Waqf Asset Issue | ರೈತರಿಗೆ ವಕ್ಫ್‌ ಆಸ್ತಿ ನೋಟಿಸ್‌; ಸಚಿವ ಜಮೀರ್‌ ಸಮರ್ಥನೆ

ನಮ್ಮ ಆಸ್ತಿಗೆ ನಾವು ನೋಟಿಸ್ ಕೊಟ್ಟಿದ್ದೇವೆ. ಬಿಜೆಪಿಯವರು ಈ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣ ಮಾಡಬಾರದು ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದ್ದಾರೆ;

Update: 2024-10-30 11:44 GMT

ವಿಜಯಪುರ ಜಿಲ್ಲೆಯಲ್ಲಿ ರೈತರ ಜಮೀನುಗಳಿಗೆ ವಕ್ಫ್‌ ಆಸ್ತಿ ಎಂದು ನೋಟಿಸ್‌ ನೀಡಿರುವ ಕ್ರಮವನ್ನು ವಕ್ಫ್‌ ಖಾತೆ ಸಚಿವ ಜಮೀರ್ ಅಹ್ಮದ್‌ ಖಾನ್ ಸಮರ್ಥಿಸಿಕೊಂಡಿದ್ದಾರೆ.

ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಆಸ್ತಿಗೆ ನಾವು ನೋಟಿಸ್ ಕೊಟ್ಟಿದ್ದೇವೆ. ಬಿಜೆಪಿಯವರು ಈ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣ ಮಾಡಬಾರದು ಎಂದು ಹೇಳಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ  ೧೨ ಎಕರೆ ಮಾತ್ರ ವಕ್ಫ್ ಆಸ್ತಿ ಇದೆ. 1200 ಎಕರೆ ಎಂದು ಬಿಜೆಪಿಯವರು ಸುಳ್ಳು ಹಬ್ಬಿಸುತ್ತಿದ್ದಾರೆ. ನಮ್ಮದಲ್ಲದ ಒಂದಿಂಚೂ ಜಾಗವನ್ನೂ ನಾವು ತೆಗೆದುಕೊಂಡಿಲ್ಲ. ನಮ್ಮ ಆಸ್ತಿಗೆ ನಾವು ನೋಟಿಸ್ ಕೊಡುವ ಬದಲು ಬೇರೆಯವರ ಆಸ್ತಿಗೆ ಕೊಡಲಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ರೈತರ ಒಂದಿಂಚೂ ಆಸ್ತಿ ಮುಟ್ಟಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ವಕ್ಫ್ ಬೋರ್ಡ್‌ಗೆ ಸೇರಿದ 1 ಲಕ್ಷ 12 ಸಾವಿರ ಎಕರೆ ಭೂಮಿ ಇದೆ. ಈವರೆಗೆ 11 ಜಿಲ್ಲೆಗಳಲ್ಲಿ ವಕ್ಫ್ ಅದಾಲತ್ ನಡೆಸಿದ್ದೇನೆ. ವಿಜಯಪುರ ಜಿಲ್ಲೆಯಲ್ಲಿ ನಡೆಸಿದ ವಕ್ಫ್‌ ಅದಾಲತ್‌ ಕಾರ್ಯಕ್ರಮಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೂ ಆಹ್ವಾನ ನೀಡಲಾಗಿತ್ತು. ಆದರೆ, ಅವರು ಬಂದಿರಲಿಲ್ಲ. ಈಗ ರೈತರ ಪರ ಕುರಿತು ಕಾಳಜಿ ತೋರುವವರು ಅಂದು ಸಭೆಗೆ ಯಾಕೆ ಬರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. 

ಇನ್ನು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಕುರಿತು ಟೀಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ರಾಜಕೀಯ ಪಿತೂರಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಮುಜರಾಯಿ ಇಲಾಖೆ, ವಕ್ಫ್ ಬೋರ್ಡ್‌ ಎರಡೂ ಒಂದೇ. ನಾವು ಅಲ್ಲಾ ಎಂದರೆ ನೀವು ದೇವರು ಅಂತೀರಾ. ಅಲ್ಲಾ ನಮ್ಮ ನಂಬಿಕೆ. ದೇವರು ನಿಮ್ಮ ನಂಬಿಕೆಯಾಗಿದೆ. ಕೇಂದ್ರ ಸಚಿವರು ಏನಾದರೂ ಹೇಳಲಿ. ನಾನು ಮೊದಲು ಹಿಂದೂಸ್ತಾನಿ. ಆ ಮೇಲೆ ಮುಸ್ಲಿಂ. ಬಿಜೆಪಿಯವರು ಬರೀ ಹಿಂದೂ-ಮುಸ್ಲಿಂ ಸಮುದಾಯಗಳ ಮಧ್ಯೆ ದ್ವೇಷ ಬಿತ್ತುವ ಕೆಲಸ ಬಿಟ್ಟರೆ ಬೇರೇನೂ ಅವರ ಸಾಧನೆ ಇಲ್ಲ. ಬಿಜೆಪಿ ಅವಧಿಯಲ್ಲೂ ರೈತರಿಗೆ ವಕ್ಫ್‌ ನೋಟಿಸ್ ಕೊಟ್ಟಿರುವ ದಾಖಲೆಗಳಿವೆ ಎಂದು ತಿರುಗೇಟು ನೀಡಿದ್ದಾರೆ.

ಮುಜರಾಯಿ ಇಲಾಖೆ ಮತ್ತು ವಕ್ಫ್ ಬೋರ್ಡ್ ಒಂದೇ ಅಲ್ಲ, ಹಿಂದೂ ಧರ್ಮ ಅಥವಾ ಬೇರೆ ಯಾವುದೇ ಧರ್ಮ ಹುಟ್ಟಿದಾಗ ಇಸ್ಲಾಂ ಅಸ್ತಿತ್ವದಲ್ಲೇ ಇರಲಿಲ್ಲ, ಕಾಂಗ್ರೆಸ್ ಡೋಂಗಿ ಜಾತ್ಯಾತೀತತೆ ಮತ್ತು ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದ್ದರು.

Tags:    

Similar News