BJP Infighting | ಬಿ.ವೈ.ವಿಜಯೇಂದ್ರ ವಿರುದ್ಧ ಸುಧಾಕರ್ ಕಿಡಿ; ಸುಮ್ಮನಿರಲಾರೆ, ಇನ್ನೇನಿದ್ದರೂ ಯುದ್ಧವೇ ಎಂದ ಸಂಸದ
"ಬಿಜೆಪಿಯವರು ನಿನ್ನನ್ನು ನಡುನೀರಿನಲ್ಲಿ ಕೈ ಬಿಡಲಿದ್ದಾರೆ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದರು. ಆದರೂ ಬಿಜೆಪಿ ಸೇರಿದೆ. ಈಗ ಆ ಎಚ್ಚರಿಕೆ ಮಾತುಗಳು ನಿಜವೆನಿಸಿವೆ. ತಪ್ಪು ಮಾಡಿದೆ ಎನಿಸುತ್ತಿದೆ" ಎಂದು ಸುಧಾಕರ್ ಹೇಳಿದ್ದಾರೆ.;
ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ ವಿರುದ್ಧ ಬಂಡಾಯ ಸಾರಿರುವ ಶಾಸಕ ಬಸನಗೌಡ ಪಾಟೀಲ ಬಣದ ನಾಯಕರು, ಮಾಜಿ ಸಚಿವ ಶ್ರೀರಾಮುಲು ನಂತರ ಇದೀಗ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ.ಕೆ. ಸುಧಾಕರ್ ಕೂಡ ತಿರುಗಿಬಿದ್ದಿದ್ದಾರೆ.
"ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರದ ʼಏಕಚಕ್ರಾಧಿಪತ್ಯʼದ ಧೋರಣೆ ಅನುಸರಿಸುತ್ತಿದ್ದು, ಬಿಜೆಪಿಯನ್ನು ಸ್ವಂತ ಆಸ್ತಿ ಎಂದುಕೊಂಡಂತಿದೆ. ವಿಜಯೇಂದ್ರ ಅಹಂಕಾರಕ್ಕೆ ನನ್ನ ಧಿಕ್ಕಾರವಿದೆ. ಕೂಡಲೇ ಬಿಜೆಪಿ ಅಧ್ಯಕ್ಷರನ್ನು ಬದಲಾವಣೆ ಮಾಡುವಂತೆ ವರಿಷ್ಠರನ್ನು ಆಗ್ರಹಿಸುತ್ತೇನೆ" ಎಂದು ಡಾ.ಕೆ. ಸುಧಾಕರ್ ವಾಗ್ದಾಳಿ ನಡೆಸಿರುವುದು ಆಂತರಿಕ ಭಿನ್ನಮತಕ್ಕೆ ಮತ್ತಷ್ಟು ಪುಷ್ಠಿ ನೀಡುವಂತಿದೆ.
ಸುಧಾಕರ್ ಆಕ್ರೋಶ ಏಕೆ?
"ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ನೇಮಕ ಪ್ರಕ್ರಿಯೆಯಲ್ಲಿ ಬಿ.ವೈ.ವಿಜಯೇಂದ್ರ ಅವರು ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ನನ್ನನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ವಿಜಯೇಂದ್ರರಿಂದಲೇ ಪಕ್ಷ ಅವನತಿ ಆಗಲಿದೆ" ಎಂಬುದು ಡಾ. ಕೆ. ಸುಧಾಕರ್ ಆರೋಪ.
