Mysore MUDA Case | ಸಿಎಂಗೆ ಮತ್ತೊಂದು ಭೂ ಕಂಟಕ; ಆಲನಹಳ್ಳಿಯಲ್ಲೂ ಭೂ ಅಕ್ರಮ?
ಮೈಸೂರಿನ ಆಲನಹಳ್ಳಿ ಗ್ರಾಮದ ಜಮೀನು ಖರೀದಿಗೆ ಸಂಬಂಧಿಸಿದ ನಾಲ್ಕು ಪುಟಗಳ ದಾಖಲೆಗಳು ಲಭ್ಯವಾಗಿದ್ದು, ಲೋಕಾಯುಕ್ತರಿಗೆ ಒದಗಿಸಲಾಗಿದೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.;
ಸಿಎಂ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಮತ್ತೊಂದು ಅಕ್ರಮ ಭೂ ವ್ಯವಹಾರ ಆರೋಪ ಎದುರಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ 50:50 ಅನುಪಾತದಡಿ ಅಕ್ರಮವಾಗಿ ಮುಡಾ ನಿವೇಶನ ಹಂಚಿಕೆ ಮಾಡಿದ ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರಿಗೆ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಅವರು ಸೋಮವಾರ, ತಮ್ಮ ದೂರಿಗೆ ಪೂರಕವಾಗಿ ಮತ್ತೊಂದು ಭೂ ಅವ್ಯವಹಾರದ ಕುರಿತ ದಾಖಲೆಗಳನ್ನು ಒದಗಿಸಿ ತನಿಖೆಗೆ ಒತ್ತಾಯಿಸಿದ್ದಾರೆ.
ಮೈಸೂರಿನ ಆಲನಹಳ್ಳಿ ಗ್ರಾಮದ ಸರ್ವೇ ನಂ.113/ 4 ರಲ್ಲಿ 1 ಎಕರೆ ಜಮೀನು ಖರೀದಿಸಿರುವುದಕ್ಕೆ ಸಂಬಂಧಿಸಿದ ನಾಲ್ಕು ಪುಟಗಳ ದಾಖಲೆಗಳು ಲಭ್ಯವಾಗಿದ್ದು, ಲೋಕಾಯುಕ್ತರಿಗೆ ಒದಗಿಸಲಾಗಿದೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.
ಆಲನಹಳ್ಳಿ ಗ್ರಾಮದ ಭೂಮಿಯನ್ನು ಸಿದ್ದರಾಮಯ್ಯ ಅವರ ಭಾಮೈದ ಬಿ.ಎಂ. ಮಲ್ಲಿಕಾರ್ಜುನಸ್ವಾಮಿ ಹನುಮೇಗೌಡ, ಹನುಮಯ್ಯ, ಕರಿಯಪ್ಪ, ಕೆಂಪಮ್ಮ ಅವರಿಂದ ಖರೀದಿ ಮಾಡಿ, 1983 ಡಿ.15 ರಂದು ಕ್ರಯಪತ್ರವನ್ನು ನೋಂದಣಿ ಮಾಡಿಸಿದ್ದಾರೆ. ಈ ಜಮೀನನ್ನು 1996 ರಲ್ಲಿ ಮುಡಾ ಸ್ವಾಧೀನಪಡಿಸಿಕೊಂಡು ಅಂತಿಮ ಅಧಿಸೂಚನೆ ಹೊರಡಿಸಿತ್ತು. ಆದರೆ, 2006 ಜೂನ್ 22ರಂದು ಮಲ್ಲಿಕಾರ್ಜುನ ಸ್ವಾಮಿ ಹೆಸರಿನಲ್ಲಿ ಅನ್ಯಕ್ರಾಂತ ಆದೇಶ( ಕೃಷಿ ಭೂಮಿ ಪರಿವರ್ತನೆ) ಹೊರಡಿಸಲಾಗಿದೆ. ಇದೇ ಜಮೀನನ್ನು 2010 ಅ.20ರಂದು ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿಯವರಿಗೆ ಮಲ್ಲಿಕಾರ್ಜುನ ಸ್ವಾಮಿ ದಾನಪತ್ರದ ಮೂಲಕ ನೋಂದಣಿ ಮಾಡಿಕೊಟ್ಟಿದ್ದರು. ಸದರಿ ಜಮೀನನ್ನು ಪಾರ್ವತಿಯವವರು ತಮ್ಮ ಪುತ್ರ ಯತೀಂದ್ರ ಅವರಿಗೆ 2010 ನ.11 ರಂದು ದಾನಪತ್ರ ನೋಂದಣಿ ಮಾಡಿಕೊಟ್ಟಿದ್ದಾರೆ.
