ಮುಡಾ ಅಕ್ರಮ| ಬಿಜೆಪಿ ಆರೋಪಕ್ಕೆ ಸಿದ್ದರಾಮಯ್ಯ ಉತ್ತರ: ಅರಿಶಿನ, ಕುಂಕುಮ ರೀತಿಯಲ್ಲಿ ನನ್ನ ಹೆಂಡ್ತಿಗೆ ಬಾಮೈದನ ಜಮೀನು ಗಿಫ್ಟ್!

Update: 2024-07-02 11:57 GMT

ಸಿಎಂ ಸಿದ್ದರಾಮಯ್ಯ ತಮ್ಮ ಧರ್ಮ ಪತ್ನಿ ಹೆಸರಿನಲ್ಲಿ ನಿಯಮ ಬಾಹಿರವಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (MUDA) ನಿವೇಶನ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂಪಾಯಿ ದಲಿತರ ಹಣವನ್ನು ಗುಳುಂ ಮಾಡಿರುವ 'ಸಿದ್ಧ'ಹಸ್ತರು ಈಗ ಮೈಸೂರಿನ ಮುಡಾದಲ್ಲಿ ₹4,000 ಕೋಟಿ ಗುಳುಂ ಮಾಡುವ ಮೂಲಕ ಮತ್ತೊಮ್ಮೆ ತಮ್ಮ 'ಕೈ'ಚಳಕ ಪ್ರದರ್ಶನ ಮಾಡಿದ್ದಾರೆ ಎಂದು ಬಿಜೆಪಿ  ಮುಖಂಡ ಹಾಗೂ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಆರೋಪ ಮಾಡಿದ್ದಾರೆ.  ಈ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳವಾರ ತಿರುಗೇಟು ನೀಡಿದ ಸಿದ್ದರಾಮಯ್ಯ,  ʻʻಇದು ಬಿಜೆಪಿಯವರ ಕಾಲದಲ್ಲಿ ಆಗಿದ್ದು. 1 ಎಕರೆ 15 ಗುಂಟೆ ಜಮೀನು ನನ್ನ ಹೆಂಡತಿ ಹೆಸರಿನಲ್ಲಿದೆ. ಈ ಜಮೀನನ್ನು ಬಾಮೈದ ತೆಗೆದುಕೊಂಡು ಅರಿಶಿನ-ಕುಂಕುಮ ರೀತಿಯಲ್ಲಿ ಉಡುಗೊರೆಯಾಗಿ ನನ್ನ ಪತ್ನಿಗೆ ಕೊಟ್ಟಿದ್ದಾನೆ. ನಾನು ಅಧಿಕಾರದಲ್ಲಿದ್ದಾಗ ಜಮೀನು ಖರೀದಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ʻʻಕಾನೂನು ಪ್ರಕಾರ 50:50 ಅನುಪಾತದಲ್ಲಿ ಜಮೀನು ಕೊಡುವುದಾಗಿ ಮುಡಾ ಹೇಳಿದೆ. ಆದರೆ ಮುಡಾದವರು ಜಮೀನನ್ನು ಸೈಟ್ ಮಾಡಿ ಹಂಚಿಬಿಟ್ಟರು. ಹಂಚಿದ ಮೇಲೆ ನಮಗೆ ಜಮೀನು ಇಲ್ಲದೆ ಹಾಗೆ ಆಯ್ತು. ಅದಕ್ಕೆ ಮುಡಾದವರು ನಿಮಗೆ 50:50 ಅನುಪಾತದಲ್ಲಿ ಜಮೀನು ಕೊಡುತ್ತೇವೆ ಎಂದರು. ಅದಕ್ಕೆ ಬೇರೆ ಕಡೆ ಜಮೀನು ಕೊಟ್ಟರು, ಇದು ತಪ್ಪಾ? ಕಾನೂನಿನ ಪ್ರಕಾರವೇ ನಮಗೆ ಜಮೀನು ಹಂಚಿದ್ದಾರೆʼʼ ಎಂದರು.

