ಮಾಜಿ ಸಚಿವರ ಮಾದರಿ ನಡೆ; ಇವರ ಕುಟುಂಬದಲ್ಲಿ ನಡೆದಿರುವುದೆಲ್ಲಾ ಸರಳ ವಿವಾಹಗಳೇ..!
ಜಿ.ಟಿ.ದೇವೇಗೌಡರು ತಾವು ಪ್ರತಿಪಾದನೆ ಮಾಡುವಂತೆ ತಮ್ಮ ಕುಟುಂಬದಲ್ಲೂ ಎಲ್ಲವೂ ಸರಳ ವಿವಾಹಗಳೇ ನಡೆಯುವಂತೆ ನೋಡಿಕೊಳ್ಳುತ್ತಿದ್ದಾರೆ. ತಮ್ಮ ಮಗಳು ಯಶೋಧಾ ಮತ್ತು ಮಗ ಹರೀಶ್ ಗೌಡ ಅವರ ಮದುವೆಯನ್ನು ತಿರುಪತಿಯಲ್ಲಿ ಅತ್ಯಂತ ಸರಳವಾಗಿ ಮಾಡಿದ್ದರು;
ಗಂಡು-ಹೆಣ್ಣಿನ ಬದುಕಿನ ಅತಿ ಮುಖ್ಯ ಘಟ್ಟವಾದ ಮದುವೆ ನಾಗರೀಕತೆ ಬೆಳೆದಂತೆ ತನ್ನ ಸ್ವರೂಪವನ್ನೂ ಬದಲಾಯಿಸಿಕೊಳ್ಳುತ್ತಾ ಬಂದಿದೆ. ಮನೆಯ ಮುಂದೆ ಚಪ್ಪರ ಹಾಕಿ, ಬಂಧುಗಳೆಲ್ಲಾ ಒಟ್ಟಾಗಿ ಸೇರಿ ಎಲ್ಲಾ ಕೆಲಸಗಳನ್ನೂ ಹಂಚಿಕೊಂಡು ಮಾಡುತ್ತಿದ್ದ ಕಾಲ ಹಿಂದೆ ಸರಿದು, ಈಗ ಎಲ್ಲದಕ್ಕೂ ಏಜೆನ್ಸಿಗಳು, ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಗಳು ಉಸ್ತುವಾರಿ ಹೊತ್ತುಕೊಳ್ಳುತ್ತಿವೆ.
ಕಲ್ಯಾಣ ಮಂಟಪಗಳು ವೈಭವೋಪೇತವಾಗಿ ರೂಪುಗೊಳ್ಳುತ್ತಿವೆ, ಊಟದ ತಟ್ಟೆಯಲ್ಲಿ ಬಗೆ ಬಗೆಯ ಖಾದ್ಯಗಳು ಹೆಚ್ಚುತ್ತಿವೆ. ಪ್ರೀ ವೆಡ್ಡಿಂಗ್ ಶೂಟ್, ಅರಿಶಿಣ ಶಾಸ್ತ್ರ, ಎರಡೆರಡು ಆರತಕ್ಷತೆ, ಫೋಟೋ, ವಿಡಿಯೋ ಸೇರಿ ಹತ್ತಾರು ಹೊಸತನಗಳು ಸೇರ್ಪಡೆಗೊಂಡಿವೆ. ಇವುಗಳ ಅಂಗವಾಗಿ ಖರ್ಚುಗಳ ಭಾರವೂ ಹೆಚ್ಚಾಗುತ್ತಿದೆ. ಉಳ್ಳವರ ಪಾಲಿಗೆ ಇದು ಸರಿ ಎನ್ನಬಹುದಾದರೂ ಮಧ್ಯಮ ವರ್ಗದ, ರೈತರ ಪಾಡೇನು..? ಎನ್ನುವ ಆತಂಕ ಹೆಚ್ಚಾಗಿದೆ.
