Micro Finance Ordinance | ಮೈಕ್ರೋ ಫೈನಾನ್ಸ್ ಕಂಪೆನಿಗಳಿಗೆ ಲಗಾಮು; ಸುಗ್ರೀವಾಜ್ಞೆಯಲ್ಲಿ ಏನೇನಿದೆ?
ಅನಧಿಕೃತ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳದಿಂದ ಹಲವರು ಆತ್ಮಹತ್ಯೆಗೆ ಶರಣಾದ ಹಿನ್ನೆಲೆಯಲ್ಲಿ ಸರ್ಕಾರ ರೂಪಿಸಿದ ಸುಗ್ರೀವಾಜ್ಞೆ ಜಾರಿಗೆ ಬಂದಿದೆ. ಇದರಿಂದ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಯಾವ ರೀತಿಯ ಕಡಿವಾಣ ಬೀಳಲಿದೆ ಎಂಬುದು ಕುತೂಹಲ ಮೂಡಿಸಿದೆ.;
ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳಕ್ಕೆ ಲಗಾಮು ಹಾಕಲು ರಾಜ್ಯ ಸರ್ಕಾರ ರೂಪಿಸಿರುವ ಸುಗ್ರೀವಾಜ್ಞೆಯು ರಾಜ್ಯಪಾಲರ ಅಂಕಿತದೊಂದಿಗೆ ಬುಧವಾರದಿಂದಲೇ ಜಾರಿಗೆ ಬಂದಿದೆ.
ಅನಧಿಕೃತ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳದಿಂದ ಹಲವರು ಆತ್ಮಹತ್ಯೆಗೆ ಶರಣಾದ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಮೂಲಕ ಲೇವಾದೇವಿದಾರರನ್ನು ನಿಯಂತ್ರಿಸಲು ಸರ್ಕಾರ ತೀರ್ಮಾನಿಸಿತ್ತು. ಸುಗ್ರೀವಾಜ್ಞರ ಕರಡು ಮರುಪರಿಶೀಲನೆ ಬಳಿಕ ರಾಜ್ಯಪಾಲರ ಅಂಕಿತ ಬಿದ್ದಿದೆ. ಈಗ ಸುಗ್ರೀವಾಜ್ಞೆಯು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ಯಾವ ರೀತಿಯ ಕಡಿವಾಣ ಹಾಕಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಮೈಕ್ರೋ ಫೈನಾನ್ಸ್ ಕಂಪೆನಿಗಳ ದುಬಾರಿ ಬಡ್ಡಿ ದರ, ಬಲವಂತದ ವಸೂಲಾತಿ ಕ್ರಮಗಳಿಂದ ರೈತರು, ಮಹಿಳೆಯರು ಹಾಗೂ ಮಹಿಳಾ ಸ್ವಸಹಾಯ ಗುಂಪುಗಳು ಹೆಚ್ಚು ಬಾಧಿತವಾಗಿದ್ದವು.
ಸುಗ್ರೀವಾಜ್ಞೆಯ ಮುಖ್ಯಾಂಶಗಳು
• ಮೈಕ್ರೋ ಫೈನಾನ್ಸ್ ಕಿರುಕುಳದ ಪ್ರಕರಣಗಳ ನಿರ್ವಹಣೆಗೆ ನೋಂದಣಿ ಪ್ರಾಧಿಕಾರ ರಚನೆ, ಇದಕ್ಕೆ ಜಿಲ್ಲಾಧಿಕಾರಿಯೇ ಮುಖ್ಯಸ್ಥರಾಗಿರುತ್ತಾರೆ.
• ಬಲವಂತದ ಸಾಲ ವಸೂಲಾತಿಗೆ ಮುಂದಾಗುವ ಮೈಕ್ರೋ ಫೈನಾನ್ಸ್ ಸಂಸ್ಥೆ, ಲೇವಾದೇವಿದಾರರ ನೋಂದಣಿ ರದ್ದತಿಯ ಅಧಿಕಾರ ನೋಂದಣಿ ಪ್ರಾಧಿಕಾರಕ್ಕಿದೆ.
• ಸಾಲಗಾರರ ಮೇಲೆ ಒತ್ತಡ ಹೇರಿದರೆ, ಹಿಂಸೆ ನೀಡಿದರೆ ಅಥವಾ ಅವಮಾನಿಸಿ ಬೆದರಿಸಿದರೆ ನೋಂದಣಿ ಅಮಾನತು ಮಾಡಲಾಗುವುದು.
