ಭೂಮಿಯ ನೆರಳಿನಲ್ಲಿ ಕೆಂಪಾಗುವ ಚಂದ್ರ; ಇಂದ ಸಂಪೂರ್ಣ ಚಂದ್ರಗ್ರಹಣ; ಏನಿದರ ವಿಶೇಷ?
ಸೂರ್ಯ ಮತ್ತು ಚಂದ್ರನ ನಡುವೆ ಭೂಮಿಯು ನೇರವಾಗಿ ಬಂದಾಗ ಚಂದ್ರನು ಕೆಂಪು ಅಥವಾ ಕಿತ್ತಳೆ ಬಣ್ಣಕ್ಕೆ ತಿರುಗುವ ಖಗೋಳ ವಿದ್ಯಮಾನವಾಗಿದೆ.;
ಸಂಪೂರ್ಣ ಚಂದ್ರಗ್ರಹಣ
ಅಪರೂಪದ ಖಗೋಳ ವಿದ್ಯಮಾನಕ್ಕೆ ಜಗತ್ತು ಸಜ್ಜಾಗಿದ್ದು, ಭಾನುವಾರ ( ಸೆ.7) ವಿಶ್ವದಾದ್ಯಂತ ಸಂಪೂರ್ಣ ಚಂದ್ರಗ್ರಹಣ ಗೋಚರಿಸಲಿದೆ. ಇದನ್ನು 'ರಕ್ತಚಂದ್ರ' ಎಂದು ಕರೆಯಲಾಗುತ್ತದೆ.
ಸೂರ್ಯ ಮತ್ತು ಚಂದ್ರನ ನಡುವೆ ಭೂಮಿಯು ನೇರವಾಗಿ ಬಂದಾಗ ಚಂದ್ರನು ಕೆಂಪು ಅಥವಾ ಕಿತ್ತಳೆ ಬಣ್ಣಕ್ಕೆ ತಿರುಗುವ ಖಗೋಳ ವಿದ್ಯಮಾನವಾಗಿದೆ. ಈ ಗ್ರಹಣವು ಭಾರತ ಸೇರಿದಂತೆ ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಯುರೋಪ್, ಅಂಟಾರ್ಕ್ಟಿಕಾ, ಪೆಸಿಫಿಕ್ ಹಾಗೂ ಹಿಂದೂ ಮಹಾಸಾಗರ ಪ್ರದೇಶಗಳಲ್ಲಿ ಗೋಚರಿಸುತ್ತದೆ.
ಸಂಪೂರ್ಣ ಚಂದ್ರಗ್ರಹಣ ಎಂದರೇನು?
ಚಂದ್ರಗ್ರಹಣದ ವೇಳೆ ಚಂದ್ರನು ಕೆಂಪು ಬಣ್ಣದಲ್ಲಿ ಗೋಚರಿಸುವುದು ಭೂಮಿಯ ವಾತಾವರಣದ ಕಾರಣ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ, ಸೂರ್ಯನ ಬೆಳಕು ನೇರವಾಗಿ ಚಂದ್ರನನ್ನು ತಲುಪುವುದಿಲ್ಲ.ಆ ಬೆಳಕು ಭೂಮಿಯ ವಾತಾವರಣದ ಮೂಲಕ ಹಾದುಹೋಗುತ್ತದೆ. ಈ ವೇಳೆಯಲ್ಲಿ ವಾತಾವರಣದಲ್ಲಿರುವ ಕಣಗಳು ಮತ್ತು ಅನಿಲಗಳು ನೀಲಿ ಬೆಳಕನ್ನು ಚದುರಿಸುತ್ತವೆ. ಆದರೆ ದೀರ್ಘ ತರಂಗಾಂತರದ ಕೆಂಪು ಬೆಳಕು ಸುಲಭವಾಗಿ ಹಾದುಹೋಗಿ ಚಂದ್ರನನ್ನು ತಲುಪುತ್ತದೆ. ಅದರಿಂದ ಚಂದ್ರನು ಕೆಂಪು, ತಾಮ್ರ ಅಥವಾ ಗಾಢ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಈ ಪ್ರಕ್ರಿಯೆಯನ್ನು ವಿಜ್ಞಾನದಲ್ಲಿ "ರೇಲೀ ಸ್ಕ್ಯಾಟರಿಂಗ್" ಎಂದು ಕರೆಯುತ್ತಾರೆ.
ಗ್ರಹಣದ ವೀಕ್ಷಣೆ ಹೇಗೆ?
