Siddaramaiah vs Modi| ಮುಂದುವರಿದ ರಾಜ್ಯ-ಕೇಂದ್ರ ಸಂಘರ್ಷ: ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಸ್ಥಗಿತ
ಜನೌಷಧಿ ಕೇಂದ್ರಗಳ ಜನಪ್ರಿಯತೆ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರದ ಮುಸುಕಿನ ಗುದ್ದಾಟ ಕಳೆದ ವರ್ಷದಿಂದ ಹೆಚ್ಚಾಗಿದ್ದು, ಈ ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ಇದು ಮತ್ತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೆ ನಾಂದಿ ಹಾಡಲಿದೆ.;
ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರದ ನಡುವಿನ ಹಗ್ಗ ಜಗ್ಗಾಟ ಮುಂದುವರಿದಿದ್ದು, ಈಗ ಸರ್ಕಾರಿ ಆಸ್ಪತ್ರೆ ಆವರಣಕ್ಕೂ ಪ್ರವೇಶಿಸಿದೆ.
ಸರ್ಕಾರಿ ಆಸ್ವತ್ರೆಗಳ ಆವರಣದಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವ ಪ್ರಮುಖ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಈ ಸಂಬಂಧ ಆರೋಗ್ಯ ಇಲಾಖೆ ಶನಿವಾರ ಆದೇಶವನ್ನು ಹೊರಡಿಸಿದ್ದು, "ಸರ್ಕಾರಿ ಆಸ್ಪತ್ರೆಗಳಲ್ಲಿ ಅಸ್ತಿತ್ವದಲ್ಲಿರುವ ಜನೌಷದಿ ಕೇಂದ್ರಗಳನ್ನು ಅವರೊಂದಿಗೆ ಮಾಡಿಕೊಂಡಿರುವ ಒಪ್ಪಂದ ನಿಯಮಗಳ (MOU) ಪ್ರಕಾರ ಸ್ವಗಿತಗೊಳಿಸಲು ಅಗತ್ಯ ಕ್ರಮವಹಿಸತಕ್ಕದ್ದು," ಎಂದು ಹೇಳಿದೆ.
ಆದರೆ, ಸರ್ಕಾರಿ ಆಸ್ಪತ್ರೆಗಳ ಹೊರಗೆ ಇರುವ ಜನೌಷಧಿ ಕೇಂದ್ರಗಳು ಯಥಾ ಪ್ರಕಾರ ಮುಂದುವರಿಯಲಿದೆ ಎಂದು ಆದೇಶ ತಿಳಿಸಿದೆ.
ಜತೆಗೆ, ಜೆನೆರಿಕ್ ಔಷಧಿಗಳ ವಿಶೇಷ ದರಗಳನ್ನು ರೂಪಿಸಲು ಕೆ.ಎಸ್.ಎಂ.ಎಸ್.ಸಿ.ಎಲ್ ಗೆ ಸೂಚಿಸಿದೆ. ಪರ್ಯಾಯವಾಗಿ, ಆಸ್ಪತ್ರೆಗಳು ಬಿ.ಪಿ.ಪಿ.ಐ (BPPI) ಯಿಂದ ಔಷಧಿಗಳನ್ನು ಖರೀದಿಸಿ ರೋಗಿಗಳಿಗೆ ಉಚಿತವಾಗಿ ವಿತರಿಸಲು ಕ್ರಮವಹಿಸಕ್ಕದ್ದು ಎಂದೂ ಸ್ಪಷ್ಟವಾಗಿ ಸೂಚಿಸಲಾಗಿದೆ.
ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧಿ ಕೇಂದ್ರಗಳ ಸ್ಥಗಿತಕ್ಕೆ ಸರ್ಕಾರ ಕಾರಣ ನೀಡಿದ್ದು," ಪ್ರಸ್ತುತ ಆಸ್ಪತ್ರೆಗಳು ರೋಗಿಗಳಿಗೆ ಯಾವುದೇ ಔಷಧಿಗಳನ್ನು ಹೊರಗಿನಿಂದ ಖರೀದಿಸಲು ಶಿಫಾರಸ್ಸನ್ನು ಮಾಡದಂತೆ ನೋಡಿಕೊಳ್ಳುವುದು ಸರ್ಕಾರ ನೀತಿಯಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಆವರಣದೊಳಗೆ ಜನಔಷಧಿ ಕೇಂದ್ರಗಳನ್ನು ತೆರೆಯುವುದು ಸರ್ಕಾರದ ನೀತಿಗೆ ವ್ಯತಿರಿಕ್ತವಾಗುತ್ತದೆ," ಎಂದು ಸ್ಪಷ್ಟಪಡಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ, ಹಾಗೂ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಸುಮಾರು 200 ಜನೌಷಧಿ ಮಳಿಗೆಗಳಿದ್ದು, ಅವುಗಳು ಸ್ಥಗಿತಗೊಳ್ಳಲಿದೆಯೇ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ.
"ಪ್ರಸ್ತುತ ಜನೌಷಧಿ ಕೇಂದ್ರಗಳ ಸ್ಥಾಪನೆಗೆ 31 ಅರ್ಜಿಗಳು ಆರೋಗ್ಯ ಇಲಾಖೆ ಹಂತದಲ್ಲಿ ಬಾಕಿ ಇರುತ್ತವೆ. ಈ ಜನೌಷಧಿ ಕೇಂದ್ರಗಳ ಸ್ಥಾಪನೆಗೆ ಸಂಬಂಧಿಸಿದ ಈಗಿನ ನೀತಿಯು, ಕಾರ್ಯವಿಧಾನಕ್ಕೆ ಸಂಬಂಧಿಸಿದಂತೆ ಹಳೆಯದಾಗಿದೆ. ಈ ಹಿನ್ನೆಲೆಯಲ್ಲಿ ಆ ನೀತಿಯನ್ನು ಮರುಪರಿಶೀಲಿಸುವುದು ಅಗತ್ಯವಿರುತ್ತದೆ. ಆದುದರಿಂದ ಆಯುಕ್ತಾಲಯದಲ್ಲಿ ಸ್ವೀಕೃತವಾಗಿರುವ ಅರ್ಜಿಗಳ ಸಂಬಂಧ ಕ್ರಮ ಕೈಗೊಳ್ಳುವ ಕುರಿತು ನಿರ್ದೇಶನ ಕೋರಿರುತ್ತಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳು ರೋಗಿಗಳಿಗೆ ಯಾವುದೇ ಔಷಧಿಗಳನ್ನು ಹೊರಗಿನಿಂದ ಖರೀದಿಸಲು ಶಿಫಾರಸ್ಸನ್ನು ಮಾಡದಂತೆ ನೋಡಿಕೊಳ್ಳುವುದು ಸರ್ಕಾರ ನೀತಿಯಾಗಿದೆ. ಇದರಿಂದಾಗಿ ಆಸ್ಪತ್ರೆ ಆವರಣದೊಳಗೆ ಜನಔಷಧಿ ಕೇಂದ್ರಗಳನ್ನು ತೆರೆಯುವುದು ಸರ್ಕಾರದ ನೀತಿಗೆ ವ್ಯತಿರಿಕ್ತವಾಗುತ್ತದೆ," ಎಂದು ಆರೋಗ್ಯ ಇಲಾಖೆ ಸುತ್ತೋಲೆ ತಿಳಿಸಿದೆ.