• ಸಾಲ ವಸೂಲಿಗಾಗಿ ಖಾಸಗಿ ಅಥವಾ ಹೊರಗುತ್ತಿಗೆ ಏಜೆನ್ಸಿಗಳು ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳನ್ನು ಬಳಸಿದರೂ ಕ್ರಮ ನಿಶ್ಚಿತ.
• ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲಕ್ಕಾಗಿ ಯಾವುದೇ ವಸ್ತುಗಳನ್ನು ಅಡಮಾನ ಇರಿಸಿಕೊಳ್ಳುವಂತಿಲ್ಲ.
• ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಲೇವಾದೇವಿದಾರರು ಸುಗ್ರೀವಾಜ್ಞೆ ಜಾರಿಯಾದ ದಿನದಿಂದ ಮೂವತ್ತು ದಿನಗಳೊಳಗೆ ಕಾರ್ಯನಿರ್ವಹಣೆ ಸ್ಥಳ, ವಿಧಿಸಲಿರುವ ಬಡ್ಡಿ ದರ, ಜಾಗರೂಕ ನಿರ್ವಹಣಾ ವ್ಯವಸ್ಥೆ ಮತ್ತು ವಸೂಲಾತಿ ಕ್ರಮಗಳ ಬಗ್ಗೆ ತಿಳಿಸಬೇಕು.
• ಮೈಕ್ರೋಫೈನಾನ್ಸ್ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಈಗಾಗಲೇ ನೋಂದಣಿ ಮಾಡಿಕೊಂಡಿರುವ ಸಂಸ್ಥೆಗಳಿಗೆ ಸುಗ್ರೀವಾಜ್ಞೆ ಅನ್ವಯಿಸುವುದಿಲ್ಲ. ಆದರೆ, ನಿಯಮ ಪಾಲಿಸುವುದು ಕಡ್ಡಾಯವಿರುತ್ತದೆ.
• ಸಾಲಗಾರರೊಂದಿಗೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನಡೆಸುವ ಪತ್ರ ವ್ಯವಹಾರಗಳು ಕನ್ನಡದಲ್ಲಿರಬೇಕು.
• ಮೈಕ್ರೋ ಫೈನಾನ್ಸ್ ಸಂಸ್ಥೆಗಳು ತ್ರೈಮಾಸಿಕ ಮತ್ತು ಸಂದರ್ಭಾನುಸಾರವಾಗಿ ಹಣಕಾಸು ವರ್ಷದ ಏ.10 ರೊಳಗೆ ನೋಂದಣಿ ಪ್ರಾಧಿಕಾರಕ್ಕೆ ಸಾಲಗಾರರ ಪಟ್ಟಿ, ನೀಡಲಾದ ಸಾಲ, ಮರುಪಾವತಿಯ ಮೇಲೆ ವಿಧಿಸಿದ ಬಡ್ಡಿದರದ ವರದಿ ನೀಡಬೇಕು. ವರದಿ ಸಲ್ಲಿಸಲು ವಿಫಲವಾದ ಸಂಸ್ಥೆಗಳಿಗೆ ಆರು ತಿಂಗಳ ಜೈಲುಶಿಕ್ಷೆ ಅಥವಾ ಹತ್ತು ಸಾವಿರ ರೂ, ದಂಡ ವಿಧಿಸಲಾಗುವುದು. ಇಲ್ಲವೇ ಎರಡನ್ನೂ ವಿಧಿಸಬಹುದಾಗಿದೆ.
• ನೋಂದಣಿ ಪ್ರಾಧಿಕಾರಿಯಾದ ಜಿಲ್ಲಾಧಿಕಾರಿಯು ದೂರುಗಳ ಹಿನ್ನೆಲೆಯಲ್ಲಿ ದಾಳಿ ನಡೆಸಿ, ದಾಖಲೆ ಅಥವಾ ದಸ್ತಾವೇಜು ವಶಪಡಿಸಿಕೊಳ್ಳಬಹುದು.
• ಮೈಕ್ರೋ ಫೈನಾನ್ಸ್ ಸಂಸ್ಥೆಯು ಸುಗ್ರೀವಾಜ್ಞೆ ಉಲ್ಲಂಘಿಸಿದ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು. ಪೊಲೀಸರು ಪ್ರಕರಣ ದಾಖಲಿಸಲು ನಿರಾಕರಿಸುವಂತಿಲ್ಲ.
• ಡಿವೈಎಸ್ಪಿ ಹಾಗೂ ಅದಕ್ಕಿಂತ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಳ್ಳುವ ಅಧಿಕಾರ ಹೊಂದಿರುತ್ತಾರೆ.
