ ಕೋರಿಕೆ: ಆದೇಶ ಕಾಯ್ದಿರಿಸಿದ ಹೈಕೋರ್ಟ್
ಮೈಸೂರು ಮುಡಾ ನಿವೇಶನ ಹಂಚಿಕೆ ಅಕ್ರಮ ಆರೋಪ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿದ್ದ ಅರ್ಜಿಯ ಕುರಿತು ಸೋಮವಾರ(ಜ.27) ವಿಚಾರಣೆ ನಡೆಸಿದ ಹೈಕೋರ್ಟ್, ತನ್ನ ಆದೇಶವನ್ನು ಕಾಯ್ದಿರಿಸಿದೆ.;
ಮೈಸೂರು ಮುಡಾ ನಿವೇಶನ ಹಂಚಿಕೆ ಅಕ್ರಮ ಆರೋಪ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿದ್ದ ಅರ್ಜಿಯ ಕುರಿತು ಸೋಮವಾರ(ಜ.27) ವಿಚಾರಣೆ ನಡೆಸಿದ ಹೈಕೋರ್ಟ್ ಧಾರವಾಡ ಪೀಠ, ತನ್ನ ಆದೇಶವನ್ನು ಕಾಯ್ದಿರಿಸಿದೆ.
ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮುಡಾದಿಂದ 14 ನಿವೇಶನಗಳನ್ನು ಹಂಚಿಕೆ ಮಾಡಿದ್ದ ಪ್ರಕರಣದಲ್ಲಿ ಅಕ್ರಮ ನಡೆದಿದೆ. ಸಿದ್ದರಾಮಯ್ಯ ಅವರು ತಮ್ಮ ಪ್ರಭಾವ ಬಳಸಿ ಕಾನೂನು ಉಲ್ಲಂಘಿಸಿ ತಮ್ಮ ಪತ್ನಿಗೆ ಮೈಸೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಿಸಿದ್ದಾರೆ ಎಂದು ಆರೋಪಿಸಿ ಕೋರ್ಟ್ ಮೊರೆಹೋಗಿರುವ ದೂರುದಾರರಲ್ಲಿ ಒಬ್ಬರಾಗಿರುವ ಮೈಸೂರಿನ ಸ್ನೇಹಮಯಿ ಕೃಷ್ಣ ಅವರು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಎರಡೂ ಕಡೆಯ ವಕೀಲರ ವಾದ ಆಲಿಸಿ, ತನ್ನ ಆದೇಶವನ್ನು ಕಾಯ್ದಿರಿಸಿದೆ. ಅಲ್ಲದೆ, ಪ್ರಕರಣದ ಕುರಿತು ಈಗಾಗಲೇ ತನಿಖೆ ನಡೆಸಿರುವ ಲೋಕಾಯುಕ್ತ ಪೊಲೀಸರು ತಮ್ಮ ಅಂತಿಮ ವರದಿಯನ್ನು ಸಲ್ಲಿಸಲು ಕೂಡ ನ್ಯಾಯಾಲಯ ಕಾಲಾವಕಾಶ ನೀಡಿದ್ದು, ಸಿಬಿಐ ತನಿಖೆ ಕುರಿತು ಅರ್ಜಿಯ ಮೇಲಿನ ಆದೇಶ ಪ್ರಕಟಿಸುವವರೆಗೆ ಲೋಕಾಯುಕ್ತ ಅಂತಿಮ ವರದಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲ ಮಣೀಂದರ್ ಸಿಂಗ್ ವಾದ ಮಂಡನೆ ಮಾಡಿಸಿದರೆ, ಸಿಎಂ ಸಿದ್ದರಾಮಯ್ಯ ಪರ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು. ಸರ್ಕಾರದ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು. ಈ ವಾದ ಪ್ರತಿವಾದ ಆಲಿಸಿದ ಕೋರ್ಟ್, ಆದೇಶವನ್ನು ಕಾಯ್ದಿರಿಸಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಂತಿಮ ವರದಿ ಸಲ್ಲಿಕೆ ಅವಧಿ ಗಡುವು ಸಹ ವಿಸ್ತರಿಸಿದೆ.
ಈ ನಡುವೆ ಬೆಳಿಗ್ಗೆ ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಮಧ್ಯಂತರ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದರು.
ದೂರುದಾರ ಸ್ನೇಹಮಯಿ ಕೃಷ್ಣ ಪರ ವಾದವೇನು?