ಸ್ಥಗಿತಕ್ಕೆ ಆದೇಶ
ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಜನೌಷಧಿ ಕೇಂದ್ರಗಳ ಹಂಚಿಕೆಯನ್ನು ಸ್ಥಗಿತಗೊಳಿಸಲು ಮತ್ತು ಅದಕ್ಕೆ ಅನುಗುಣವಾಗಿ ಜನೌಷಧಿ ಕೇಂದ್ರಗಳ ಪ್ರಾರಂಭಕ್ಕಾಗಿ ಆಯುಕ್ತಾಲಯದಲ್ಲಿ ಅನುಮೋದನೆಗಾಗಿ ಬಾಕಿ ಇರುವ 31 ಅರ್ಜಿಗಳನ್ನು ತಿರಸ್ಕರಿಸಲು ಅನುಮೋದನೆ ನೀಡಿ ಆದೇಶಿಸಿದೆ. ಆದಾಗ್ಯೂ, ಸರ್ಕಾರಿ ಆಸ್ಪತ್ರೆಗಳ ಹೊರಗೆ ಜನೌಷಧಿ ಕೇಂದ್ರಗಳ ಸ್ಥಾಪನೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರದ ಕಾರಣ ಮುಂದುವರಿಯಬಹುದಾಗಿದೆ.
ಮೋದಿ ವರ್ಸಸ್ ಸಿದ್ದರಾಮಯ್ಯ?
ಜನೌಷಧಿ ಕೇಂದ್ರಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಚಿತ್ರಗಳಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಬರುವ ಬಡವರು ರಾಜ್ಯ ಸರ್ಕಾರದ ಕ್ರಮಗಳಿಗಿಂತ ಕೇಂದ್ರದ ಕ್ರಮವನ್ನು ಮೆಚ್ಚಿಕೊಳ್ಳುವ ಹಾಗೂ ಸರ್ಕಾರಿ ಆಸ್ಪತ್ರೆಗಳ ವರ್ಚಸ್ಸಿಗೆ ಧಕ್ಕೆಯಾಗುವ ಸಂಭವವಿರುವುದರಿಂದ ಈ ನಿರ್ಧಾರ ಕೈಗೊಳ್ಳಲು ಕಾರಣ ಎಂದು ಹೇಳಲಾಗಿದೆ.
ಜನೌಷಧಿ ಕೇಂದ್ರಗಳನ್ನು ರಾಜ್ಯ ಸರ್ಕಾರಿ ಆಸ್ಪತ್ರೆಗಳ ಆವರಣದಿಂದ ಎತ್ತಂಗಡಿ ಮಾಡುವ ಸಂಬಂಧ ರಾಜ್ಯ ಸರ್ಕಾರ ಕಳೆದ ವರ್ಷವೇ ಚಿಂತನೆ ನಡೆಸಿತ್ತು. ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ದರದ ಜನರಿಕ್ ಔಷಧಿಗಳನ್ನು ರೋಗಿಗಳಿಗೆ ವಿತರಿಸಲಾಗುತ್ತಿದ್ದರೂ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ನೀಡುತ್ತಿರುವ ಕಾರಣ ಜನೌಷಧಿ ಕೇಂದ್ರಗಳ ಅಗತ್ಯ ಇಲ್ಲ ಎಂಬುದು ಸರ್ಕಾರದ ವಾದವಾಗಿತ್ತು. ಈ ಸಂಬಂಧ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ಇದು 20 ಲಕ್ಷ ಮನೆಮಂದಿಗೆ ಸಿಗುವ ಅನುಕೂಲವನ್ನು ತಪ್ಪಿಸಿದಂತಾಗುತ್ತದೆ ಎಂದು ತನ್ನ ವಿರೋಧ ವ್ಯಕ್ತಪಡಿಸಿತ್ತು.
ಜನೌಷಧಿ ಕೇಂದ್ರಗಳ ಜನಪ್ರಿಯತೆ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರದ ಮುಸುಕಿನ ಗುದ್ದಾಟ ಕಳೆದ ವರ್ಷದಿಂದ ಹೆಚ್ಚಾಗಿದ್ದು, ಈ ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ಇದು ಮತ್ತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೆ ನಾಂದಿ ಹಾಡಲಿದೆ.