• ಸಾಲಗಾರ ಹಾಗೂ ಲೇವಾದೇವಿದಾರರ ನಡುವೆ ಮಧ್ಯಸ್ಥಿಕೆ ವಹಿಸಲು ಒಂಬುಡ್ಸ್ ಮನ್ ನೇಮಕ ಮಾಡಲಾಗುವುದು.
• ಸುಗ್ರೀವಾಜ್ಞೆಯ ನಿಯಮಗಳನ್ನು ಉಲ್ಲಂಘಿಸುವ ಮೈಕ್ರೋ ಫೈನಾನ್ಸ್ ಕಂಪನಿಯ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಬಹುದು. ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ಮೂಲಕ ಹತ್ತು ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಯ ಜೈಲು ಶಿಕ್ಷೆ ಹಾಗೂ ಐದು ಲಕ್ಷ ರೂ. ದಂಡ ವಿಧಿಸಬಹುದು. ಸುಗ್ರೀವಾಜ್ಞೆಯಡಿಯ ಅಪರಾಧಗಳು ಜಾಮೀನುರಹಿತವಾಗಿರಲಿವೆ.
• ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನೋಂದಣಿ ಮಾಡಿಸದಿದ್ದರೆ ಅಥವಾ ಲೈಸನ್ಸ್ ಹೊಂದಿಲ್ಲವಾದರೆ ಸಾಲಗಾರನು ಪಾವತಿಸಬೇಕಾದ ಸಾಲವನ್ನು ಮನ್ನಾ ಮಾಡಬಹುದಾಗಿದೆ. ಬಾಧಿತ ಲೇವಾದೇವಿದಾರ ಈ ಸಂಬಂಧ ಸಾಲಗಾರನ ವಿರುದ್ಧ ದಾಖಲಿಸುವ ಯಾವುದೇ ದಾವೆಯನ್ನು ನ್ಯಾಯಾಲಯ ಪುರಸ್ಕರಿಸಬಾರದು ಎಂದು ಸುಗ್ರೀವಾಜ್ಞೆಯಲ್ಲಿ ವಿವರಿಸಲಾಗಿದೆ.
• ಸಾಲ ವಸೂಲಾತಿಗಾಗಿ ಸಾಲಗಾರನ ವಿರುದ್ಧ ಈಗಾಗಲೇ ದಾಖಲಿಸಿರುವ ಎಲ್ಲಾ ದಾವೆಗಳು ಮತ್ತು ಜಪ್ತಿಗಳು ಅಸಿಂಧುವಾಗಲಿವೆ.
ಬಾಧಿತರು ದೂರು ದಾಖಲಿಸಬಹುದು
ಮೈಕ್ರೋ ಫೈನಾನ್ಸ್ ಕಂಪೆನಿಗಳು ಅಥವಾ ಇತರೆ ಖಾಸಗಿ ಹಣಕಾಸು ಸಂಸ್ಥೆಗಳು / ವ್ಯಕ್ತಿಗಳು ಸಾಲ ವಸೂಲಿಯ ನೆಪದಲ್ಲಿ ನೀಡುತ್ತಿದ್ದ ಕಿರುಕುಳ, ಮಾನಸಿಕ ಹಿಂಸೆ ಮತ್ತು ದೌರ್ಜನ್ಯದಂತಹ ಅಮಾನವೀಯ, ಕಾನೂನು ಬಾಹಿರ ಕ್ರಮಗಳ ಮೇಲೆ ನಿಯಂತ್ರಣ ಹಾಗೂ ನಿರ್ಬಂಧ ಹೇರುವ ಉದ್ದೇಶದಿಂದ "ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ ( ಬಲವಂತದ ಕ್ರಮಗಳ ಪ್ರತಿಬಂಧಕ ) ಅಧ್ಯಾದೇಶ - 2025" ಈ ಕ್ಷಣದಿಂದ ಕಾನೂನಾಗಿ ಜಾರಿಗೆ ಬಂದಿದೆ.
ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಪಡೆದು ಕಿರುಕುಳಕ್ಕೆ ಒಳಗಾದವರು ಪೊಲೀಸರ ಬಳಿ ದೂರು ದಾಖಲಿಸಬಹುದು, ಅಂಥವರಿಗೆ ಹೊಸ ಕಾನೂನಿನಡಿ ಹೆಚ್ಚಿನ ರಕ್ಷಣೆ ದೊರೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಮ್ಮ ಈ ಪ್ರಯತ್ನದಿಂದ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್, ಫೈನಾನ್ಸ್ ಹಾಗೂ ಲೇವಾದೇವಿದಾರರ ಕಿರುಕುಳ, ದೌರ್ಜನ್ಯಗಳು ಕೊನೆಯಾಗಲಿದೆ ಎಂಬ ಭರವಸೆ ನನಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.