ಕೋಮುಲ್ ಅಧ್ಯಕ್ಷರಾಗಿ ಶಾಸಕ ಕೆ.ವೈ. ನಂಜೇಗೌಡ ಅವಿರೋಧ ಆಯ್ಕೆ; ಮುನಿಯಪ್ಪ ಬಣದ ವಿರುದ್ಧ ಕೆಆರ್. ರಮೇಶ್ ಕುಮಾರ್ ಬಣಕ್ಕೆ ಮೇಲುಗೈ
ಕೆ.ಎಚ್. ಮುನಿಯಪ್ಪ ಬಣಕ್ಕೆ ಸೇರಿದ ನಾರಾಯಣಸ್ವಾಮಿ ಹಾಗೂ ಕೆ.ಆರ್. ರಮೇಶ್ ಕುಮಾರ್ ಬಣಕ್ಕೆ ಸೇರಿದ ನಂಜೇಗೌಡರ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ತೀವ್ರ ಜಟಾಪಟಿಯೇ ನಡೆದಿತ್ತು.;
ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (ಕೋಮುಲ್) ಅಧ್ಯಕ್ಷರಾಗಿ ಮಾಲೂರು ಶಾಸಕ ಕಾಂಗ್ರೆಸ್‌ನ ಪ್ರಭಾವಿ ನಾಯಕ ಕೆ.ವೈ. ನಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಸಚಿವ ಮುನಿಯಪ್ಪ ಬಣದ ವಿರುದ್ಧ ಮಾಜಿ ಸ್ಪೀಕರ್ ಕೆ. ಆರ್ ರಮೇಶ್ಕುಮಾರ್ ಬಣ ಮೇಲುಗೈ ಸಾಧಿಸಿದೆ.
ಕೋಮುಲ್ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಂಜೇಗೌಡರು ನಾಮಪತ್ರ ಸಲ್ಲಿಸಿದ್ದರು. ಈ ಸ್ಥಾನಕ್ಕೆ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ, ಅವರು ಯಾವುದೇ ಸ್ಪರ್ಧೆಯಿಲ್ಲದೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ನಡೆದ ಒಕ್ಕೂಟದ 13 ನಿರ್ದೇಶಕರ ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 9 ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸುವುದರೊಂದಿಗೆ, ಕೋಮುಲ್ ಸಂಪೂರ್ಣವಾಗಿ ಕಾಂಗ್ರೆಸ್ ಹಿಡಿತಕ್ಕೆ ಬಂದಿತ್ತು. ನಂಜೇಗೌಡರು ಕೂಡ ಮಾಲೂರು ಟೇಕಲ್ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು. ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಕೇವಲ ನಾಲ್ವರು ನಿರ್ದೇಶಕರು ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿತ್ತು.
ಜಟಾಪಟಿ, ಸಂಧಾನ
ವಾಸ್ತವವಾಗಿ, ಕೋಮುಲ್ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಬಂಗಾರಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಕೆ.ಎಚ್. ಮುನಿಯಪ್ಪ ಬಣಕ್ಕೆ ಸೇರಿದ ನಾರಾಯಣಸ್ವಾಮಿ ಹಾಗೂ ಕೆ.ಆರ್. ರಮೇಶ್ ಕುಮಾರ್ ಬಣಕ್ಕೆ ಸೇರಿದ ನಂಜೇಗೌಡರ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ತೀವ್ರ ಜಟಾಪಟಿಯೇ ನಡೆದಿತ್ತು.
ಈ ಹಂತದಲ್ಲಿ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಮಹತ್ವದ ಸಂಧಾನ ಸಭೆ ನಡೆಯಿತು. ಈ ಸಭೆಯಲ್ಲಿ, ನಂಜೇಗೌಡರನ್ನು ಕೋಮುಲ್ ಅಧ್ಯಕ್ಷರನ್ನಾಗಿ ಮಾಡಿ, ನಾರಾಯಣಸ್ವಾಮಿ ಅವರನ್ನು ಕೆಎಂಎಫ್ (ಕರ್ನಾಟಕ ಹಾಲು ಮಹಾ ಮಂಡಳಿ) ಡೆಲಿಗೇಟ್ ಆಗಿ ನಿಯೋಜಿಸಲು ತೀರ್ಮಾನಿಸಲಾಯಿತು. ಈ ಸಂಧಾನ ಸೂತ್ರ ಯಶಸ್ವಿಯಾದ ಕಾರಣ, ನಾರಾಯಣಸ್ವಾಮಿ ಮತ್ತು ನಿರ್ದೇಶಕಿ ಮಹಾಲಕ್ಷ್ಮಿ ಸೇರಿದಂತೆ ಜೆಡಿಎಸ್-ಬಿಜೆಪಿ ಬೆಂಬಲಿತ ನಿರ್ದೇಶಕರು ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದಿದ್ದರು.