ಯಾವುದೇ ಪ್ರಕರಣದ ಶಂಕಿತ ಆರೋಪಿಯೇ ತನ್ನ ವಿರುದ್ಧ ತನಿಖೆ ನಡೆಸಬೇಕಾದ ತನಿಖಾ ತಂಡವನ್ನು ಆಯ್ಕೆ ಮಾಡಬಾರದು. ಈ ಬಗ್ಗೆ ಸುಪ್ರೀಂಕೋರ್ಟ್ ತೀರ್ಪುಗಳಿವೆ. ಸ್ಥಳೀಯ ಪೊಲೀಸರಿಂದ ತನಿಖೆ ನಡೆದರೆ ನ್ಯಾಯ ದೊರೆಯುವುದು ಸಾಧ್ಯವಿಲ್ಲ. ಆ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸ್ನೇಹಮಯಿ ಕೃಷ್ಣ ಅವರ ಪರ ಹಿರಿಯ ವಕೀಲ ಮಣೀಂದರ್ ಸಿಂಗ್ ವಾದಿಸಿದರು.
ತಮ್ಮ ವಾದಕ್ಕೆ ಪೂರಕವಾಗಿ ಅವರು, ಗುಜರಾತ್ ಸೇರಿದಂತೆ ಹಲವು ರಾಜ್ಯಗಳ ವಿಷಯದಲ್ಲಿ ಈ ಹಿಂದಿನ ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯನ್ವಯ ಸ್ವತಂತ್ರ ತನಿಖೆ ಅನಿವಾರ್ಯ. ಲೋಕಾಯುಕ್ತ ಪೊಲೀಸರು ರಾಜ್ಯ ಸರ್ಕಾರದ ಅಧೀನದಲ್ಲಿದ್ದಾರೆ. ಹಗರಣದಲ್ಲಿ ರಾಜಕೀಯ ಮುಖಂಡರ ಹೆಸರು ಇರುವುದರಿಂದ ಸ್ಥಳೀಯ ಪೊಲೀಸರಿಂದ ದಕ್ಷ ತನಿಖೆ ಸಾಧ್ಯವಿಲ್ಲ. ರಾಜಕೀಯ ಒತ್ತಡದಿಂದ ತನಿಖೆ ಹಳಿ ತಪ್ಪಬಹುದು ಎಂದು ಹೇಳಿದರು.
ಪಂಜರದೊಳಗಿನ ಗಿಣಿ ಸಿಬಿಐ: ಕಪಿಲ್ ಸಿಬಲ್
ಸಿಬಿಐ ಪಂಜರದೊಳಗಿನ ಗಿಣಿ ಎಂದೂ ಕೂಡ ‘ಸುಪ್ರೀಂ’ ಹೇಳಿದೆ. ಹೀಗಾಗಿ ಸಿಬಿಐ ಕೂಡ ಆ ಅಭಿಪ್ರಾಯವನ್ನು ಹೋಗಲಾಡಿಸಬೇಕಿದೆ. ಹೀಗಾಗಿ ಲೋಕಾಯುಕ್ತ ಪೊಲೀಸರನ್ನು ಸಂಶಯಿಸಬಾರದೆಂದು ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಕಪಿಲ್ ಸಿಬಲ್ ಹೇಳಿದರು.
ಸರ್ಕಾರ ಸಿಬಿಐ ತನಿಖೆಗೆ ಸಾಮಾನ್ಯ ಅನುಮತಿ ಹಿಂಪಡೆದಿದೆ. ಸಿಬಿಐ ಸ್ವತಂತ್ರವಾಗಿಲ್ಲದಿರುವುದೇ ಸರ್ಕಾರದ ಈ ಕ್ರಮಕ್ಕೆ ಕಾರಣವಾಗಿದೆ ಎಂದು ವಾದಿಸಿದರು.
ಲೋಕಾಯುಕ್ತ ಸ್ವತಂತ್ರ ತನಿಖಾ ಸಂಸ್ಥೆಯಾಗಿದೆ. ಲೋಕಾಯುಕ್ತ ಪೊಲೀಸರು ರಾಜ್ಯ ಸರ್ಕಾರದ ಹಿಡಿತದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ. ಹಾಗೆ ಹೇಳುವುದಾದರೆ, ಸಿಬಿಐ ಕೂಡಾ ಕೇಂದ್ರ ಸರ್ಕಾರದ ಹಿಡಿತದಲ್ಲಿದೆ. ಹೀಗಾಗಿ ಸಿಬಿಐಯನ್ನು ಕೂಡ ಸ್ವತಂತ್ರ ತನಿಖಾ ಸಂಸ್ಥೆ ಎನ್ನಲಾಗುವುದಿಲ್ಲ. ಲೋಕಾಯುಕ್ತ ಸಂಸ್ಥೆ ಕಳಂಕಿತ ಎನ್ನಲಾಗುವುದಿಲ್ಲ. ಲೋಕಾಯುಕ್ತ ಸಂಸ್ಥೆಯ ನಿಗಾ ಇರುವುದರಿಂದ ತನಿಖೆ ಸ್ವತಂತ್ರವಾಗಿರಲಿದೆ ಎಂದು ಸಮರ್ಥಿಸಿದರು.
