ಗಣಿ ಹಗರಣ | ಫೋರ್ಜರಿ ಸಹಿ ಬಗ್ಗೆ ದೂರು ನೀಡಲಿಲ್ಲ ಏಕೆ?: ಎಚ್‌ಡಿಕೆಗೆ ದಿನೇಶ್ ಗುಂಡೂರಾವ್

Update: 2024-08-23 10:06 GMT

ಅಕ್ರಮ ಗಣಿ ಹಗರಣಕ್ಕೆ ಸಂಬಂಧಪಟ್ಟ ಆದೇಶ ಪತ್ರದಲ್ಲಿರುವ ಸಹಿ ತಮ್ಮದಲ್ಲ, ಅದು ಫೋರ್ಜರಿ ಎಂದು ಈಗ ಹೇಳುತ್ತಿರುವ ಎಚ್‌.ಡಿ. ಕುಮಾರಸ್ವಾಮಿ ಅವತ್ತೇ ಏಕೆ ದೂರು ನೀಡಲಿಲ್ಲ?ʼʼ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಪ್ರಶ್ನಿಸಿದ್ದಾರೆ.

ಶುಕ್ರವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻʻಗಣಿಗೆ ಅನುಮತಿ ನೀಡಿದ ಆದೇಶದಲ್ಲಿರುವುದು ತಮ್ಮ ಸಹಿ ಅಲ್ಲ ಎಂದು ಈಗ ಹೇಳುತ್ತಿದ್ದಾರೆ, ಒಂದು ವೇಳೆ ಫೋರ್ಜರಿಯಾಗಿದ್ದರೆ ಅವತ್ತೇ ಯಾಕೆ ದೂರು ನೀಡಲಿಲ್ಲ? ಇಂತಹ ಹೇಳಿಕೆಯನ್ನು ಕೇಂದ್ರ ಸಚಿವರಾದವರು, ಮಾಜಿ ಮುಖ್ಯಮಂತ್ರಿಯಾಗಿದ್ದವರು ಕೊಡಲಾಗುತ್ತದೆಯೇ?" ಎಂದು ಕೇಳಿದರು.

ʻʻಗಣಿಗೆ ಅಕ್ರಮವಾಗಿ ಅನುಮತಿ ನೀಡಿದ ಪ್ರಕರಣದಲ್ಲಿ ಕುಮಾರಸ್ವಾಮಿ ಅವರ ಪಾತ್ರ ಇರುವುದು ಸ್ಪಷ್ಟವಾಗಿದೆ. ಇದರ ಬಗ್ಗೆ ತನಿಖೆಯೂ ಆಗಿದೆ. ಇವರ ವಿರುದ್ಧ ಕ್ರಮಕೈಗೊಳ್ಳಲು ಅನುಮತಿ ನೀಡಬೇಕೆಂದು ಲೋಕಾಯುಕ್ತರು, ರಾಜ್ಯಪಾಲರಿಗೆ ಕೋರಿದ್ದಾರೆʼʼ ಎಂದರು.

ʻಜೆಡಿಎಸ್-ಎಚ್‌ಡಿಕೆ ಮುಗಿಸಲು ಬಿಜೆಪಿ ಷಡ್ಯಂತ್ರʼ

ʻʻರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಲೇಬೇಕಾಗುತ್ತದೆ. ಇಲ್ಲದಿದ್ದರೆ, ಕೇಂದ್ರ ಸರ್ಕಾರಕ್ಕೆ ಕಳುಹಿಸಬಹುದು. ಕುಮಾರಸ್ವಾಮಿ ರಾಜೀನಾಮೆ ಕೊಡಲೇಬೇಕಾಗುತ್ತದೆ. ಕುಮಾರಸ್ವಾಮಿ ಅವರ ತಲೆದಂಡವಾಗಲಿ ಎಂದುಕೊಂಡೇ ಬಿಜೆಪಿಯವರು ಮಾಡಿಸಿರಬಹುದು. ಬಿಜೆಪಿಯವರಿಗೆ ಜೆಡಿಎಸ್ ಮುಗಿಸಬೇಕು ಎನ್ನುವ ಚಿಂತನೆ ಬಹಳ ದಿನಗಳಿಂದ ಇತ್ತು. ಜೆಡಿಎಸ್ ಹಾಗೂ ಕುಮಾರಸ್ವಾಮಿ ಅವರನ್ನು ಮುಗಿಸಲು ಬಿಜೆಪಿ ಷಡ್ಯಂತ್ರ ಮಾಡಿದೆʼʼ ಎಂದು ದಿನೇಶ್ ಗುಂಡೂರಾವ್‌ ಆರೋಪಿಸಿದ್ದಾರೆ.