ಈ ಬಗ್ಗೆ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್‌ ಪ್ರತಿಕ್ರಿಯಿಸಿದ್ದು, ʻʻಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ಹೆಸರು ಕೇಳಿ ಬರುತ್ತಿದೆ. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಫಲಾನುಭವಿ ಎಂದು ಹೇಳುತ್ತಿದ್ದಾರೆ. ಈ ಸಂಬಂಧ ಅನೇಕರು ಹಿಟ್ ಆ್ಯಂಡ್​ ರನ್ ಹೇಳಿಕೆ ಕೊಡುತ್ತಿದ್ದಾರೆ. ದಾಖಲೆ ಇಲ್ಲದೆ ಸುಮ್ಮನೆ ಆರೋಪ ಮಾಡಬಾರದುʼʼ ಎಂದು ಹೇಳಿದರು.

ʻʻ2004ರಲ್ಲಿ ಕೆಸರೆ ಗ್ರಾಮದ ಸರ್ವೆ ನಂ.464ರಲ್ಲಿ 3.16 ಎಕರೆ, ಸರ್ವೆ ನಂ.464ರಲ್ಲಿ 3.16 ಎಕರೆ ಮಲ್ಲಿಕಾರ್ಜುನ್​ ಎಂಬುವರಿಗೆ ಸೇರಿದೆ. 1988ರಲ್ಲಿ ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಪಾರ್ವತಿ ಅವರಿಗೆ ಜಾಗವನ್ನು ದಾನ ಪತ್ರ ಮೂಲಕ ಕೊಟ್ಟಿದ್ದಾರೆ. 2007ರಲ್ಲಿ 50:50 ಅನುಪಾತದಲ್ಲಿ ಕಾನೂನಿನ ಮೂಲಕ ಪರಿಹಾರವಾಗಿ 71,457 ಚದರ ಅಡಿ ಜಾಗ ಕೊಡಬೇಕಿತ್ತು. ಆದರೆ, 38,284 ಚದರ ಅಡಿ ಜಾಗ ಕೊಟ್ಟಿದ್ದಾರೆʼʼ ಎಂದು ತಿಳಿಸಿದರು.

ʻʻವಿಜಯನಗರ ಬಡಾವಣೆಯಲ್ಲಿ 14 ನಿವೇಶನ ಕೊಟ್ಟಿದ್ದಾರೆ. ಇದರಿಂದ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ನಷ್ಟವೇ ಆಗಿದೆ. ಸಿಎಂ ಪತ್ನಿ ಪಾರ್ವತಿ ಅವರಿಗೆ 2021ರಲ್ಲಿ ಜಾಗ ಕೊಡಲಾಗಿದೆ. ಆಗ ಬಿಜೆಪಿ ಸರ್ಕಾರವೇ ಇತ್ತು, ಮುಡಾ ಪುಕ್ಕಟೆಯಾಗಿ ಕೊಟ್ಟಿಲ್ಲʼʼ ಎಂದು ಹೇಳಿದರು.

ಬಿಜೆಪಿಯ ಆರೋಪ ಏನು? 

ಈ ಬಗ್ಗೆ ಬಿಜೆಪಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ʻʻಗೋಲ್ಮಾಲ್ ಸಿಎಂ ₹4,000 ಕೋಟಿ ಗುಳುಂʼʼ ಎಂದು ವ್ಯಂಗ್ಯ ಮಾಡಿದೆ. ಮೈಸೂರಿನ ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ, ಸಿಎಂ ಸಿದ್ದರಾಮಯ್ಯ ಅವರ ಮುಂದೆ ಕೆಲವು ಪ್ರಶ್ನೆಗಳನ್ನು ಇಟ್ಟಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂಪಾಯಿ ದಲಿತರ ಹಣವನ್ನ ಗುಳುಂ ಮಾಡಿರುವ 'ಸಿದ್ಧ'ಹಸ್ತರು ಈಗ ಮೈಸೂರಿನ ಮುಡಾದಲ್ಲಿ ₹4,000 ಕೋಟಿ ಗುಳುಂ ಮಾಡುವ ಮೂಲಕ ಮತ್ತೊಮ್ಮೆ ತಮ್ಮ 'ಕೈ'ಚಳಕ ಪ್ರದರ್ಶನ ಮಾಡಿದ್ದಾರೆ.