ಪ್ರತಿ ಹುಣ್ಣಿಮೆಯಂದು ಚಂದ್ರಗ್ರಹಣ ಸಂಭವಿಸುವುದಿಲ್ಲ. ಏಕೆಂದರೆ, ಚಂದ್ರನ ಕಕ್ಷೆಯು ಭೂಮಿಯ ಕಕ್ಷೆಗೆ ಹೋಲಿಸಿದರೆ ಸುಮಾರು 5 ಡಿಗ್ರಿಗಳಷ್ಟು ಓರೆಯಾಗಿದೆ. ಹೀಗಾಗಿ, ಸಾಮಾನ್ಯವಾಗಿ ಚಂದ್ರನು ಭೂಮಿಯ ನೆರಳಿನ ಮೇಲೆ ಅಥವಾ ಕೆಳಗೆ ಹಾದುಹೋಗುತ್ತಾನೆ. ಸೂರ್ಯ, ಭೂಮಿ ಮತ್ತು ಚಂದ್ರ ಸಂಪೂರ್ಣವಾಗಿ ಒಂದೇ ರೇಖೆಯಲ್ಲಿ ಬಂದಾಗ ಮಾತ್ರ ಈ ಅದ್ಭುತ ವಿದ್ಯಮಾನ ಸಂಭವಿಸುತ್ತದೆ. ಸೂರ್ಯಗ್ರಹಣದಂತೆ, ಚಂದ್ರ ಗ್ರಹಣವನ್ನು ವೀಕ್ಷಿಸಲು ಯಾವುದೇ ವಿಶೇಷ ಉಪಕರಣಗಳ ಅಗತ್ಯವಿಲ್ಲ. ಆಕಾಶವು ಸ್ಪಷ್ಟವಾಗಿದ್ದರೆ ಯಾವುದೇ ಸುರಕ್ಷತಾ ಕನ್ನಡಕಗಳಿಲ್ಲದೆ ಅದನ್ನು ನೇರವಾಗಿ ನೋಡಬಹುದು. ಈ ಖಗೋಳ ವಿದ್ಯಾಮಾನವು ಮಕ್ಕಳು ಮತ್ತು ವಯಸ್ಕರಿಗೆ ಸಮಾನವಾಗಿ ಸುರಕ್ಷಿತವಾಗಿದೆ ಮತ್ತು ಬೈನಾಕ್ಯುಲರ್ ಅಥವಾ ದೂರದರ್ಶಕದ ಮೂಲಕ ವೀಕ್ಷಿಸಿದಾಗ ನೋಟವು ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ. ಚಂದ್ರನು ಭೂಮಿಯ ನೆರಳಿನಲ್ಲಿ ಸಂಪೂರ್ಣವಾಗಿ ಇರುವಾಗ, ಅಂದರೆ ಪೂರ್ಣ ಗ್ರಹಣದ ಹಂತದಲ್ಲಿ, ಸುಮಾರು 107 ನಿಮಿಷಗಳ ಕಾಲ ಕೆಂಪಾಗಿ ಕಾಣಿಸಬಹುದು.
ಈ ಗ್ರಹಣ ಭಾರತದ ಸೇರಿದಂತೆ ಚೀನಾ ಹಾಗೂ ಇಡೀ ಏಷ್ಯಾದಲ್ಲಿಯೂ ಸ್ಪಷ್ಟವಾಗಿ ಗೋಚರಿಸುತ್ತದೆ. ಇದಲ್ಲದೆ, ಪೂರ್ವ ಆಫ್ರಿಕಾ ಮತ್ತು ಪಶ್ಚಿಮ ಆಸ್ಟ್ರೇಲಿಯಾದ ಕೆಲವು ಭಾಗಗಳಲ್ಲಿಯೂ ಇದು ಗೋಚರಿಸುತ್ತದೆ. ಯುರೋಪ್ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ, ಚಂದ್ರೋದಯದ ಸಮಯದಲ್ಲಿ ಸ್ವಲ್ಪ ಸಮಯದವರೆಗೆ ಭಾಗಶಃ ಗ್ರಹಣ ಗೋಚರಿಸುತ್ತದೆ.
ಭಾರತದಲ್ಲಿ ಗ್ರಹಣದ ಸಮಯ
ಸಂಪೂರ್ಣ ಚಂದ್ರಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ಸೆಪ್ಟೆಂಬರ್ 7ರ ರಾತ್ರಿ 11:00 ಗಂಟೆಗೆ ಪ್ರಾರಂಭವಾಗಿ, ಸೆಪ್ಟೆಂಬರ್ 8ರ ಮುಂಜಾನೆ 12:22 ಗಂಟೆಗೆ ಕೊನೆಗೊಳ್ಳಲಿದೆ. ಇದಕ್ಕೂ ಮುನ್ನ, ಚಂದ್ರನು ಭೂಮಿಯ ಹೊರ ನೆರಳನ್ನು ಪ್ರವೇಶಿಸುವುದರಿಂದ, ಪೆನಂಬ್ರಲ್ ಹಂತವು ( ಭಾಗಶಃ ನೆರಳಿನ ಹಂತ) ಸುಮಾರು ರಾತ್ರಿ 10:01 ಗಂಟೆಗೆ ಆರಂಭವಾಗಲಿದೆ. ಯುರೋಪ್ ಮತ್ತು ಆಫ್ರಿಕಾದಲ್ಲಿ ಸಂಜೆಯ ಆರಂಭದಲ್ಲಿ ಚಂದ್ರೋದಯದ ಸಮಯದಲ್ಲಿ ಭಾಗಶಃ ಗ್ರಹಣ ಗೋಚರಿಸಿದರೆ, ಅಮೆರಿಕ ಖಂಡದ ಜನರಿಗೆ ಈ ಗ್ರಹಣ ಸಂಪೂರ್ಣವಾಗಿ ಕಾಣಿಸುವುದಿಲ್ಲ.
ಖಗೋಳ ಪ್ರಿಯರಿಗೆ ವಿಶೇಷ ಅವಕಾಶ
ಈ ಬಾರಿಯ ರಕ್ತ ಚಂದ್ರ ವಿಜ್ಞಾನಿಗಳಿಗೆ ಅಧ್ಯಯನದ ವಿಷಯ ಮಾತ್ರವಲ್ಲ, ಸಾರ್ವಜನಿಕರಿಗೂ ಒಂದು ವಿಶಿಷ್ಟ ಅವಕಾಶವಾಗಿದೆ. ಖಗೋಳ ವಿದ್ಯಾರ್ಥಿಗಳು, ವಿಜ್ಞಾನ ಪ್ರಿಯರು ಮತ್ತು ಸಾಮಾನ್ಯ ಜನರು ಇದನ್ನು ವೀಕ್ಷಿಸುವ ಮೂಲಕ ಭೂಮಿ, ಚಂದ್ರ ಮತ್ತು ಸೂರ್ಯನ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಬಹುದು.