ಜನಿವಾರ ತೆಗೆಸಿದ ಪ್ರಕರಣ | ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಚಿವರ ಸೂಚನೆ; ವಿರೋಧ ಪಕ್ಷಗಳಿಂದ ಭಾರೀ ಟೀಕೆ

ಸಿಇಟಿ ಪರೀಕ್ಷಾರ್ಥಿಗಳು ಅನುಸರಿಸಬೇಕಾದ ಮಾರ್ಗಸೂಚಿಗಳಲ್ಲಿ ಜನಿವಾರ ತೆಗೆಯಬೇಕು ಎಂಬ ನಿಯಮ ಇಲ್ಲ. ಆದಾಗ್ಯೂ, ಜನಿವಾರ ತೆಗೆಸಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ಪರೀಕ್ಷೆಗೆ ಅವಕಾಶ ಸಿಗದ ವಿದ್ಯಾರ್ಥಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದ್ದಾರೆ.;

Update: 2025-04-18 07:49 GMT

ಬೀದರ್ ಹಾಗೂ ಶಿವಮೊಗ್ಗದಲ್ಲಿ ಸಿಇಟಿ ಬರೆಯಲು ಬಂದಿದ್ದ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿದ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ರಾಜಕೀಯ ರೂಪ ಪಡೆದುಕೊಳ್ಳುತ್ತಿದೆ.

ಬೀದರ್‌ನಲ್ಲಿ ಜನಿವಾರ ಹಾಕಿದ್ದ ವಿದ್ಯಾರ್ಥಿಗೆ ಸಿಇಟಿ ಪರೀಕ್ಷೆಗೆ ಅವಕಾಶ ನೀಡಿರಲಿಲ್ಲ. ಶಿವಮೊಗ್ಗದಲ್ಲಿ ವಿದ್ಯಾರ್ಥಿಯ ಜನಿವಾರ ಕಿತ್ತೆಸೆದು ದರ್ಪ ಅಧಿಕಾರಿಗಳು ದರ್ಪ ಮೆರೆದಿದ್ದರು. ಇದೀಗ ಈ ಪ್ರಕರಣ ವಿವಾದದ ಸ್ವರೂಪ ಪಡೆದಿದೆ.

ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು, ಈ ಬಗ್ಗೆ ಬೈರತಿ ಸುರೇಶ್ ಅವರು ಬೆಳಿಗ್ಗೆ ಮಾಹಿತಿ ನೀಡಿದರು. ಘಟನೆ ದುರದೃಷ್ಟಕರ. ಇದನ್ನು ಖಂಡಿಸುತ್ತೇನೆ. ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಅಹಿತಕರ ಘಟನೆಗಳಿಗೆ ಜಿಲ್ಲಾಧಿಕಾರಿಗಳೇ ಹೊಣೆಯಾಗಿದ್ದು, ಜನಿವಾರ ತೆಗೆಸಿದ ಘಟನೆ ಕುರಿತು ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಿಇಟಿ ಪರೀಕ್ಷಾರ್ಥಿಗಳು ಅನುಸರಿಸಬೇಕಾದ ಮಾರ್ಗಸೂಚಿಗಳಲ್ಲಿ ಜನಿವಾರ ತೆಗೆಯಬೇಕು ಎಂಬ ನಿಯಮ ಇಲ್ಲ. ಆದಾಗ್ಯೂ, ಜನಿವಾರ ತೆಗೆಸಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ಪರೀಕ್ಷೆಗೆ ಅವಕಾಶ ಸಿಗದ ವಿದ್ಯಾರ್ಥಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸುಧಾಕರ್ ಹೇಳಿದ್ದಾರೆ.

ಪರೀಕ್ಷಾ ಕೇಂದ್ರಕ್ಕೆ ಹೋಗುವ ವಿದ್ಯಾರ್ಥಿಯ ಜನಿವಾರ ತೆಗೆಸಿರುವುದು ವಿಕೃತ ಪ್ರವೃತ್ತಿ. ಸರ್ಕಾರದಿಂದ ಅಂತಹ ಯಾವುದೇ ಮಾರ್ಗಸೂಚಿ ನೀಡಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ವಿರೋಧ ಪಕ್ಷಗಳು ಇದನ್ನು ರಾಜಕೀಯ ದಾಳವಾಗಿ ಬಳಸಬಾರದು. ಹಿಜಾಬ್ ಪ್ರಕರಣದಂತೆ ನಾವು ರಾಜಕೀಯ ಮಾಡುವುದಿಲ್ಲ. ಎಲ್ಲರ ಭಾವನೆಗಳನ್ನು ನಾವು ಗೌರವಿಸುತ್ತೇವೆ ಎಂದಿದ್ದಾರೆ.