ಈ ನಡುವೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ , ಮಾಜಿ ಸಚಿವ ಜಿ.ಟಿ. ದೇವೇಗೌಡರ ಕುಟುಂಬದ ಕುಡಿಗಳ ಸರಳ ವಿವಾಹದ ಮಾದರಿ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.
ಜಿ.ಟಿ.ದೇವೇಗೌಡರು ತಾವು ಪ್ರತಿಪಾದನೆ ಮಾಡುವಂತೆ ತಮ್ಮ ಕುಟುಂಬದಲ್ಲೂ ಎಲ್ಲವೂ ಸರಳ ವಿವಾಹಗಳೇ ನಡೆಯುವಂತೆ ನೋಡಿಕೊಳ್ಳುತ್ತಿದ್ದಾರೆ. ತಮ್ಮ ಮಗಳು ಯಶೋಧಾ ಮತ್ತು ಮಗ ಹರೀಶ್ ಗೌಡ ಅವರ ಮದುವೆಯನ್ನು ತಿರುಪತಿಯಲ್ಲಿ ಅತ್ಯಂತ ಸರಳವಾಗಿ ಮಾಡಿದ್ದರು. ತಮ್ಮ ಕುಟುಂಬಸ್ಥರು, ತುಂಬು ಆಪ್ತರಿಗೆ ಮಾತ್ರವಲ್ಲದೇ ಮತ್ಯಾರಿಗೂ ಆಹ್ವಾನ ನೀಡಿರಲಿಲ್ಲ. ಇದರ ಜೊತೆ ಜೊತೆಗೆ ಹುಣಸೂರು ತಾಲ್ಲೂಕಿನ ಗದ್ದಿಗೆ ಸೇರಿ ಹಲವು ಕಡೆಗಳಲ್ಲಿ ಸಾಮೂಹಿಕ ವಿವಾಹಗಳನ್ನು ಏರ್ಪಾಡು ಮಾಡಿ ಸಾವಿರಾರು ಮಂದಿಯ ಮದುವೆಯನ್ನು ಅತ್ಯಂತ ಸರಳವಾಗಿ ಮಾಡಿದ್ದಾರೆ.
ಮೊನ್ನೆ ಮೊನ್ನೆ ತಮ್ಮ ಸಹೋದರ ಮಗನ ವಿವಾಹವನ್ನೂ ಧರ್ಮಸ್ಥಳದಲ್ಲಿ ಅತ್ಯಂತ ಸರಳವಾಗಿ ಮಾಡಿ ಮಾದರಿ ಎನ್ನಿಸಿಕೊಂಡಿದ್ದಾರೆ.
ಮಂತ್ರ ಮಾಂಗಲ್ಯ ಮಾದರಿ?
1960ರ ದಶಕದಲ್ಲಿಯೇ ಮಂತ್ರ ಮಾಂಗಲ್ಯ ಮೂಲಕ ಸರಳ ವಿವಾಹವನ್ನು ಪ್ರತಿಪಾದನೆ ಮಾಡಿದ್ದ ಕುವೆಂಪು ಅವರ ಚಿಂತನೆಗಳನ್ನು ಈಗಿನ ಪೋಷಕರು, ಯುವಕರು ಅರಿತುಗೊಳ್ಳಬೇಕಿದೆ. ಸರಳತೆ, ಉಳಿತಾಯ, ಆಸ್ತಿಗಳ ರಕ್ಷಣೆಯತ್ತ ಗಮನ ನೀಡಬೇಕಿದೆ. ಮೂರು ದಿನದ ಬದುಕಿನಲ್ಲಿ ಎಲ್ಲ ರೀತಿಯ ಸಂತೋಷಗಳನ್ನು ಪಡೆಬೇಕು, ಆಡಂಬರವನ್ನು ಅನುಭವಿಸಬೇಕು ಎನ್ನುವ ಮನಸ್ಥಿತಿ ಹೆಚ್ಚುತ್ತಾ ಹೋದರೆ ಸಾಲದ ಸುಳಿಯಲ್ಲಿ ಸಿಲುಕಬೇಕಾಗುತ್ತದೆ ಎನ್ನುವುದು ವಾಸ್ತವ.
