ʼಮೋದಿ, ಮೋದಿ ಎಂದವರ ಕಪಾಳಕ್ಕೆ ಹೊಡೀರಿʼ ಹೇಳಿಕೆ: ಶಿವರಾಜ ತಂಗಡಗಿ ವಿರುದ್ಧ ದೂರು

ಯುವಕರು, ವಿದ್ಯಾರ್ಥಿಗಳು ʼಮೋದಿ... ಮೋದಿʼ ಎನ್ನುತ್ತಾರೆ. ಅಂತವರ ಕಪಾಳಕ್ಕೆ ಹೊಡೆಯಬೇಕು ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಭಾಷಣದಲ್ಲಿ ಹೇಳಿದ್ದರು. ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಇದೀಗ ಅವರ ವಿರುದ್ಧ ಪೊಲೀಸ್‌ ದೂರು ದಾಖಲಾಗಿದೆ;

Update: 2024-03-26 08:20 GMT
ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡೆಯಬೇಕು ಎಂದು ಶಿವರಾಜ ತಂಗಡಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
Click the Play button to listen to article

ಕೊಪ್ಪಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ವಿರುದ್ಧ ಜಿಲ್ಲೆಯ ಕಾರಟಗಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ( ಮಾ. 26) ದೂರು ದಾಖಲಾಗಿದೆ.

ಲೋಕಸಭಾ ಚುನಾವಣೆಯ ಕೊಪ್ಪಳ ಕ್ಷೇತ್ರದ ತಮ್ಮ ಪಕ್ಷದ ಅಭ್ಯರ್ಥಿ ಕೆ.ರಾಜಶೇಖರ್ ಹಿಟ್ನಾಳ ಪರ ಪ್ರಚಾರ ರ್ಯಾಲಿಯಲ್ಲಿ ಸಚಿವ ತಂಗಡಗಿ ಅವರು ಪ್ರಚೋದನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಶಿವರಾಜ ತಂಗಡಗಿ ತಮ್ಮ ಭಾಷಣದಲ್ಲಿ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿದ್ದು, ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಕಾರಟಗಿಯಲ್ಲಿ ಚುನಾವಣಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಗಂಗಾವತಿ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಗ್ಯಾನನಗೌಡ ಅವರು ದೂರು ನೀಡಿದ್ದಾರೆ.

ಮೋದಿ... ಮೋದಿ... ಎಂದರೆ ಕಪಾಳಕ್ಕೆ ಹೊಡೀಬೇಕು

ಭಾನುವಾರ ( ಮಾ. 24) ಕಾರಟಗಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಶಿವರಾಜ ತಂಗಡಗಿ, "ಮೋದಿ ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದರು. ಹಾಗೆ ನೋಡಿದರೆ 10 ವರ್ಷದಲ್ಲಿ 20 ಕೋಟಿ ಉದ್ಯೋಗ ನೀಡಬೇಕಿತ್ತು. ನೀಡಿದ್ದಾರಾ?. ಅದರ ಬದಲು ಉದ್ಯೋಗ ಕೇಳಿದರೆ, ಪಕೋಡ ಮಾರಲು ಹೋಗಿ ಎಂದು ಮೋದಿ ಹೇಳಿದ್ದರು. ಆದರೂ, ಯುವಕರು, ವಿದ್ಯಾರ್ಥಿಗಳು ಈಗಲೂ ʼಮೋದಿ... ಮೋದಿ...ʼ ಎನ್ನುತ್ತಾರೆ. ಅಂತವರ ಕಪಾಳಕ್ಕೆ ಹೊಡೆಯಬೇಕು ಎಂದು ಹೇಳಿದ್ದರು.

"ಇವರಿಗೆ ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡುವ ಯೋಗ್ಯತೆ ಇಲ್ಲ. ಈಗಲೂ ರಾಜ್ಯಕ್ಕೆ ನ್ಯಾಯಯುತವಾಗಿ ಕೊಡಬೇಕಾದ ಅನುದಾನ ಕೊಟ್ಟಿಲ್ಲ. ಬರ ಪರಿಹಾರ ಕೊಟ್ಟಿಲ್ಲ. ಹಾಗಾಗಿ ನಾವು ಬರ ಪರಿಹಾರ ಕೊಡದೇ ಇರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಹೋಗಿದ್ದೇವೆ. ಇಷ್ಟಾದರೂ ಬಿಜೆಪಿಯವರು ಮತ ಕೇಳಲು ಬರುತ್ತಿದ್ದಾರೆ.. "  ಎಂದು ತಂಗಡಗಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದರು.

Tags:    

Similar News