Namma Metro | 3 ದಿನಗಳಲ್ಲಿ ಮೆಟ್ರೋ ದರ ಇಳಿಕೆ: ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಸಂಸದರ ಭರವಸೆ
ಮೆಟ್ರೋ ದರ ಏರಿಕೆ ಕುರಿತ ಹಗ್ಗಜಗ್ಗಾಟ ಕಾಂಗ್ರೆಸ್-ಬಿಜೆಪಿ ನಡುವೆ ಮುಂದುವರೆದಿದೆ. ಈ ಹಗ್ಗ ಜಗ್ಗಾಟದ ಮಧ್ಯೆಯೂ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ದರ ಕಡಿಮೆ ಆಗುವ ಭರವಸೆಯೊಂದು ಸಿಕ್ಕಿದೆ. ಬಿಜೆಪಿ ನಿಯೋಗ ಸಿಎಂ ಭೇಟಿ ಮಾಡಿದ್ದ ಸಂದರ್ಭದಲ್ಲಿ ಈ ಬೆಳವಣಿಗೆಯಾಗಿದೆ.;
ಕಾಂಗ್ರೆಸ್-ಬಿಜೆಪಿ ನಡುವೆ ಮೆಟ್ರೋ ದರ ಏರಿಕೆ ಕುರಿತ ಹಗ್ಗಜಗ್ಗಾಟ ಮುಂದುವರೆದಿದೆ. ದರ ಏರಿಕೆಯಿಂದ ಬೆಂಗಳೂರಿಗರು ನಮ್ಮ ಮೆಟ್ರೋ ಸಂಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಬಿಎಂಆರ್ಸಿಎಲ್ ವಿರುದ್ಧ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅಲ್ಪಮಟ್ಟಿಗೆ ದರ ಇಳಿಕೆಯಾಗಿದೆ. ಆದರೂ ಕೆಲವು ಮಾರ್ಗಗಳಲ್ಲಿ ಈಗಲೂ ದುಪ್ಪಟ್ಟು ಪ್ರಯಾಣ ದರ ಮುಂದುವರಿದಿದೆ. ಇದೇ ವಿಚಾರದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿದ್ದ ಬಿಜೆಪಿ ನಿಯೋಗ ಚರ್ಚೆ ನಡೆಸಿದೆ.
ಸಿಎಂ ಭೇಟಿ ಮಾಡಿದ್ದ ಬಿಜೆಪಿ ನಿಯೋಗದಲ್ಲಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ‘ಮಟ್ರೋ ಪ್ರಯಾಣ ದರ ಸಂಬಂಧ ದರ ನಿಗದಿ ಸಮಿತಿಗೆ ನೀವು ಮತ್ತೊಂದು ಪತ್ರ ಬರೆಯಿರಿ. ನಾವು ಮೂರೂ ಜನ ಸಂಸದರು ಸೇರಿಕೊಂಡು 3 ದಿನಗಳಲ್ಲಿ ಇಳಿಕೆ ಮಾಡಿಸುತ್ತೇವೆ’ ಎಂದು ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
"ಈ ಕುರಿತು ನಾನು ಬಿಎಂಆರ್ಸಿಎಲ್ ಎಂಡಿ ಜೊತೆಗೆ ಮಾತನಾಡುತ್ತೇನೆ. ನಂತರ ದರ ನಿಗದಿ ಸಮಿತಿಗೆ ಇನ್ನೊಂದು ಪತ್ರ ಬರೆಯುವುದರ ಬಗ್ಗೆ ಹೇಳುತ್ತೇನೆ" ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಹೀಗಾಗಿ ಮೆಟ್ರೋ ಪ್ರಯಣ ದರ ಏರಿಕೆಯಿಂದ ಕಂಗೆಟ್ಟಿರುವ ಬೆಂಗಳೂರಿಗರಿಗೆ ದರ ಕಡಿಮೆಯಾಗುವ ಸೂಚನೆ ಸಿಕ್ಕಿದೆ.
