Micro Finance | ಕಿರುಕುಳ ನೀಡಿದರೆ ಕ್ರಿಮಿನಲ್ ಕೇಸ್: ಜಿಲ್ಲಾಧಿಕಾರಿಗಳಿಗೆ ಕೃಷ್ಣ ಬೈರೇಗೌಡ ಸೂಚನೆ
ಕಂಪೆನಿಗಳ ಅವ್ಯಾಹತ ಅಕ್ರಮಗಳನ್ನು ಕಂಡು ರಾಜ್ಯ ಸರ್ಕಾರ ಸುಮ್ಮನೆ ಕೂರಲು ಸಾಧ್ಯವಿಲ್ಲ. ಇದನ್ನು ಹೀಗೆ ಬಿಟ್ಟರೆ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ.;
ಮೈಕ್ರೋ ಫೈನಾನ್ಸ್ ಕಂಪೆನಿಗಳು ಸಾಲ ಮರುಪಾವತಿ ವಿಚಾರದಲ್ಲಿ ಜನರಿಗೆ ಕಿರುಕುಳ ನೀಡುವುದು ಕಂಡುಬಂದರೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, “ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪೆನಿಗಳು 59 ಸಾವಿರ ಕೋಟಿ ರೂ. ಸಾಲ ನೀಡಿವೆ. ಅಲ್ಲದೆ, ತಮ್ಮ ಸಾಮರ್ಥ್ಯ ವಿಸ್ತರಿಸಿಕೊಳ್ಳುವ ಸಲುವಾಗಿ ಆರ್ಬಿಐ ಗೈಡ್ಲೈನ್ಸ್ ಉಲ್ಲಂಘಿಸಿ ಸಾಲ ನೀಡುತ್ತಿವೆ. ಸಾಲ ನೀಡುವಾಗ ಸಾಲ ಪಡೆದವರ ಆರ್ಥಿಕ ಸಾಮರ್ಥ್ಯವನ್ನು ಕಡೆಗಣಿಸಲಾಗುತ್ತಿರುವುದು ಅಹಿತಕರ ಪ್ರಸಂಗಗಳಿಗೆ ಕಾರಣವಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಓರ್ವ ವ್ಯಕ್ತಿಗೆ 2ಲಕ್ಷಕ್ಕಿಂತ ಹೆಚ್ಚು ಸಾಲ ನೀಡಬಾರದು ಎಂದು ಆರ್ಬಿಐ ಗೈಡ್ಲೈನ್ಸ್ ಇದೆ. ಇದನ್ನು ಯಾರೂ ಅನುಸರಿಸುತ್ತಿಲ್ಲ. ಓರ್ವ ವ್ಯಕ್ತಿಗೆ 5-6 ಲಕ್ಷ ರೂ. ಸಾಲ ನೀಡಲಾಗುತ್ತಿದೆ. ಈ ಮೂಲಕ ಬಡವರನ್ನು ಸಾಲದ ಸುಳಿಗೆ ಸಿಲುಕಿಸಲಾಗುತ್ತಿದೆ. ಸಾಲ ಮರುಪಾವತಿ ಮಾಡದಿದ್ದರೆ ಮೈಕ್ರೋ ಫೈನಾನ್ಸ್ ಕಂಪೆನಿಗಳ ಅಸ್ತಿತ್ವಕ್ಕೂ ತೊಂದರೆಯಾಗಲಿದೆ. ಹೀಗಾಗಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳು ಈ ವಾರದೊಳಗೆ ಮೈಕ್ರೋ ಫೈನಾನ್ಸ್ ಕಂಪನಿಗಳ ಮುಖ್ಯಸ್ಥರ ಜೊತೆಗೆ ಸಭೆ ನಡೆಸಿ ಸಾಲ ವಸೂಲಾತಿಗೆ ಆರ್ಬಿಐ ನಿಗದಿಪಡಿಸಿರುವ ಮಾದರಿ ಕಾರ್ಯಾಚರಣೆಯನ್ನು ಪಾಲನೆ ಮಾಡಲು ಹಾಗೂ ಬೇಜಾಬ್ದಾರಿಯಿಂದ ಸಾಲ ನೀಡುವುದನ್ನೂ ನಿಗ್ರಹಿಸಲು ಸೂಚಿಸಲಾಗಿದೆ ಎಂದರು.