ಸಿದ್ದರಾಮಯ್ಯ ಪರ ಅಭಿಷೇಕ್ ಮನು ಸಿಂಘ್ವಿ ವಾದ
ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ, ಸಿಬಿಐ ತನಿಖೆಗೆ ಅರ್ಹವಾಗಲು ಇದು ಅಪರೂಪದ ಪ್ರಕರಣವಲ್ಲ. ಲೋಕಾಯುಕ್ತ ತನಿಖೆಯಲ್ಲಿ ಮಧ್ಯಪ್ರವೇಶಿಸಿ ಸಿಬಿಐಗೆ ಹಸ್ತಾಂತರ ಮಾಡುವುದು ಸರಿಯಲ್ಲ. ದೂರುದಾರರಿಗೆ ರಾಜ್ಯಪಾಲರ ಅನುಮತಿ ಬೇಕಿತ್ತು ಪಡೆದರು. ಮೊದಲಿಗೆ ಲೋಕಾಯುಕ್ತ ಪೊಲೀಸರ ತನಿಖೆಗೆ ಕೋರಿದರು. ಆ ತನಿಖೆ ಆಗುವ ಮೊದಲೇ ಈಗ ಸಿಬಿಐ ತನಿಖೆಗೆ ಕೇಳುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಭೂಮಾಲೀಕರ ಪರ ವಕೀಲರ ವಾದವೇನು?
ಭೂ ಮಾಲೀಕ ದೇವರಾಜು ಪರ ದುಷ್ಯಂತ್ ದವೆ ವಾದ ಮಂಡಿಸಿದರು. ದೂರುದಾರರು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಬೇಕೆಂದು ಈ ಹಿಂದೆ ಕೋರಿದ್ದರು. ಈಗ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಇದೀಗ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿರುವುದು ಸೂಕ್ತವಲ್ಲ ಎಂದು ವಾದಿಸಿದರು. ಅಲ್ಲದೆ, ದೇವರಾಜು ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ಹೀಗಾಗಿ ಸಿಬಿಐ ತನಿಖೆ ನಡೆಸುವ ಅಗತ್ಯವಿಲ್ಲವೆಂದು ಹೇಳಿದರು.
ದೇವರಾಜು ಹೆಸರಿಗೆ ಇತರೆ ಮಾಲೀಕರು ಹಕ್ಕು ಬಿಡುಗಡೆ ಮಾಡಿದ್ದಾರೆ. ಈ ಅಂಶವನ್ನು ಮುಚ್ಚಿಟ್ಟು ದೂರು ದಾಖಲಿಸಿದ್ದಾರೆ ಎಂಬ ಅಂಶವನ್ನೂ ದುಷ್ಯಂತ್ ದವೆ ಹೈಕೋರ್ಟ್ ಗಮನಕ್ಕೆ ತಂದರು.
ದೇವರಾಜುವಿನ ವ್ಯಕ್ತಿ ಸ್ವಾತಂತ್ರ್ಯವನ್ನು ಪಣಕ್ಕಿಡಲಾಗಿದೆ. ಹೈಕೋರ್ಟ್ ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕು. ದೇವರಾಜು ಅಮಾಯಕನೆಂದಾದರೆ ಈ ಕೇಸ್ನಲ್ಲಿ ಆರೋಪಿಯಾಗಬಾರದು. ಹೀಗಾಗಿ ದೇವರಾಜುವಿನ ವಾದವನ್ನು ಹೈಕೋರ್ಟ್ ಪರಿಗಣಿಸಬೇಕು ಎಂದೂ ದವೆ ಮನವಿ ಮಾಡಿದರು.
ಹೈಕೋರ್ಟ್ ಹೇಳಿದ್ದೇನು?
ದುಷ್ಯಂತ್ ದವೆ ವಾದಕ್ಕೆ ಹೈಕೋರ್ಟ್ ಪ್ರತಿಕ್ರಿಯೆ ನೀಡಿ, ಲೋಕಾಯುಕ್ತ ಪೊಲೀಸರು ಈವರೆಗಿನ ತನಿಖೆ ವರದಿ ಸಲ್ಲಿಸಿದ್ದಾರೆ. ಇದನ್ನು ಪರಿಶೀಲಿಸಿ ನಾನು ಸಿಬಿಐ ತನಿಖೆ ಬಗ್ಗೆ ತೀರ್ಮಾನಿಸುತ್ತೇನೆ. ಈಗಾಗಲೇ ವಿಚಾರಣೆಗೊಳಗಾದ ಅಂಶಗಳನ್ನು ಮತ್ತೆ ವಾದಿಸುವ ಅಗತ್ಯವಿಲ್ಲ ಎಂದಿತು.