ಮುಂಗಾರು ಆಗಮನ | ರೆಮಲ್‌ ಆತಂಕದ ನಡುವೆಯೂ ಖುಷಿಯ ಸುದ್ದಿ ಕೊಟ್ಟ ಐಎಂಡಿ

ರೆಮಲ್ ಚಂಡಮಾರುತ ಮಳೆ ಮೋಡ ಹೊತ್ತೊಯ್ಯುವ ಆತಂಕದ ನಡುವೆ ಭಾರತೀಯ ಹವಾಮಾನ ಇಲಾಖೆ(IMD) ಸಮಾಧಾನಕರ ಸಂಗತಿಯೊಂದನ್ನು ಬಹಿರಂಗಪಡಿಸಿದೆ. ನಿರೀಕ್ಷೆಯಂತೆ ಮುಂಗಾರು ಮೇ 31ರಂದು ಕೇರಳಕ್ಕೆ ಕಾಲಿಡಲಿದ್ದು, ಆ ಬಳಿಕ ಒಂದು ವಾರದಲ್ಲಿ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಐಎಂಡಿ ಹೇಳಿದೆ.

Update: 2024-05-25 10:40 GMT


ರೆಮಲ್ ಚಂಡಮಾರುತ ಮಳೆ ಮೋಡ ಹೊತ್ತೊಯ್ಯುವ ಆತಂಕದ ನಡುವೆ ಭಾರತೀಯ ಹವಾಮಾನ ಇಲಾಖೆ(IMD) ಸಮಾಧಾನಕರ ಸಂಗತಿಯೊಂದನ್ನು ಬಹಿರಂಗಪಡಿಸಿದೆ. ನಿರೀಕ್ಷೆಯಂತೆ ಮುಂಗಾರು ಮೇ 31ರಂದು ಕೇರಳಕ್ಕೆ ಕಾಲಿಡಲಿದ್ದು, ಆ ಬಳಿಕ ಒಂದು ವಾರದಲ್ಲಿ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಐಎಂಡಿ ಹೇಳಿದೆ.

ನೈರುತ್ಯ ಮುಂಗಾರು ದೇಶದ ಭೂಪ್ರದೇಶಕ್ಕೆ ಪ್ರವೇಶಿಸುವ ಹೊತ್ತಿಗೆ ಸರಿಯಾಗಿ ಬಂಗಾಳಕೊಲ್ಲಿಯಲ್ಲಿ ರೆಮೆಲ್ ಚಂಡಮಾರುತ ಸೃಷ್ಟಿಯಾಗುತ್ತಿದೆ. ಆ ಹಿನ್ನೆಲೆಯಲ್ಲಿ ಮಳೆಮೋಡಗಳನ್ನು ಪ್ರಬಲ ಚಂಡಮಾರುತ ಚದುರಿಸುವ ಸಾಧ್ಯತೆ ಇದೆ ಎಂಬ ಆತಂಕ ಎದುರಾಗಿತ್ತು. ಆದರೆ, ಇದೀಗ ಮುಂಗಾರು ನಿರೀಕ್ಷೆಯಂತೆ ರಾಜ್ಯಕ್ಕೆ ಜೂನ್ 6-7ರ ಹೊತ್ತಿಗೆ ಕಾಲಿಡಲಿದೆ. ಚಂಡಮಾರುತದ ಪರಿಣಾಮ ಕೆಲಮಟ್ಟಿಗೆ ಇದ್ದರೂ ಅದರಿಂದಾಗಿ ಮುಂಗಾರು ವಿಳಂಬ ಸಾಧ್ಯತೆ ಇಲ್ಲ ಎಂದು ಐಎಂಡಿ ಹೇಳಿದೆ.

ಜೂನ್ ಮೊದಲ ವಾರದಲ್ಲಿ ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸುವ ಮುಂಗಾರು, ಜೂನ್ ಎರಡನೇ ವಾರದ ಹೊತ್ತಿಗೆ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಾದ್ಯಂತ ವ್ಯಾಪಿಸಲಿದೆ. ಸದ್ಯ ಮುಂಗಾರು ಮಾರುತಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದು, ಕೇರಳದತ್ತ ಧಾವಿಸುತ್ತಿವೆ ಎಂದು ಇಲಾಖೆ ಮಾಹಿತಿ ನೀಡಿದೆ.

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ರಾಜ್ಯದ ದಕ್ಷಿಣಕನ್ನಡ, ಉಡುಪಿ, ಮಡಿಕೇರಿ, ಶಿವಮೊಗ್ಗ ಮತ್ತಿತರ ಕರಾವಳಿ ಮತ್ತು ಘಟ್ಟಪ್ರದೇಶದಲ್ಲಿ ಮೋಡಕವಿದ ವಾತಾವರಣವಿದ್ದು, ಆಗಾಗ ಜಿಟಿಜಿಟಿ ಮಳೆ ಸುರಿಯುತ್ತಿದೆ.

ಮತ್ತೊಂದು ಕಡೆ ರೆಮಲ್ ಚಂಡಮಾರುತದ ಪರಿಣಾಮವಾಗಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದೂ ಹವಾಮಾನ ಮುನ್ಸೂಚನೆ ನೀಡಲಾಗಿದೆ.

ಕೇರಳದಲ್ಲಿ ಭಾರೀ ಮಳೆ ಎಚ್ಚರಿಕೆ

ಕೇರಳದಲ್ಲಿ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದ್ದು, ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಭಾರೀ ಮಳೆ ಬರುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಐಎಂಡಿ, 'ಯೆಲ್ಲೋ ಅಲರ್ಟ್' ಘೋಷಿಸಿದ್ದು, ತಿರುವನಂತಪುರ, ಕೊಲ್ಲಂ, ಅಲಪ್ಪುಳ, ಕಣ್ಣೂರು, ಕಾಸರಗೋಡು, ಎರ್ನಾಕುಲಂ ಹಾಗೂ ಕೋಝಿಕ್ಕೋಡ್ ಜಿಲ್ಲೆಗಳಿಗೆ 6ರಿಂದ 11 ಸೆಂ.ಮೀ.ವರೆಗೆ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಲಾಗಿದೆ.

Tags:    

Similar News