ವಿಧಾನಸಭೆ ಚುನಾವಣೆ ಸೋಲಿಗೆ ವಿಜಯೇಂದ್ರ ಹಿಂಬಾಲಕರೇ ಕಾರಣವಾಗಿದ್ದ ಸಂಗತಿ ಕ್ಷೇತ್ರದಲ್ಲಿ ಹರಿದಾಡಿತ್ತು. ದೊಡ್ಡಬಳ್ಳಾಪುರದಲ್ಲಿ ಧೀರಜ್ ಮುನಿರಾಜುಗೆ ಟಿಕೆಟ್ ಕೊಡುವ ವಿಚಾರದಲ್ಲೂ ಸುಧಾಕರ್ ಅಭಿಪ್ರಾಯ ಕಡೆಗಣಿಸಲಾಗಿತ್ತು. ಅಲ್ಲದೇ ಸುಧಾಕರ್ ಅವರನ್ನು ಸೋಲಿಸಲೆಂದೇ ಪಕ್ಷದ ಕೆಲವರು ಕೆಲಸ ಮಾಡಿದ್ದರು. ಈ ಬಗ್ಗೆ ದೂರು ನೀಡಿದ್ದರೂ ಬಿಜೆಪಿ ಅಧ್ಯಕ್ಷರಾಗಿದ್ದ ವಿಜಯೇಂದ್ರ ಕ್ರಮ ಕೈಗೊಂಡಿರಲಿಲ್ಲ. ಈಗ ಅಂತಹವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿರುವುದು ಸುಧಾಕರ್ ಆಕ್ರೋಶಕ್ಕೆ ಕಾರಣವಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ವಿಚಾರವಾಗಿ ಯಲಹಂಕ ಶಾಸಕ ವಿಶ್ವನಾಥ್ ಹಾಗೂ ಸುಧಾಕರ್ ನಡುವೆ ವಾಕ್ಸಮರ ನಡೆದಿತ್ತು. ಒಂದು ಹಂತದಲ್ಲಿ ವಿಶ್ವನಾಥ್ ಸೇರಿ ಅವರ ಬೆಂಬಲಿಗರು ಕೋವಿಡ್ ಕಳ್ಳ ಎಂದು ಟೀಕಿಸಿ ಪ್ರತಿಭಟನೆ ಕೂಡ ನಡೆಸಿದ್ದರು. ಆದಾಗ್ಯೂ ವಿಜಯೇಂದ್ರ ಚಕಾರ ಎತ್ತಿರಲಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಕೋವಿಡ್ ಹಗರಣ ಕುರಿತು ತನಿಖೆ ಆರಂಭಿಸಿದಾಗಲೂ ವಿಜಯೇಂದ್ರ ಅವರು ಸುಧಾಕರ್ ಪರವಾಗಿ ಮಾತನಾಡಿರಲಿಲ್ಲ. ಈ ಎಲ್ಲ ಕಾರಣಗಳಿಂದ ಸುಧಾಕರ್ ಅವರು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಸುಮ್ಮನೆ ಕೂರುವ ದಿನಗಳು ಮುಗಿದಿವೆ
"ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸರ್ವಾಧಿಕಾರ ಧೋರಣೆ ಅನೇಕರಿಗೆ ನೋವು ತಂದಿದೆ. ಕೇಂದ್ರದ ನಾಯಕರು ನೀಡಿರುವ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡು, ಮೆರೆಯುತ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಗುಣ ಅವರಲ್ಲಿಲ್ಲ. ನಾನು ಎಂಟು ಕ್ಷೇತ್ರಗಳನ್ನು ಪ್ರತಿನಿಧಿಸುವ ಸಂಸತ್ ಸದಸ್ಯ. ವಿಜಯೇಂದ್ರ ಅವರ ಹಿಂಬಾಲಕರು ನನ್ನನ್ನು ಸೋಲಿಸಲು ಯತ್ನಿಸಿದ್ದರೂ ಜನರ ಆಶೀರ್ವಾದದಿಂದ ಗೆದ್ದು ಬಂದಿದ್ದೇನೆ. ಸುಮ್ಮನೆ ಕೂರುವ ದಿನಗಳು ಮುಗಿದಿವೆ. ಇನ್ನೇನಿದ್ದರೂ ಯುದ್ಧ" ಎಂದು ಎಚ್ಚರಿಕೆ ನೀಡಿದ್ದಾರೆ.
"ವಿಜಯೇಂದ್ರ ಅವರು ಮನಸೋ ಇಚ್ಛೆ ಕಾರ್ಯ ನಿರ್ವಹಿಸಲು ಬಿಜೆಪಿ ಪಕ್ಷ ಅವರ ಸ್ವಂತ ಆಸ್ತಿಯಲ್ಲ. ತಾಕತ್ತಿದ್ದರೆ ಬಯಲುಸೀಮೆಯಲ್ಲಿ ಒಂದು ಸೀಟು ಗೆಲ್ಲಲಿ" ಎಂದು ಸವಾಲು ಹಾಕಿದ್ದಾರೆ.