ಮೈಕ್ರೋ ಫೈನಾನ್ಸ್ ಕಂಪೆನಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಕೇಂದ್ರ ಸರ್ಕಾರ ಯಾವುದೇ ವಿಶೇಷ ಅಧಿಕಾರ ನೀಡಿಲ್ಲ. ಆದರೆ, ರಾಜ್ಯ ಸರ್ಕಾರವೇ ತನ್ನ ಅಧಿಕಾರದ ಮಿತಿಯಲ್ಲಿ ಬೇರೆ ಬೇರೆ ಕಾನೂನುಗಳ ಮೂಲಕ ಮೈಕ್ರೋ ಫೈನಾನ್ಸ್ಗಳ ಅಕ್ರಮಗಳಿಗೆ ಕಡಿವಾಣ ಹಾಕಲಿದೆ. ಇಂತಹ ಕಂಪೆನಿಗಳ ಅವ್ಯಾಹತ ಅಕ್ರಮಗಳನ್ನು ಕಂಡು ರಾಜ್ಯ ಸರ್ಕಾರ ಸುಮ್ಮನೆ ಕೂರಲು ಸಾಧ್ಯವಿಲ್ಲ. ಇದನ್ನು ಹೀಗೆ ಬಿಟ್ರೆ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ತಿಳಿಸಿದರು.
4.5 ಕೋಟಿ ರೂ. ಪ್ರೋತ್ಸಾಹ ಧನ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಆಧಾರ್ ಸೀಡಿಂಗ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಗ್ರಾಮ ಸಹಾಯಕರು ಮತ್ತು ಗ್ರಾಮ ಲೆಕ್ಕಿಗರಿಗೆ 4.5 ಕೋಟಿ ರೂ. ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ರಾಜ್ಯದಲ್ಲಿ 2.12 ಕೋಟಿ ಜಮೀನುಗಳನ್ನು ಆರ್ಟಿಸಿ ಜೊತೆಗೆ ಆಧಾರ್ ಜೋಡಿಸಲಾಗಿದೆ. ಇದನ್ನೆಲ್ಲಾ ಮಾಡಿದ್ದು ಗ್ರಾಮ ಸಹಾಯಕರು ಮತ್ತು ಗ್ರಾಮ ಲೆಕ್ಕಿಗರು. ಇವರು ಫೀಲ್ಡ್ಗೆ ಹೋಗಿ ಈ ಕೆಲಸ ಮಾಡದಿದ್ದರೆ ಆಧಾರ್ ಸೀಡಿಂಗ್ ಸಾಧ್ಯವೇ ಇರುತ್ತಿರಲಿಲ್ಲ. ಹಲವರು ತಮ್ಮ ಕೈಯಿಂದ ಖರ್ಚು ಮಾಡಿ ಆಧಾರ್ ಸೀಡಿಂಗ್ ಮಾಡಿದ್ದಾರೆ. ಹೀಗಾಗಿ ಗ್ರಾಮ ಸಹಾಯಕರು ಹಾಗೂ ಗ್ರಾಮ ಲೆಕ್ಕಿಗರಿಗೆ 4.5 ಕೋಟಿ ರೂ. ಪ್ರೊತ್ಸಾಹ ಧನ ನೀಡಬೇಕು ಎಂದು ತೀರ್ಮಾನಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ ಹಾಗೂ ಕಂದಾಯ ಆಯುಕ್ತರಾದ ಸುನೀಲ್ ಕುಮಾರ್ ಉಪಸ್ಥಿತರಿದ್ದರು.