ಈ ನಿಟ್ಟಿನಲ್ಲಿ ಜಿ.ಟಿ.ದೇವೇಗೌಡರ ನಡೆ ಮಾದರಿಯಾಗಿದ್ದು, ಇದನ್ನು ಹೆಚ್ಚಿನವರು ಅನುಸರಿಸಿದರೆ ಮದುವೆ ಎನ್ನುವುದು ಸುಂದರ ಬಂಧವಾಗುತ್ತದೆ. ಆರ್ಥಿಕ ಬಂಧನಕ್ಕೆ ಕಾರಣವಾಗುವುದಿಲ್ಲ.
ಕುವೆಂಪು ಹಾಕಿಕೊಟ್ಟ ಹಾದಿಯಲ್ಲಿ ಸಾಗಬೇಕಿದೆ: ದೇವೇಗೌಡ
ಕುವೆಂಪು 'ಮಂತ್ರ ಮಾಂಗಲ್ಯ' ಎನ್ನುವ ದೊಡ್ಡ ಸಾಮಾಜಿಕ ಕ್ರಾಂತಿಯನ್ನು ಪರಿಚಯಿಸಿದರು. ಅವರನ್ನು ಅನುಸರಿಸಿದ ವಿದ್ಯಾರ್ಥಿಗಳು, ಅಭಿಮಾನಿಗಳು ರೈತ ಸಂಘದವರು ಮಂತ್ರ ಮಾಂಗಲ್ಯವನ್ನೇ ಮಾಡಿಕೊಂಡರು. ರೈತ ನಾಯಕರಾದ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಕೆ.ಎಸ್. ಪುಟ್ಟಣ್ಣಯ್ಯ ಸೇರಿ ಸಾಕಷ್ಟು ಮಂದಿ ಇದೇ ಹಾದಿಯಲ್ಲಿ ಸಾಗಿದರು. ಆದರೆ ಇಂದು ಮದುವೆ ಎನ್ನುವುದು ದೊಡ್ಡ ಆರ್ಥಿಕ ಹೊರೆಯಾಗಿ ಮಾರ್ಪಡುತ್ತಿದೆ. ಒಂದು ತಿಂಗಳ ಸಂತೋಷಕ್ಕಾಗಿ ತಮ್ಮ ಜೀವಮಾನದ ಉಳಿತಾಯ, ಆಸ್ತಿಗಳನ್ನೇ ಕರಗಿಸುತ್ತಿದ್ದಾರೆ. ಇದು ಬದಲಾಗದೇ ಇದ್ದರೆ ಆರ್ಥಿಕ ಅಸಮತೋಲನ, ಸಾಮಾಜಿಕ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಆಗುತ್ತದೆ, ಸಾಕಷ್ಟು ಕುಟುಂಬಗಳು ಬೀದಿಗೆ ಬೀಳುತ್ತವೆ ಎನ್ನುವ ಆತಂಕ ವ್ಯಕ್ತಪಡಿಸುತ್ತಾರೆ ಮಾಜಿ ಸಚಿವ, ಶಾಸಕ ಜಿ.ಟಿ. ದೇವೇಗೌಡ.
ಸದಾ ಸರಳ ವಿವಾಹದ ಪ್ರತಿಪಾದನೆ
ತಮ್ಮ ಇಬ್ಬರು ಮಕ್ಕಳು, ತಮ್ಮ ಬಂಧುಗಳ ಮಕ್ಕಳ ಮದುವೆಯನ್ನು ಅತ್ಯಂತ ಸರಳವಾಗಿ ಮಾಡಿದ ಮಾಜಿ ಸಚಿವ, ಶಾಸಕ ಜಿ.ಟಿ.ದೇವೇಗೌಡ ಸರಳ ವಿವಾಹದ ಬಗ್ಗೆ ದ ಫೆಡರಲ್ ಕರ್ನಾಟಕದ ಜೊತೆಗೆ ಮಾತನಾಡಿ ಹೇಳಿದ್ದು ಹೀಗೆ…
"ವರದಕ್ಷಿಣೆ ತೆಗೆದುಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧ ಎನ್ನುವ ಕಾನೂನು ನಮ್ಮಲ್ಲಿದೆ. ಇದೇ ರೀತಿ ಅದ್ಧೂರಿಯಾಗಿ ಮದುವೆ ಮಾಡುವುದಕ್ಕೂ ಸೂಕ್ತ ಮಾರ್ಗಸೂಚಿಗಳನ್ನು ಸರ್ಕಾರ ತರಬೇಕು. ಈ ನಿಟ್ಟಿನಲ್ಲಿ ಸದನದಲ್ಲಿ ಚರ್ಚೆ ಆಗಬೇಕು. ಇಪ್ಪತ್ತು, ಮೂವತ್ತು ವರ್ಷಗಳ ಹಿಂದೆ ಮಾಡುತ್ತಿದ್ದ ಮದುವೆಗಳಿಗೂ ಈಗಿನ ಮದುವೆಗಳಿಗೂ ತುಂಬಾ ವ್ಯತ್ಯಾಸ ಆಗಿದೆ. ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಲಿ. ಆದರೆ ರೈತರು, ಮಧ್ಯಮ ವರ್ಗದವರು ತಮ್ಮ ಹೆಣ್ಣು ಮಕ್ಕಳ ಮದುವೆ ಮಾಡುವುದಕ್ಕಾಗಿಯೇ ಆಸ್ತಿ ಮಾರಿಕೊಳ್ಳುವುದು ಹೆಚ್ಚುತ್ತಿದೆ. ಇದಕ್ಕೆ ತಕ್ಷಣ ಕಡಿವಾಣ ಬೀಳಬೇಕು. ರೈತರು, ಜನರೂ ಇದನ್ನು ಅರ್ಥ ಮಾಡಿಕೊಂಡು ಆಸ್ತಿ, ಉಳಿತಾಯಗಳ ರಕ್ಷಣೆ ಮಾಡಿಕೊಳ್ಳಬೇಕು. ಇಲ್ಲದೇ ಇದ್ದರೆ ಬದುಕಿನಲ್ಲಿ ತುಂಬಾ ಹಿಂಸೆ ಅನುಭವಿಸಬೇಕಾಗುತ್ತದೆ. ನೋಡಿ ಈಗಿನ ಮದುವೆಗಳಲ್ಲಿ ನಾಲ್ಕಾರು ಬಗೆಯ ಸಿಹಿಗಳನ್ನು ಮಾಡಿರುತ್ತಾರೆ. ಬಗೆ ಬಗೆಯ ತಿನಿಸುಗಳು ಇರುತ್ತವೆ. ಇವನ್ನೆಲ್ಲಾ ಯಾರು ತಿನ್ನುತ್ತಾರೆ, ಎಷ್ಟೊಂದು ಆಹಾರ ವ್ಯರ್ಥವಾಗುತ್ತಿದೆ ಎಂಬುದನ್ನೆಲ್ಲಾ ನೋಡಿದಾಗ ನೋವಾಗುತ್ತದೆ."
