40% ಕಮಿಷನ್ ಹಗರಣ| ನಾನು ಈಗ ಏನೂ ಹೇಳುವುದಿಲ್ಲ: ಬಸವರಾಜ ಬೊಮ್ಮಾಯಿ
40% ಕಮಿಷನ್ ಆರೋಪದ ಬಗ್ಗೆ ಯಾವುದು ಸತ್ಯ, ಯಾವುದು ಅಸತ್ಯ ಎನ್ನುವುದನ್ನು ನ. 23 ರ ಉಪ ಚುನಾವಣೆಯ ಫಲಿತಾಂಶದ ಬಳಿಕ ಮಾತನಾಡುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
40% ಕಮಿಷನ್ ಆರೋಪದ ಬಗ್ಗೆ ಯಾವುದು ಸತ್ಯ, ಯಾವುದು ಅಸತ್ಯ ಎನ್ನುವುದನ್ನು ನ. 23 ರ ಉಪ ಚುನಾವಣೆಯ ಫಲಿತಾಂಶದ ಬಳಿಕ ಮಾತನಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 40% ಕಮಿಷನ್ ಆರೋಪದ ಕುರಿತು ತನಿಖೆ ನಡೆಸಿದ ಲೋಕಾಯುಕ್ತ ಆರೋಪಕ್ಕೆ ಯಾವುದೇ ಆಧಾರವಿಲ್ಲ ಎಂದು ವರದಿ ಸಲ್ಲಿಸಿರುವ ಕುರಿತು ಈಗಾಗಲೇ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ವಿಧಾನಸಭಾ ಪ್ರತಿಪಕ್ಷ ನಾಯಕರು ಮಾತನಾಡಿದ್ದಾರೆ. ನಾನು ಈಗ ಮಾತನಾಡುವುದಿಲ್ಲ. ಚುನಾವಣಾ ಫಲಿತಾಂಶ ಬರಲಿ, ಆ ಬಳಿಕ ಮಾತನಾಡುತ್ತೇನೆ ಎಂದರು.
ಹಿಂದಿನ ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್ ಮಾಡಿದ್ದ 40% ಆರೋಪ ಸುಳ್ಳು ಎಂದು ಲೋಕಾಯುಕ್ತ ವರದಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಈ ವಿಚಾರದ ಬಗ್ಗೆ ಈಗ ಮಾತನಾಡುವುದಿಲ್ಲ. ಉಪಚುನಾವಣೆ ಫಲಿತಾಂಶ ಬಂದ ನಂತರ ನಾನು ಮಾತನಾಡುತ್ತೇನೆ. ಅಲ್ಲಿಯವರೆಗೆ ನಾನು ಮಾತನಾಡುವುದಿಲ್ಲ ಎಂದರು.
ಹಾಗೇ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಹಗರಣಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ತನಿಖೆಗೆ ಮುಂದಾಗಿರುವ ಕುರಿತು ಕೇಳಿದ ಪ್ರಶ್ನೆಗೂ ಅವರು, ಎಲ್ಲ ಪ್ರಶ್ನೆಗಳಿಗೂ ಉಪ ಚುನಾವಣಾ ಫಲಿತಾಂಶದ ನಂತರವೇ ಮಾತನಾಡುತ್ತೇನೆ ಎಂದು ಹೇಳಿದರು.
ಜಮೀರ್ ಹೇಳಿಕೆ ಒಪ್ಪುವಂತಹದ್ದಲ್ಲ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕುರಿತು ವಸತಿ ಸಚಿವ ಜಮೀರ್ ಅಹಮದ್ ನೀಡಿರುವ ಹೇಳಿಕೆ ನಾಗರೀಕ ಸಮಾಜ ಒಪ್ಪುವಂಥದ್ದಲ್ಲ ಎಂದು ಬೊಮ್ಮಾಯಿ ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಶ್ರೀಮಂತ ಇರಲಿ, ಬಡವ ಇರಲಿ, ಎಲ್ಲರಿಗೂ ಅವರದ್ದೇ ಆದ ಗೌರವ ಇರುತ್ತದೆ. ಹಾಗಾಗಿ ಯಾರೂ ಯಾರನ್ನೂ ಕೊಂಡುಕೊಳ್ಳಲು ಆಗುವುದಿಲ್ಲ. ಇದರ ಅರಿವು ಇರುವವರು ಯಾರೂ ಹೀಗೆ ಮಾತನಾಡುವುದಿಲ್ಲ ಎಂದು ಹೇಳಿದರು.