ಮುಡಾ ಹಗರಣ | ಮೈಸೂರಲ್ಲಿ ಬಿಜೆಪಿ ಪ್ರತಿಭಟನೆ: ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ
ಈ ಪ್ರತಿಭಟನೆಯಲ್ಲಿ ಭಾಗಿಯಾಗಲು ಬಿಜೆಪಿ ಕಾರ್ಯಕರ್ತರನ್ನು ಬಸ್ಸುಗಳಲ್ಲಿ ಕರೆದೊಯ್ಯುವ ವೇಳೆ ಮೈಸೂರು ರಸ್ತೆಯಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಚಳವಳಿಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆಲವು ಕನ್ನಡಪರ ಸಂಘಟನೆಗಳ ನಾಯಕರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ;
ಮುಡಾದ 50:50 ಅನುಪಾತದ ನಿವೇಶನ ಹಂಚಿಕೆ ಹಗರಣವನ್ನು ಸಿಬಿಐಗೆ ವಹಿಸಬೇಕು ಹಾಗೂ ಸಿಎಂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಶುಕ್ರವಾರ(ಜು.12) ಮೈಸೂರಿನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಆದರೆ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು ಹಾಗೂ ನೂರಾರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಪ್ರತಿಭಟನೆಯಲ್ಲಿ ಭಾಗಿಯಾಗಲು ಬಿಜೆಪಿ ಕಾರ್ಯಕರ್ತರನ್ನು ಬಸ್ಸುಗಳಲ್ಲಿ ಕರೆದೊಯ್ಯುವ ವೇಳೆ ಮೈಸೂರು ರಸ್ತೆಯಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಚಳವಳಿಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆಲವು ಕನ್ನಡಪರ ಸಂಘಟನೆಗಳ ನಾಯಕರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಕ್ರಮವನ್ನು ಖಂಡಿಸಿ ಹಲವಾರು ಹೋರಾಟಗಾರರು ಮೈಸೂರು - ಬೆಂಗಳೂರು ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.
ಮೈಸೂರಿಗೆ ತೆರಳಲು ಮುಂದಾಗಿದ್ದ ಬಿಜೆಪಿ ನಾಯಕರನ್ನು ಪೊಲೀಸರು ತಡೆದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಬೆಂಗಳೂರು ಮೈಸೂರು ಹೆದ್ದಾರಿಗೆ ಕಾರುಗಳನ್ನು ಅಡ್ಡ ಇಟ್ಟು ರಸ್ತೆ ತಡೆ ನಡೆಸಿದರು. ಮೈಸೂರು ಮುಡಾದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ನೇತೃತ್ವದಲ್ಲಿ ಬೆಂಗಳೂರು ನಾಯಂಡಹಳ್ಳಿ ನೈಸ್ ರೋಡ್ ನಿಂದ ಪ್ರತಿಭಟನೆ ಹೊರಡಲು ಪ್ಲ್ಯಾನ್ ಮಾಡಲಾಗಿತ್ತು. ಆದರೆ ಮೈಸೂರಿಗೆ ತೆರಳಲು ಅವಕಾಶ ನೀಡದ ಪೊಲೀಸರು ಅವರನ್ನು ರಸ್ತೆ ಮಧ್ಯೆಯೇ ತಡೆದರು.
ಮೈಸೂರು ರೋಡ್ ಕದಂಬ ಹೋಟೆಲ್ ಬಳಿ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಮುಂದಕ್ಕೆ ತೆರಳಲು ಪೊಲೀಸರು ಅವಕಾಶ ಕೊಡದ ಹಿನ್ನೆಲೆಯಲ್ಲಿ ಕಣಿಮಿಣಕೆಯ ಟೋಲ್ ಗೇಟ್ ಬಳಿ ವಿಜಯೇಂದ್ರ ನೇತೃತ್ವದಲ್ಲಿ ಮೈಸೂರು ಎಕ್ಸ್‌ಪ್ರೆಸ್ ಹೈವೇ ರೋಡ್ ಬ್ಲಾಕ್ ಮಾಡಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ʻʻಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಕಾಂಗ್ರೆಸ್ ಸರ್ಕಾರ ಒಂದಿಲ್ಲೊಂದು ಹಗರಣ ಮಾಡುತ್ತಿದೆ. ಮೈಸೂರಿನಲ್ಲಿ ನಡೆದಿರುವ ಭೂ ಹಗರಣ ದೊಡ್ಡಮಟ್ಟದ್ದು.ಇದರಲ್ಲಿ ಸಿಎಂ ಸಿದ್ದರಾಮಯ್ಯನವರ ಕುಟುಂಬಕ್ಕೆ ಲಾಭ ತಂದುಕೊಡುವ ಸಲುವಾಗಿ ಕೆಲವು ಅಕ್ರಮಗಳನ್ನು ಮಾಡಲಾಗಿದೆ. ಅಕ್ರಮಗಳ ಮೂಲಕವೇ ಕೋಟ್ಯಂತರ ರೂ. ಮೌಲ್ಯದ ಸೈಟುಗಳನ್ನು ಅಕ್ರಮವಾಗಿ ಪಡೆಯಲಾಗಿದೆ. ಹಾಗಾಗಿ, ನಾವು ಇದನ್ನು ಸಿಬಿಐಗೆ ಕೊಡುವಂತೆ ಆಗ್ರಹಿಸಿದ್ದೇವೆ. ಅದಕ್ಕೆ ರಾಜ್ಯ ಸರ್ಕಾರ ಒಪ್ಪಿಲ್ಲ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು, ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯನವರು ತಮ್ಮ ಸಿಎಂ ಪದವಿಗೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸುತ್ತೇವೆʼʼ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನು ತಡೆಯುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಬಹುತೇಕ ಯಶಸ್ವಿಯಾಗಿದೆ. ಬೆಂಗಳೂರು, ಚಾಮರಾಜನಗರ ಹಾಗೂ ಮೈಂಡ್ಯ ಭಾಗದ ಬಿಜೆಪಿ ಕಾರ್ಯಕರ್ತರು ಮೈಸೂರು ಪ್ರವೇಶಿಸದಂತೆ ಪೊಲೀಸರು ತಡೆದಿರುವುದರಿಂದ, ಮೈಸೂರಿನ ಸ್ಥಳೀಯ ಬಿಜೆಪಿ ನಾಯಕರು, ಕಾರ್ಯಕರ್ತರು ಹಾಗೂ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಮಾತ್ರ ಪ್ರತಿಭಟನೆ ನಡೆಸಲು ಸಾಧ್ಯವಾಯಿತು.