ಕ್ಷೇತ್ರಾಭಿವೃದ್ಧಿಗೆ ಅನುದಾನ ಕೊಡಿ
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 150 ಕೋಟಿ ರೂ. ಅನುದಾನ ನೀಡುವಂತೆ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ವೇಳೆ ಬಿಜೆಪಿ ನಿಯೋಗ ಇದೇ ಸಂದರ್ಭದಲ್ಲಿ ಮನವಿ ಮಾಡಿದೆ. ಬಿಜೆಪಿ ನಿಯೋಗಕ್ಕೆ ಭರವಸೆ ಕೊಟ್ಟಿರುವ ಸಿದ್ದರಾಮಯ್ಯ, ಬಜೆಟ್ನಲ್ಲಿ ಅನುದಾನ ಹಂಚಿಕೆ ಕುರಿತು ಪರಿಶೀಲಿಸುತ್ತೇನೆ. ಈಗಾಗಲೇ ಪ್ರತಿ ಕ್ಷೇತ್ರಕ್ಕೂ ಗ್ಯಾರಂಟಿ ಯೋಜನೆಗಳಿಗೆ 250 ಕೋಟಿ ರೂ. ಕೊಡಲಾಗುತ್ತಿದೆ ಎಂದರು.
ಬೆಂಗಳೂರು ಅಭಿವೃದ್ಧಿ ಕುಂಠಿತ
ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನಂತರ ನಿಯೋಗದ ನೇತೃತ್ವ ವಹಿಸಿದ್ದ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ‘ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದೇವೆ. ಬೆಂಗಳೂರು ಮಹಾನಗರದ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ. ಸತತ 2 ವರ್ಷಗಳಿಂದ ನಾವು ನೋಡಿ ಬೇಸತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒತ್ತಾಯಿಸಿದ್ದೇವೆ. ರಾಜ್ಯದ ಎಲ್ಲಾ ಬಿಜೆಪಿ ಶಾಸಕರು ಅನುದಾನ ಇಲ್ಲದೆ ಕಣ್ಣೀರು ಹಾಕುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುವಂತೆ ಎಲ್ಲರೂ ಸಿಎಂಗೆ ಮನವಿ ಮಾಡಿದ್ದಾರೆ’ ಎಂದು ಹೇಳಿದರು.
ನಾವು ತಾರತಮ್ಯ ಮಾಡಿರಲಿಲ್ಲ
ಹಿಂದೆ ನಮ್ಮ ಸರ್ಕಾರ ಇದ್ದಾಗ ಅನುದಾನ ಹಂಚಿಕೆಯಲ್ಲಿ ಯಾವ ಶಾಸಕರಿಗೂ ತಾರತಮ್ಯ ಮಾಡಿರಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಅನುದಾನ ಕೊಡುವ ವಿಚಾರದಲ್ಲಿ ಹೆಚ್ಚು ತಾರತಮ್ಯ ಮಾಡುತ್ತಿದೆ. ಮೆಟ್ರೋ ರೈಲು ಪ್ರಯಾಣ ದರ ಏರಿಕೆಗೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜನರೇ ಮೆಟ್ರೋ ಸಂಸ್ಥೆ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ವಿರೋಧ ಪಕ್ಷವಾಗಿ ನಾವು ರಾಜ್ಯಸರ್ಕಾರಕ್ಕೆ ತೊಂದರೆ ಕೊಡುವುದಿಲ್ಲ. ಆದರೆ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಆರ್. ಅಶೋಕ್ ಒತ್ತಾಯಿಸಿದ್ದಾರೆ.
ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ನಿಯೋಗದಲ್ಲಿ ವಿಪಕ್ಷ ನಾಯಕ ಆರ್.ಅಶೋಕ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ, ಶಾಸಕರಾದ ರಾಮಮೂರ್ತಿ, ಭೈರತಿ ಬಸವರಾಜ, ಕೆ. ಗೋಪಾಲಯ್ಯ, ಎಂ. ಕೃಷ್ಣಪ್ಪ, ಎಸ್.ಆರ್. ವಿಶ್ವನಾಥ್, ಮುನಿರತ್ನ, ಉದಯ ಗರುಡಾಚಾರ್, ಎಸ್. ರಘು, ರವಿ ಸುಬ್ರಮಣ್ಯ, ವಿಧಾನ ಪರಿಷತ್ ಸದಸ್ಯರಾದ ಗೋಪಿನಾಥ್ ರೆಡ್ಡಿ, ಕೇಶವಪ್ರಸಾದ್ ಇದ್ದರು.