ಮನುಷ್ಯತ್ವ ಇಲ್ಲದ ನಡೆ

ಜನಿವಾರ ತೆಗೆಸಿ ದರ್ಪ ಮೆರೆದಿರುವ ಅಧಿಕಾರಿಗಳು ವಿದ್ಯಾರ್ಥಿಯ ಭವಿಷ್ಯಕ್ಕೆ ಕಲ್ಲು ಹಾಕಿದ್ದಾರೆ. ಇದು ಅತ್ಯಂತ ಹೇಯ. ಈ ರೀತಿಯ ಬೌದ್ಧಿಕ ವಿಕೃತಿ ಹಾಗೂ ಮನುಷ್ಯತ್ವ ಇಲ್ಲದ ನಡೆ ಇನ್ನೊಂದಿರಲಾರದು, ಇದು ಕಾಂಗ್ರೆಸ್ ಸರ್ಕಾರದ ಹೀನ ಮನಸ್ಥಿತಿಯ ಮುಖವಾಡ ಪ್ರದರ್ಶಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.

ಬಾಲ್ಯದಿಂದಲೂ ಕನಸು ಕಟ್ಟಿಕೊಂಡು ಭವಿಷ್ಯದ ತಿರುವಿನಲ್ಲಿ ಆಘಾತ ಎದುರಿಸಿ ವಿದ್ಯಾರ್ಥಿಯೊಬ್ಬನ ಎಂಜಿನಿಯರಿಂಗ್ ಪದವಿಯ ಕನಸಿನ ಮೇಲೆ ಅಟ್ಟಹಾಸಗೈದ ಸಿಇಟಿ ಪರೀಕ್ಷಾ ಸಿಬ್ಬಂದಿಯ ವಿರುದ್ಧ ಕ್ರಮ ಜರುಗಿಸಬೇಕು. ಪರೀಕ್ಷೆ ಹಾಗೂ ಸಂದರ್ಶನ ಎದುರಿಸುವ ವೇಳೆ ಕೆಲ ವಸ್ತುಗಳನ್ನು ಕೊಂಡೊಯ್ಯುವುದು ನಿಷಿದ್ಧ, ಆದರೆ ಜನಿವಾರ ತೊಡುವುದು ಒಂದು ಕುಟುಂಬ ಹಾಗೂ ಭಾರತೀಯ ಸಮುದಾಯದ ಆಚಾರ ವಿಚಾರಕ್ಕೆ ಸಂಬಂಧಿಸಿದೆ. ವಿದ್ಯಾರ್ಥಿ ಬರೆಯುವ ಪರೀಕ್ಷೆಯ ಮೇಲೆ ಜನಿವಾರ ಏನು ಪ್ರಭಾವ ಅಥವಾ ಪರಿಣಾಮ ಬೀರುತ್ತದೆ? ಎಂಬುದಕ್ಕೆ ಸಂಬಂಧಿಸಿದ ಸಚಿವರು ಹಾಗೂ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ಶಿಕ್ಷಣವೆಂದರೆ ಸಂಸ್ಕಾರ, ಅದು ಇಲ್ಲದವರು ಶಿಕ್ಷಣ ಖಾತೆಯನ್ನು ನಿರ್ವಹಿಸಿದರೆ ಏನು ಪರಿಣಾಮ ಬೀರಬಹುದು ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮುಖ್ಯಮಂತ್ರಿಗಳು ಈ ಸಂಬಂಧವಾಗಿ ವಿದ್ಯಾರ್ಥಿಯ ಭವಿಷ್ಯಕ್ಕೆ ಕಲ್ಲು ಹಾಕಿ ಹಿಂದೂ ಸಂಪ್ರದಾಯದ ಆಚಾರ ವಿಚಾರವನ್ನು ಅಪಮಾನಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಲಿ. ಸನಾತನ ಹಿಂದೂ ಧರ್ಮದ ಆಚಾರ ವಿಚಾರಗಳಿಗೆ ಮಾರ್ಗದರ್ಶನ ತೋರುವ ಸಭ್ಯ ಬ್ರಾಹ್ಮಣ ಸಮುದಾಯವನ್ನು ಅಪಮಾನಿಸಿರುವ ಕಾಂಗ್ರೆಸ್ ಸರ್ಕಾರ ಈ ಕೂಡಲೇ ಬೇಷರತ್ ಕ್ಷಮೆಯಾಚಿಸಲಿ ಎಂದು ಒತ್ತಾಯಿಸಿದ್ದಾರೆ.

Tags:    

Similar News