ಅದ್ಧೂರಿ ಮದುವೆಗೆ ಬದಲು ಅರ್ಥಪೂರ್ಣ ಶಿಕ್ಷಣ ಕೊಡಿಸಿ
"ನನ್ನ ಮಗ ಶಾಸಕ ಹರೀಶ್ ಗೌಡ ಮತ್ತು ಮಗಳು ಯಶೋಧಾ ಮದುವೆಯನ್ನು ನಾನು ತಿರುಪತಿಯಲ್ಲಿ ಸರಳವಾಗಿ ಮಾಡಿದೆ. ಬಂಧುಗಳು ಕೆಲವರನ್ನು ಬಿಟ್ಟರೆ ಯಾರನ್ನೂ ಕರೆದಿರಲಿಲ್ಲ. ಯಾರು ಏನೇ ಹೇಳಿದರೂ ನನಗೆ ಅದ್ಧೂರಿ, ಆಡಂಬರದ ಮದುವೆಯಲ್ಲಿ ನಂಬಿಕೆ ಇಲ್ಲ. ಇದಕ್ಕೆ ಬದಲಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಖರ್ಚು ಮಾಡಲಿ. ಇಂದು ಯಾವ ರೈತನ ಬಳಿ ಇಪ್ಪತ್ತು, ಮೂವತ್ತು ಎಕರೆ ಜಮೀನು ಇದೆ…? ಹೆಚ್ಚಿನವರ ಬಳಿ ಐದಾರು ಎಕರೆ ಇದ್ದರೆ ಅದೇ ಹೆಚ್ಚು. ಪರಿಸ್ಥಿತಿ ಹೀಗಿರುವಾಗ ಮಕ್ಕಳ ಮದುವೆಗೆ ಜಮೀನು ಮಾರುವುದು, ಸಾಲ ಮಾಡಿ ಭರ್ಜರಿಯಾಗಿ ಮದುವೆ ಮಾಡುವುದರಿಂದ ಏನು ಪ್ರಯೋಜನ..? ಜಮೀನು ಮಾರುವುದಕ್ಕೆ ಬದಲಾಗಿ, ಸಾಲ ಮಾಡುವುದಕ್ಕೆ ಬದಲಾಗಿ ಅದೇ ಹಣವನ್ನು ಉಳಿತಾಯ ಮಾಡಿ, ಮಕ್ಕಳ ಬದುಕು ಕಟ್ಟಿಕೊಳ್ಳಲು ವಿನಿಯೋಗಿಸಿ, ಇಲ್ಲದೇ ಇದ್ದರೆ ಕಷ್ಟ ಬಂದಾಗ ಇನ್ನಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ನಾನು ಹೋದ ಕಡೆಯೆಲ್ಲಾ, ಕಾಲೇಜು ವಿದ್ಯಾರ್ಥಿಗಳಿಗೆಲ್ಲಾ ಸರಳ ವಿವಾಹವನ್ನೇ ಆಯ್ಕೆ ಮಾಡಿಕೊಳ್ಳಿ ಎಂದು ಹೇಳುತ್ತೇನೆ ಎನ್ನುತ್ತಾರೆ," ಜಿ.ಟಿ.ದೇವೇಗೌಡ.
ವರದಕ್ಷಿಣೆ ಕಡಿಮೆಯಾಗಿದೆ ಆಡಂಬರ ಹೆಚ್ಚಾಗಿದೆ
"ಇಂದು ಹೆಣ್ಣು ಸಿಗುವುದೇ ಕಷ್ಟವಾಗಿದೆ. ಹೀಗಿರುವಾಗ ವರದಕ್ಷಿಣೆ ಕೊಡುವುದು, ಪಡೆಯುವುದು ಕಡಿಮೆಯಾಗಿದೆ. ಅದಕ್ಕೆ ಬದಲಾಗಿ ಅದ್ಧೂರಿಯಾಗಿ ಮದುವೆ ಮಾಡುವ ಮನಸ್ಥಿತಿ ಹೆಚ್ಚಾಗಿದೆ. ಇದು