ಕೊಲೆ ಆರೋಪಿ ಅನಿಲ್ ನನ್ನ ಸಂಬಂಧಿಯಲ್ಲ: ಮಾಜಿ ಸಚಿವ ಬೈರತಿ ಬಸವರಾಜ್ ಸ್ಪಷ್ಟನೆ
ತನಿಖೆಗೆ ಸಂಪೂರ್ಣ ಸಹಕಾರ ನೀಡಿರುವುದಾಗಿ ತಿಳಿಸಿದ ಅವರು, "ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದು ನನಗೆ ತಿಳಿದಿದೆ. ಸೂಕ್ತ ಕಾಲದಲ್ಲಿ ಎಲ್ಲಾ ದಾಖಲೆಗಳೊಂದಿಗೆ ಮಾಧ್ಯಮಗಳ ಮುಂದೆ ಬರುತ್ತೇನೆ.;
ಬೈರತಿ ಬಸವರಾಜ್
ರೌಡಿಶೀಟರ್ ಬಿಕ್ಲು ಶಿವು ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಅನಿಲ್ ತಮಗೆ ಸಂಬಂಧಿ ಎಂಬ ವರದಿಗಳನ್ನು ಮಾಜಿ ಸಚಿವ ಹಾಗೂ ಕೆ.ಆರ್. ಪುರಂ ಶಾಸಕ ಬೈರತಿ ಬಸವರಾಜ್ ಅವರು ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು ತಮ್ಮ ಚಾರಿತ್ರ್ಯವಧೆ ಮಾಡಲು ನಡೆಸುತ್ತಿರುವ ರಾಜಕೀಯ ಪ್ರೇರಿತ ಷಡ್ಯಂತ್ರ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, "ಪೊಲೀಸರಿಂದ ಬಂಧನಕ್ಕೊಳಗಾಗಿರುವ ಅನಿಲ್, ನನ್ನ ಸಹೋದರನ ಮಗನೆಂದು ಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತಿದೆ. ಇದು ಸಂಪೂರ್ಣವಾಗಿ ಸತ್ಯಕ್ಕೆ ದೂರವಾದ ಮಾತು. ಆತ ಯಾರೆಂಬುದೇ ನಮಗೆ ತಿಳಿದಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.
"ಈ ಪ್ರಕರಣದಲ್ಲಿ ನಮ್ಮ ಸಹೋದರನ ಮಗ ಶಾಮೀಲಾಗಿದ್ದಾರೆ ಎಂದು ಅನಗತ್ಯವಾಗಿ, ರಾಜಕೀಯ ದುರುದ್ದೇಶದಿಂದ ಕೆಲವರು ನನ್ನ ಮೇಲೆ ಷಡ್ಯಂತ್ರ ನಡೆಸಿದ್ದಾರೆ. ಇಂತಹ ಷಡ್ಯಂತ್ರಗಳನ್ನು ಎದುರಿಸಿಯೇ ನಾನು ಈ ಮಟ್ಟಕ್ಕೆ ಬಂದಿದ್ದೇನೆ, ಇದಕ್ಕೆಲ್ಲಾ ಹೆದರುವ ಜಾಯಮಾನ ನನ್ನದಲ್ಲ," ಎಂದು ಬಸವರಾಜ್ ಸವಾಲು ಹಾಕಿದ್ದಾರೆ.
ತನಿಖೆಗೆ ಸಂಪೂರ್ಣ ಸಹಕಾರ ನೀಡಿರುವುದಾಗಿ ತಿಳಿಸಿದ ಅವರು, "ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದು ನನಗೆ ತಿಳಿದಿದೆ. ಸೂಕ್ತ ಕಾಲದಲ್ಲಿ ಎಲ್ಲಾ ದಾಖಲೆಗಳೊಂದಿಗೆ ಮಾಧ್ಯಮಗಳ ಮುಂದೆ ಬರುತ್ತೇನೆ. ಪ್ರಕರಣವು ವಿಚಾರಣೆ ಹಂತದಲ್ಲಿರುವುದರಿಂದ ನಾನು ಹೆಚ್ಚು ಮಾತನಾಡುವುದಿಲ್ಲ, ದೇಶದ ಕಾನೂನಿಗೆ ತಲೆಬಾಗುತ್ತೇನೆ. ಮುಂದೆಯೂ ತನಿಖೆಗೆ ಸಹಕಾರ ನೀಡುತ್ತೇನೆ. ಏನೇ ಬಂದರೂ ಎದುರಿಸಲು ಸಿದ್ಧನಿದ್ದೇನೆ," ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.