ಗೋಲ್ಮಾಲ್ ಸಿಎಂ ಸಿದ್ದರಾಮಯ್ಯನವರೇ, ಈ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರವಿದೆಯೇ?

1.) ಗೋಲ್ಮಾಲ್ ಸಿಎಂ ಸಿದ್ದರಾಮಯ್ಯನವರೇ, ತಮ್ಮ ಧರ್ಮ ಪತ್ನಿ ಅವರ ಹೆಸರಿನಲ್ಲೂ ನಿಯಮ ಬಾಹಿರವಾಗಿ ನಿವೇಶನ ವರ್ಗಾವಣೆ ಆಗಿರುವ ಸುದ್ದಿ ಹೊರಬಂದಿದೆಯಲ್ಲ ಇದನ್ನ ಹೇಗೆ ಸಮರ್ಥನೆ ಮಾಡಿಕೊಳ್ಳುತ್ತೀರಿ?

2.) ಆರೋಪ ಕೇಳಿಬಂದಿರುವ ಮುಡಾ ಅಧಿಕಾರಿಗಳನ್ನ ಅಮಾನತು ಮಾಡದೆ, ಕೇವಲ ವರ್ಗಾವಣೆ ಮಾಡಿ ಕೈತೊಳೆದುಕೊಂಡಿದ್ದೀರಲ್ಲ, ಯಾರನ್ನು ರಕ್ಷಣೆ ಮಾಡಲು ಹೊರಟಿದ್ದೀರಿ?

3.) 4,000 ಕೋಟಿ ರೂಪಾಯಿ ಮೌಲ್ಯದ ಈ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣವನ್ನ ಅಸಲಿಗೆ ಸಿಬಿಐಗೆ ವಹಿಸಬೇಕು ಅಥವಾ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ತನಿಖಾ ಆಯೋಗಕ್ಕೆ ನೀಡಬೇಕು. ಅದು ಬಿಟ್ಟು ತನಿಖೆಗೆ ಇಬ್ಬರು ಐಎಎಸ್ ಅಧಿಕಾರಿಗಳನ್ನ ನೇಮಿಸಿ ಪ್ರಕರಣವನ್ನ ಮುಚ್ಚಿಹಾಕಲು ಹೊರಟಿದ್ದೀರಲ್ಲ ಈ ಹಗರಣದಲ್ಲಿ ತಮ್ಮ ಪಾಲೆಷ್ಟು?

4.) 50:50 ಅನುಪಾತ ಹಂಚಿಕೆಗೆ ಅನುಮತಿ ನೀಡಿದ್ದು ಯಾರು?

5.)ಪರ್ಯಾಯ ನಿವೇಶನ ನೀಡುವಾಗ ಅದೇ ಬಡಾವಣೆ ಬಿಟ್ಟು ಲಾಭದ ಬಡಾವಣೆಗಳಲ್ಲಿ ಅವಕಾಶಕ್ಕೆ ಶಿಫಾರಸ್ಸು ಮಾಡಿದ್ದು ಯಾರು?

6.) ಸಚಿವ ಸಂಪುಟದ ಅನುಮತಿ ಪಡೆಯದೆ ಮನಸ್ಸಿಗೆ ಬಂದಂತೆ ನಿವೇಶನ ನೀಡಲು ಅನುಮತಿ ನೀಡಿದ್ದು ಯಾರು?

7.) ನಿಮ್ಮ ತವರು ಜಿಲ್ಲೆಯಲ್ಲಿ, ಸ್ವಂತ ಊರಿನಲ್ಲಿ, ತಮ್ಮ ಆಪ್ತ ಸಚಿವರ ಇಲಾಖೆಯಲ್ಲಿ, ಇಂಥದ್ದೊಂದು ಬೃಹತ್ ಹಗರಣ ತಮ್ಮ ಗಮನಕ್ಕೆ ಬಾರದೆ, ತಮ್ಮ ಕೈವಾಡವಿಲ್ಲದೆ ನಡೆಯಲು ಸಾಧ್ಯವೇ?


Tags:    

Similar News