ನಿಲ್ಲಬೇಕು. ಜಮೀನು ಮಾರಿ, ಸಾಲ ಮಾಡಿ ಮದುವೆ ಮಾಡುವ ಬದಲಿಗೆ ನಿಮ್ಮ ಮಕ್ಕಳ ಹೆಸರಿಗೆ ಜಮೀನು ಮಾಡಿಕೊಡಿ. ನಾನು ಕಂಡ ಹಾಗೆ ಮೈಸೂರು, ಮಂಡ್ಯ ಭಾಗದಲ್ಲಿ ಹತ್ತು ವರ್ಷಗಳ ಹಿಂದೆ ಮೂರ್ನಾಲ್ಕು ಲಕ್ಷ ರೂಪಾಯಿಗೆ ತಮ್ಮ ಜಮೀನು ಮಾರಿ ಮಕ್ಕಳ ಮದುವೆ ಮಾಡಿದ್ದರು. ಈಗ ಅದೇ ಭೂಮಿಗೆ ಕೋಟ್ಯಾಂತರ ರೂಪಾಯಿ ಬೆಲೆ ಬಂದಿದೆ. ಜಮೀನು ಮಾರಿದ್ದರಿಂದ ರೈತರಿಗೆ ಕೆಲಸವೂ ಇಲ್ಲ, ಅವರ ಮಕ್ಕಳಿಗೆ ಆಸ್ತಿ ಇಲ್ಲದೇ ಇರುವುದರಿಂದ ಆರ್ಥಿಕ ಭದ್ರತೆಯೂ ಇಲ್ಲ. ಇದು ತುಂಬಾ ಕುಟುಂಬಗಳ ಮಾನಸಿಕ ಒದ್ದಾಟಕ್ಕೆ ಕಾರಣವಾಗಿದೆ. ಆರೋಗ್ಯ ಕೆಟ್ಟಿದೆ. ಇದೇ ಕೊರಗಿನಲ್ಲಿ ಸಾಕಷ್ಟು ಮಂದಿ ಪ್ರಾಣ ಬಿಟ್ಟಿದ್ದಾರೆ. ಇದಕ್ಕೆ ಬದಲಾಗಿ ಆಸ್ತಿ ಉಳಿಸಿಕೊಂಡಿದ್ದರೆ ನೆಮ್ಮದಿಯಿಂದ ಇರಬಹುದಾಗಿತ್ತು. ಕೇವಲ ಒಂದು ಮದುವೆ ಎನ್ನುವ ಬಂಧ ಹಳ್ಳಿಯ ಜನರ ನೆಮ್ಮದಿ ಕಿತ್ತುಕೊಳ್ಳುತ್ತಿದೆ ಎನ್ನುವುದು," ಜಿ.ಟಿ.ದೇವೇಗೌಡರ ಅಭಿಪ್ರಾಯ.
ಅಂದು 2.5 ಲಕ್ಷಕ್ಕೆ ಮಾರಾಟ; ಇಂದು 2.5 ಕೋಟಿ ರೂ. ಬೆಲೆ
"ನಾನು ಮೂರ್ನಾಲ್ಕು ಸಾಮೂಹಿಕ ವಿವಾಹಗಳನ್ನು ಆಯೋಜನೆ ಮಾಡಿದ್ದೇನೆ. ಯಾರೇ ನನ್ನ ಸಂಪರ್ಕಕ್ಕೆ ಬಂದರೂ ಸರಳ ವಿವಾಹವನ್ನೇ ಸಲಹೆ ಮಾಡುವುದು. ಯಾಕೆಂದರೆ ನನ್ನ ಸಾರ್ವಜನಿಕ ಬದುಕಿನಲ್ಲಿ ಮದುವೆಯ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿಕೊಂಡ ಸಾಕಷ್ಟು ಕುಟಂಬಗಳನ್ನು ನೋಡಿದ್ದೇನೆ. ಒಬ್ಬರು ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡುವ ಸಲುವಾಗಿ ಒಂದು ಎಕರೆ ಭೂಮಿಯನ್ನು 2015ರಲ್ಲಿ ಕೇವಲ 2.5 ಲಕ್ಷ ರೂಪಾಯಿಗೆ ಮಾರಿಕೊಂಡರು. ಈಗ ಆ ಭೂಮಿಗೆ ಸುಮಾರು ಎರಡೂವರೆ ಕೋಟಿ ರೂ.