Mekedatu Project | ಯೋಜನೆ ಜಾರಿಗೆ ಮತ್ತೆ ಕ್ಯಾತೆ: ತಡೆಯಲು ಎಲ್ಲಾ ಕ್ರಮ ಎಂದು ತಮಿಳುನಾಡು
ತಮಿಳುನಾಡು ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆಯ ಪ್ರಸ್ತಾಪ ಮಾಡಿರುವ ಅಲ್ಲಿನ ಜಲಸಂಪನ್ಮೂಲ ಸಚಿವ ದೊರೈ ಮುರುಗನ್, ಯೋಜನೆ ತಡೆಯುವುದಕ್ಕಾಗಿ ಕಾನೂನು ಕ್ರಮ ಸೇರಿದಂತೆ ಎಲ್ಲಾ ಕ್ರಮಗಳನ್ನು ತಮ್ಮ ಸರ್ಕಾರ ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ.;
ಮೇಕೆದಾಟು ಯೋಜನೆಗೆ ಆದ್ಯತೆ ಮೇರೆಗೆ ಅನುಮತಿ ನೀಡುವಂತೆ ಕರ್ನಾಟಕ ಸರ್ಕಾರ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಪತ್ರ ಬರೆದ ಬೆನ್ನಲ್ಲೇ ಯೋಜನೆ ತಡೆಯಲು ಎಲ್ಲಾ ಕಾನೂನು ಕ್ರಮ ಸೇರಿದಂತೆ ಸಾಧ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದಿರುವ ತಮಿಳುನಾಡು, ಯಾವುದೇ ಕಾರಣಕ್ಕೆ ಆ ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.
ತಮಿಳುನಾಡು ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆಯ ಪ್ರಸ್ತಾಪ ಮಾಡಿರುವ ಅಲ್ಲಿನ ಜಲಸಂಪನ್ಮೂಲ ಸಚಿವ ದೊರೈ ಮುರುಗನ್, ಯೋಜನೆ ತಡೆಯುವುದಕ್ಕಾಗಿ ಕಾನೂನು ಕ್ರಮ ಸೇರಿದಂತೆ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ.
ತಮಿಳುನಾಡು ವಿಧಾನಸಭೆಯಲ್ಲಿ 2025-2026ರ ನೀತಿ ಟಿಪ್ಪಣಿಯನ್ನು ಮಂಡಿಸುತ್ತಾ ಅವರು, ಈ ನಿಲುವು ಸ್ಪಷ್ಟಪಡಿಸಿದ್ದಾರೆ. ಮೇಕೆದಾಟು ಯೋಜನೆ ಸಂಬಂಧ ಕರ್ನಾಟಕವು ಇನ್ನೂ ಅಂತಿಮ ಡಿಪಿಆರ್ ಸಲ್ಲಿಸಿಲ್ಲ ಎಂದು ಕೇಂದ್ರ ಸರ್ಕಾರ ತಮಗೆ ತಿಳಿಸಿರುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.
ಕರ್ನಾಟಕ ಸರ್ಕಾರವು ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸಲು 67.16 ಟಿಎಂಸಿ ಜಲ ಸಂಗ್ರಹ ಸಾಮರ್ಥ್ಯದ ಜಲಾಶಯ ನಿರ್ಮಿಸಲು ಪ್ರಸ್ತಾಪಿಸಿದೆ. ಆದರೆ, ನದಿಪಾತ್ರದ ಕೆಳಗಿನ ರಾಜ್ಯವಾದ ತಮಿಳುನಾಡಿನ ಅನುಮತಿಯಿಲ್ಲದೆ ಕರ್ನಾಟಕವು ಯೋಜನೆ ಮುಂದುವರಿಸಲು ಸಾಧ್ಯವಿಲ್ಲ ಎಂದು ದೊರೈ ಮುರುಗನ್ ಅಲ್ಲಿನ ವಿಧಾನಸಭೆಯಲ್ಲಿ ಹೇಳಿದ್ದಾರೆ ಎಂದು ಮಾಧ್ಯಮ ವರದಿ ಹೇಳಿವೆ.
