ಟ್ಯಾಕ್ಸಿಗಳಿಗೆ ಮೀಟರ್ ಅಳವಡಿಕೆ ಕಡ್ಡಾಯ: ಸರ್ಕಾರಕ್ಕೆ ನೋಟಿಸ್ ಜಾರಿ

ರಾಜ್ಯದಲ್ಲಿ ಸದ್ಯ ಸಂಚರಿಸುತ್ತಿರುವ ಎಲ್ಲಾ ಟ್ಯಾಕ್ಸಿಗಳಿಗೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಲು ನಿರ್ದೇಶಿಸಬೇಕು.;

Update: 2024-04-24 04:37 GMT
ಕರ್ನಾಟಕ ಹೈಕೋರ್ಟ್‌
Click the Play button to listen to article

ಬೆಂಗಳೂರು: 'ರಾಜ್ಯದಲ್ಲಿ ಸದ್ಯ ಸಂಚರಿಸುತ್ತಿರುವ ಎಲ್ಲಾ ಟ್ಯಾಕ್ಸಿಗಳಿಗೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಲು ನಿರ್ದೇಶಿಸಬೇಕು' ಎಂದು ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಈ ಸಂಬಂಧ ಸಾರಿಗೆ ಇಲಾಖೆಯ ನಿವೃತ್ತ ನೌಕರ ಮೊಹಮ್ಮದ್ ದಸ್ತಗೀರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರ ಮೊಹಮದ್ ದಸ್ತಗೀರ್ ಸ್ವತಃ ವಾದ ಮಂಡಿಸಿ, 'ಕರ್ನಾಟಕ ಮೋಟಾರು ವಾಹನ ಕಾಯ್ದೆ- 1989ರ ಕಲಂ 129ರ ಅನ್ವಯ ಎಲ್ಲಾ ಟ್ಯಾಕ್ಸಿಗಳಿಗೆ ಕಡ್ಡಾಯ ಮೀಟರ್ ಅಳವಡಿಕೆ ಜಾರಿಗೂಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು' ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಜೂನ್ 19ಕ್ಕೆ ಮುಂದೂಡಿತು.

ಅರ್ಜಿಯಲ್ಲಿ ಏನಿದೆ?

ಪ್ರಸ್ತುತ ನಿಯಮವನ್ನು ಜಾರಿಗೊಳಿಸದ ಕಾರಣ ಟ್ಯಾಕ್ಸಿಗಳು ಪ್ರಯಾಣಿಕರಿಂದ ಮನಬಂದಂತೆ ಶುಲ್ಕ ಜಾರಿಗೊಳಿಸುತ್ತಿವೆ. ಆ ದರಗಳಿಗೆ ಯಾವುದೇ ಮಿತಿ ಇಲ್ಲದಾಗಿದೆ. ಹಾಗಾಗಿ ಆಟೋರಿಕ್ಷಾಗಳಿಗೆ ಜಾರಿಗೊಳಿಸಿರುವಂತೆ, ಕಾನೂನು ಮತ್ತು ಮಾಪನ ಶಾಸ್ತ್ರ ಇಲಾಖೆಯಿಂದ ಪರೀಕ್ಷಿಸಿ ಪ್ರಮಾಣೀಕರಿಸಲ್ಪಟ್ಟಿರುವ ಮೀಟರ್‌ಗಳನ್ನು ಎಲ್ಲ ಬಗೆಯ ಟ್ಯಾಕ್ಸಿಗಳಿಗೆ ಅಳವಡಿಸಬೇಕು. ಇದರಿಂದ ಸಾರ್ವಜನಿಕರಿಗೆ ಇದೀಗ ಬೀಳುತ್ತಿರುವ ಅಧಿಕ ಹೊರೆ ತಗ್ಗಲಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

Tags:    

Similar News