Aero India 2025| ಇಂದಿನಿಂದ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಮಾಯಾಲೋಕ
ಯಲಹಂಕದ ವಾಯುನೆಲೆಯಲ್ಲಿ ನಾಳೆಯಿಂದ ಆರಂಭವಾಗಲಿರುವ ದ್ವೈವಾರ್ಷಿಕ ಏರೋಶೋಗೆ ಕ್ಷಣಗಣನೆ ಆರಂಭವಾಗಿದೆ. ಸೂರ್ಯಕಿರಣ್ ಸ್ಕ್ವಾಡ್ರನ್ ಹಾಗೂ ಜೆಟ್ ವಿಮಾನಗಳು ಆಗಸದಲ್ಲಿ ಜಾದು ನಡೆಸಲು ಸನ್ನದ್ಧವಾಗಿವೆ.;
ಏಷ್ಯಾದ ಅತಿ ದೊಡ್ಡ ʼಏರ್ ಶೋʼ ಏರೋ ಇಂಡಿಯಾ (Aero India 2025) ಇಂದಿನಿಂದ (ಫೆ.10) ವಿಧ್ಯುಕ್ತವಾಗಿ ಆರಂಭವಾಗಲಿದೆ. ನಾಲ್ಕು ದಿನಗಳ(ಫೆ.10-14) ಕಾಲ ಯಲಹಂಕದ ವಾಯುನೆಲೆಯಲ್ಲಿ ನಡೆಯುವ ದ್ವೈವಾರ್ಷಿಕ ಏರೋ ಶೋದಲ್ಲಿ ಯುದ್ಧ ವಿಮಾನಗಳು ಬಾನಂಗಳದಲ್ಲಿ ವಿವಿಧ ಕಸರತ್ತು ಪ್ರದರ್ಶಿಸಲಿವೆ. ಭಾರತದ ವೈಮಾನಿಕ ಕ್ಷೇತ್ರದ ಆವಿಷ್ಕಾರ, ತಂತ್ರಜ್ಞಾನ ವೀಕ್ಷಣೆಗಾಗಿ ವಿಶ್ವದ 18 ದೇಶಗಳ ಉದ್ಯಮಿಗಳು, ಗಣ್ಯರು, ಏರೋ ಶೋ ವೀಕ್ಷಣೆಗೆ ಆಗಮಿಸಲಿದ್ದಾರೆ.
ಸೂರ್ಯಕಿರಣ್ ಸ್ಕ್ವಾಡ್ರನ್ ವಿಮಾನಗಳು ಆಗಸದಲ್ಲಿ ಜಾದು ನಡೆಸಲು ಸನ್ನದ್ಧವಾಗಿವೆ. ಜೆಟ್ ವಿಮಾನಗಳು ಕೂಡ ಹೆಚ್ಚು ಗಮನ ಸೆಳೆಯುತ್ತಿವೆ. ಕಳೆದ 15 ದಿನಗಳಿಂದ ಯುದ್ದ ವಿಮಾನಗಳು, ಫೈಟರ್ ಜೆಟ್‌ಗಳು ಹಾಗೂ ಲಘು ವಿಮಾನಗಳು ತಾಲೀಮು ನಡೆಸಿವೆ.
ಅಮೆರಿಕ, ರಷ್ಯಾ ಜೆಟ್‌ಗಳ ಆಕರ್ಷಣೆ
ಯಲಹಂಕ ಏರ್ ಶೋಗೆ ಪ್ರತಿ ವರ್ಷ ಅಮೆರಿಕ ಹಾಗೂ ರಷ್ಯಾ ಸೇರಿದಂತೆ ಹಲವು ದೇಶಗಳ ಯುದ್ದ ವಿಮಾನಗಳು ಆಗಮಿಸಲಿವೆ. ಅದೇ ರೀತಿ ಈ ಬಾರಿ ಅಮೆರಿಕದ ಎಫ್-35, ರಷ್ಯಾದ ಎಸ್‌ಯು-35 ಯುದ್ಧ ವಿಮಾನಗಳು ಯಲಹಂಕ ವಾಯುನೆಲೆಗೆ ಬಂದಿಳಿದಿವೆ.
ಶತ್ರುಗಳ ವಿರುದ್ಧ ರಹಸ್ಯ ಕಾರ್ಯಾಚರಣೆ ನಡೆಸುವ ಸಾಮರ್ಥ್ಯದ 5ನೇ ತಲೆಮಾರಿನ ಅತ್ಯಾಧುನಿಕ ಯುದ್ಧ ವಿಮಾನಗಳು ಏರ್ ಶೋ ನಲ್ಲಿ ಗಮನ ಸೆಳೆಯಲಿವೆ. ರಷ್ಯಾದ ಎಸ್‌ಯು-57 ಜೊತೆ ಅಮೆರಿಕದ ಎಫ್-35 ಹಾಗೂ ಎರಡು ಎಫ್-16 ವಿಮಾನಗಳು ತಾಲೀಮು ನಡೆಸಿವೆ.