ಕರ್ನಾಟಕ ಸರ್ಕಾರವು ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಂಡರೆ ಕಾವೇರಿ ನದಿ ನೀರಿನ ನೈಸರ್ಗಿಕ ಹರಿವಿಗೆ ತಡೆಯಾಗಲಿದೆ. ಅದರಿಂದಾಗಿ ತಮಿಳುನಾಡಿಗೆ ಸಿಗಬೇಕಾದ ನೀರಿನ ಪಾಲಿನಲ್ಲಿ ಕಡಿತವಾಗಲಿದೆ ಎಂಬುದು ತಮಿಳುನಾಡು ಸರ್ಕಾರದ ವಾದ.
ಆ ಹಿನ್ನೆಲೆಯಲ್ಲೇ, ಕಾವೇರಿ ನ್ಯಾಯಮಂಡಳಿಯ ಅಂತಿಮ ಆದೇಶ ಮತ್ತು ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಘಿಸಿ ಕರ್ನಾಟಕವು ಮೇಕೆದಾಟು ಅಥವಾ ಕಾವೇರಿ ಜಲಾನಯನ ಪ್ರದೇಶದ ಯಾವುದೇ ಸ್ಥಳದಲ್ಲಿ ಅಣೆಕಟ್ಟು ನಿರ್ಮಿಸುವುದನ್ನು ತಡೆಯಲು ತಮಿಳುನಾಡು ಸರ್ಕಾರವು ಕಾನೂನು ಕ್ರಮ ಸೇರಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ದೊರೈ ಮುರುಗನ್ ಹೇಳಿದ್ದಾರೆ.
ನೀರಿನ ಗುಣಮಟ್ಟ ಪರಿಶೀಲನೆ
ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಕೊಳಚೆ ನೀರು ಮತ್ತು ಕೈಗಾರಿಕಾ ತ್ಯಾಜ್ಯ ನೀರನ್ನು ಕರ್ನಾಟಕವು ಕಾವೇರಿ ಮತ್ತು ಪೆನ್ನೈಯಾರ್ ನದಿಗಳಿಗೆ ಬಿಡುತ್ತಿರುವ ಬಗ್ಗೆಯೂ ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿರುವ ಸಚಿವ ದೊರೈ ಮುರುಗನ್, ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯು ಅಂತರರಾಜ್ಯ ಗಡಿಯ ಬಳಿಯ ಕಾವೇರಿ ಮತ್ತು ಪೆನ್ನೈಯಾರ್ ನದಿಗಳಿಂದ ನೀರಿನ ಮಾದರಿಗಳನ್ನು ಸಂಗ್ರಹಿಸುತ್ತಿದೆ. ಮಾದರಿಗಳ ಗುಣಮಟ್ಟವನ್ನು ಪರೀಕ್ಷಿಸುತ್ತಿದೆ ಎಂದು ಹೇಳಿದ್ದಾರೆ.
ಕೇಂದ್ರ ಜಲ ಆಯೋಗ ಕೂಡ ಬಿಳಿಗುಂಡ್ಲುವಿನಲ್ಲಿ ಕಾವೇರಿ ನದಿಯ ನೀರಿನ ಮಾದರಿಗಳನ್ನು ಸಂಗ್ರಹಿಸಿ ಅದರ ಗುಣಮಟ್ಟವನ್ನು ಪರಿಶೀಲನೆ ನಡೆಸುತ್ತಿದೆ ಎಂದೂ ಅವರು ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.
ಕಳೆದ ತಿಂಗಳು ಮನವಿ ಮಾಡಿದ್ದ ರಾಜ್ಯ
ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದ ಮೇಕೆದಾಟು ಯೋಜನೆಗೆ ಆದ್ಯತೆಯ ಮೇರೆಗೆ ಅನುಮತಿ ನೀಡುವಂತೆ ಕೇಂದ್ರ ಜಲ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಕರ್ನಾಟಕದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಕಳೆದ ತಿಂಗಳು ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ತಮಿಳುನಾಡು ಸಚಿವರು ಹೇಳಿಕೆ ನೀಡಿದ್ದಾರೆ.