Namma Metro | ನಾಗಸಂದ್ರ- ಮಾದಾವರ ಮೆಟ್ರೋ ರೈಲು ಸಂಚಾರಕ್ಕೆ ಅನುಮತಿ

ವಿಸ್ತರಿತ ಮಾರ್ಗದಲ್ಲಿ ರೈಲು ಓಡಾಟದ ಸುರಕ್ಷತೆ ಖಚಿತಪಡಿಸಿಕೊಂಡ ನಂತರ ವಾಣಿಜ್ಯ ಸೇವೆಗೆ ಅನುಮತಿ ನೀಡಲಾಗಿದೆ. ಮಾದಾವರವರೆಗಿನ ವಿಸ್ತರಿತ ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು ಹಾಗೂ ಮಾದಾವರ ನಿಲ್ದಾಣಗಳು ಇರಲಿವೆ.;

Update: 2024-10-05 07:23 GMT

ಬೆಂಗಳೂರು ನಿವಾಸಿಗಳಿಗೆ ʼನಮ್ಮ ಮೆಟ್ರೋʼ ಸಿಹಿ ಸುದ್ದಿ ನೀಡಿದೆ. ಬೆಂಗಳೂರು ಮೆಟ್ರೋ ರೈಲು ನಿಗಮವು (ಬಿಎಂಆರ್‌ಸಿಎಲ್) ಹಸಿರು ಮಾರ್ಗದ ನಾಗಸಂದ್ರದಿಂದ ಮಾದಾವರವರೆಗಿನ ಮೆಟ್ರೋ ರೈಲು ಪ್ರಯಾಣಕ್ಕೆ ಅನುಮತಿ ನೀಡಿದೆ.

ಅ.3 ಹಾಗೂ 4 ರಂದು ಹಸಿರು ಮಾರ್ಗದಲ್ಲಿ ನಾಗಸಂದ್ರದಿಂದ ಮಾದಾವರವರೆಗಿನ ಒಟ್ಟು 3.14 ಕಿ.ಮೀ. ಮೆಟ್ರೋ ರೈಲು ಮಾರ್ಗದಲ್ಲಿ ಸುರಕ್ಷತಾ ಕ್ರಮಗಳ ತಪಾಸಣೆಯೊಂದಿಗೆ ಪ್ರಾಯೋಗಿಕ ಸಂಚಾರ ನಡೆಸಿತು.

ನಮ್ಮ ಮೆಟ್ರೋ ರೈಲು ಈವರೆಗೆ ರೇಷ್ಮೆ ಸಂಸ್ಥೆಯಿಂದ ನಾಗಸಂದ್ರವರೆಗಿನ ಹಸಿರು ಮಾರ್ಗದಲ್ಲಿ ಮಾತ್ರ ಸಂಚರಿಸುತ್ತಿತ್ತು. ವಿಸ್ತರಿತ ಮಾರ್ಗದಲ್ಲಿ ನಾಗಸಂದ್ರದಿಂದ ಮಾದವರವರೆಗೆ ಮೆಟ್ರೋ ರೈಲು ಕಾರ್ಯಾಚರಣೆ ನಡೆಸಲಿದೆ. ಇದಕ್ಕೆ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್ಎಸ್) ಅನುಮೋದನೆ ನೀಡಿದ್ದಾರೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಸ್ತರಿತ ಮಾರ್ಗದಲ್ಲಿ ರೈಲು ಓಡಾಟದ ಸುರಕ್ಷತೆ ಖಚಿತಪಡಿಸಿಕೊಂಡ ನಂತರ ವಾಣಿಜ್ಯ ಸೇವೆಗೆ ಅನುಮತಿ ನೀಡಲಾಗಿದೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

ಮಾದಾವರವರೆಗಿನ ವಿಸ್ತರಿತ ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು ಹಾಗೂ ಮಾದಾವರ ನಿಲ್ದಾಣಗಳು ಇರಲಿವೆ. ಇವೆಲ್ಲವೂ ಎತ್ತರಿಸಿದ ನಿಲ್ದಾಣಗಳಾಗಿವೆ. ಸದ್ಯ ವಿಸ್ತರಿತ ಮೆಟ್ರೋ ಮಾರ್ಗದಿಂದ ಮಾದಾವರ ಹಾಗೂ ನೆಲಮಂಗಲ ಕಡೆಯಿಂದ ಬೆಂಗಳೂರಿಗೆ ಬರುವ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಸಂಚಾರ ದಟ್ಟಣೆಯೂ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಯಾವ ದಿನಾಂಕದಿಂದ ಈ ವಿಸ್ತರಿತ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ ಎಂಬುದನ್ನು ಇನ್ನೂ ಖಚಿತಪಡಿಸಿಲ್ಲ.

ಪ್ರಸ್ತುತ, ನಮ್ಮ ಮೆಟ್ರೋ ರೈಲುಗಳಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರ ಸಂಖ್ಯೆ 8 ಲಕ್ಷ ದಾಟಿದೆ. ಈಗಿರುವಷ್ಟೇ ರೈಲು ಬೋಗಿಗಳು ಸಂಚರಿಸಿದರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ.

Tags:    

Similar News