ನನ್ನ ವಿರುದ್ಧ ಕೆಲಸ ಮಾಡಿದವರಿಗೆ ಮಣೆ
"ಕಾಂಗ್ರೆಸ್ನಿಂದ ಬಿಜೆಪಿಗೆ ಬಂದಾಗಿನಿಂದಲೂ ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ. ಆದರೆ, ವಿಜಯೇಂದ್ರ ಅವರು ನನ್ನನ್ನು ರಾಜಕೀಯವಾಗಿ ಸಮಾಧಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಕೆಲಸ ಮಾಡಿದವರಿಗೆ ಪಕ್ಷದ ಜಿಲ್ಲಾಧ್ಯಕ್ಷರ ಸ್ಥಾನ ನೀಡಲಾಗಿದೆ. ಗೋವಿಂದ ಕಾರಜೋಳ ಅವರಿಗೆ ಹೊಡೆಯಲು ಬಂದವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಗಿದೆ. ಯಾವುದೇ ಮುಖಂಡರಿಗೆ ವಿಜಯೇಂದ್ರ ಗೌರವ ನೀಡುತ್ತಿಲ್ಲ. ಈ ಬಗ್ಗೆ ಸಂಘ ಪರಿವಾರದ ಹಿರಿಯರಿಗೂ ತಿಳಿಸಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡುತ್ತೇನೆ. ವಿಜಯೇಂದ್ರ ಅವರಿಗೆ ಅವರ ತಂದೆಯವರ ಯಾವುದೇ ಗುಣ ಇಲ್ಲ.ಬಸವರಾಜ ಬೊಮ್ಮಾಯಿ ಅವರೊಂದಿಗೆ ಕೆಲಸ ಮಾಡಿದ್ದೇನೆ ಎಂಬ ಕಾರಣಕ್ಕೆ ನನ್ನ ಮೇಲೆ ದ್ವೇಷ ಕಾರುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ.
ಬಿಜೆಪಿಗೆ ಬಂದು ತಪ್ಪು ಮಾಡಿದೆ
2019 ರಲ್ಲಿ ಕಾಂಗ್ರೆಸ್ನಿಂದ ಬಿಜೆಪಿಗೆ ಬರುವಾಗ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ, ಈಗಿನ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿಯವರು ನಿನ್ನನ್ನು ನಡು ನೀರಿನಲ್ಲಿ ಕೈ ಬಿಡಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದರು. ಆದರೂ ನಾನು ಬಿಜೆಪಿ ಸೇರಿದೆ. ಈಗ ಸಿದ್ದರಾಮಯ್ಯ ಅವರ ಎಚ್ಚರಿಕೆ ಮಾತುಗಳು ನಿಜವೆನಿಸಿವೆ. ಇಲ್ಲಿಗೆ ಬಂದು ತಪ್ಪು ಮಾಡಿದೆ ಎನಿಸುತ್ತಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹಲವು ನಾಯಕರ ಅಸಮಾಧಾನ
ಬಿಜೆಪಿಯಲ್ಲಿ ದಿನಕ್ಕೊಬ್ಬರು ನಾಯಕರು ವಿಜಯೇಂದ್ರ ವಿರುದ್ಧ ಅಸಮಾಧಾನ ಹೊರಹಾಕುತ್ತಿರುವುದು ಭಿನ್ನಮತವನ್ನು ಮತ್ತಷ್ಟು ಹೆಚ್ಚಿಸಿದೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಬಣವು ಈ ಮೊದಲಿನಿಂದಲೂ ವಿಜಯೇಂದ್ರ ನಾಯಕತ್ವವನ್ನು ವಿರೋಧಿಸುತ್ತಲೇ ಬಂದಿದೆ. ಅಲ್ಲದೇ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಬಣದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮುಂದಾಗಿದೆ. ಇನ್ನು ಶಾಸಕ ಸುನಿಲ್ ಕುಮಾರ್ ಅವರು ಪಕ್ಷದ ನೀಡಿರುವ ಜವಾಬ್ದಾರಿಯಿಂದ ಕೆಳಗಿಳಿಯುವ ನಿರ್ಧಾರ ಕೈಗೊಂಡಿರುವುದು. ಕೋರ್ ಕಮಿಟಿ ಸಭೆಯಲ್ಲೇ ಬಿಜೆಪಿ ಉಸ್ತುವಾರಿ ಹಾಗೂ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಿರುದ್ಧ ಮಾಜಿ ಸಚಿವ ಶ್ರೀರಾಮುಲು, ಶಾಸಕ ಅಶ್ವತ್ಥನಾರಾಯಣ ಅವರು ಅಸಮಾಧಾನ ವ್ಯಕ್ತಪಡಿಸಿರುವುದು ವಿಜಯೇಂದ್ರ ನೇತೃತ್ವದ ಬಣಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇನ್ನು ಬಿಜೆಪಿ ಶಾಸಕರಾದ ಶಿವರಾಂ ಹೆಬ್ಬಾರ್ ಹಾಗೂ ಎಸ್.ಟಿ.ಸೋಮಶೇಖರ್ ಅವರು ಬಹಿರಂಗವಾಗಿ ವಿಜಯೇಂದ್ರ ವಿರುದ್ಧ ಹೇಳಿಕೆ ನೀಡುತ್ತಿದ್ದು, ಧೈರ್ಯವಿದ್ದರೆ ಶಿಸ್ತುಕ್ರಮ ಜರುಗಿಸಲು ಎಂದು ಸವಾಲು ಹಾಕುತ್ತಿರುವುದು ಕೂಡ ವಿಜಯೇಂದ್ರ ಸಾರಥ್ಯಕ್ಕೆ ಮುಳುವಾಗಿದೆ ಎಂದು ಮಾತುಗಳು ಕೇಳಿಬರುತ್ತಿವೆ.
