ಅಂಗನವಾಡಿ ಮೊಟ್ಟೆ ಪ್ರಕರಣ | ಸಿಡಿಪಿಒ ಅಮಾನತುಗೊಳಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆದೇಶ

Update: 2024-08-10 11:26 GMT

ಅಂಗನವಾಡಿ ಮಕ್ಕಳಿಗೆ ಊಟದ ವೇಳೆ ತಟ್ಟೆಗೆ ಮೊಟ್ಟೆ ಹಾಕಿ, ಬಳಿಕ ತೆಗೆದಿಟ್ಟುಕೊಂಡ ಅಮಾನವೀಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳದ ಶಿಶು ಅಭಿವೃದ್ಧಿ ಅಧಿಕಾರಿ (ಸಿಡಿಪಿಒ) ಅಮಾನತು ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೊಪ್ಪಳ ಜಿಲ್ಲಾ ಉಪ ನಿರ್ದೇಶಕರಿಗೆ (ಡಿಡಿ) ನೋಟೀಸ್ ನೀಡಲು ಸೂಚನೆ ನೀಡಿದ್ದಾರೆ.

ಕೊಪ್ಪಳದ ಗುಂಡೂರು ಗ್ರಾಮದ ಅಂಗನವಾಡಿಯ ಕಾರ್ಯಕರ್ತೆ ಲಕ್ಷ್ಮೀ ಹಾಗೂ ಸಹಾಯಕಿ ಶಹನಾಜ್ ಬೇಗಂ ಅವರ ಮೊಟ್ಟೆ ವಂಚನೆ ವಿಡಿಯೋ ವೈರಲ್ ಆಗಿತ್ತು. ಇದನ್ನು ಗಮನಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ತಕ್ಷಣ ಇಲಾಖೆ ಅಧಿಕಾರಿಗಳಿಗೆ ಫೋನ್ ಮಾಡಿ, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಅಮಾನತು ಮಾಡುವಂತೆ ಸೂಚಿಸಿದರು. ಇಡೀ ಪ್ರಕರಣದ ವರದಿ ನೀಡುವಂತೆ ಆದೇಶಿಸಿದ್ದಾರೆ.

ʻʻಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲೇಬೇಕು. ಕೆಳ ಹಂತದಿಂದ ಇಲಾಖೆಯಲ್ಲಿ‌ ಸುಧಾರಣೆ ತರಬೇಕೆಂದು ಕಷ್ಟ ಪಡುತ್ತಿದ್ದೇನೆ. ಪೌಷ್ಟಿಕ ಆಹಾರ, ಗುಣಮಟ್ಟದ ಶಿಕ್ಷಣ ಅಂಗನವಾಡಿಯ ಮೂಲ‌ ಉದ್ದೇಶ. ಆದರೆ, ಬಡಮಕ್ಕಳಿಗೆ ಅನ್ಯಾಯ ಆಗಲು ಬಿಡುವುದಿಲ್ಲʼʼ ಎಂದು ಹೇಳಿದರು.

ʻʻಒಂದು ಮಗುವಿಗೆ ಊಟಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ 8 ರೂ. ಭರಿಸಲಾಗುತ್ತಿದೆ. ಕಳೆದ 9 ವರ್ಷಗಳಿಂದ ಯೂನಿಟ್ ದರ ಏರಿಕೆ ಮಾಡಿಲ್ಲ. ಬೇಳೆಗಳ ಬೆಲೆ ಬಹಳಷ್ಟು ಹೆಚ್ಚಳವಾಗಿದೆ. ಮೊಟ್ಟೆ, ಗುಣಮಟ್ಟದ ಕೆನೆ ಭರಿತ ಹಾಲು ಕೊಡುವುದು ಸಿಎಂ ಸಿದ್ದರಾಮಯ್ಯ ಸರ್ಕಾರದ ಯೋಜನೆ. ಮ‌ಕ್ಕಳಿಗೆ ಊಟ ಬಡಿಸುವ ವೇಳೆ ಕಡ್ಡಾಯವಾಗಿ ವೀಡಿಯೋ ಚಿತ್ರೀಕರಣ ಮಾಡಬೇಕು. ಚಿತ್ರೀಕರಣದ ಬಳಿಕ ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ವಾಟ್ಸಪ್ ಗ್ರೂಪ್ ಗಳ ಮೂಲಕ ಅಪ್ಲೋಡ್ ಆಗಬೇಕು. ಇದೇ ರೀತಿಯ ಪ್ರಕರಣ ಕಳೆದ ಬಾರಿಯೂ ಕೇಳಿಬಂದಿದ್ದು, ನಂತರ ವೀಡಿಯೋ ಚಿತ್ರೀಕರಣ ಕಡ್ಡಾಯ ಮಾಡಿದ್ದೇವೆ. ಇದೀಗ ವೀಡಿಯೋ‌ ಚಿತ್ರೀಕರಣ ಕಡ್ಡಾಯದಿಂದಲೇ ಈ ಪ್ರಕರಣ ಬೆಳಕಿಗೆ ಬಂದಿದೆʼʼ ಎಂದು ಹೇಳಿದರು.

ʻʻಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಅನ್ನೋ ಸ್ಥಿತಿ ಮಕ್ಕಳಿಗೆ ಆಗಿದೆ. 69 ಸಾವಿರ ಅಂಗನವಾಡಿಗಳನ್ನು ಕರ್ನಾಟಕ ರಾಜ್ಯದಲ್ಲಿ ನಡೆಸುತ್ತಿದ್ದೇವೆ‌ ಎಲ್ಲೋ ಒಂದು ಕಡೆ ಈ ರೀತಿಯಾದರೆ ಇಡೀ ಇಲಾಖೆಗೆ ಕಷ್ಟ ಆಗುತ್ತೆ. ನಿನ್ನೆ ರಾತ್ರಿಯೇ ಈ ಪ್ರಕರಣ ನನ್ನ ಗಮನಕ್ಕೆ ಬಂದಿದ್ದು ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ. ಇಂತಹ ತಪ್ಪನ್ನು ಮಾಡಿದರೆ ಕಡ್ಡಾಯವಾಗಿ ಕೆಲಸದಿಂದ ನಿವೃತ್ತಿಗೊಳಿಸುತ್ತೇನೆ. ಬೇರೆಯವರಿಗೆ ಈ ಪ್ರಕರಣ ಪಾಠ ಆಗಬೇಕು. ಸಿಡಿಪಿಒ ಅಮಾನತು ಮಾಡಿ, ಡಿಡಿಗೆ ನೋಟಿಸ್ ನೀಡಲು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇನೆʼʼ ಎಂದು ತಿಳಿಸಿದರು.

Tags:    

Similar News