ಮೈಸೂರು ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನಿರಾಕರಿಸಿದ ಸಚಿವ ಸತೀಶ್ ಜಾರಕಿಹೊಳಿ
ʼಗೌರವ ಡಾಕ್ಟರೇಟ್ ಡಿ.ಲಿಟ್ʼ ಗೌರವ ಪದವಿಯನ್ನು ನೀಡುವುದರ ಮೂಲಕ ಸನ್ಮಾನಿಸಿದ ತಮಗೆ ಹಾಗೂ ವ್ಯವಸ್ಥಾಪನ ಮಂಡಳಿಗೆ ಹೃತ್ಪೂರ್ವಕವಾಗಿ ಅಭಾರಿಯಾಗಿದ್ದೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.;
ಸಚಿವ ಸತೀಶ್ ಜಾರಕಿಹೊಳಿ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮೈಸೂರು ಮುಕ್ತ ವಿಶ್ವವಿದ್ಯಾಲಯ ನೀಡಲು ಮುಂದಾಗಿದ್ದ ಗೌರವ ಡಾಕ್ಟರೇಟ್ ಪದವಿ (ಡಿ.ಲಿಟ್) ಗೌರವಪೂರ್ವಕವಾಗಿ ನಿರಾಕರಿಸಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯದ ಉಪ ಕುಲಪತಿಗಳಿಗೆ ಪತ್ರ ಬರೆದಿರುವ ಸಚಿವರು, ಡಾಕ್ಟರೇಟ್ ಬೇಡ ಎಂದು ಮನವಿ ಮಾಡಿದ್ದಾರೆ.
ಮಾರ್ಚ್ 27ರಂದು ವಿಶ್ವವಿದ್ಯಾಲಯವು ಸಚಿವರಿಗೆ ಗೌರವ ಪದವಿ ನೀಡುವುದರ ಮೂಲಕ ಸನ್ಮಾನಿಸಲು ನಿರ್ಧರಿಸಿತ್ತು. ಆದರೆ, ಈ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಸಚಿವರು, "ಗೌರವ ಡಾಕ್ಟರೇಟ್ ಪದವಿಯನ್ನು ನನಗೆ ಕೊಡುವ ಮೂಲಕ ತಾವು ಸಮಾಜದಲ್ಲಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದೀರಿ. ಸಾಮಾಜಿಕ ಸೇವೆಯಲ್ಲಿ ನಾನು ಕೈಗೊಂಡಿರುವ ಕಾರ್ಯಕ್ರಮಗಳನ್ನು ಸಫಲಗೊಳಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿರುತ್ತೇನೆ. ಅದನ್ನು ಕಾರ್ಯರೂಪಕ್ಕೆ ತರುವ ಗುರುತರವಾದ ಹೊಣೆಗಾರಿಕೆ ನನ್ನ ಮೇಲಿದ್ದು, ಇನ್ನು ಹೆಚ್ಚಿನ ಕಾಲಾವಕಾಶವಿದೆ" ಎಂದು ತಿಳಿಸಿದ್ದಾರೆ.
ತಮ್ಮ ಪತ್ರದಲ್ಲಿ, "ತಾವು ಪ್ರೀತಿ ಪೂರ್ವಕವಾಗಿ ಮುಕ್ತ ವಿಶ್ವವಿದ್ಯಾಲಯದಿಂದ ನನಗೆ ನೀಡಿದಂತಹ ಗೌರವ ಡಾಕ್ಟರೇಟ್ ಪದವಿಯನ್ನು ಹಿಂಪಡೆಯಬೇಕು. ನನ್ನ ನಿರ್ಧಾರವನ್ನು ಅನ್ಯಥಾ ಭಾವಿಸಬಾರದು ಹಾಗೂ ಇದು ನನ್ನ ಸ್ವಂತ ನಿರ್ಧಾರವಾಗಿದ್ದು, ಸ್ವಾಗತಿಸುತ್ತೀರೆಂದು ಭಾವಿಸುತ್ತೇನೆ" ಎಂದು ಸತೀಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.