ಅಧ್ಯಕ್ಷರ ಆಯ್ಕೆಯಲ್ಲಿ ನನ್ನ ಪಾತ್ರವಿಲ್ಲ :ವಿಜಯೇಂದ್ರ
ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅವರ ಆಕ್ರೋಶಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಣ್ಣಗಾಗಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಜಿಲ್ಲಾಧ್ಯಕ್ಷರ ನೇಮಕ ವಿಚಾರದಲ್ಲಿ ನಾನು ಯಾವುದೇ ಅಭಿಪ್ರಾಯ ನೀಡಿಲ್ಲ. ಅಭಿಪ್ರಾಯ ಕೊಡುವುದಕ್ಕೂ ಸಾಧ್ಯವಿಲ್ಲ. ಚುನಾವಣಾಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ 13 ಮಂದಿ ವೀಕ್ಷಕರು ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಸಿದ್ದಾರೆ. ಡಾ. ಸುಧಾಕರ್ ಅವರು ಹಿರಿಯರು. ಹೀಗೆಲ್ಲಾ ಆರೋಪ ಮಾಡಬಾರದು" ಎಂದು ಹೇಳಿದ್ದಾರೆ.
"ಚುನಾವಣಾಧಿಕಾರಿ ಹಾಗೂ ವೀಕ್ಷಕರು ಪ್ರತಿ ಜಿಲ್ಲೆಯಿಂದ ತಲಾ ಮೂವರ ಹೆಸರನ್ನು ಕಳುಹಿಸಿಕೊಡಲಾಗಿತ್ತು. ನನ್ನ ಜಿಲ್ಲೆಗೆ ನಾನು ಅಭಿಪ್ರಾಯ ಕೊಡಬಹುದೇ ಹೊರತು, ಬೇರೆ ಜಿಲ್ಲೆಗಳಿಗೆ ಅಭಿಪ್ರಾಯ ಕೊಡುವ ಅಧಿಕಾರ ನನಗಿಲ್ಲ" ಎಂದು ಹೇಳಿದ್ದಾರೆ.
"ವಿಜಯೇಂದ್ರ ನನ್ನನ್ನು ರಾಜಕೀಯವಾಗಿ ಸಮಾಧಿ ಮಾಡಲು ಹೊರಟಿದ್ದಾರೆ ಎಂದು ಸುಧಾಕರ್ ಹೇಳಿಕೆ ನೀಡಿರುವುದು ಸರಿಯಲ್ಲ. ಅದು ಅವರಿಗೆ ಶೋಭೆ ತರುವುದಿಲ್ಲ. ಸುಧಾಕರ್ ಸೇರಿದಂತೆ ಹಲವು ನಾಯಕರು ಸಲಹೆಯಂತೆ ಅವರಿಗೆ ಹೇಗೆ ಬೇಕೋ ಹಾಗೆ ಬದಲಾಗಲು ಪ್ರಯತ್ನಿಸುತ್ತೇನೆ . ಸುಧಾಕರ್ ಅವರು ನನ್ನ ಬಗ್ಗೆ ಅನ್ಯಥಾ ಭಾವಿಸಬಾರದು. ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ಎಳ್ಳಷ್ಟೂ ನನ್ನ ಪಾತ್ರವಿಲ್ಲ" ಎಂದು ಹೇಳಿದ್ದಾರೆ.