ಯತೀಂದ್ರ ಅವರು ತಮ್ಮ ತಾಯಿಯಿಂದ ದಾನವಾಗಿ ಬಂದ ಅದೇ ಜಮೀನನ್ನು ಬೇರೆಯವರಿಗೆ 2011ಮಾ.23ರಂದು ಮಾರಾಟ ಮಾಡಿ, ಕ್ರಯಪತ್ರ ನೋಂದಣಿ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿರುವ ದೂರುದಾರ ಸ್ನೇಹಮಯಿ ಕೃಷ್ಣ, ತಮ್ಮ ದೂರಿಗೆ ಪೂರಕವಾಗಿ ದಾಖಲೆಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಿದ್ದಾರೆ.
ಜಮೀನಿಗೆ ಸಂಬಂಧಿಸಿದ ಆರ್‌ಟಿಸಿ ಗಮನಿಸಿದಾಗ ಈಗಲೂ ಅದರಲ್ಲಿ ಕೃಷಿ ಭೂಮಿ ಎಂದು ನಮೂದಾಗಿದ್ದು, ಮಲ್ಲಿಕಾರ್ಜುನಸ್ವಾಮಿ ಹೆಸರಿನಲ್ಲೇ ಇದೆ. ಆದರೆ, 1996ಜುಲೈ 11ರಂದು ಹೊರಡಿಸಿದ ಅಂತಿಮ ಅಧಿಸೂಚನೆಯಲ್ಲಿ ಸದರಿ ಆಲನಹಳ್ಳಿ ಸರ್ವೇ ನಂ.113/4ರ ಒಂದು ಎಕರೆ ಜಮೀನನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡು ಆದೇಶಿಸಿದೆ. ಇದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ತನಿಖೆ ನಡೆಸುವಂತೆ ಸ್ನೇಹಮಯಿ ಕೃಷ್ಣ ಒತ್ತಾಯಿಸಿದ್ದಾರೆ.
ಅನುಮಾನಕ್ಕೆ ಕಾರಣಗಳೇನು?
2006ರಲ್ಲಿ ಆಲನಹಳ್ಳಿ ಭೂಮಿಗೆ ʼಅನ್ಯಕ್ರಾಂತ(ಭೂ ಪರಿವರ್ತನೆ)ʼ ಆದೇಶವಿದ್ದರೂ ಕೃಷಿ ಭೂಮಿ ಎಂಬಂತೆ ಮಲ್ಲಿಕಾರ್ಜುನ ಸ್ವಾಮಿ ಹೆಸರಿನಲ್ಲಿ ಖಾತೆ ಮುಂದುವರಿದಿರುವುದು ಏಕೆ ಎಂಬ ಪ್ರಶ್ನೆ ಎದುರಾಗಿದೆ.
1996ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿದ್ದರೂ ಯಾವಾಗ, ಯಾವ ಕಾರಣಗಳಿಂದ ಭೂಸ್ವಾಧೀನದಿಂದ ಕೈ ಬಿಡಲಾಗಿದೆ. ಭೂಸ್ವಾಧೀನ ಕೈಬಿಡಲು ಯಾರ ಪ್ರಭಾವ ಬಳಸಲಾಗಿದೆ ಎಂಬುದು ಪ್ರಶ್ನೆಯಾಗಿದೆ.
ಕೆಸರೆ ಗ್ರಾಮದ ಸರ್ವೇ ನಂ.464ರಲ್ಲಿ 3.16ಎಕರೆ ಜಮೀನನ್ನು ಮಾತ್ರ ಸಿಎಂ ಅವರ ಪತ್ನಿ ಪಾರ್ವತಿಯವರಿಗೆ ದಾನ ಮಾಡಲಾಗಿದೆ ಎಂದು ಸಾರ್ವಜನಿಕವಾಗಿ ಹೇಳಿದ್ದರು. ಆಲನಹಳ್ಳಿ ಜಮೀನು ದಾನ ಪತ್ರದ ಬಗ್ಗೆ ಮುಚ್ಚಿಟ್ಟಿದ್ದು ಏಕೆ ಎಂದು ಪ್ರಶ್ನಿಸಲಾಗಿದೆ.
ಮಲ್ಲಿಕಾರ್ಜುನ ಸ್ವಾಮಿ ಅವರು ಇದೇ ರೀತಿಯ ಎಷ್ಟು ಸ್ವತ್ತುಗಳನನ್ನು ಹೊಂದಿದ್ದಾರೆ, ಪಾರ್ವತಿಯವರಿಗೆ ಎಷ್ಟು ಜಮೀನು ದಾನ ಪತ್ರ ಮಾಡಿಕೊಟ್ಟಿದ್ದಾರೆ ಎಂಬ ಸತ್ಯಾಂಶ ತಿಳಿಯಬೇಕಾದರೆ ಆಲನಹಳ್ಳಿ ಜಮೀನಿನ ಕುರಿತಂತೆಯೂ ತನಿಖೆ ನಡೆಸಬೇಕು ಎಂದು ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.