ಕಳೆದ ಬಾರಿಯ ಏರ್ ಶೋನಲ್ಲಿ ಎಫ್-35, ಎಫ್-16 ಭಾಗವಹಿಸಿದ್ದವು. ಈಗ ಮೊದಲ ಬಾರಿಗೆ ರಷ್ಯಾದ ಎಸ್‌ಯು-57 ಏರ್ ಶೋನಲ್ಲಿ ಭಾಗವಹಿಸುತ್ತಿದೆ.
ಕೊನೆಯ ಎರಡು ದಿನ ಸಾರ್ವಜನಿಕರಿಗೆ ಮೀಸಲು
ಏರ್ ಶೋನ ಮೊದಲ ಮೂರು ದಿನ ಅಂದರೆ ಫೆ. 10 ರಿಂದ 12 ರವರೆಗೆ ವ್ಯಾಪಾರ, ಉದ್ಯಮ ಸಂದರ್ಶಕರಿಗೆ ಮೀಸಲಿರಿಸಲಾಗಿದೆ. ಫೆ. 13 ಮತ್ತು 14 ರಂದು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಒದಗಿಸಲಾಗಿದೆ. ಪ್ರತಿ ದಿನ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಏರ್ ಶೋ ಇರಲಿದೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸುಧಾರಿತ ಫೈಟರ್ ಜೆಟ್‌ಗಳು, ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳು ಆಗಸದಲ್ಲಿ ಪ್ರದರ್ಶನ ನೀಡಲಿವೆ. ಭಾರತದ ವೈಮಾನಿಕ ಕ್ಷೇತ್ರದ ಏರೋಸ್ಪೇಸ್ ತಂತ್ರಜ್ಞಾನ, ವಾಯುಯಾನದ ವಿಶೇಷ, ಮಿಲಿಟರಿ ವ್ಯವಸ್ಥೆಯಲ್ಲಿ ಆಗಿರುವ ಹೊಸ ಆವಿಷ್ಕಾರಗಳನ್ನು ಪ್ರದರ್ಶಿಸಲಾಗುತ್ತದೆ. ಜೊತೆಗೆ ಉದ್ಯಮಿಗಳಿಗೆ ಸೆಮಿನಾರ್, ಸಮ್ಮೇಳನಗಳನ್ನು ಆಯೋಜಿಸಲಾಗಿದೆ. ರಕ್ಷಣಾ ನೀತಿಗಳು, ಬಾಹ್ಯಾಕಾಶ ಕ್ಷೇತ್ರದಲ್ಲಿನ ಪ್ರಗತಿ, ಭವಿಷ್ಯದ ಸವಾಲುಗಳ ಕುರಿತು ಚರ್ಚೆಗಳು ನಡೆಯಲಿವೆ.
ಏರ್ ಶೋ ಹಿನ್ನೆಲೆ ಮಾರ್ಗ ಬದಲಾವಣೆ
ಏರ್ ಶೋಗೆ ಯಾವುದೇ ಸಮಸ್ಯೆಯಾಗದಂತೆ ಮಹಾನಗರ ಪಾಲಿಕೆ, ಬೆಂಗಳೂರು ಪೊಲೀಸರು ಹಾಗೂ ಮಹಾನಗರ ಸಾರಿಗೆ ಸಂಸ್ಥೆಗಳು ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿವೆ. ಬಳ್ಳಾರಿ ರಸ್ತೆಯಲ್ಲಿ ಸರಕು ಸಾಗಣೆ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ಪ್ರದರ್ಶನ ನಡೆಯುವ ನಾಲ್ಕೂ ದಿನ ವಿಮಾನ ನಿಲ್ದಾಣಕ್ಕೆ ಹೋಗುವವರು ಬಾಗಲೂರು ಮಾರ್ಗ ಬಳಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಮನವಿ ಮಾಡಿದ್ದಾರೆ.
ಪಾರ್ಕಿಂಗ್, ಏರ್ ಶೋ ವೀಕ್ಷಣೆಗೆ ಸ್ಥಳಗಳನ್ನು ಭಾರತೀಯ ವಾಯುಪಡೆ ನಿಗದಿಗೊಳಿಸಿದೆ. ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿರುವವರು ಕ್ಯೂಆರ್ ಕೋಡ್ ಮಾಹಿತಿ ಅನುಸರಿಸಿ, ಏರ್ ಶೋ ವೀಕ್ಷಣೆಗೆ ಬರಲು ಸೂಚಿಸಿದೆ.
ಹೆಚ್ಚುವರಿ ಬಸ್ ಸೇವೆ
ಫೆ.13ಹಾಗೂ 14 ರಂದು ಪಾಸ್ ಹೊಂದಿರುವ ಸಾರ್ವಜನಿಕರಿಗೆ ಏರ್ ಶೋ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಏರ್ ಶೋ ಸ್ಥಳಕ್ಕೆ ಆಗಮಿಸಲು ವಾಯುಪಡೆಯು 500ಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳನ್ನು ಎರವಲು ಪಡೆದಿದೆ. ಈ ಬಸ್‌ಗಳು ತಡೆರಹಿತವಾಗಿ ಏರ್ ಶೋ ಪ್ರದೇಶಕ್ಕೆ ಸಾರ್ವಜನಿಕರನ್ನು ಕರೆತರಲಿವೆ.