ʻʻಎಚ್.ಡಿ.ಕುಮಾರಸ್ವಾಮಿ ಅವರ ಹಳೇ ಪ್ರಕರಣವನ್ನು ಮುನ್ನೆಲೆಗೆ ತಂದವರೇ ಬಿಜೆಪಿಯವರು. ಗಣಿ ಇಲಾಖೆಯಲ್ಲಿ ಹಿಂದೆ ಹಗರಣವಾಗಿತ್ತು. ಇದೀಗ ಕುಮಾರಸ್ವಾಮಿ ಕೇಂದ್ರದಲ್ಲಿ ಗಣಿ ಸಚಿವರಾಗಿದ್ದಾರೆ. ಹೀಗಾಗಿ ರಾಜ್ಯಪಾಲರು ತೆಗೆದುಕೊಳ್ಳುವ ನಿರ್ಧಾರದಿಂದ ಕುಮಾರಸ್ವಾಮಿ ಅವರ ತಲೆದಂಡ ಆಗಲಿದೆʼʼ ಎಂದರು.

ʻಭ್ರಷ್ಟಾಚಾರದ ಕಿಂಗ್ ವಿಜಯೇಂದ್ರʼ

ʻʻಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭ್ರಷ್ಟಾಚಾರದ ಕಿಂಗ್. ಇವರ ತಂದೆ ದೇಶ ಕಂಡ ದೊಡ್ಡ ಭ್ರಷ್ಟಾಚಾರಿ. ತಂದೆ ಮುಖ್ಯಮಂತ್ರಿಯಿದ್ದಾಗ ವಿಜಯೇಂದ್ರ ಅಧಿಕಾರ ಮಾಡುತ್ತಿದ್ದರು ಎಂದು ಅವರ ಸಚಿವರೇ ಹೇಳಿದ್ದಾರೆ. ಅಂದು ವಿಜಯೇಂದ್ರ ತೆರಿಗೆ ಎಂದೇ ನಿಗಧಿಯಾಗಿತ್ತು. ಇವರು ನಮ್ಮ ಬಗ್ಗೆ, ನಮ್ಮ ಮುಖ್ಯಮಂತ್ರಿಯ ಬಗ್ಗೆ ಮಾತನಾಡುತ್ತಿರುವುದಕ್ಕೆ ನಾಚಿಕೆಯಾಗಬೇಕು. ಇಡೀ ಶಾಸಕರು ಮುಖ್ಯಮಂತ್ರಿ ಪರವಾಗಿ ನಿಂತಿದ್ದಾರೆ. ಬಿಜೆಪಿ ಒಡೆದ ಮನೆಯಾಗಿದೆ ʼʼಎಂದು ತಿರುಗೇಟು ನೀಡಿದರು.

ʻʻಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯಾವುದೇ ತನಿಖೆಯಾಗಿಲ್ಲ. ಅವರ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ. ಅವರ ವರ್ಚಸ್ಸು ಹಾಳು ಮಾಡುವ ಉದ್ದೇಶದಿಂದಲೇ ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಖಾಸಗಿ ದೂರಿನ ಆಧಾರದ ಮೇಲೆ ರಾಜ್ಯಪಾಲರ ಮೇಲೆ ಒತ್ತಡ ತಂದು, ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿಸಿದೆ. ಆದರೆ ಅಧಿಕೃತ ತನಿಖಾ ಸಂಸ್ಥೆಗಳು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ, ಜನಾರ್ಧನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದ್ದರೂ ರಾಜ್ಯಪಾಲರು ಅನುಮತಿ ನೀಡಿಲ್ಲʼʼ ಎಂದು ಕಿಡಿಕಾರಿದರು.

Tags:    

Similar News