Karnataka Drug Mafia | ಡ್ರಗ್ಸ್ ದಂಧೆ ; 200ಕ್ಕೂ ಹೆಚ್ಚು ವಿದ್ಯಾರ್ಥಿಗಳು, ವಿದೇಶಿಗರ ಗಡಿಪಾರು
ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ವಿದ್ದು ಮಾದಕ ವ್ಯಸನಕ್ಕೆ ಸಿಲುಕಿ ಜೀವನ ಹಾಳು ಮಾಡಿಕೊಳ್ಳಬೇಡಿ. ವಿಶ್ವದಲ್ಲಿ ಮಾದಕ ವಸ್ತುಗಳು ಮತ್ತು ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಆಂದೋಲನ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.;
ಗೃಹ ಸಚಿವ ಡಾ. ಜಿ. ಪರಮೇಶ್ವರ್ ರಕ್ಷಾ ಕ್ಯೂಆರ್ ಕೋಡ್ ಬಿಡುಗಡೆ ಮಾಡಿದರು.
ರಾಜ್ಯದಾದ್ಯಂತ ಕಳೆದ ಒಂದು ವರ್ಷದಲ್ಲಿ 45 ಕೋಟಿ ರೂ. ಮೌಲ್ಯದ 4,000 ಕೆ.ಜಿ ಗಾಂಜಾ ಸೇರಿದಂತೆ ವಿವಿಧ ಬಗೆಯ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ವಿದೇಶಿಗರನ್ನು ಗಡಿಪಾರು ಮಾಡಲಾಗಿದೆ.
ಕೆಲ ರಾಜ್ಯಗಳಲ್ಲಿ ಡ್ರಗ್ ಪೆಡ್ಲರ್ಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಗೂಂಡಾ ಕಾಯ್ದೆ ಹೇರಲಾಗುತ್ತಿದೆ. ರಾಜ್ಯದಲ್ಲೂ ಡ್ರಗ್ಸ್ ಚಟುವಟಿಕೆ ಮಟ್ಟ ಹಾಕಲು ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.
ಕಳೆದ ವಿಧಾನಸಭೆ ಅಧಿವೇಶನದಲ್ಲಿ ʼಮಾದಕ ವ್ಯಸನ ಮುಕ್ತ ಕರ್ನಾಟಕʼ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಡ್ರಗ್ಸ್ ದಂಧೆಗೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳಸಾಗಾಣಿಕೆ ವಿರೋಧಿ ದಿನ ಆಚರಣೆಯಲ್ಲಿ ಮಾತನಾಡಿದರು.
ಪಂಜಾಬ್ನಲ್ಲಿ ಡ್ರಗ್ಸ್ ಹಾವಳಿಯಿಂದ ʼಉಡ್ತಾ ಪಂಜಾಬ್ʼ ಎಂದು ಕರೆಯಲಾಗುತ್ತಿದೆ. ಇದಕ್ಕೆ ರಾಜ್ಯದಲ್ಲಿ ಎಂದಿಗೂ ಆಸ್ಪದ ನೀಡುವುದಿಲ್ಲ. ಡ್ರಗ್ಸ್ ಚಟುವಟಿಕೆ ಮಟ್ಟಹಾಕಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕರ ಸಹಕಾರ ಅಗತ್ಯ
ಡ್ರಗ್ಸ್ ದಂಧೆಯನ್ನು ಕೇವಲ ಕಾನೂನಿಂದ ಮಾತ್ರ ನಿಲ್ಲಿಸಲು ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರವೂ ಮುಖ್ಯ. ಯುವಕರ ಮನಸ್ಸನ್ನು ಜಾಗೃತ ಮಾಡಲು ಕಾರ್ಯಕ್ರಮ ರೂಪಿಸಿ, ತಿಳಿಹೇಳಲಾಗುತ್ತಿದೆ. ಆನಂತರವೂ ಮುಂದುವರಿದರೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಶಾಲೆಗಳಲ್ಲಿ ಮಾದಕ ವಿರೋಧಿ ಸಮಿತಿ
ರಾಜ್ಯದಲ್ಲಿ 6.50 ಲಕ್ಷ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಕುರಿತು ಜಾಗೃತಿ ಮೂಡಿಸಲು ಮಾದಕ ವಿರೋಧಿ ಸಮಿತಿ ರಚಿಸಲಾಗಿದೆ. ಪ್ರತಿ ತಿಂಗಳು ಸ್ಥಳೀಯ ಠಾಣೆ ಪೊಲೀಸರು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ, ಸಮಸ್ಯೆಗಳಿದ್ದರೆ ಮಾಹಿತಿ ಪಡೆಯಬೇಕು. ಪ್ರತಿ ಕಾಲೇಜಿನಲ್ಲಿ ಮಾದಕ ವಿರೋಧಿ ಸಮಿತಿ ರಚಿಸುವಂತೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಕ್ಯೂಆರ್ ಕೋಡ್ ಬಿಡುಗಡೆ
ರಾಜ್ಯ ಪೊಲೀಸ್ ಇಲಾಖೆ ಯಾವುದನ್ನೂ ರಾಜೀ ಮಾಡಿಕೊಳ್ಳುವುದಿಲ್ಲ. ಡ್ರಗ್ಸ್ ಚಟುವಟಿಕೆಯ ಕುರಿತಾದ ಮಾಹಿತಿ ತಿಳಿದ ಕೂಡಲೇ ಸಾರ್ವಜನಿಕರು ಕ್ಯೂಆರ್ ಕೋಡ್ ಮೂಲಕ ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದು ʼರಕ್ಷಾ ಕ್ಯೂಆರ್ ಕೋಡ್ʼ ಬಿಡುಗಡೆಗೊಳಿಸಲಾಯಿತು.