ಬೆಲೆ ಬಂದಿದೆ. ಅಂದರೆ ಹತ್ತು ವರ್ಷಗಳಲ್ಲಿ ಅದರ ಮೌಲ್ಯ ಸಾವಿರ ಪಟ್ಟು ಹೆಚ್ಚಾಗಿದೆ. ಈಗ ಅವರ ಮಗಳು, ಅಳಿಯ ಜೀವಮಾನ ಪೂರ್ತಿ ದುಡಿದರೂ ಎರಡೂವರೆ ಕೋಟಿ ರೂಪಾಯಿ ಸಂಪಾದನೆ ಮಾಡಲು ಆಗುತ್ತದೆಯೇ..? ಅದೇ ಭೂಮಿಯನ್ನು ಮಗಳ ಹೆಸರಿಗೆ ಮಾಡಿದ್ದರೆ ಅಲ್ಲಿ ಕೃಷಿಯನ್ನೋ, ಬೇರೆ ಉದ್ಯಮವನ್ನೋ ಆರಂಭಿಸಬಹುದಿತ್ತು ಅಲ್ಲವೇ. ಇದು ಒಂದು ನಿದರ್ಶನ ಅಷ್ಟೇ. ಈ ರೀತಿಯ ಸಾವಿರಾರು ಕಥೆಗಳಿವೆ. ಕೈಯಲ್ಲಿ ಒಂದು ಲಕ್ಷ ಇದ್ದರೆ 90 ಸಾವಿರ ರೂಪಾಯಿಯಲ್ಲಿ ಮದುವೆ ಮುಗಿಸಬೇಕು. ಭೂಮಿ ಉಳಿಸಿಕೊಳ್ಳಿ, ಬದುಕು ಭದ್ರ ಮಾಡಿಕೊಳ್ಳಿ ಎಂದು ನಾನು ಸದಾ ಹೇಳುತ್ತೇನೆ ಎನ್ನುತ್ತಾರೆ," ಜಿ.ಟಿ.ದೇವೇಗೌಡರು.
"1960ರ ದಶಕದಲ್ಲಿಯೇ ಮಂತ್ರ ಮಾಂಗಲ್ಯ ಮೂಲಕ ಸರಳ ವಿವಾಹವನ್ನು ಪ್ರತಿಪಾದನೆ ಮಾಡಿದ್ದ ಕುವೆಂಪು ಅವರ ಚಿಂತನೆಗಳನ್ನು ಈಗಿನ ಪೋಷಕರು, ಯುವಕರು ಅರಿತುಗೊಳ್ಳಬೇಕಿದೆ. ಸರಳತೆ, ಉಳಿತಾಯ, ಆಸ್ತಿಗಳ ರಕ್ಷಣೆಯತ್ತ ಗಮನ ನೀಡಬೇಕಿದೆ. ಮೂರು ದಿನದ ಬದುಕಿನಲ್ಲಿ ಎಲ್ಲ ರೀತಿಯ ಸಂತೋಷಗಳನ್ನು ಪಡೆಬೇಕು, ಆಡಂಬರವನ್ನು ಅನುಭವಿಸಬೇಕು ಎನ್ನುವ ಮನಸ್ಥಿತಿ ಹೆಚ್ಚುತ್ತಾ ಹೋದರೆ ಸಾಲದ ಸುಳಿಯಲ್ಲಿ ಸಿಲುಕಬೇಕಾಗುತ್ತದೆ ಎನ್ನುವುದು ವಾಸ್ತವ. ಈ ನಿಟ್ಟಿನಲ್ಲಿ ಜಿ.ಟಿ.ದೇವೇಗೌಡರ ನಡೆ ಮಾದರಿಯಾಗಿದ್ದು, ಇದನ್ನು ಹೆಚ್ಚಿನವರು ಅನುಸರಿಸಿದರೆ ಮದುವೆ ಎನ್ನುವುದು ಸುಂದರ ಬಂಧವಾಗುತ್ತದೆ. ಆರ್ಥಿಕ ಬಂಧನಕ್ಕೆ ಕಾರಣವಾಗುವುದಿಲ್ಲ," ಎಂದು ಅವರು ಹೇಳುತ್ತಾರೆ.